ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಹುಡುಗನ ನೆನಪು

ಭಾವಸೇತು
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ
–ಡಾ. ಕೆ.ವಿ. ಸಂತೋಷ್‌, ಹೊಳಲ್ಕೆರೆ
 
*
ಬಹಳ ವರ್ಷಗಳ ನಂತರ ಸಗಟು (ಹೋಲ್‌ಸೇಲ್‌) ಮೊಟ್ಟೆ ಅಂಗಡಿಯಲ್ಲಿ 20 ಮೊಟ್ಟೆ ಖರೀದಿಸಲು ಹೋದೆ. ಯಾವಾಗಲೂ ಮನೆಯ ಬಳಿಯ ಅಂಗಡಿಗಳಲ್ಲಿ ನಾಲ್ಕೈದು ಮೊಟ್ಟೆಗಳನ್ನು ಮಾತ್ರ ಖರೀದಿಸುತ್ತಿದ್ದ ನಾನು ಅಂದೇಕೋ ಅಚಾನಕ್ಕಾಗಿ ಸಗಟು ಅಂಗಡಿಗೆ ತೆರಳಿದ್ದ. ಮೊಟ್ಟೆ ಕೊಡುವ ಕೆಲಸಗಾರ ಜೋಡಿಸುವ ಕೆಲಸವಿದ್ದ ಕಾರಣ ಎರಡು ನಿಮಿಷ ಕಾಯಲು ವಿನಂತಿಸಿದ. ಅಷ್ಟರಲ್ಲಾಗಲೇ ನನ್ನ ಮನಸ್ಸು 23 ವರ್ಷದ ಹಿಂದೆ ಓಡಿತು.
 
ಅದು 1993–94ರ ಸಮಯ. ನಾನು, ನನ್ನ ತಮ್ಮ ಶಿರಾದಲ್ಲಿ ‘ಹಿಂದಿ ಪರಿಷತ್‌’ನ ಖಾಸಗಿ ತರಗತಿಗೆ ಸೇರಿದ್ದೆವು. ಆರು ಮತ್ತು ಏಳನೇ ತರಗತಿಯ ನಮ್ಮ ಶಾಲಾ ಮಕ್ಕಳೆಲ್ಲ ಖಾಸಗಿ ಟ್ಯೂಷನ್‌ಗೆ ಸೇರಿದ್ದೆವು. 20–30 ವಿದ್ಯಾರ್ಥಿಗಳಿದ್ದ ಈ ಟ್ಯೂಷನ್ನಿಗೆ ಬರುವ ಎಲ್ಲರೂ ಪರಿಚಿತರಾದರೂ ಹೆಚ್ಚು ಮಾತುಕತೆ–ಆತ್ಮೀಯತೆ ಇರುತ್ತಿರಲಿಲ್ಲ. ಕಾರಣ ಒಂದು ವಯಸ್ಸಿನ ಅಂತರ, ಸಮಯದ ಅಭಾವ, ಶಾಲಾ–ಕಾಲೇಜುಗಳು, ಊರು, ಕೇರಿ... ಎಲ್ಲವೂ ಬೇರೆ ಬೇರೆ. 
 
ಈ ವರ್ಷದ ತರಗತಿಗೆ ನಮ್ಮ ಟ್ಯೂಷನ್ನಿಗೆ ಬಂದ ವಿದ್ಯಾರ್ಥಿಯೊಬ್ಬ ಮರು ವರ್ಷ ಮತ್ತೆಲ್ಲೋ ತೆರಳುತ್ತಿದ್ದ. ಹಾಗಾಗಿ ಮುಖ ಪರಿಚಯವೇ ಹೊರತು ಬೇರೆ ಸಂಪರ್ಕ ಇರುತ್ತಿರಲಿಲ್ಲ. ಹೀಗಿರುವಾಗ ಇಲ್ಲಿದ್ದ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ತರಗತಿಗೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದ. ನಾವು ಇದೆಲ್ಲವೂ ಸಹಜವೆಂಬಂತೆ ಸುಮ್ಮನಾದೆವು.
 
ಒಂದು ದಿನ ಸಗಟು ಮೊಟ್ಟೆ ಅಂಗಡಿಗೆ ಮೊಟ್ಟೆ ಖರೀದಿಸಲು ಹೋದರೆ, ಅಲ್ಲಿ ಮೊಟ್ಟೆ ಕೊಡುವ ಹುಡುಗ ನಮ್ಮ ಸಹಪಾಠಿಯಾಗಿದ್ದ. ಒಂದು ಅವ್ಯಕ್ತ ಬಾಂಧವ್ಯ ನಮ್ಮಿಬ್ಬರಲ್ಲೂ ಇದ್ದಿತು. 10 ಮೊಟ್ಟೆಗೆ ಹಣ ಕೊಟ್ಟು ಮನೆಗೆ ಬಂದು ನೋಡಿದಾಗ ಹದಿನಾಲ್ಕು ಮೊಟ್ಟೆ ಇತ್ತು. ಆ ನಂತರ ಮತ್ತೆಮತ್ತೆ ನಾನು ಅಲ್ಲಿಗೆ ತೆರಳಿ ಮೊಟ್ಟೆ ತರುತ್ತಿದ್ದೆ. ಆ ನನ್ನ ಸಹಪಾಠಿ ಮಾಲೀಕನಿಗೆ ಗೊತ್ತಿಲ್ಲದೆ ಹೆಚ್ಚು ಕೊಡುತ್ತಿದ್ದ. ಒಂದೆರಡು ತಿಂಗಳು ಹೀಗೆ ನಡೆಯಿತು. ಆದರೆ ನಮ್ಮಿಬ್ಬರ ನಡುವೆ ಪರಸ್ಪರ ಮಾತು–ನಗು ಇರುತ್ತಿರಲಿಲ್ಲ. ಒಮ್ಮೆ ನಮ್ಮ ತಾಯಿಗೆ ವಿಷಯ ಗೊತ್ತಾಯಿತು. ಇದರಿಂದ ನಿನಗಿಂತ, ನಿನ್ನ ಸ್ನೇಹಿತನಿಗೆ ತುಂಬ ತೊಂದರೆ ಎಂದು ಬೈದರು.
 
ಇನ್ನು ಮುಂದೆ ಈ ರೀತಿ ಆಗಬಾರದೆಂದು ಆತನೊಂದಿಗೆ ಮಾತನಾಡೋಣ ಎಂದು ಹೋದರೆ ಆ ಹುಡುಗನಿರಲಿಲ್ಲ. ಮಾಲೀಕನಿಗೆ ಆ ಹುಡುಗನ ಬಗ್ಗೆ ವಿಚಾರಿಸಿದಾಗ ಆತನ ತಂದೆ ನಿಧನರಾದರೆಂದೂ, ಓದು ನಿಲ್ಲಿಸಿದನೆಂದು, ಈಗ ಕೆಲಸ ಬಿಟ್ಟು ಆತನ ಸಂಬಂಧಿಕರ ಊರಿಗೆ ತೆರಳಿದನೆಂದು ತಿಳಿಸಿದರು. ಮನಸ್ಸು ಒದ್ದಾಡಿತು. ಕೊನೆಗೂ ಆತನನ್ನು ಒಮ್ಮೆಯೂ ಮಾತನಾಡಿಸಲಾಗಲಿಲ್ಲ. ಈಗ 23 ವರ್ಷಗಳ ನಂತರ ಮರೆತ ನನ್ನ ಸ್ನೇಹಿತ ನೆನಪಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT