ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನದ ಗೆಲುವು ಸಂಪ್ರದಾಯದ ಒಲವು

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ
* ‘ರಿಕ್ತ’ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
ಪರಿಚಯದವರೊಬ್ಬರು ಈ ಚಿತ್ರದ ಆಡಿಷನ್‌ಗೆ ಹೋಗುವಂತೆ ಸೂಚಿಸಿದರು. ಆಡಿಷನ್ ಕೊಟ್ಟು ಆಯ್ಕೆಯಾದೆ. ನಿರ್ದೇಶಕ ಅಮೃತ್ ಕುಮಾರ್ ಅವರು ಸ್ಕ್ರಿಪ್ಟ್‌ ಹೇಳುವುದಕ್ಕೂ ಮುಂಚೆಯೇ, ಚಿತ್ರದ ಹಾಡೊಂದನ್ನು ಕೇಳಿಸಿದ್ದರು. ಆ ಹಾಡಿಗೆ ಮರುಳಾಗಿ ನಟಿಸಲು ಒಪ್ಪಿಕೊಂಡೆ. ರಾಜೇಶ್ ಕೃಷ್ಣನ್ ಸರ್ ಹಾಡಿರುವ ಕ್ಲಾಸಿಕಲ್ ಟಚ್ ಇರುವ ಆ ಹಾಡು, ನನ್ನ ಮೆಚ್ಚಿನ ಹಾಡುಗಳ ಪೈಕಿ ಒಂದಾಗಿದೆ. ತೆಲುಗು ಧಾರಾವಾಹಿ ಮೂಲಕ ಆರಂಭವಾದ ನಟನೆಯ ನಂಟು ‘ರಿಕ್ತ’ದ ಮೂಲಕ ಬೆಳ್ಳಿತೆರೆಗೂ ಚಾಚಿಕೊಂಡಿದೆ.
 
* ಚಿತ್ರದ ಕಥೆ ಹಾಗೂ ನಿಮ್ಮ ಪಾತ್ರದ ಬಗ್ಗೆ ಹೇಳಿ?
‘ರಿಕ್ತ’ ಎಂದರೆ ಶೂನ್ಯ ಅಥವಾ ಏನೂ ಇಲ್ಲ ಎಂದರ್ಥ. ಸತ್ತ ಬಳಿಕ ಅಂತಲೂ ಹೇಳಬಹುದು. ಆಮೇಲೆ ಸ್ವರ್ಗವೋ ನರಕವೋ ಬಲ್ಲವರಾರು? ಒಬ್ಬೊಬ್ಬರು ಒಂದೊಂದು ಅರ್ಥ ನೀಡಬಹುದು. ಮುದ್ದು ಭೂತವೊಂದರಲ್ಲಿ ಪ್ರೀತಿ ಕುಡಿಯೊಡೆಯುವ ಅಥವಾ ಜೀವ ಇರುವ ವಸ್ತು ಜೊತೆ ನಿರ್ಜೀವ ವಸ್ತುವೊಂದಕ್ಕೆ ಹೇಗೆ ಪ್ರೀತಿ ಹುಟ್ಟುತ್ತದೆ ಎಂಬುದೇ ಕಥೆಯ ತಿರುಳು. ಶೂನ್ಯದಿಂದ ಮತ್ತೆ ಹೇಗೆ ಜೀವ ಬರುತ್ತದೆ ಎಂಬುದನ್ನು ಫ್ಯಾಂಟಸಿಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್ ಇದೆ. ಅದರ ಕುರಿತು ಹೇಳಿದರೆ ಕಥೆಯ ಗುಟ್ಟೇ ರಟ್ಟಾಗುತ್ತದೆ. ಅಲ್ಲದೆ, ಈ ಚಿತ್ರದಲ್ಲಿರುವ ಸಂಭಾಷಣೆಗಳಲ್ಲಾಗಲೀ ದೃಶ್ಯಗಳಲ್ಲಾಗಲೀ ಅಶ್ಲೀಲತೆ ಇಲ್ಲ. ಎಲ್ಲರೂ ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ ಇದು. 
 
* ‘ಸಂಚಾರಿ’ ವಿಜಯ್ ಜತೆ ಪೈಪೋಟಿಗೆ ಬಿದ್ದು ನಟಿಸಿದ್ದೀರಂತೆ?
ಚಿತ್ರೀಕರಣಕ್ಕೆ ಮುನ್ನ ನಿರ್ದೇಶಕರು ಕಾರ್ಯಾಗಾರ ಆಯೋಜಿಸಿದ್ದರು. ‘ಸಂಚಾರಿ’ ವಿಜಯ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗ, ಸಂಭ್ರಮದ ಜೊತೆಗೆ ಭಯವೂ ಆಯಿತು. ರಾಷ್ಟ್ರಪ್ರಶಸ್ತಿ ವಿಜೇತ ನಟನ ಜತೆ ಮೊದಲ ಚಿತ್ರದಲ್ಲಿ ನಟಿಸುತ್ತಿರುವ ಖುಷಿ ಒಂದೆಡೆಯಾದರೆ, ಅಭಿನಯದ ವಿಷಯದಲ್ಲಿ ವಿಜಯ್ ಅವರನ್ನು ಹೇಗೆ ಎದುರಿಸುವುದು ಎಂಬ ಭಯ. ಅವರೊಂದಿಗಿನ ನಟನೆ ನನಗೆ ಸವಾಲಾಗಿತ್ತು. ಅವರೊಂದಿಗೆ ನಟಿಸುವಾಗೆಲ್ಲ ಎದೆ ಬಡಿತ ಹೆಚ್ಚಾಗುತ್ತಿತ್ತು. ವಿಜಯ್ ಸೇರಿದಂತೆ ಇಡೀ ತಂಡ ಹುರಿದುಂಬಿಸಿ, ನನ್ನಿಂದ ಉತ್ತಮ ನಟನೆ ತೆಗೆಸಿತು. 
 
* ನಿಮಗೆ ಮಾಡೆಲಿಂಗ್ ಅನುಭವವೂ ಇದೆಯಲ್ಲವೆ?
ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಕೆಲವು ಸ್ಪರ್ಧೆಗಳಲ್ಲೂ ಗೆದ್ದಿದ್ದೇನೆ. ಒಮ್ಮೆ ಫ್ಯಾಷನ್ ಷೋ ಕಾರ್ಯಕ್ರಮವೊಂದಕ್ಕೆ ಸ್ನೇಹಿತರ ಜತೆ ಹೋಗಿದ್ದೆ. ಅಂದು ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡಿದ್ದವರ ರ್‍ಯಾಂಪ್ ವಾಕ್ ಇತ್ತು. ಆ ವೇಳೆ ಸ್ನೇಹಿತರ ಜತೆ ಹರಟುತ್ತಿದ್ದಾಗ ಗೆಳತಿಯರು, ‘ಇಂತಹ ಕಡೆಯೆಲ್ಲಾ ನಿನಗೆ ರ್‍ಯಾಂಪ್ ವಾಕ್ ಮಾಡೋಕೆ ಆಗೊಲ್ಲ ಬಿಡು’ ಎಂದು ಕಿಚಾಯಿಸಿದ್ದರು. ಅದು ನನ್ನ ಸ್ವಾಭಿಮಾನವನ್ನು ಕೆಣಕಿತು. ಅವರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದೆ. ಅದಕ್ಕಾಗಿ ನನ್ನೊಂದಿಗೆ ಬೆಟ್ಟಿಂಗ್ ಕೂಡ ಕಟ್ಟಿದರು. ನಾನು ಆಯೋಜಕರನ್ನು ಅವಕಾಶಕ್ಕಾಗಿ ಕೋರಿದೆ. ‘ಯಾಕೆ ನಿನಗೆ ಅವಕಾಶ ಕೊಡಬೇಕು?’ ಎಂದವರು ಕೇಳಿದರು. ‘ನೀವು ಅವಕಾಶ ಕೊಟ್ಟರೆ ನನ್ನ ಸಾಮರ್ಥ್ಯ ಏನು ಎಂದು ತೋರಿಸುತ್ತೇನೆ’ ಎಂದೆ. ನನ್ನ ಆತ್ಮವಿಶ್ವಾಸ ಮೆಚ್ಚಿ ಅವಕಾಶ ಕೊಟ್ಟರು. ಅಲ್ಲಿಂದ, ಮಾಡೆಲಿಂಗ್ ಲೋಕದಲ್ಲಿ ನನಗೆ ಅವಕಾಶಗಳ ಬಾಗಿಲು ತೆರೆದುಕೊಂಡಿತು.
 
* ಎಂತಹ ಪಾತ್ರಗಳು ನಿಮಗಿಷ್ಟ?
ನಿರ್ದಿಷ್ಟವಾಗಿ ಇಂತಹ ಪಾತ್ರವೇ ಬೇಕು ಎಂದೇನಿಲ್ಲ. ಸಂಸ್ಕೃತಿ ಬಿಂಬಿಸುವ ಯಾವುದೇ ಪಾತ್ರ ಕೊಟ್ಟರೂ ಮಾಡುತ್ತೇನೆ. ಇದು ನನ್ನ ನಟನೆಯ ಮಿತಿ ಅಂತಲೂ ಹೇಳಬಹುದು. ಎಕ್ಸ್‌ಪೋಸ್‌ ದೃಶ್ಯಗಳಿಗೆ ಒಲ್ಲೆ. ಅಂತಹ ಉಡುಗೆ ತೊಡುವುದಕ್ಕೂ ನನಗಾಗದು. ಚಿತ್ರವೊಂದನ್ನು ಒಪ್ಪಿಕೊಳ್ಳುವುದಕ್ಕೆ ಮುಂಚೆಯೇ ಇದೆಲ್ಲವನ್ನೂ ನಾನು ಕೇಳಿಕೊಂಡಿರುತ್ತೇನೆ. ‘ರಿಕ್ತ’ದಲ್ಲಿ ಶಾರ್ಟ್ಸ್ ಹಾಕಿದ್ದೇನೆ. ಅದು ಕೂಡ ನನ್ನ ಮಿತಿಗೆ ತಕ್ಕಂತೆ. ನಾನು ಸಂಪ್ರದಾಯಸ್ಥ ಹುಡುಗಿ. ಪರದೆ ಮೇಲೂ ಹಾಗೆಯೇ ಕಾಣಲು ಬಯಸುತ್ತೇನೆ. ಪ್ರೇಕ್ಷಕನ ಕಣ್ಣು ಪಾತ್ರದ ಮೇಲಿರಬೇಕೇ ಹೊರತು, ನಟಿಯ ಮೈ ಮೇಲೆ ಹೊರಳುವಂತಿರಬಾರದು. ಕನ್ನಡ, ತಮಿಳು, ತೆಲುಗು, ಮಲಯಾಳಿ, ಹಿಂದಿ, ಇಂಗ್ಲೀಷ್, ಮರಾಠಿ ಸೇರಿದಂತೆ ಹತ್ತು ಭಾಷೆಗಳು ನನಗೆ ಗೊತ್ತಿವೆ. ಸಂಸ್ಕೃತಿ ಬಿಂಬಿಸುವ ಪಾತ್ರಗಳು ಯಾವುದೇ ಭಾಷೆಯಲ್ಲಿ ಸಿಕ್ಕರೂ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT