ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗು ಮೂಡಿಸಿತು ಮಕ್ಕಳ ಬುದ್ಧಿಶಕ್ತಿ

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ ಶಿಪ್‌: ವಿದ್ಯಾರ್ಥಿಗಳಿಂದ ತುಂಬಿ ತುಳುಕಿದ ಸಭಾಂಗಣ
Last Updated 19 ಜನವರಿ 2017, 5:05 IST
ಅಕ್ಷರ ಗಾತ್ರ

ತುಮಕೂರು: ಬುದ್ಧಿಶಕ್ತಿಗೆ ಸಾಣೆ ಹಿಡಿಯುವಂತಿದ್ದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ ಶಿಪ್‌’ನ ತುಮಕೂರು ವಲಯ ಮಟ್ಟದ ಸ್ಪರ್ಧೆ’ಯಲ್ಲಿ ವಿದ್ಯಾರ್ಥಿಗಳು ನೀಡಿದ ಚಾಕಚಕ್ಯತೆಯ ಉತ್ತರ, ಕ್ವಿಜ್‌ ಮಾಸ್ಟರ್‌ ಸೇರಿ ಎಲ್ಲರನ್ನೂ ಬೆರಗುಗೊಳಿಸಿತು.

‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಕಾರ್ಯಕ್ರಮಕ್ಕೆ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಟ್ಟು 106 ಶಾಲೆಗಳು ಭಾಗವಹಿಸಿ ಜಾಣ್ಮೆ ಜತೆಗೆ ಪ್ರತಿಭೆಯನ್ನೂ ಪ್ರದರ್ಶಿಸಿದವು.

ಪ್ರಾಥಮಿಕ ಸುತ್ತು ಮುಗಿದ ಬಳಿಕ ಅರ್ಧಗಂಟೆಗೂ ಹೆಚ್ಚು ಕಾಲ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಡು, ಏಕಪಾತ್ರಾಭಿನಯ ಮಾಡಿ ಪ್ರತಿಭೆ ತೋರ್ಪಡಿಸಿದರು.

ತುಮಕೂರಿನ 104 ಶಾಲೆ, ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಶಾಲಾ ತಂಡಗಳ ಒಟ್ಟು 632 ವಿದ್ಯಾರ್ಥಿಗಳ ನಡುವಿನ ಪೈಪೋಟಿಯಲ್ಲಿ ತುಮಕೂರು ನಗರದ ಸೆಂಟ್‌ ಮೇರಿಸ್‌ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಸುಹು ಸೈಯೀದ್‌ ಹಾಗೂ ಐಶ್ವರ್ಯ ಪ್ರಥಮ ಸ್ಥಾನ ಪಡೆದರು. ಈ ತಂಡವು ಜ.21 ರಂದು ಬೆಂಗಳೂರಿನಲ್ಲಿ ನಡೆಯುವ ಫೈನಲ್‌ ಪಂದ್ಯಕ್ಕೆ ಪ್ರವೇಶ ಪಡೆಯಿತು.

ವಿದ್ಯಾರ್ಥಿಗಳಿಂದ ಉದ್ಘಾಟನೆ: ಮೊದಲಿಗೆ ಕ್ವಿಜ್‌ ಮಾಸ್ಟರ್‌ ರಾಘವ ಚಕ್ರವರ್ತಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ ವಿದ್ಯಾರ್ಥಿಗಳನ್ನು ಅತಿಥಿಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲು ಅವಕಾಶ ನೀಡಲಾಯಿತು. ಪ್ರಾಥಮಿಕ ಸುತ್ತಿನಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳ ತಂಡವನ್ನು ಪ್ರತ್ಯೇಕ ಸ್ಥಳದಲ್ಲಿ ಕೂರಿಸಿ 20 ಪ್ರಶ್ನೆಗಳಿಗೆ ಉತ್ತರ ಬರೆಸಲಾಯಿತು.

36 ಕೋಟೆಗಳ ಛತ್ತೀಸ್‌ಗಡ: ರಾಜ್ಯದ ಹೆಸರಿನ ಅರ್ಥವಿರುವ, ಅರಮನೆ ಸುತ್ತಲೂ 36 ಕೋಟೆಗಳು ಇದ್ದವು ಎಂಬ ಐತಿಹ್ಯ ಇರುವ ಊರಿದೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ಖಾತರಿಪಡಿಸಿಲ್ಲ. ಆ ರಾಜ್ಯ ಯಾವುದು ಎಂಬ ಪ್ರಶ್ನೆಗೆ ವಿದ್ಯಾರ್ಥಿನಿಯೊಬ್ಬರು ‘ಛತ್ತೀಸ್‌ಗಡ’ ಎಂಬ ಉತ್ತರ ನೀಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಮಾನವ ಸಂಪನ್ಮೂಲದಿಂದ ಅಭಿವೃದ್ಧಿ: ‘ಯಾವುದೇ ದೇಶ, ಸಮಾಜ ಮುಂದುವರಿಯಲು ಮಾನವ ಸಂಪನ್ಮೂಲ ಅಗತ್ಯ’ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌’ ವಲಯ ಮಟ್ಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ‘ಜಿಲ್ಲಾಧಿಕಾರಿಯಾಗಿ ಸಾಕಷ್ಟು ವೇದಿಕೆ ಹಂಚಿಕೊಂಡಿದ್ದೇನೆ. ಆದರೆ, ಸಮರ್ಥ ಯುವಶಕ್ತಿಯ ಮುಂದೆ ನಿಂತು ಮಾತನಾಡುತ್ತಿರುವುದು ಹೆಮ್ಮೆಯ ವಿಚಾರ. ಇದಕ್ಕೆ ಅವಕಾಶ ಕೊಟ್ಟಿರುವ ‘ಪ್ರಜಾವಾಣಿ’ಗೆ ಧನ್ಯವಾದಗಳು. ನೆಲ, ಜಲ, ಸಂಸ್ಕೃತಿ ರಕ್ಷಣೆಯಲ್ಲಿ ಪತ್ರಿಕೆ ಮುನ್ನೆಲೆಯಲ್ಲಿದೆ’ ಎಂದರು.

‘ದೇಶ–ವಿದೇಶದಲ್ಲಿ ದೊಡ್ಡ ಹುದ್ದೆಗೆ ಹೋಗಬೇಕಾದರೆ ಹಣ ಬೇಕಾಗಿಲ್ಲ. ಇದಕ್ಕೆ ಮಾನವ ಸಂಪನ್ಮೂಲವೇ ದಾರಿ. ಪೋಷಕರು, ಶಿಕ್ಷಕರು ಮಾನವ ಸಂಪನ್ಮೂಲ ಹೆಚ್ಚಿಸಲು ಪ್ರಯತ್ನಿಸಬೇಕು. ವಾಟ್ಸಪ್‌, , ಫೇಸ್‌ಬುಕ್‌ ಬಳಕೆ ಊಟಕ್ಕೆ ಉಪ್ಪಿನ ಕಾಯಿಯ ರೀತಿ ಇರಬೇಕು. ಉಪ್ಪಿನಕಾಯಿಯೇ ಊಟ ಆಗಬಾರದು. ಒಂದೊಮ್ಮೆ ವಿಶ್ವದಲ್ಲಿ ಮೂರನೇ ಮಹಾಯುದ್ಧ ಘಟಿಸಿದರೆ ಅದು ಜ್ಞಾನಾಧಾರಿತವಾಗಿರುತ್ತದೆ’ ಎಂದರು.

ಎದೆಬಡಿತ ಹೆಚ್ಚಿಸಿದ ಪೈಪೋಟಿ
ಫೈನಲ್‌ನ ಐದು ಸುತ್ತುಗಳು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಎದೆ ಬಡಿತ ಹೆಚ್ಚಿಸಿದ್ದವು. ಆರಂಭದಿಂದ ವಿದ್ಯಾನಿಕೇತನ ‘ಎ’ ತಂಡ ಹಾಗೂ ಸೆಂಟ್‌ ಮೇರಿಸ್‌ ಬಾಲಕಿಯರ ಪ್ರೌಢಶಾಲೆ ನಡುವೆ ಪೈಪೋಟಿ ತೀವ್ರವಾಗಿತ್ತು. ಎರಡೂ ತಂಡಗಳು ಪ್ರಶ್ನೆ ಹಾಗೂ ಪಾಸ್‌ ಪಡೆದ ಪ್ರಶ್ನೆಗೆ ತಟ್ಟನೇ ಉತ್ತರಿಸುತ್ತಿದ್ದವು.

ಒಂದು ಹಂತದಲ್ಲಿ ಪಾಯಿಂಟ್‌ ಗಳಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಸೆಂಟ್‌ ಮೇರಿಸ್‌ ಪ್ರೌಢಶಾಲೆಗೆ ಪಾಸ್‌ ಪ್ರಶ್ನೆಗಳು ವರವಾದವು. ಬಝರ್‌ ಸುತ್ತಿನಲ್ಲಿ ಶರವೇಗದ ಉತ್ತರ ನೀಡಿ ಪ್ರಥಮ ಸ್ಥಾನಕ್ಕೆ ಏರಿತು. ಮಧುಗಿರಿಯ ಮೌಂಟ್‌ ವ್ಯೂ ಶಾಲೆ ಕೊನೆ ಸುತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಸರಿ ಉತ್ತರ ನೀಡಿ ಖಾತೆ ತೆರೆಯಿತು.

ಕನೆಕ್ಟ್‌ ಸುತ್ತಿನಲ್ಲಿ ಬರುವ 4 ರಿಂದ 5 ಚಿತ್ರಗಳಲ್ಲಿ ಸಾಮಾನ್ಯ ಅಂಶ ಪತ್ತೆ ಮಾಡುವ ಪ್ರಶ್ನೆಗಳಿಗೆ ತಟ್ಟನೇ ಬಝರ್‌ ಒತ್ತಿ ಉತ್ತರ ಹೇಳುತ್ತಿದ್ದರು. ವಿದ್ಯಾನಿಕೇತನ ಶಾಲೆ ‘ಬಿ’ ತಂಡ ಪ್ರಶ್ನೆಯೊಂದಕ್ಕೆ ತಪ್ಪು ಉತ್ತರ ಹೇಳಿ 5 ಅಂಕ ಕಳೆದುಕೊಂಡಿತು. ಇಲ್ಲಾದ ಹಿನ್ನಡೆ ಕೊನೆವರೆಗೂ ಸಾಗಿ, ಮೂರನೇ ಸ್ಥಾನ ಪಡೆಯಿತು.

ತುಮಕೂರು ಜಿಲ್ಲೆಯ ಅಚ್ಚರಿ ಪ್ರಶ್ನೆಗಳು
ಪೂರ್ವಭಾವಿ ಹಾಗೂ ಫೈನಲ್‌ ಸುತ್ತುಗಳಲ್ಲಿ ಜಿಲ್ಲೆಗೆ ಸಂಬಂಧಿಸಿದ ಹಲವು ಅಚ್ಚರಿಯ ಪ್ರಶ್ನೆಗಳನ್ನು ಕ್ವಿಜ್‌ ಮಾಸ್ಟರ್‌ ರಾಘವ್‌ ಚಕ್ರವರ್ತಿ ಕೇಳಿದರು.
ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ಜನಿಸಿದ, ಸಂಸ್ಕೃತ, ಇಂಗ್ಲಿಷ್‌ ಭಾಷೆಯಲ್ಲಿ ಪಾಂಡಿತ್ಯ ಪಡೆದು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‌ ಪಡೆದವರು ಯಾರು ಎಂಬ ಸುಳಿವು ಸುತ್ತಿನ ಪ್ರಶ್ನೆಗೆ ವಿದ್ಯಾರ್ಥಿಕೇತನ ಶಾಲೆಯ ‘ಬಿ’ ತಂಡವು ಡಾ. ಶಿವಕುಮಾರ ಸ್ವಾಮೀಜಿ ಎಂದು ಮೊದಲ ಯತ್ನದಲ್ಲೇ ಉತ್ತರಿಸಿ ಒಮ್ಮೆಲೇ 15 ಅಂಕ ಪಡೆಯಿತು.

ಪೂರ್ವಭಾವಿ ಸುತ್ತಿನಲ್ಲಿ ದೇವರಾಯನದುರ್ಗ, ಟಿಪ್ಪು ಸುಲ್ತಾನ್‌ ಅವಧಿಯ ಕುಣಿಗಲ್‌ ಸ್ಟಡ್‌ ಫಾರಂ, ಪರಮಾಣು ಯೋಜನೆಯ ರೂವಾರಿ ಡಾ. ರಾಜಾರಾಮಣ್ಣ, ತುಮಕೂರು ಅಪೂರ್ಣ ಜಿಲ್ಲೆ ಏಕೆ ಎಂಬ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಸರಿ ಉತ್ತರ ದಾಖಲಿಸುವ ಮೂಲಕ ನಮ್ಮ ಜಿಲ್ಲೆಯ ಇತಿಹಾಸದ ಅರಿವಿದೆ ಎಂಬುದನ್ನು ಸಾಬೀತುಪಡಿಸಿದರು.

ಬಾಲಕಿಯರ ಸಾಧನೆ
ರಾಜ್ಯದ 9 ವಲಯಗಳಲ್ಲಿ ನಡೆದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ ಶಿಪ್‌ನ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಬಾಲಕಿಯರ ತಂಡ ಎಂಬ ಅಗ್ಗಳಿಕೆ ತುಮಕೂರಿನ ಸೆಂಟ್‌ ಮೇರಿಸ್‌ ಬಾಲಕಿಯರ ಪ್ರೌಢಶಾಲೆ ತಂಡಕ್ಕೆ ಸಂದಿದೆ. ವಲಯ ಮಟ್ಟದಲ್ಲಿಯೂ ಬಾಲಕಿಯರ ಎರಡು ತಂಡಗಳು ಫೈನಲ್‌ ಪ್ರವೇಶಿಸಿರುವುದು ತುಮಕೂರಿನಲ್ಲಿ ಎಂಬುದು ವಿಶೇಷ. ಸೆಂಟ್‌ ಮೇರಿಸ್‌ ಪ್ರೌಢಶಾಲೆಯ ಸುಹಾ ಹಾಗೂ ಐಶ್ವರ್ಯ ಬೆಂಗಳೂರಿನಲ್ಲಿ ನಡೆಯುವ ಫೈನಲ್‌ ಸ್ಪರ್ಧೆಯಲ್ಲಿ ತುಮಕೂರನ್ನು ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ ಜಿಲ್ಲಾಧಿಕಾರಿ
ರಾಷ್ಟ್ರಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನುತ ಪ್ರಶಸ್ತಿ ಯಾವುದು?  ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ 8 ಮಂದಿಯಲ್ಲಿ ಒಬ್ಬರು ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದರು, ಅವರ್‌್ಯಾರು? ಎಂಬ ಪ್ರಶ್ನೆಗಳನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಕೇಳಿದರು.

ಎಲ್ಲ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಿದರು. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ತುಮಕೂರಿನ 25ನೇ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಜಿಲ್ಲಾಧಿಕಾರಿ ಹೇಳಿದಾಗ ಮಕ್ಕಳು ಸೇರಿ ಸಭಿಕರು ತಲೆದೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT