ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಂಕಷ್ಟ ನಿವಾರಣೆಯ ಜಾಗೃತಿಗೆ ಕೃಷಿ ಮೇಳ

ರಾಜ್ಯ ಮಟ್ಟದ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ
Last Updated 19 ಜನವರಿ 2017, 6:07 IST
ಅಕ್ಷರ ಗಾತ್ರ

ಬೈಲಹೊಂಗಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯಲಿರುವ 37ನೇ ರಾಜ್ಯ ಮಟ್ಟದ ಕೃಷಿಮೇಳದಲ್ಲಿ ರೈತರು, ಕಾರ್ಮಿಕರು, ಜನಸಾಮಾನ್ಯರು ಸದುಪಯೋಗ ಪಡೆಯಬೇಕು ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ವಿದ್ಯಾನಗರದ ಮೂಗಿ ಕುಟುಂಬಸ್ಥರ 16 ಎಕರೆ ಬೃಹತ್ ಜಮೀನಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇದೇ 25ರಿಂದ 27ರ ವರೆಗೆ ನಡೆಯಲಿರುವ 37ನೇ ರಾಜ್ಯಮಟ್ಟದ ಕೃಷಿಮೇಳದ ಆಹ್ವಾನ ಪತ್ರಿಕೆಯನ್ನು ಬುಧವಾರ ಬಿಡುಗಡೆ ಮಾಡಿ ಮಾತನಾಡಿದರು.

‘ಕೃಷಿಯಲ್ಲಿ ವೈಜ್ಞಾನಿಕತೆ, ತಂತ್ರಜ್ಞಾನದ ಬಳಕೆ, ವಿವಿಧ ರೀತಿಯ ಕೃಷಿಯ ಅನುಷ್ಠಾನದ ಬಗ್ಗೆ ಮಾಹಿತಿ ಒದಗಿಸುವ ಜೊತೆಗೆ ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮೇಳದಲ್ಲಿ ನಡೆಯಲಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಕೃಷಿಮೇಳ ಹೆಚ್ಚಿನ ಜ್ಞಾನ ಸಂಪಾದನೆಗೆ ಅನುವು ಮಾಡಿಕೊಟ್ಟು ಕೃಷಿ ಪದ್ಧತಿಯಲ್ಲಿ ಹೊಸತನ ಬೆಳೆಸಿಕೊಳ್ಳುವಂತೆ ಸ್ಫೂರ್ತಿ, ಪ್ರೇರಣೆ ನೀಡಲಿದೆ ಎಂದರು.

ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಮಾತನಾಡಿ, ವರ್ಷದಿಂದ ವರ್ಷಕ್ಕೆ ಕೃಷಿ ಮೇಳದ ಆಕರ್ಷಣೆ, ಮಹತ್ವ ಹೆಚ್ಚುತ್ತಲೇ ಸಾಗಿದೆ. ಕೃಷಿಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿರುವ ರೈತರ ಆತ್ಮವಿಶ್ವಾಸ ವೃದ್ಧಿಸುವುದೆ ಕೃಷಿಮೇಳದ ಮೂಲ ಧ್ಯೇಯವಾಗಿದೆ. ಹೀಗಾಗಿ ಕೃಷಿಮೇಳಕ್ಕೆ 37 ಸಮಿತಿ ರಚಿಸಲಾಗಿದೆ. ಎಲ್ಲ ಸಮಿತಿ ಸದಸ್ಯರು ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಮೇಳದಲ್ಲಿ ಸಂಘದ ಸದಸ್ಯರ ಉತ್ಪನ್ನಗಳ ಮಾರಾಟ, ವಸ್ತು ಪ್ರದರ್ಶನ ಮತ್ತು ಮಾರಾಟ, ಯಂತ್ರೋಪಕರಣಗಳ ಪ್ರದರ್ಶನ, ಜಾನುವಾರು ಪ್ರದರ್ಶನ, ಶ್ವಾನ ಪ್ರದರ್ಶನ, ಕೃಷಿ ಸಂಬಂಧಿತ ಮಾದರಿಯ ಮಾಹಿತಿ ನೀಡುವ ಕಾರ್ಯವಾಗಲಿದೆ ಎಂದರು.

ಧಾರವಾಡ ಎಸ್‍.ಡಿ.ಎಂ.ಸಂಸ್ಥೆಯ ನಿರ್ದೇಶಕ ಡಾ. ನಿರಂಜನಕುಮಾರ ಮಾತನಾಡಿ, ಮೂರು ದಿನಗಳ ಕೃಷಿಮೇಳ ರೈತರಿಗೆ ಉಪಯುಕ್ತವಾಗಲಿ. ರೈತರಿಗೆ ಹೊಸ ಸಂದೇಶ ಹೋಗಲಿ ಎಂದು ಹಾರೈಸಿದರು.

ಎಸ್‍.ಡಿ.ಎಂ.ಸಂಸ್ಥೆಯ ಮುಖ್ಯಸ್ಥೆ ಪದ್ಮಲತಾ ನಿರಂಜನ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಜಮೀನು ಮಾಲಿಕ ಎಸ್.ಎಸ್. ಮೂಗಿ, ಎಸ್.ಡಿ.ಎಂ. ಸಂಸ್ಥೆ ಪ್ರಾಂಶುಪಾಲ ಡಾ. ಚಾಟೆ, ಡಾ.ಆಲೂರ, ಲೆಕ್ಕ ಪರಿಶೋಧಕ ಡಾ. ಪ್ರಭು ವೇದಿಕೆಯಲ್ಲಿ ಇದ್ದರು. ಜಿಲ್ಲಾ ನಿರ್ದೇಶಕ ಸುರೇಶ ಮೊಯಿಲಿ ಸ್ವಾಗತಿಸಿದರು. ತಾಲ್ಲೂಕು ಯೋಜನಾಧಿಕಾರಿ ನಾಗರಾಜ ನಾಯ ನಿರೂಪಿಸಿದರು.

ಪ್ರಚಾರ ವಾಹನಕ್ಕೆ ಚಾಲನೆ
ಪಟ್ಟಣದ ವಿದ್ಯಾನಗರದ ಮೂಗಿ ಅವರ ಜಮೀನಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇದೇ 25ರಿಂದ ನಡೆಯಲಿರುವ ಕೃಷಿಮೇಳದ ಪ್ರಚಾರ ವಾಹನಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಸಮಿತಿ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಜಾಥಾ ಜಿಲ್ಲೆಯ ವಿವಿಧೆಡೆ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ಸಂಘಟಕರು ತಿಳಿಸಿದರು.

ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ, ಜಿಲ್ಲಾ ನಿರ್ದೇಶಕ ಸುರೇಶ ಮೊಯಿಲಿ, ಕೃಷಿ ಅಧಿಕಾರಿ ನಾಗೇಶ ಬೆಣ್ಣಿ, ನಾರಾಯಣ ಜೋಶಿ, ತಾಲ್ಲೂಕು ಯೋಜನಾಧಿಕಾರಿ ನಾಗರಾಜ ನಾಯ್ಕ, ಬಸವರಾಜ ಮೂಗಿ, ಉಮೇಶ ಮುಪ್ಪಯ್ಯನವರಮಠ, ಜಗದೀಶ ಜಕ್ಕಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT