ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳ ತಸ್ತೀಕ್‌ ಹಣ ಹೆಚ್ಚಳ

ಅರ್ಚಕರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
Last Updated 18 ಜನವರಿ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಜರಾಯಿ ಇಲಾಖೆಯ ‘ಸಿ’ ವರ್ಗದ ದೇವಸ್ಥಾನಗಳಲ್ಲಿ ಅರ್ಚಕರ ತಸ್ತೀಕ್‌ ಹಣವನ್ನು ವರ್ಷಕ್ಕೆ ₹50 ಸಾವಿರದವರೆಗೆ ಹೆಚ್ಚಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಪುರಭವನದಲ್ಲಿ ಬುಧವಾರ ನಡೆದ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ದಿನಕ್ಕೆ ₹100 ರಂತೆ ವರ್ಷಕ್ಕೆ ₹36 ಸಾವಿರ ತಸ್ತೀಕ್‌ ಹಣ ನೀಡಲಾಗುತ್ತಿದೆ. ಅದನ್ನು ₹250ಕ್ಕೆ (ವರ್ಷಕ್ಕೆ ₹90 ಸಾವಿರಕ್ಕೆ) ಏರಿಸಬೇಕು ಎಂಬುದು ಅರ್ಚಕರ ಬೇಡಿಕೆ. ಆದರೆ, ತಸ್ತೀಕ್‌ ಮೊತ್ತವನ್ನು ದುಪ್ಪಟ್ಟು ಮಾಡುವುದು ಕಷ್ಟ. ಸದ್ಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಹೆಚ್ಚಳ ಮೊತ್ತವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುತ್ತೇನೆ’ ಎಂದು ಅವರು ಹೇಳಿದರು.

ಮುಜರಾಯಿ ಸಚಿವ ರುದ್ರಪ್ಪ ಎಸ್‌. ಲಮಾಣಿ ಮಾತನಾಡಿ, ‘ಅರ್ಚಕರ ವರ್ಗಾವಣೆ ಹಾಗೂ ನಿವೃತ್ತಿಯ ನಿಯಮ ರೂಪಿಸಲಾಗಿದೆ. ಆದರೆ, ಅದನ್ನು ಅನುಷ್ಠಾನಕ್ಕೆ ತಂದಿಲ್ಲ.

ಈ ನಿಯಮಕ್ಕೆ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಯಮದಲ್ಲಿ ಮಾರ್ಪಾಡು ಮಾಡಲು ಸಚಿವ ಸಂಪುಟ ಉಪಸಮಿತಿ ರಚಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಜಿಲ್ಲಾ ಧಾರ್ಮಿಕ ಪರಿಷತ್ತಿನಲ್ಲಿ ಅರ್ಚಕರನ್ನು ಸದಸ್ಯರನ್ನಾಗಿ ನೇಮಿಸುತ್ತೇವೆ. ಅರ್ಚಕರು ಹಾಗೂ ದೇವಸ್ಥಾನದ ಸಿಬ್ಬಂದಿಗೆ ಜೀವವಿಮಾ ಸೌಲಭ್ಯ ಒದಗಿಸುತ್ತೇವೆ. ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಎ ಹಾಗೂ ಬಿ  ವರ್ಗಗಳ ದೇವಸ್ಥಾನಗಳ ಸ್ಥಿತಿ ಚೆನ್ನಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸಿ ವರ್ಗದ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಪೂಜಾ ಸಾಮಗ್ರಿ ಹೊಂದಿಸಲು ಅರ್ಚಕರು ಕಷ್ಟಪಡುತ್ತಿದ್ದಾರೆ. ಸಿ ವರ್ಗಗಳ ದೇವಸ್ಥಾನಗಳ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚನೆ ಮಾಡುತ್ತೇವೆ’ ಎಂದು ಅವರು ಪ್ರಕಟಿಸಿದರು.

ಅರ್ಚಕರ ಒಕ್ಕೂಟದ ರಾಜ್ಯ ಘಟಕ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಅರ್ಚಕರ ವರ್ಗಾವಣೆ ನಿಯಮ ಅವೈಜ್ಞಾನಿಕ. ವರ್ಗಾವಣೆಯಿಂದ ಪಾರಾಗಲು ಅರ್ಚಕರು ಶಾಸಕರ ಶಿಫಾರಸು ಪತ್ರಗಳಿಗಾಗಿ ಓಡಾಡುವ ಸ್ಥಿತಿ ನಿರ್ಮಾಣವಾಗಲಿದೆ. ಈ ನಿಯಮವನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಗೌರವ ಉಪಾಧ್ಯಕ್ಷ ವಿದ್ವಾನ್‌ ಎಸ್.ಆರ್‌. ಶೇಷಾದ್ರಿ ಭಟ್ಟರ್‌ ಮಾತನಾಡಿ, ‘ರಾಜ್ಯದಲ್ಲಿ 43,712 ದೇವಸ್ಥಾನಗಳಿವೆ. ಗ್ರಾಮೀಣ ಪ್ರದೇಶದ ಅರ್ಚಕರು ಹೀನಾಯ ಸ್ಥಿತಿಯಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

***
ಜಾತಿ ಕಾರಣಕ್ಕೆ ಕೆಲವು ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ. ಇನ್ನೂ ಕೆಲವು ಕಡೆ  ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ. ಇಂತಹ ಧೋರಣೆ ಸರಿಯಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT