ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡ್ನಿಯಲ್ಲಿ ಕೊಲ್ಲಲು ರಾಜ್ಯದಿಂದ ಸುಪಾರಿ?

ಟೆಕಿ ಪ್ರಭಾ ಕೊಲೆ ಪ್ರಕರಣ
Last Updated 20 ಜನವರಿ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: 2015ರ ಮಾರ್ಚ್ 7ರಂದು ಸಿಡ್ನಿಯಲ್ಲಿ ನಡೆದ ನಗರದ ಸಾಫ್ಟ್‌ವೇರ್ ಉದ್ಯೋಗಿ ಪ್ರಭಾ ಶೆಟ್ಟಿ (41) ಕೊಲೆ ಪ್ರಕರಣದ ಹಂತಕನ ಸುಳಿವು ಹುಡುಕಿಕೊಂಡು ಆಸ್ಟ್ರೇಲಿಯಾ ಪೊಲೀಸರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ.

ಪ್ರಭಾ ಅವರ ಪರಿಚಿತರೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಬಗ್ಗೆ ಸ್ಥಳೀಯ ಪೊಲೀಸರಲ್ಲಿ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಜ.16ರಂದು ನಗರಕ್ಕೆ ಬಂದಿರುವ ಆಸ್ಟ್ರೇಲಿಯಾದ ನಾಲ್ವರು ಅಧಿಕಾರಿಗಳ ತಂಡವು ಸೈಬರ್  ಪೊಲೀಸರ ನೆರವಿನಿಂದ ತನಿಖೆ ನಡೆಸುತ್ತಿದೆ.

‘ಮೈಂಡ್‌ ಟ್ರಿ’ ಕಂಪೆನಿಯಲ್ಲಿ ಸೀನಿಯರ್‌ ಟೆಕ್ನಿಕಲ್‌ ಅನಲಿಸ್ಟ್‌ ಆಗಿದ್ದ ಪ್ರಭಾ, ಕಚೇರಿ ಕೆಲಸದ ನಿಮಿತ್ತ 2012ರಲ್ಲಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಸಿಡ್ನಿಯ ಸ್ಟ್ರಾತ್‌ಫೀಲ್ಡ್‌ ಪ್ರದೇಶದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರು, 2015ರ ಮಾರ್ಚ್ 7ರ ರಾತ್ರಿ ಮನೆಯಿಂದ 300 ಮೀಟರ್ ದೂರದಲ್ಲೇ ಬರ್ಬರವಾಗಿ ಕೊಲೆಯಾಗಿದ್ದರು.

ಸೈಬರ್‌ ಲ್ಯಾಬ್‌ನಲ್ಲಿ ವಿಚಾರಣೆ: ‘ಪ್ರಭಾ ಅವರಿಗೆ ನಿರಂತರವಾಗಿ ಬರುತ್ತಿದ್ದ ಕರೆಗಳ ವಿವರ ಆಧರಿಸಿ ಆಸ್ಟ್ರೇಲಿಯಾ ಪೊಲೀಸರು 15 ಮೊಬೈಲ್ ಸಂಖ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಂದಿದ್ದಾರೆ. ಅವರ ಸೂಚನೆಯಂತೆಯೇ ಆ ಸಂಖ್ಯೆಗಳಿಗೆ ಕರೆ ಮಾಡಿ ಒಬ್ಬೊಬ್ಬರನ್ನೇ ವಿಚಾರಣೆಗೆ ಕರೆಯಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸಿಐಡಿ ಕಟ್ಟಡದಲ್ಲಿರುವ ಸೈಬರ್ ಲ್ಯಾಬ್‌ನಲ್ಲಿ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಮೂರು ದಿನ ನಗರದಲ್ಲೇ ಇರಲಿರುವ ಅವರು, ಪ್ರಭಾ ಪತಿ ಅರುಣ್‌ ಕುಮಾರ್ ಹಾಗೂ ಬಂಟ್ವಾಳ ತಾಲ್ಲೂಕಿನ ಅಮ್ಟೂರಿನಲ್ಲಿರುವ ಮೃತರ ಸೋದರರನ್ನೂ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ. 

‘ಮೊಬೈಲ್ ಕರೆ ವಿವರ (ಸಿಡಿಆರ್), ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯ ಆಧರಿಸಿ ಆಸ್ಟ್ರೇಲಿಯಾದಲ್ಲೇ ನಾಲ್ಕು ಸಾವಿರ ಮಂದಿಯ ವಿಚಾರಣೆ ನಡೆಸಿದ್ದೇವೆ. ಒಂಟಿ ಮಹಿಳೆಯರನ್ನು ಕೊಲ್ಲುವ ಪ್ರವೃತ್ತಿವುಳ್ಳ ಹಳೇ ಆರೋಪಿಗಳನ್ನೂ ವಿಚಾರಣೆ ಮಾಡಿದ್ದೇವೆ. ಆದರೆ,  ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ’ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಪ್ರಭಾ ವಾಸವಿದ್ದ ಮನೆಯ ಮುಂಭಾಗದಲ್ಲೇ ಉದ್ಯಾನವಿದೆ. ಅಲ್ಲಿ ಮಾದಕ ವ್ಯಸನಿಗಳು ದಾರಿಹೋಕರನ್ನು ಅಡ್ಡಗಟ್ಟಿ ಹಣ–ಮೊಬೈಲ್ ದೋಚುತ್ತಿರುತ್ತಾರೆ. ಆ ನಿಟ್ಟಿನಲ್ಲೂ ತನಿಖೆ ನಡೆಸಲಾಯಿತು. ಆದರೆ, ಪ್ರಭಾ ಅವರನ್ನು ಕೊಲೆಗೈದವನು ಏನನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಮೊಬೈಲ್ ಮತ್ತು ಪರ್ಸ್‌ ಮೃತದೇಹದ ಪಕ್ಕದಲ್ಲೇ ಬಿದ್ದಿತ್ತು. ಚಿನ್ನದ ಸರ ಅವರ ಕೊರಳಲ್ಲೇ ಇತ್ತು.’

‘ಈ ಕಾರಣದಿಂದ ಆಸ್ತಿಗಾಗಿಯೋ, ವೈಯಕ್ತಿಕ ದ್ವೇಷಕ್ಕಾಗಿಯೋ ಇಲ್ಲಿಂದಲೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಲಾಗಿದೆ ಎಂಬ ಅನುಮಾನ ದಟ್ಟವಾಗಿದೆ. ಅಗತ್ಯ ಬಿದ್ದರೆ ಮುಂದಿನ ವಾರ ದಕ್ಷಿಣ ಕನ್ನಡಕ್ಕೆ ತೆರಳಿ ಕೆಲವನ್ನು ವಿಚಾರಣೆ ನಡೆಸಬೇಕಾಗಬಹುದು. ಇದಕ್ಕೆ ತಮ್ಮ ನೆರವು ಬೇಕಾಗುತ್ತದೆ’ ಎಂದು ಅಧಿಕಾರಿಗಳ ತಂಡ ಕೋರಿರುವುದಾಗಿ ಮೂಲಗಳು ಹೇಳಿವೆ.

ಬಂಟ್ವಾಳ ತಾಲ್ಲೂಕಿನ ಪ್ರಭಾ, ಪತಿ ಅರುಣ್ ಕುಮಾರ್ ಹಾಗೂ ಮಗಳು ಮೇಘನಾ ಜತೆ ಬಸವೇಶ್ವರನಗರ ಸಮೀಪದ ಪ್ರಶಾಂತ್‌ನಗರದಲ್ಲಿ ನೆಲೆಸಿದ್ದರು. ಜನಾಂಗೀಯ ದ್ವೇಷದಿಂದ ಅವರ ಹತ್ಯೆ ನಡೆದಿದೆ ಎಂಬ ಆರೋಪ ಆರಂಭದಲ್ಲಿ ಕೇಳಿ ಬಂದಿತ್ತು. ಈ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

ಮೂರು ಕ್ಯಾಮೆರಾದಲ್ಲಿ ಸೆರೆ
‘ಪ್ರಭಾ ಅವರು ಆ ದಿನ ರಾತ್ರಿ 9 ಗಂಟೆ ಸುಮಾರಿಗೆ ಕಚೇರಿಯಿಂದ ಪರ್ರಮಟ್ಟಾ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಜರ್ಕಿನ್ ಹಾಗೂ ಕ್ಯಾಪ್ ಧರಿಸಿರುವ ವ್ಯಕ್ತಿಯೊಬ್ಬನ ದೃಶ್ಯ ಸೆರೆಯಾಗಿತ್ತು. ಅಲ್ಲಿಂದ ಪ್ರಭಾ ಅರ್ಗೈಲ್ ಸ್ಟ್ರೀಟ್‌ ಮೂಲಕ ವೆಸ್ಟ್‌­ಮೀಡ್‌ಗೆ ತೆರಳಿದ್ದರು. ಅಲ್ಲಿನ ಎರಡು ಕ್ಯಾಮೆರಾಗಳಲ್ಲೂ ಅದೇ ವ್ಯಕ್ತಿಯ ಚಹರೆ ಸೆರೆಯಾಗಿತ್ತು. ಹೀಗಾಗಿ, ಆತನೇ ಹಿಂಬಾಲಿಸಿ ಕೃತ್ಯ ಎಸಗಿರುವ ಅನುಮಾನವಿದೆ. ಆ ಶಂಕಿತ ಇನ್ನೂ ಸಿಕ್ಕಿಲ್ಲ’ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿರುವುದಾಗಿ ಅಧಿಕಾರಿಗಳು  ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT