ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡ–ಬಲ ಪಂಥೀಯರ ಮಧ್ಯೆ ಮಾತು ಏರ್ಪಡಲಿ

ಧಾರವಾಡ ಸಾಹಿತ್ಯ ಸಂಭ್ರಮ
Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ:  ‘ಎಡ ಹಾಗೂ ಬಲ ಪಂಥೀಯ ವರ್ಗಗಳು ತಮ್ಮ ಪಾಡಿಗೆ ತಾವು ಇದ್ದರೆ ವಿಚಾರ ಮಂಥನವಾಗುವುದೇ ಇಲ್ಲ. ಎರಡು ವರ್ಗಗಳ ನಡುವೆ ಮಾತು ಏರ್ಪಡಬೇಕು’ ಎಂದು ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.

ಧಾರವಾಡ ಸಾಹಿತ್ಯ ಸಂಭ್ರಮದ ಐದನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ‘ಎಡಪಂಥ ಹಾಗೂ ಬಲಪಂಥದವರು ಪರಸ್ಪರ ಮಾತನ್ನೇ ಕೇಳಿಲ್ಲ. ಅವರೂ ಕೇಳಬೇಕಾಗಿಲ್ಲ ಎಂಬ ಮನಸ್ಥಿತಿಯಲ್ಲಿದ್ದಾರೆ. ಹೀಗಾದರೆ ಸಂವಾದ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ ಅವರು, ಸಾಹಿತಿ ಅನಂತಮೂರ್ತಿ ಅವರ ಮಾತನ್ನು ಮೆಲುಕು ಹಾಕಿದರು. ಮುಕ್ತ ಚರ್ಚೆಗೆ ಅವಕಾಶ ಸಿಗದಿದ್ದರೆ ದೇಶವು ‘ಮಾತು ಸೋತ ಭಾರತ’ ಆಗುತ್ತದೆ ಎಂದರು.

‘ಭಿನ್ನ ವಿಚಾರ, ಸಿದ್ಧಾಂತ ಇರುವರೆಲ್ಲರೂ ಒಟ್ಟಿಗೆ ಸೇರಿ ಚರ್ಚಿಸಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿ ಹಾಗೇ ಕಾಣುತ್ತಿಲ್ಲ. ಆದರೂ ಈ ವರ್ಗಗಳು ಪರಸ್ಪರ ಚರ್ಚೆಯಲ್ಲಿ ಪಾಲ್ಗೊಂಡು, ಒಂದು ನಿಲುವಿಗೆ ಬರಲಾಗದಿದ್ದರೂ ಸಮಾನ ವೇದಿಕೆಯಲ್ಲಿ ಎಲ್ಲವನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವವಾದರೂ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ಪಂಪ ಬಹಳ ಪ್ರೀತಿಯಿಂದ ಹೇಳಿದ ‘ಗೊಟ್ಟಿ’ (ಹತ್ತು ಜನ ಕಲೆತು ಮಾತನಾಡುವುದು) ಸಾಧ್ಯವಾಗಬೇಕು. ಅಂಥ ಸಾಹಿತ್ಯಿಕ ವಿಕೇಂದ್ರೀಕರಣ ಧಾರವಾಡದಲ್ಲಿ ಆಗಿದೆ ಎಂಬುದು ಸಂತಸದ ಸಂಗತಿ’ ಎಂದರು.

ಸಾಮಾಜಿಕ ಹಾಗೂ ಸಾಹಿತ್ಯದ ನಡುವಿನ ಸಮಸ್ಯೆ ಭಿನ್ನವಾಗಿಲ್ಲ ಎಂದು ನಾನು ದೃಢವಾಗಿ ನಂಬಿದ್ದೇನೆ. ಬೇಂದ್ರೆಯವರ ‘ಇಳಿದು ಬಾ, ತಾಯಿ ಇಳಿದು ಬಾ’ ಅಂಥ ‘ಗಂಗಾವತರಣ’ ಪದ್ಯವನ್ನು ಓದುವಾಗ ನಮಗೆ ತಕ್ಷಣ ಕಾವೇರಿ ಸಮಸ್ಯೆ ನೆನಪಾದರೆ ಅದು ಅಸಮಂಜಸತೆ ಅನಿಸುವುದಿಲ್ಲ. ‘ಅನ್ನಾವತಾರ’ ಪದ್ಯವೂ ಬಡತನ ಹಾಗೂ ಅನ್ನದ ಕುರಿತಾಗಿತ್ತು. ಸಾಮಾಜಿಕ ಸಮಸ್ಯೆ ಪರಿಹಾರಕ್ಕಾಗಿ ಚಿಂತಕ, ಸಾಹಿತಿ, ಮಾಧ್ಯಮ, ರಾಜಕಾರಣ ಮಾಡುವ ಕೆಲಸ ಮೂಲತಃ ಭಿನ್ನವಾಗಿಲ್ಲ. ಆದರೆ ಹಿಡಿಯುವ ಭಾಷಾ ಮಾರ್ಗಗಳು ಬೇರೆಯಾಗಿವೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌, ‘ನಾವು ಅರಿತಿರುವ ಸಾಹಿತ್ಯ, ಸಂಸ್ಕೃತಿಯನ್ನು ಸಾಂಪ್ರದಾಯಿಕ ನೀತಿ ನಿಯಮಗಳಿಂದ, ಚರ್ವಿತ ಚರ್ವಣ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಇಂಥ ಸಂವಾದಗಳ ಅಗತ್ಯವಿದೆ. ಇದರಿಂದ ನಮ್ಮಲ್ಲಿನ ಸ್ಥಾಪಿತ ಸಿದ್ಧ ವಿಮರ್ಶಾ ಸೂತ್ರಗಳನ್ನು ಪಲ್ಲಟಗೊಳಿಸಿ, ಹೊಸ ಆಲೋಚನಾ ವಿಧಾನ ರೂಪುಗೊಳ್ಳಲು ಕಾರಣವಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ಅನುದಾನ ಪಡೆಯುವ ಕೆಲ ಸಾಹಿತ್ಯ ಸಮ್ಮೇಳನಗಳು ಅಪ್ರಸ್ತುತ ಅನಿಸಿವೆ. ಹಲವು ಪ್ರಜ್ಞಾವಂತರಿಂದ ವಿರೋಧವಾದರೂ ಅದಕ್ಕೆ ಸಂಘಟಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರದ ಅನುದಾನ ಪಡೆಯುವುದರಿಂದ ಪ್ರಜಾ ಪ್ರಭುತ್ವ ಮೌಲ್ಯಕ್ಕೆ ವಿಧೇಯರಾಗಿರ ಬೇಕಾದ ಅನಿವಾರ್ಯತೆ  ಉಂಟಾಗಿದೆ’ ಎಂದರು. ನಿಸಾರ್‌ ಅವರು, ಸ್ವರಚಿತ ‘ರಾಮನ್‌ ಸತ್ತ ಸುದ್ದಿ’, ‘ನಿಮ್ಮೊಡನಿದ್ದು ನಿಮ್ಮಂತಾಗದೆ’ ಕವನ ವಾಚಿಸಿದರು.

ಎಲ್ಲರೂ ಬರೆಯಲಿ: ನಿಸಾರ್‌ ಅಹಮದ್
ಕಾರ್ಪೋರೆಟ್‌ ವಲಯದ ಬರಹಗಾರರ ಕುರಿತು ಕೆಲವರಿಗೆ ಅಸಮಾಧಾನವಿದೆ. ಅವರಿಂದ ಸಾಹಿತ್ಯದ ಪಾವಿತ್ರ್ಯ ಹಾಳಾಗುತ್ತಿದೆ ಎನ್ನುವುದು ತಪ್ಪು ಎಂದು ಕವಿ ಕೆ.ಎಸ್‌.ನಿಸಾರ್‌ ಅಹಮದ್ ಹೇಳಿದರು.

‘ನಮ್ಮಂತೆಯೇ ಅವರು ಕೂಡ ಕಷ್ಟಕರ ಜೀವನದ ಎಲ್ಲ ಹಂತಗಳನ್ನು ದಾಟಿಕೊಂಡು ಬಂದವರಾಗಿದ್ದಾರೆ. ಯಾರು ಬರೆಯಬೇಕು, ಯಾರು ಬರೆಯಬಾರದು ಎಂದು ಆದೇಶಿಸುವುದು ಬೇಡ. ಒಂದು ಅಪೂರ್ವ ಕ್ಷೇತ್ರದ ನವ ಅನುಭವ ಸಾಹಿತ್ಯಕ್ಕೆ ದಕ್ಕುವಂತಾಗಲಿ’ ಎಂದರು.

‘ಮೂಲಭೂತವಾದಿಗಳಿಗೆ ಕುಮ್ಮಕ್ಕು ಸಿಗುವ ಅಪಾಯ’
ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಒಂದೂವರೆ ವರ್ಷ ಕಳೆದರೂ ಅಪರಾಧಿಗಳ ಬಗ್ಗೆ ಇಲ್ಲಿತನಕ ಸುಳಿವು ಸಿಕ್ಕಿಲ್ಲ. ತಪ್ಪಿತಸ್ಥರು ಸಿಗದಿದ್ದರೆ ಮತೀಯ ಮೂಲಭೂತವಾದಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ವಿಮರ್ಶಕ ಪ್ರೊ. ಗಿರಡ್ಡಿ ಗೋವಿಂದರಾಜ ಎಚ್ಚರಿಸಿದರು.‌ ಡಾ. ಕಲಬುರ್ಗಿ ಅವರ ಹೆಸರಿನಲ್ಲಿ ಅತ್ಯುತ್ತಮ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT