ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘೋಷಿತ ತುರ್ತುಪರಿಸ್ಥಿತಿ ಹೋರಾಟ ಅಗತ್ಯ: ಕುಂವೀ

ಧಾರವಾಡ ಸಾಹಿತ್ಯ ಸಂಭ್ರಮ
Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ: ‘ದೇಶದಲ್ಲಿ ಮುಕ್ತವಾಗಿ ಮಾತನಾಡಲು ಆಗದಿರುವಂತಹ ನಿರ್ವಾತ ವಾತಾವರಣ ಸೃಷ್ಟಿಯಾಗಿದೆ. ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ, ಚಳವಳಿ ನಡೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

‘ಸಾಹಿತ್ಯ ಸದಾ ಜನಪರವೇ’ ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಇದಕ್ಕೆ ಉದಾಹರಣೆ, ಒಂದೂವರೆ ವರ್ಷದ ಹಿಂದೆ ನಡೆದ ಡಾ. ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ. ಸತ್ಯ ಹೇಳಿದರೆ ರಾಷ್ಟ್ರದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟುತ್ತಾರೆ. ಆದರೆ, ಎಷ್ಟೇ ಒತ್ತಡವಿದ್ದರೂ ಹೇಳಬೇಕಾದದ್ದನ್ನು ಹೇಳುತ್ತೇವೆ. ಬರೆಯಬೇಕಾದದ್ದನ್ನು ಬರೆಯುತ್ತೇವೆ’ ಎಂದರು.

‘ದೇಶದಲ್ಲಿ 26 ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಆದರೆ, ನೂರಾರು ಮಂದಿ ಪ್ರಶಸ್ತಿ ವಿಜೇತರ ಪೈಕಿ 26 ಜನ ಮಾತ್ರ ವಾಪಸ್ ನೀಡಿದ್ದಾರೆ ಎಂದು ಕೇಂದ್ರದ ಸಚಿವರೊಬ್ಬರು ಹೇಳಿಕೆ ನೀಡಿದ್ದರು. ಆದರೆ, ಈ ವಿಷಯ ಪ್ರಪಚಂದಾದ್ಯಂತ ಸುದ್ದಿಯಾಯಿತು. ಇದರಿಂದ ಸನಾತನವಾದಿಗಳು ಸ್ವಲ್ಪ ಜಾಗೃತರಾದರು. ತಮ್ಮ ಬಾಯಿಗೆ ಲಗಾಮು ಹಾಕಿಕೊಂಡರು. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸುಲಭದ ವಿಷಯವಲ್ಲ’ ಎಂದು ಹೇಳಿದರು.

ಸಾಹಿತಿ ನಾ.ದಾಮೋದರ ಶೆಟ್ಟಿ ಮಾತನಾಡಿ, ‘ಸಾಹಿತಿಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ಬರೆದರೂ ಅದರಲ್ಲಿ ಸಾರ್ವಕಾಲಿಕ ನೆಲೆ, ಅರ್ಥ ಇರುತ್ತದೆ. ಹೀಗಾಗಿ ಸಾಹಿತಿ ತನಗಾಗಿ ಬರೆಯುತ್ತಾನೆ ಎನ್ನುವುದರಲ್ಲಿ ಅರ್ಥವಿಲ್ಲ. ಜಿ.ಎಸ್.ಶಿವರುದ್ರಪ್ಪ ಅವರು ಎದೆ ತುಂಬಿ ಹಾಡಿದೆನು ಕವಿತೆಯಲ್ಲಿ, ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.

ಹಾಡುವುದು ಅನಿವಾರ್ಯ ಕರ್ಮ ನನಗೆ ಎನ್ನುತ್ತಾರೆ. ಯಾರು ಕೇಳದಿದ್ದರೂ ಹಾಡುತ್ತೇನೆ ಎನ್ನುವುದು ಏನನ್ನು ಸೂಚಿಸುತ್ತದೆ? ಬಿ.ಆರ್.ಲಕ್ಷ್ಮಣ್‌ರಾವ್ ಅವರು, ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಎಂದು ಬರೆಯುತ್ತಾರೆ. ಇದು ತಾಯಿ-ಮಗುವಿನ ಸಂಬಂಧವನ್ನು ಹೇಳುವ ಕವಿತೆ. ಆದರೆ, ಗಾಳಕ್ಕೆ ಸಿಕ್ಕ ಮೀನು ಎಂದರೆ ವಿಲವಿಲ ಒದ್ದಾಡುವ ದೃಶ್ಯ ಕಣ್ಣಮುಂದೆ ಬರುತ್ತದೆ. ಹೀಗಾಗಿ ಇಲ್ಲಿ ಕವಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದನ್ನು ಗ್ರಹಿಸಬೇಕು’ ಎಂದು ಹೇಳಿದರು.

‘ಯಾವ ಸಾಹಿತ್ಯವೂ ಶಾಶ್ವತ ಸಾಹಿತ್ಯವಲ್ಲ. ಹಾಗಾದರೆ ರಾಮಾಯಣ, ಮಹಾಭಾರತ ಶಾಶ್ವತ ಸಾಹಿತ್ಯ ಅಲ್ಲವೇ ಎಂದು ಪ್ರಶ್ನಿಸಬಹುದು. ಈ ಮಹಾಕಾವ್ಯಗಳ ಹೆಸರು ಹೇಳಿಕೊಂಡು ಉಪಕಥೆಗಳು ಹುಟ್ಟಿಕೊಂಡಿವೆ. ಸಂಚಾರಿ ಭಾವಗಳು ಇಲ್ಲದೇ ಇದ್ದಿದ್ದರೆ ಸ್ಥಾಯಿ ರೂಪದ ರಾಮಾಯಣ, ಮಹಾಭಾರತ ಉಳಿಯಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿ, ‘ನಾಲ್ಕು ಗೋಡೆಗಳಿಗೆ ಸೀಮಿತರಾದ ಮಹಿಳೆಯರು ಕಾಲ ಕಳೆಯಲೆಂದು ಓದುವ ಸಾಹಿತ್ಯವನ್ನು ಜನಪ್ರಿಯ ಸಾಹಿತ್ಯ ಎಂದು ಕರೆಯಲಾಯಿತು. ವಿಮರ್ಶಾ ಲೋಕದಿಂದ ಹೊರಗಿಡುವ ಉದ್ದೇಶದಿಂದ ಜನಪ್ರಿಯ ಸಾಹಿತ್ಯ ಎಂಬ ಚೌಕಟ್ಟು ಹಾಕಲಾಗಿದೆ.

ವ್ಯಕ್ತಿ, ಜಾತಿ ಕೇಂದ್ರಿತವಾಗಿ, ಮೀಮಾಂಸೆಯ ಎಲ್ಲ ನಿಯಮಗಳನ್ನು ಇಟ್ಟುಕೊಂಡು ಹೂವಿನ ಹಾರ ಪೋಣಿಸಿದಂತೆ ಬರೆಯುವ ಸಾಹಿತ್ಯವನ್ನು ಜನಪ್ರಿಯ ಸಾಹಿತ್ಯ ಎನ್ನಬಹುದು. ಆದರೆ, ಜನಪರ ಸಾಹಿತ್ಯ ಬಹುಜನರ ಸಂಕಷ್ಟಕ್ಕೆ ಮಿಡಿಯುವುದಾಗಿರುತ್ತದೆ’ ಎಂದರು.

‘ಭೈರಪ್ಪ ಅವರ ಮಂದ್ರ, ಯಾನ ಕಾದಂಬರಿಗಳು ವಾಸ್ತವವಾಗಿ ಅರಗಿಸಿ ಕೊಳ್ಳಲಾಗದ, ಕಲ್ಪನೆಯಲ್ಲೇ ಓದುಗರನ್ನು ತೇಲಾಡಿಸುವಂತಹ ಅಂಶ ತುಂಬಿ ಕೊಂಡಿವೆ. ಹೀಗಾಗಿ ಹೆಚ್ಚು ಮಾರಾಟವಾಗುತ್ತಿವೆ’ ಎಂದು ಹೇಳಿದರು. ಪತ್ರಕರ್ತ ಜಗದೀಶ ಕೊಪ್ಪ ಕಾರ್ಯಕ್ರಮ ನಿರ್ದೇಶಿಸಿದರು.

‘ನನ್ನನ್ನು ಹಿಡಿಯಲು ಸಾಧ್ಯವಿಲ್ಲ’
ಜನಪ್ರಿಯ, ಜನಪರ ಸಾಹಿತ್ಯದ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು, ‘ಯಾವುದನ್ನು ಓದಬೇಕು, ಓದಬಾರದು ಎಂಬುದು ಓದುಗರಿಗೆ ಗೊತ್ತಿದೆ. ಗಟ್ಟಿ ಸಾಹಿತ್ಯವನ್ನು ಓದುತ್ತಾರೆ. ಅದನ್ನು ಜನರಿಗೇ ಬಿಟ್ಟುಬಿಡಿ’ ಎಂದರು. ಇದಕ್ಕೆ ಉತ್ತರಿಸಿದ ಕುಂ.ವೀ., ‘ಓದುಗರಿಗೆ ಬಿಟ್ಟಿದ್ದೇವೆ. ನೋಡಿ ನೀವು ಅಲ್ಲಿದ್ದೀರಿ. ನಾನು ಇಲ್ಲಿದ್ದೀನಿ.ನಿಮ್ಮನ್ನು ಹಿಡಿದುಕೊಂಡಿದ್ದೇನೆಯೇ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆ ಮಹಿಳೆ, ‘ನನ್ನನ್ನು ಹಿಡಿಯಲು ಸಾಧ್ಯವಿಲ್ಲ ಬಿಡಿ’ ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

‘ಅರ್ಥ ಮಾಡಿಕೊಳ್ಳುವುದು ನಮ್ಮ ಕರ್ಮ’
ಜಿ.ಎಸ್‌.ಎಸ್‌ರ ಎದೆ ತುಂಬಿ ಹಾಡಿ ದೆನು ಕವಿತೆಯ ‘ಎಲ್ಲ ಕೇಳಲಿ ಎಂದು ನಾನು ಹಾಡು ವುದಿಲ್ಲ. ಹಾಡು ವುದು ಅನಿವಾರ್ಯ ಕರ್ಮ ನನಗೆ’ ಎಂಬ ವಾಕ್ಯದ ಬಗ್ಗೆ ಚರ್ಚೆ ನಡೆಯು ತ್ತಿದ್ದ ವೇಳೆ ಮಾತ ನಾಡಿದ ಚಂದ್ರ ಶೇಖರ ಪಾಟೀಲ ಅವರು, ‘ಏನಿದು ಕರ್ಮ? ಕರ್ಮಕ್ಕೆ ಕೆಲಸ, ಉದ್ಯೋಗ, ಹಣೆಬರಹ ಎನ್ನುವ ಅರ್ಥಗಳಿವೆ. ಜಿ.ಎಸ್‌.ಎಸ್ ಯಾವ ಅರ್ಥದಲ್ಲಿ ಬಳಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕರ್ಮ’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT