ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು- ಅಭಿವೃದ್ಧಿಯ ನಡುವೆ

ಕಪ್ಪತಗುಡ್ಡದಲ್ಲಿ ಹಸಿರಿನ ಜೊತೆಗೇ ಅಭಿವೃದ್ಧಿ ಸಾಧನೆ ಬಗೆಯನ್ನು ಚರ್ಚಿಸಿ ನಿರ್ಧರಿಸಬೇಕು
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಕಪ್ಪತಗುಡ್ಡ  ಉಳಿಸಲು ಈಗ ಹೋರಾಟ ನಡೆಯುತ್ತಿದೆ. ಇದರ ಹಿನ್ನೆಲೆಯಲ್ಲಿ ಈ ಪ್ರದೇಶದ ಗಣಿಗಾರಿಕೆ ಕುರಿತು ಒಂದು ಅವಲೋಕನ. ಕಪ್ಪತಗುಡ್ಡದ ಸುತ್ತಮುತ್ತಲಿನ  13 ಕಡೆ ಬ್ರಿಟಿಷರ ಕಾಲದಲ್ಲಿ (1902- 1911) 15 ಬ್ರಿಟಿಷ್ ಕಂಪೆನಿಗಳು  ಗಣಿಗಾರಿಕೆ ನಡೆಸಿದ್ದವು. ಆ ಕಾಲದಲ್ಲಿ ಚಿನ್ನದ ಗಣಿಗಾರಿಕೆ ನಡೆದು ಸಾಕಷ್ಟು ಚಿನ್ನ ಉತ್ಪಾದಿಸಲಾಗಿದೆ.

ಆನಂತರ 1980– 90ರ ದಶಕಗಳಲ್ಲಿ ಕೆ.ಜಿ.ಎಫ್‌.ನ ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್ (ಬಿ.ಜಿ.ಎಂ.ಎಲ್) ಮತ್ತು ಹಟ್ಟಿ ಗೋಲ್ಡ್‌ ಮೈನಿಂಗ್ ಲಿಮಿಟೆಡ್ (ಎಚ್.ಜಿ.ಎಂ.ಎಲ್) ಕೂಡ ಇಲ್ಲಿ ಗಣಿಗಾರಿಕೆ ಮಾಡಿದ್ದವು. ಮೈನಿಂಗ್ ಎಕ್ಸ್‌ಪ್ಲೊರೇಷನ್ ಕಾರ್ಪೊರೇಷನ್ ಲಿಮಿಟೆಡ್ (ಎಂ.ಇ.ಸಿ.ಎಲ್), ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೂರಾರು ಕಡೆ ಡ್ರಿಲ್ಲಿಂಗ್ ಮಾಡಿ ಚಿನ್ನದ ನಿಕ್ಷೇಪಗಳನ್ನು ಲೆಕ್ಕ ಹಾಕಿವೆ.

ಈ ಗಣಿಗಳು ಮತ್ತು ಚಿನ್ನದ ನಿಕ್ಷೇಪಗಳು ಕಪ್ಪತಗುಡ್ಡದ ವಾಯವ್ಯ ದಿಕ್ಕಿನಲ್ಲಿ 15x8 ಕಿ.ಮೀ.ಗಳ ಮಧ್ಯೆ ಹರಡಿಕೊಂಡಿವೆ. ಈ ಬ್ಲಾಕ್‌ಗಳಲ್ಲಿ 13  ಗಣಿಗಳಿದ್ದವು,  900 ಅಡಿಗಳ ಆಳದವರೆಗೂ (9 ಹಂತಗಳವರೆಗೂ) ಕೆಲಸ ನಡೆದಿತ್ತು. ನೆಲದ ಒಳಗೆ ಹತ್ತಾರು ಸುರಂಗಗಳನ್ನು ಮಾಡಲಾಗಿದೆ. ಈ ಎಲ್ಲಾ ಗಣಿಗಳಲ್ಲಿ ಬೇರೆ ಬೇರೆ ಕಂಪೆನಿಗಳು ಬೇರೆ ಬೇರೆ ಕಾಲದಲ್ಲಿ ಗಣಿಗಾರಿಕೆ ಮಾಡಿ ಚಿನ್ನ ಉತ್ಪಾದಿಸಿವೆ.

ಚಿನ್ನದ ಬೆಲೆ ತೀರಾ ಕುಸಿದಾಗ ಕಂಪೆನಿಗಳು ವೆಚ್ಚ ಸರಿದೂಗಿಸಲಾಗದೆ ಮತ್ತು ಇತರ ಕಾರಣಗಳಿಂದ ಈ ಗಣಿಗಳನ್ನು ಸ್ಥಗಿತಗೊಳಿಸಲಾಯಿತು. ಇನ್ನೊಂದು ಕಾರಣವೆಂದರೆ ಆ ಕಾಲಕ್ಕೆ ಹೆಚ್ಚು ಚಿನ್ನವನ್ನು ಸಂಸ್ಕರಿಸಿ ತೆಗೆದುಕೊಳ್ಳುವ ತಂತ್ರಗಾರಿಕೆಯೂ ಇರಲಿಲ್ಲ.

ಆದರೆ ಈಗ ಚಿನ್ನದ ಬೆಲೆ ಹೆಚ್ಚಾಗಿದ್ದು ಚಿನ್ನದ ಗಣಿಗಾರಿಕೆಯನ್ನು ಲಾಭದಾಯಕವಾಗಿ ನಡೆಸಬಹುದಾಗಿದೆ. ಕೋಲಾರ, ಹಟ್ಟಿ ಮತ್ತು ಗದಗ ಚಿನ್ನದ ಬಯಲುಗಳು ಎನ್ನುವ ಹೆಸರು ಬ್ರಿಟಿಷರ ಕಾಲದಿಂದಲೇ ಇತ್ತು.  ಅಷ್ಟೇ ಅಲ್ಲ ಕಪ್ಪತಗುಡ್ಡ ಸುತ್ತಮುತ್ತ, ಗದಗ ಜಿಲ್ಲೆಯ ಇತರ ಪ್ರದೇಶಗಳಲ್ಲೂ ಪುರಾತನ ಕಾಲದಿಂದಲೂ ಸ್ಥಳೀಯರು ಚಿನ್ನವನ್ನು ಶೋಧಿಸುತ್ತಿದ್ದರು. ಈಗಲೂ ಮಳೆಗಾಲ ಬಂದರೆ ಅನೇಕ ಜಲಗಾರ ಕುಟುಂಬಗಳು ಚಿನ್ನ ಶೋಧಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತವೆ.  

ವೈಜ್ಞಾನಿಕ ಲೆಕ್ಕಗಳ ಆಧಾರದಿಂದ ಪ್ರಸ್ತುತ ಕಪ್ಪತಗುಡ್ಡ ಮತ್ತು ಅಕ್ಕಪಕ್ಕದ ಚಿನ್ನದ ಗಣಿಗಳಲ್ಲಿ 110ರಿಂದ 120 ಟನ್ನುಗಳಷ್ಟು ಚಿನ್ನ ಇರುವುದಾಗಿ ತಿಳಿದಿದ್ದು ಒಂದು ಟನ್ನು ಶಿಲೆಗೆ ಸರಾಸರಿ 2ರಿಂದ 5 ಗ್ರಾಂ ಚಿನ್ನ ಇರುವುದಾಗಿ ಲೆಕ್ಕ ಹಾಕಲಾಗಿದೆ. ಈ ಗಣಿಗಳನ್ನು ಮತ್ತೆ ಪ್ರಾರಂಭಿಸಿ ವರ್ಷಕ್ಕೆ 5 ಟನ್‌ನಷ್ಟು ಚಿನ್ನ ಉತ್ಪಾದಿಸಿದರೆ ಸುಮಾರು 25 ವರ್ಷ ಗಣಿಗಳು ನಡೆದು ಸರಾಸರಿ 25 ಸಾವಿರ ಜನರಿಗೆ ಕೆಲಸ ದೊರಕುತ್ತದೆ. ಆಳಕ್ಕೆ ಇಳಿದಷ್ಟೂ ಹೆಚ್ಚು ಚಿನ್ನ ದೊರಕುವ ಸಾಧ್ಯತೆಯಿರುತ್ತದೆ.

ಉತ್ತರ ಕರ್ನಾಟಕದ ಈ ಭಾಗ ತೀರಾ ಹಿಂದುಳಿದ ಪ್ರದೇಶವಾಗಿದ್ದು ಬೇರೆ ಯಾವುದೇ ನೈಸರ್ಗಿಕ ಸಂಪನ್ಮೂಲಗಳು ಇಲ್ಲಿ ಇಲ್ಲವೆಂದೇ ಹೇಳಬಹುದು. ಕೋಲಾರ ಚಿನ್ನದ ಗಣಿ ಮತ್ತು ಹಟ್ಟಿ ಚಿನ್ನದ ಗಣಿ ಪ್ರದೇಶಗಳು ಗಣಿಗಳಿಂದ ಅಭಿವೃದ್ಧಿ ಹೊಂದಿರುವುದಕ್ಕೆ ಸಾಕ್ಷಿಯಾಗಿವೆ. ಚಿನ್ನದ ಗಣಿಗಳು ಮತ್ತೆ ತೆರೆದರೆ ಈ ಭಾಗ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತದೆ. ಸ್ಥಳೀಯರ ಕೃಷಿ ಉತ್ಪನ್ನಗಳಿಗೆ ಒಳ್ಳೆ ಮಾರುಕಟ್ಟೆ ದೊರೆಯುತ್ತದೆ. ಉತ್ತಮ ವಿದ್ಯಾಕೇಂದ್ರಗಳು ಪ್ರಾರಂಭವಾಗುತ್ತವೆ.

ಇನ್ನು ಜಲ ಸಂಪನ್ಮೂಲದ ಬಗ್ಗೆ ಹೇಳಬೇಕಾದರೆ, ಕಪ್ಪತಗುಡ್ಡದ ದಕ್ಷಿಣ ಅಂಚಿನಲ್ಲಿ ತುಂಗಭದ್ರಾ ನದಿ ಸಮುದ್ರ ಮಟ್ಟದಿಂದ 510 ಮೀಟರ್‌ ಎತ್ತರದಲ್ಲಿ ಹರಿಯುತ್ತದೆ.ಕಪ್ಪತಗುಡ್ಡ ಹಲವು ಸಣ್ಣಸಣ್ಣ ಗುಡ್ಡದ ಶ್ರೇಣಿಗಳಿಂದ ಉತ್ತರ-ದಕ್ಷಿಣಕ್ಕೆ ನೇರವಾಗಿ ನಿಂತಿದ್ದು ಈ ಸಮಾನಾಂತರ ಬಾಹ್ಯರೇಖೆಗಳ ಮಧ್ಯೆ ಕಲ್ಲುಮಣ್ಣು, ಸಿಮೆಂಟ್ ಕಟ್ಟೆಗಳನ್ನು ಕಟ್ಟಿದರೆ ಮೂರು ದೊಡ್ಡ ಮತ್ತು ಹಲವಾರು ಸಣ್ಣಸಣ್ಣ ಹಳ್ಳಗಳು ತಯಾರಾಗುತ್ತವೆ.

ತುಂಗಭದ್ರಾ ನದಿಯಲ್ಲಿ ಮಳೆಗಾಲದಲ್ಲಿ ಹರಿಯುವ ಹೆಚ್ಚಿನ ನೀರನ್ನು 510ರಿಂದ 720 ಮೀಟರ್‌ ಎತ್ತರಕ್ಕೆ ಪಂಪ್ ಮಾಡಿದರೆ ಈ ಹಳ್ಳಗಳಲ್ಲಿ (580- 720 ಮೀಟರುಗಳ ಮಧ್ಯದಲ್ಲಿ) ಸುಮಾರು 8ರಿಂದ 10 ಟಿಎಂಸಿ ಅಡಿ ನೀರು ನಿಲ್ಲುತ್ತದೆ. (ಆರ್.ಎಚ್.ಸಾಹುಕಾರ ಮತ್ತು ವಿ.ಆರ್.ಹೆಗ್ಡೆ - Development Potential of Kappatagudda Hill Ranges, Gadag District, Karnataka, Journal of Geological society of India. Vol. 82, November. 2013, pp.447-454).

ಈ ನೀರಿನಿಂದ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಹೆಚ್ಚಾಗುವುದರ ಜೊತೆಗೆ ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲ್ಲೂಕುಗಳಲ್ಲಿನ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಸುಧಾರಿಸಬಹುದು. ಇದು ಒಂದು ವಿಧಾನ. 

ಇನ್ನು ಎರಡನೇ ವಿಧಾನ, ರಾಜಸ್ತಾನದಲ್ಲಿ ‘ನೀರಿನ ಮನುಷ್ಯ’ ರಾಜೇಂದ್ರ ಸಿಂಗ್ ಅವರು ಸೃಷ್ಟಿಸಿದ ಅರವಾರಿ ನದಿಯ ಪುನಶ್ಚೇತನ ಪದ್ಧತಿ. ಇದರಂತೆ ಕಪ್ಪತಗುಡ್ಡದ ಮೇಲಿನ ಸಮಾನಾಂತರ ಬಾಹ್ಯರೇಖೆಗಳ ಮಧ್ಯೆ ಕಲ್ಲುಮಣ್ಣು ಕಟ್ಟೆಗಳನ್ನು ಕಟ್ಟಿ ಮಳೆ ನೀರು ಸಂಗ್ರಹಿಸಿದರೆ ಹೇರಳ ನೀರು ಹಳ್ಳಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಸುತ್ತಮುತ್ತಲಿನ ಅಂತರ್ಜಲದ ಮಟ್ಟ ಹೆಚ್ಚಾಗುವುದರ ಜೊತೆಗೆ ಗದಗ, ಮುಂಡರಗಿ, ಶಿರಹಟ್ಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿ, ಜನ- ಜಾನುವಾರುಗಳಿಗೆ ನೀರು ದೊರಕುತ್ತದೆ.

ಗುಡ್ಡಗಳ ಮೇಲೆ ಪವನ ಯಂತ್ರಗಳನ್ನು ಸ್ಥಾಪಿಸಿ ವಿದ್ಯುತ್‌ ಉತ್ಪಾದಿಸಬಹುದು. ಇದೆಲ್ಲ ನಮ್ಮಲ್ಲೇ ಇರುವ ಸಂಪನ್ಮೂಲಗಳನ್ನು ನಾವೇ ಸೃಷ್ಟಿಸಿಕೊಳ್ಳುವ ಮಾದರಿ. ಜನ- ಜನನಾಯಕರು, ಅಧಿಕಾರಿಗಳು, ಮಠಾಧೀಶರು ಎಲ್ಲರೂ ತೆರೆದ ಮನಸ್ಸಿನಿಂದ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಇನ್ನೊಂದು ಮುಖ್ಯ ವಿಷಯವೆಂದರೆ, ಕಪ್ಪತಗುಡ್ಡದ ವಾಯವ್ಯ ಭಾಗ ಹೆಚ್ಚು ಗಿಡಮರಗಳಿಲ್ಲದ ಬೀಳು ಭೂಮಿಯಾಗಿದ್ದು ಹಳೆ ಚಿನ್ನದ ಗಣಿಗಳಿಂದ ಬಹಳ ದೂರ ಇದೆ.  ಹಾಗಾಗಿ ಇಲ್ಲಿನ ಚಿನ್ನದ ಗಣಿಗಾರಿಕೆಯಿಂದ ಪರಿಸರಕ್ಕೆ ಯಾವ ಹಾನಿಯೂ ಆಗುವುದಿಲ್ಲ.

ಕಬ್ಬಿಣದ ಅದಿರು ಗಣಿಗಾರಿಕೆಗೆ ಬೇಕಿರುವಂತೆ ಚಿನ್ನದ ಒಳ (ಸುರಂಗಗಳ) ಗಣಿಗಾರಿಕೆಗೆ ಹೆಚ್ಚು ನೆಲವೂ ಬೇಕಾಗಿಲ್ಲ. ಅರಣ್ಯ, ಪರಿಸರ ಇಲಾಖೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಗಣಿಗಾರಿಕೆಗೆ ಅನುಮತಿ ನೀಡಬೇಕಾಗಿದೆ. ಆದರೆ ಯಾವ ಕಾರಣಕ್ಕೂ ಕಪ್ಪತಗುಡ್ಡದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಅವಕಾಶ ಕೊಡದೆ, ಅಮೂಲ್ಯ ಗಿಡಮೂಲಿಕೆಗಳಿರುವ ಅಲ್ಲಿನ ಪ್ರದೇಶವನ್ನು ಉಳಿಸಿಕೊಳ್ಳಬೇಕಿದೆ. ಪ್ರಸ್ತುತ ಈ ಹೊತ್ತಿನಲ್ಲಿ ಜನರಿಗೆ ಹಸಿರು ಮತ್ತು ಅಭಿವೃದ್ಧಿ ಎರಡೂ ಬೇಕಾಗಿದೆ ಎನ್ನುವುದು ಮಾತ್ರ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT