ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲವ್ಯಾಧಿಗೆ ಸರಳ ಚಿಕಿತ್ಸೆ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ಸ್ವಚ್ಛಭಾರತ ಅಭಿಯಾನ ಕೈಗೊಂಡು ವರ್ಷಗಳೇ ಉರುಳಿದರೂ ಉತ್ತರ ಕರ್ನಾಟಕದ ಇನ್ನೂ ಹಲವು ಹಳ್ಳಿಗಳು ಬಯಲು ಶೌಚಾಲಯಗಳಿಂದ ಮುಕ್ತವಾಗಿಲ್ಲ. ಮಹಿಳೆಯರಂತೂ ಮರ್ಯಾದೆಗೆ ಅಂಜಿ ಕತ್ತಲಾದ ಮೇಲೆ ಶೌಚಕ್ಕೆ ಹೋಗಬೇಕಾದ ಸ್ಥಿತಿ ಇದೆ.
 
ಹೀಗಿರುವಾಗ ಸಮಯಕ್ಕೆ ಸರಿಯಾಗಿ ಬಹಿರ್ದೆಸೆಗೆ ಹೋಗಲಾಗದ ಮಹಿಳೆಯರು ಮೂಲವ್ಯಾಧಿ, ಫಿಷರ್‌ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತ್ತ ಹೆಳಿಕೊಳ್ಳಲೂ ಆಗದೆ, ಇತ್ತ ಅನುಭವಿಸಲೂ ಆಗದ ಸ್ಥಿತಿ ಇವರದ್ದು. ‘ಏನಲ್‌ ಡಯಲಟ್ರೇಷನ್‌ ಫಾರ್‌ ಫಿಷರ್’ ಎಂಬ ಚಿಕಿತ್ಸೆ ನಾಲ್ಕೈದು ದಶಕಗಳಿಂದ ಇದೆ; ಆದರೆ ಕಳೆದ ಐದು ವರ್ಷಗಳಿಂದ ಈಚೆಗಷ್ಟೆ ಇದು ಹೆಚ್ಚು ಗಮನವನ್ನು ಸೆಳೆಯುತ್ತಿದೆ. ಈ ಕುರಿತು ಧಾರವಾಡದ ಡಾ. ಎಸ್‌. ಆರ್‌. ಕವಲಗುಡ್ಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
 
ಶಸ್ತ್ರಚಿಕಿತ್ಸೆ ಇಲ್ಲದ ಹಾಗೂ ಕಡಿಮೆ ಖರ್ಚಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಗುಣಮುಖರಾಗಬಹುದಾದ ಈ ಚಿಕಿತ್ಸಾಪದ್ಧತಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವೈದ್ಯರು ಕೈಬಿಟ್ಟಿದ್ದರು. ಹೆಚ್ಚು ಆದಾಯ ತಂದುಕೊಡದ ಈ ಪದ್ಧತಿಯನ್ನು ಕೆಲವರು ವೈದ್ಯರೇ ಅಲಕ್ಷಿಸಿದ್ದರು. ಆದರೆ ಎಲ್ಲ ರೀತಿಯ ಚಿಕಿತ್ಸೆ ಮಾಡಿದ ನಂತರ ಅಂತಿಮವಾಗಿ ‘ಏನಲ್‌ ಡಯಲಟ್ರೇಷನ್‌ ಫಾರ್‌ ಫಿಷರ್’ನಲ್ಲಿ ಪರಿಹಾರ ಕಂಡುಕೊಂಡವರಿಂದಲೇ ಈ ಚಿಕಿತ್ಸೆ ಕುರಿತು ಪ್ರಚಾರ ನಡೆಯುತ್ತಿರಬಹುದು ಎನ್ನುವುದು ಡಾ. ಕವಲಗುಡ್ಡ ಅವರ ಅಭಿಪ್ರಾಯ.
 
‘ನಿತ್ಯವೂ ಮಲವಿಸರ್ಜನೆಗೆ ದೇಹ ಒಂದು ನಿಗದಿತ ಸಮಯವನ್ನು ಜೈವಿಕ ಗಡಿಯಾರದಲ್ಲಿ ಹೊಂದಿಸಿರುತ್ತದೆ. ಆ ಸಮಯಕ್ಕೆ ಸರಿಯಾಗಿ ಅದು ಬಹಿರ್ದೆಸೆಗೆ ಹೋಗಬೇಕಿಸುವುದು ಪ್ರಕೃತಿಯ ಪದ್ಧತಿ. ಆದರೆ ಶೌಚಾಲಯವಿಲ್ಲದ ಮನೆಯ ಮಹಿಳೆಯರಿಗೆ ಇದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಸುಕಿನಲ್ಲಿ, ಇನ್ನೂ ಕೆಲವೊಮ್ಮೆ ರಾತ್ರಿ ವೇಳೆ ಬಹಿರ್ದೆಸೆಗೆ ಹೋಗಬೇಕಾದ ಅನಿವಾರ್ಯತೆ ಇರುತ್ತದೆ.
 
ಹೀಗಿರುವಾಗ ಜೈವಿಕ ಗಡಿಯಾರ ಹಿಂದೆ ಮುಂದೆ ಆಗಿ, ಹೊರಹೋಗಬೇಕಾದ ಮಲ, ದೇಹದಲ್ಲೇ ಉಳಿದು ಗಟ್ಟಿಯಾಗುತ್ತದೆ. ಇದರಿಂದ ಫಿಷರ್‌ ಹಾಗೂ ಮೂಲವ್ಯಾಧಿ ಆರಂಭವಾಗುತ್ತದೆ. ಆರಂಭದಲ್ಲಿ ಶೇ. 95ರಷ್ಟು ಫಿಶರ್‌ ಆಗಿಯೇ ಇರುತ್ತದೆ. ನಂತರ ಶೇ. 10ರಷ್ಟು ಜನಕ್ಕೆ ಇದು ಮೂಲವ್ಯಾಧಿಯಾಗಿ ಪರಿವರ್ತನೆಗೊಳ್ಳುತ್ತದೆ. ಇದೇ ಮುಂದೆ ಉರಿ ಮೂಲವ್ಯಾಧಿ ಹಾಗೂ ರಕ್ತಮೂಲವ್ಯಾಧಿ ಆಗಿ ಬದಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.
 
‘ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ನಾಟಿವೈದ್ಯರ ಬಳಿ ಹೋಗುವುದೇ ಹೆಚ್ಚು. ಇಂಥ ಕಡೆ ಕೆಲವರು ಬಂದ ಮೊಳಕೆಯನ್ನು ಕುಯ್ಯುತ್ತಾರೆ, ಇನ್ನೂ ಕೆಲವರು ದಾರ ಕಟ್ಟುತ್ತಾರೆ. ಹೀಗೆ ತಮಗೆ ತೋರಿದಂತೆ ಶಸ್ತ್ರಚಿಕಿತ್ಸೆ ನಡೆಸಿ, ಸಮಸ್ಯೆ ಹೊತ್ತೊಯ್ದವರಿಗೆ ಜೀವನವೇ ಬೇಡ ಎನಿಸುವ ಸ್ಥಿತಿ ತಲುಪುತ್ತಾರೆ. ಇನ್ನು ಅಲೋಪತಿಪದ್ಧತಿಯ ಕೆಲವರು ವೈದ್ಯರೂ ಗುದದ್ವಾರ ನೋಡದೇ, ಪರೀಕ್ಷಿಸದೇ ಔಷಧ ನೀಡುತ್ತಾರೆ. ಇವೆಲ್ಲವೂ ಮೂಲ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ವೈದ್ಯರಾದವರು ತಮ್ಮ ವೃತ್ತಿಗೆ ಕಟಿಬದ್ಧರಾಗಬೇಕು. ಮೂಲವ್ಯಾಧಿ ಎಂದರೆ ಸಮಸ್ಯೆ ಇರುವ ಜಾಗವನ್ನು ನೋಡಲು ವೈದ್ಯರೂ ಹಿಂಜರಿಯಬಾರದು, ರೋಗಿಯೂ ತೋರಿಸಲು ಹಿಂಜರಿಯದಿದ್ದರೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು’ ಎನ್ನುತ್ತಾರೆ ಡಾ. ಕವಲಗುಡ್ಡ.
 
‘ನಾನು 1954ರಲ್ಲಿ ವೈದ್ಯಕೀಯ ಪದವಿ ಮುಗಿಸಿದೆ. ಮುಂಬೈ ಹಾಗೂ ಪುಣೆಯಲ್ಲಿ ಕೆಲಸ ಮಾಡಿದ ನಂತರ ಹುಬ್ಬಳ್ಳಿಗೆ ಬಂದು ನಂತರ ಎಂ.ಎಸ್‌. ಮುಗಿಸಿ ಶಸ್ತ್ರಚಿಕಿತ್ಸಕನಾಗಿದ್ದೆ. ಇದಾಗಿ ಕೆಲವು ವರ್ಷಗಳ ನಂತರ ‘ಏನಲ್‌ ಡಯಲಟ್ರೇಷನ್‌ ಫಾರ್‌ ಫಿಷರ್’ ಎಂಬ ಚಿಕಿತ್ಸೆಯ ಪರಿಚಯವಾಯಿತು. ಬಹಳ ವರ್ಷಗಳ ಕಾಲ ಈ ಪದ್ಧತಿಯಲ್ಲೇ ಚಿಕಿತ್ಸೆ ನೀಡುತ್ತಾ ಬಂದಿದ್ದೇನೆ. ಶಸ್ತ್ರಚಿಕಿತ್ಸೆಯ ಬದಲು, ಒಂದು ಚುಚ್ಚುಮದ್ದು ಹಾಗೂ 8ರಿಂದ 15 ದಿನಗಳವರೆಗೆ ಗುಳಿಗೆ ನೀಡುವುದು ಇದರ ಪದ್ಧತಿ. ಹೆಚ್ಚು ಖರ್ಚಿಲ್ಲದ ಈ ಚಿಕಿತ್ಸೆ ಪಡೆದವರು ನಂತರ ಆಹಾರ ಕ್ರಮ (ನಾರುಯುಕ್ತ ಆಹಾರಸೇವನೆ, ಬಾಳೆಹಣ್ಣು, ಇಸಾಬುಲ್‌ ಸೇವನೆ) ಮತ್ತು ಸರಿಯಾದ ಸಮಯಕ್ಕೆ ಮಲವಿಸರ್ಜಿಸಿದರೆ ಮತ್ತೆಂದೂ ಈ ಸಮಸ್ಯೆ ಹೊತ್ತು ಬರುವವರು ಕಡಿಮೆ’ ಎನ್ನುತ್ತಾರೆ ಅವರು.
 
ಆದರೆ ಕಳೆದ ಐದು ವರ್ಷಗಳಲ್ಲಿ ಈ ಪದ್ಧತಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ. 2015–16ರಲ್ಲಿ 27 ಸಾವಿರ ರೋಗಿಗಳನ್ನು ಪರೀಕ್ಷಿಸಿದ್ದೇನೆ. ಇವರಲ್ಲಿ ಬಹುತೇಕರು ಹತ್ತಕ್ಕಿಂತ ಹೆಚ್ಚು ಗಂಟೆ ಕುಳಿತು ಕೆಲಸ ಮಾಡುವ ಐಟಿ ಉದ್ಯೋಗಿಗಳು, ಲಾರಿ ಹಾಗೂ ಬಸ್‌ ಚಾಲಕರು, ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಕೆಲವರು ಪುರುಷರು, ಹೆರಿಗೆ ನಂತರದಲ್ಲಿ ಕೆಲವು ಮಹಿಳೆಯರಿಗೆ ಈ ಸಮಸ್ಯೆ ಬರುವುದುಂಟು. ಅಂಥವರೂ ಬರುತ್ತಿದ್ದಾರೆ. ಈ ಸಮಸ್ಯೆ ಉತ್ತರ ಕರ್ನಾಟಕಕ್ಕೆ ಅಷ್ಟೇ ಸೀಮಿತವಾಗಿಲ್ಲ. ಬದಲಿಗೆ ರಾಯಚೂರು, ಅಥಣಿ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಚಿತ್ರದುರ್ಗ ಹಾಗೂ ಹೊರ ರಾಜ್ಯಗಳ ಮೇದಕ್‌, ಗೋವಾದಿಂದಲೂ ಬಂದು ಚಿಕಿತ್ಸೆ ಪಡೆದವರೂ ಇದ್ದಾರೆ’ ಎಂದೆನ್ನುತ್ತಾರೆ ಡಾ. ಕವಲಗುಡ್ಡ.
 
1988ರಿಂದ ಇಲ್ಲಿನ ಜರ್ಮನ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 86 ವರ್ಷದ ಡಾ. ಕವಲಗುಡ್ಡ ಅವರದ್ದು ಇಂದಿಗೂ ಅದೇ ಬತ್ತದ ಉತ್ಸಾಹ. ದೊಡ್ಡದೊಂದು ಲೆಡ್ಜರ್‌ ಹೊಂದಿರುವ ಇವರು ಅದರಲ್ಲಿ ಈವರೆಗೂ ಚಿಕಿತ್ಸೆ ಪಡೆದವರ ಹೆಸರು, ವಿಳಾಸವನ್ನು ಬರೆದಿಟ್ಟುಕೊಂಡಿದ್ದಾರೆ. ಕೆಲವೇ ನೂರು ರೂಪಾಯಿಗಳಲ್ಲಾಗುವ ಚಿಕಿತ್ಸೆಯನ್ನು ಪ್ರಾಮಾಣಿಕವಾಗಿ ವೈದ್ಯರು ನೀಡಬೇಕು ಎನ್ನುವುದು ಇವರ ಆಗ್ರಹ. ಜೊತೆಗೆ ಪ್ರತಿಯೊಂದು ಮನೆಯೂ ಶೌಚಾಲಯ ಹೊಂದಿರಬೇಕು ಎಂಬ ಒತ್ತಾಯವನ್ನೂ ಅವರು ಮಾಡುತ್ತಾರೆ.
ಡಾ. ಎಸ್‌.ಆರ್‌. ಕವಲಗುಡ್ಡ ಅವರ ಸಂಪರ್ಕ ಸಂಖ್ಯೆ 9845238912
 
**
ಮೂಲವ್ಯಾಧಿಯಿಂದ ದೂರ ಉಳಿಯಲು
* ನಾರುಯುಕ್ತ ಆಹಾರಸೇವನೆ.
* ತರಕಾರಿ, ಸೊಪ್ಪು, ಬಾಳೆಹಣ್ಣುಗಳ ಸೇವನೆ.
* ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಬಹಿರ್ದೆಸೆಗೆ ಹೋಗುವುದು.
* ಜಂಕ್‌ಫುಡ್‌ನಿಂದ ದೂರು ಉಳಿಯುವುದು.
* ಸಾತ್ವಿಕ ಆಹಾರಸೇವನೆಯನ್ನು ರೂಢಿಸಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT