ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ’

Last Updated 20 ಜನವರಿ 2017, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ನೊಂದವರು ಹಾಗೂ ತುಳಿತಕ್ಕೆ ಒಳಗಾದವರ ಪರವಾಗಿ ಧ್ವನಿ ಎತ್ತುತ್ತಿರುವ ಎಲ್ಲ ಸಂಘಟನೆಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್‌) ವಿರುದ್ಧ ಹೋರಾಟ ಮಾಡಬೇಕು’ ಎಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ನ (ಎಐಎಸ್‌ಎಫ್‌) ರಾಷ್ಟ್ರೀಯ ಮುಖಂಡ ಕನ್ಹಯ್ಯ ಕುಮಾರ್‌ ಹೇಳಿದರು.

ನಗರದ ಶಿಕ್ಷಕರ ಸದನದಲ್ಲಿ ಶುಕ್ರವಾರ ನಡೆದ ಫೆಡರೇಷನ್‌ನ 15ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ‘ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ವಿರುದ್ಧ ಟೀಕೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ನಮ್ಮ ಸಂಘಟನೆಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಮೊದಲು ಅದನ್ನು ಸರಿಪಡಿಸಬೇಕು. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಉತ್ತರ ಪ್ರದೇಶದಲ್ಲಿ ಈ ಹಿಂದೆ ಎಡ ಪಕ್ಷಗಳು 81 ಸ್ಥಾನಗಳನ್ನು ಗಳಿಸಿದ್ದವು. ಈಗ ಖಾತೆಯನ್ನೇ ತೆರೆಯುತ್ತಿಲ್ಲ. ಆಂಧ್ರ ಪ್ರದೇಶದಲ್ಲಿ ಸರ್ಕಾರ ರಚಿಸಿದ್ದವು. ಈ ಹಿಂದೆ ಒಂದೇ ದಲಿತ ಸಂಘಟನೆ ಇತ್ತು. ಈಗ ಹತ್ತಾರು ಸಂಘಟನೆಗಳು ಇವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನೊಂದವರಿಗೆ ನ್ಯಾಯ ಸಿಗುತ್ತಿಲ್ಲ. ಸಂಘಟನೆಗಳು ತಪ್ಪು ಸರಿಪಡಿಸಿಕೊಂಡು ಮುನ್ನಡೆಯಬೇಕು’ ಎಂದು ಅವರು ಹೇಳಿದರು.

‘ದೇಶದ ಕೃಷಿ ರಂಗದ ಸ್ಥಿತಿ ದಯನೀಯವಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕೃಷಿಕರು ಭೂಮಿ ಕಳೆದುಕೊಂಡು ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುತ್ತಿಲ್ಲ. ಅಂಬಾನಿ, ಬಿರ್ಲಾ, ಮಲ್ಯ ಅವರಂತಹ ಶ್ರೀಮಂತರಿಗೆ ಮಾತ್ರ ಸಾಲ ಕೊಡುತ್ತಿವೆ’ ಎಂದು ಕಿಡಿಕಾರಿದರು.

‘ನೋಟು ರದ್ದತಿ ಬಳಿಕ ದೇಶದಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ವಿಷಾದ ಇಲ್ಲ. ಅವರು ಪದೇ ಪದೇ ಮನದ ಮಾತು ಆಡುತ್ತಾರೆ. ಜನರ ಮನದ ಮಾತು ಕೇಳಲು ಸಿದ್ಧರಿಲ್ಲ. ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌ ಪತ್ರಕರ್ತರನ್ನು ಕಂಡ ಕೂಡಲೇ ಪಲಾಯನ ಮಾಡುತ್ತಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದು ಅವರು ಕಿಡಿಕಾರಿದರು.

ಸಮ್ಮೇಳನ ಉದ್ಘಾಟಿಸಿದ ಡಾ. ಜಿ. ರಾಮಕೃಷ್ಣ, ‘ಶಾಲಾ ಕಾಲೇಜುಗಳಿಗೆ ನೀಡುತ್ತಿರುವ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಕಳೆದ ವರ್ಷ ₹1 ಸಾವಿರ ಕೋಟಿ ಕಡಿಮೆ ಅನುದಾನ ನೀಡಲಾಯಿತು. ಶಿಕ್ಷಣ ಸಂಸ್ಥೆಗಳನ್ನು ನಗದುರಹಿತ ಮಾಡಲು ಸರ್ಕಾರ ಹೊರಟಿದೆ’ ಎಂದು ಟೀಕಿಸಿದರು.

‘ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಹೊರಟಿರುವುದು ಶ್ಲಾಘನೀಯ. ಆದರೆ, ಪಠ್ಯದಲ್ಲಿರುವ ತಪ್ಪುಗಳು ಸರಿಯಾಗುವುದು ಕೆಲವರಿಗೆ ಬೇಕಿಲ್ಲ.  ಬರಗೂರು ಸಮಿತಿಯ ವರದಿಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು ಎಂದು ಬಿಜೆಪಿ, ಎಬಿವಿಪಿ ಒತ್ತಾಯಿಸಿವೆ. ವರದಿಯನ್ನು ಎಂದಾದರೂ ಸಾರ್ವಜನಿಕ ಚರ್ಚೆಗೆ ಇಟ್ಟಿದ್ದು ಉಂಟೇ. ಅವರ ತಲೆಗಳಲ್ಲಿ ಸಗಣಿ ತುಂಬಿದೆಯಾ’ ಎಂದು ಅವರು ಪ್ರಶ್ನಿಸಿದರು.

**
ಅಡಗೂಲಜ್ಜಿ ಕಾಲದ ಶಿಕ್ಷಣ ವ್ಯವಸ್ಥೆಯನ್ನು ಹೇರುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ.
-ಜಿ. ರಾಮಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT