ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರೆಂದು ಪರಿಗಣಿಸಲು ಒತ್ತಾಯ

ಸಂಸದರ ಮನೆ ಮುಂದೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
Last Updated 21 ಜನವರಿ 2017, 6:22 IST
ಅಕ್ಷರ ಗಾತ್ರ

ಕೊಪ್ಪಳ:  ಅಂಗನವಾಡಿ ಉದ್ಯೋಗಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್‌(ಎಐಟಿಯುಸಿ)ನ ಕಾರ್ಯಕರ್ತರು ಶುಕ್ರವಾರ ಸಂಸದ ಸಂಗಣ್ಣ ಕರಡಿ ನಿವಾಸದ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಸಂಘಟನೆಯ ಮುಖಂಡ ಬಸವರಾಜ ಶೀಲವಂತರ ಮಾತನಾಡಿ, ಯುಪಿಎ ಸರ್ಕಾರದಲ್ಲಿ ರಾಜ್ಯಸಭಾ ಅರ್ಜಿ ಸಲ್ಲಿಕೆ ಸಮಿತಿ, ಕರ್ನಾಟಕ ಆಡಳಿತ ನ್ಯಾಯಮಂಡಳಿಯು 1996ರಲ್ಲಿ ತಿಳಿಸಿರುವಂತೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಕಾರ್ಮಿಕರೆಂದು ಪರಿಗಣಿಸಬೇಕು ಹಾಗೂ ಅವರ ಮೂಲ ಸೌಲಭ್ಯಗಳನ್ನು ಹೆಚ್ಚು ಮಾಡಬೇಕು ಎಂದು ಶಿಫಾರಸು ಮಾಡಿವೆ.

ಆದರೆ, ಸರ್ಕಾರಗಳು ಶಿಫಾರಸ್ಸನ್ನು ಮೂಲೆಗೆ ತಳ್ಳಿ, ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿವೆ. ಈ ಉದ್ಯೋಗಿಗಳನ್ನು ಕಸಕ್ಕಿಂತ ಕಡೆಯಾಗಿ ಕಂಡು, ತೀರಾ ಕಡಿಮೆ ಕೂಲಿಗೆ ದಿನವಿಡೀ ದುಡಿಸಿಕೊಳ್ಳುತ್ತಿರುವುದು ಖಂಡನಾರ್ಹ ಎಂದರು.

ಸರ್ಕಾರ 40 ವರ್ಷ ಪೂರೈಸಿರುವ ಐಸಿಡಿಎಸ್‌ ಯೋಜನೆಯನ್ನು ಕಾಯಂ ಯೋಜನೆ ಎಂದು ಪರಿಗಣಿಸಬೇಕು. ಯೋಜನೆಗೆ ಕನಿಷ್ಠ ₨35 ಸಾವಿರ ಕೋಟಿ ಅನುದಾನ ನೀಡಿ, ಕೇಂದ್ರಗಳಿಗೆ ಮೂಲ ಸೌಲಭ್ಯ ಒದಗಿಸಬೇಕು. ಗುಣಮಟ್ಟದ ಪೌಷ್ಟಿಕ ಆಹಾರ ಸರಬರಾಜು ಮಾಡಲು ಹಾಗೂ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಉದ್ಯೋಗಿಗಳು ಉತ್ತಮ ಜೀವನ ನಡೆಸಲು ನೆರವಾಗಬೇಕು.

ಯೋಜನೆಯ ಕಾರ್ಯಕರ್ತೆಯರನ್ನು 3ನೇ ದರ್ಜೆಯ ಹಾಗೂ ಸಹಾಯಕಿಯರನ್ನು 4ನೇ ದರ್ಜೆಯ ನೌಕರರೆಂದು ಪರಿಗಣಿಸಬೇಕು. ಕನಿಷ್ಠ ಮಾಸಿಕ ₹15,000 ವೇತನ ನೀಡಬೇಕು. ಯೋಜನೆಯ ಖಾಸಗೀಕರಣ ಬೇಡ. ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರಬೇಕು. ಕಾರ್ಯಕರ್ತೆಯರಿಗೆ ಪಿಂಚಣಿ ನೀಡಬೇಕು.

ಸೇವಾವಧಿಗನುಗುಣವಾಗಿ ಸಂಬಳ ನೀಡಬೇಕು. ಟೆಂಡರ್‌ ಮೂಲಕ ಅಗತ್ಯ ವಸ್ತುಗಳನ್ನು ಪಡೆಯಬೇಕು. ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಠ್ಠಪ್ಪ ಗೋರಂಟ್ಲಿ, ಮಮ್ತಾಜ್‌ಬೇಗಂ, ಚನ್ನಮ್ಮ, ಮರಿಬಸಮ್ಮ, ಹನುಮಕ್ಕ, ಶಿವಮ್ಮ, ರಜಿಯಾಬೇಗಂ, ಜಾನಕಿ, ಯಮನಕ್ಕ, ಗಾಳೆಪ್ಪ, ಮುಕಬೂಲ, ಶರಣಪ್ಪ, ಅಬ್ದುಲ್‌ ವಹಾಬ್‌ ಇದ್ದರು.

*
ಕೆಎಟಿ 1996ರಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಕಾರ್ಮಿಕರು ಎಂದು ಪರಿಗಣಿಸಬೇಕುಎಂದು ಶಿಫಾರಸು ಮಾಡಿದೆ.
-ಬಸವರಾಜ ಶೀಲವಂತರ,
ಮುಖಂಡ, ಎಐಟಿಯುಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT