ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್‌: ಮೂವರು ಪರಾರಿ, ಐವರು ಪೊಲೀಸರ ವರ್ಗ

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಲೈಂಗಿಕ ಸುಖದ ಆಸೆ ತೋರಿಸಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಧನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ‘ಹನಿಟ್ರ್ಯಾಪ್‌’ ಜಾಲವೊಂದನ್ನು ಭೇದಿಸಿರುವ ಜಿಲ್ಲಾ ಪೊಲೀಸರು ನಾಲ್ವರನ್ನು ಶನಿವಾರ ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಮೂವರು ಆರೋಪಿಗಳನ್ನು ಪೊಲೀಸ್‌ ಠಾಣೆಯಿಂದ ಪರಾರಿಯಾಗಲು ಸಹಕರಿಸಿದ್ದ ಎನ್‌.ಆರ್‌.ಪುರ ಪೊಲೀಸ್‌ ಠಾಣೆಯ ಐವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಕ್ಷಣವೇ ಬೇರೆ ಠಾಣೆಗೆ ವರ್ಗಾಯಿಸಿ, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ವಾಸಿ ಸದಾನಂದ ಅಲಿಯಾಸ್‌ ಅರುಣ (41), ಎನ್‌.ಆರ್‌.ಪುರ ತಾಲ್ಲೂಕು ಮುತ್ತಿನಕೊಪ್ಪದ ತಾಯಿ, ಮಗಳಾದ ಖೈರುನ್ನಿಸಾ (35), ರುಕ್ಸಾನ ಪರ್ವೀನ್ (19), ಎನ್‌.ಆರ್‌.ಪುರ ವಾಸಿ ಮಸ್ತಾನ್ (39) ಬಂಧಿತರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಾದ ನರೇಂದ್ರ, ಪ್ರಕಾಶ ಮತ್ತು ಲಿಜೇಶ ಎಂಬುವವರನ್ನು ಬೇರೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಕೊಪ್ಪದ ಇಬ್ಬರು ವ್ಯಕ್ತಿಗಳಿಗೆ 10 ತಿಂಗಳ ಹಿಂದೆ ಆರೋಪಿ ಅರುಣ ದೂರವಾಣಿ ಕರೆ ಮಾಡಿ ಪರಿಚಯಿಸಿಕೊಂಡಿದ್ದ. ತನ್ನ ಬಳಿ ಒಬ್ಬಳು ಹುಡುಗಿ ಇದ್ದಾಳೆ, ತಲಾ ₹6 ಸಾವಿರ ನೀಡಿದರೆ ಆಕೆಯನ್ನು ಎನ್.ಆರ್.ಪುರಕ್ಕೆ ಕರೆಸಿ ಲೈಂಗಿಕ ಸುಖ ಕೊಡಿಸುವುದಾಗಿ ಆಮಿಷವೊಡ್ಡಿದ್ದ. 2016ರ ಜುಲೈ 19ರಂದು ಹುಡುಗಿಯೊಬ್ಬಳನ್ನು ಎನ್.ಆರ್.ಪುರಕ್ಕೆ ಕರೆಸಿ ಪರಿಚಯಿಸಿದ್ದ. ಇಬ್ಬರು ವ್ಯಕ್ತಿಗಳನ್ನು ಶಿವಮೊಗ್ಗಕ್ಕೆ ಕರೆದೊಯ್ದು, ಹುಡುಗಿಯೊಬ್ಬಳ ಜತೆಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮಾಡಿದ್ದ. 4 ತಿಂಗಳ ನಂತರ ಆರೋಪಿ ಕೊಪ್ಪದ ವ್ಯಕ್ತಿಗಳಿಗೆ ಕರೆ ಮಾಡಿ ‘ನೀವು ಶಿವಮೊಗ್ಗದಲ್ಲಿ ಹುಡುಗಿ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೊ ಸಿ.ಡಿ ನನ್ನ ಬಳಿ ಇದೆ. ₹5 ಲಕ್ಷ ಕೊಡದಿದ್ದರೆ ಟಿವಿ, ಪತ್ರಿಕೆಗಳಿಗೆ ಬಹಿರಂಗಪಡಿಸಿ, ದೂರು ಕೊಟ್ಟು ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ.

2016ರ ಅಕ್ಟೋಬರ್‌ 30ರಂದು ಆರೋಪಿಗಳಾದ ನರೇಂದ್ರ, ಪ್ರಕಾಶ, ಲಿಜೇಶ, ಮಸಿವುಲ್ಲಾ, ಅರುಣ, ಖೈರು ನ್ನಿಸಾ, ರುಕ್ಸಾನ ಪರ್ವೀನ್ ಎನ್.ಆರ್. ಪುರಕ್ಕೆ ಬಂದು, ಲೈಂಗಿಕ ಕ್ರಿಯೆ ನಡೆಸಿದ್ದ ಇಬ್ಬರು ವ್ಯಕ್ತಿಗಳಿಂದ ತಲಾ ₹1ಲಕ್ಷದಂತೆ ₹2ಲಕ್ಷ ಹಣ ಸುಲಿಗೆ ಮಾಡಿದ್ದರು. ಆರೋಪಿಗಳು ಇದೇ ರೀತಿ ಹಲವು ಮಂದಿಗೆ ಮೋಸ ಮಾಡಿರುವುದಾಗಿ ಜ.17ರಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. 7 ಆರೋಪಿಗಳ ವಿರುದ್ಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಖೈರುನ್ನಿಸಾ, ರುಕ್ಸಾನ ಪರ್ವೀನ್ ಮತ್ತು ಮಸಿವುಲ್ಲಾ ಎಂಬುವವರನ್ನು ಜ.17ರಂದೇ ಜಿಲ್ಲಾ ಅಪರಾಧ ಪತ್ತೆ ವಿಭಾಗದ ಪೊಲೀಸರು ವಶಕ್ಕೆ ತೆಗೆದುಕೊಂಡು, ಎನ್‌.ಆರ್‌.ಪುರ ಠಾಣೆಗೆ ಒಪ್ಪಿಸಿದ್ದರು. ಠಾಣೆಯ ಕೆಲ ಸಿಬ್ಬಂದಿ ಮೂವರಿಗೂ ತಪ್ಪಿಸಿಕೊಳ್ಳಲು ಅವಕಾಶ ನೀಡಿ, ಎಫ್‌ಐಆರ್‌ನಲ್ಲಿ ಆರೋಪಿಗಳು ನಾಪತ್ತೆ ಎಂದು ದಾಖಲಿಸಿದ್ದರು.

ತಪ್ಪಿತಸ್ಥ ಪೊಲೀಸರ ಮೇಲೂ ಕ್ರಮ– ಎಸ್‌ಪಿ: ಕೆಲ ತಿಂಗಳ ಹಿಂದೆ 3 ಸಿಡಿಗಳಿರುವ ಲಕೋಟೆ ಅನಾಮಧೇಯ ವ್ಯಕ್ತಿಯಿಂದ ನನ್ನ ಕಚೇರಿಗೆ ಬಂದಿತ್ತು. ಅದರಲ್ಲಿರುವ ಅನೈತಿಕ ಚಟುವಟಿಕೆ ನಡೆಸಿರುವ ಪುರುಷ ಮತ್ತು ಮಹಿಳೆಯನ್ನು ಗುರುತಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಡಿಸಿಐಬಿ ಇನ್‌ಸ್ಪೆಕ್ಟರ್‌ಗೆ ಸೂಚಿಸಿದ್ದೆ. ಸಿ.ಡಿಯಲ್ಲಿದ್ದ ಪುರುಷ ಎನ್‌.ಆರ್‌.ಪುರದ ವ್ಯಕ್ತಿ ಎನ್ನುವುದನ್ನು ಗುರುತಿಸಲಾಯಿತು. ಆದರೆ, ಆತ ದೂರು ನೀಡಲು ಒಪ್ಪಿರಲಿಲ್ಲ. ಹೆಸರು ರಹಸ್ಯವಾಗಿಡುವ ಭರವಸೆ ನೀಡಿದ ಮೇಲೆ ಆ ವ್ಯಕ್ತಿ ದೂರು ನೀಡಿದ್ದಾರೆ. ಆರೋಪಿಗಳು ಶಿವಮೊಗ್ಗದಲ್ಲೂ ಹನಿಟ್ರ್ಯಾಪ್‌ ನಡೆಸಿ ಹಣ ಸುಲಿಗೆ ಮಾಡಿರುವುದು ಕಂಡುಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾ ಮಲೈ ತಿಳಿಸಿದ್ದಾರೆ.

‘ಈ ಪ್ರಕರಣ ಸಂಬಂಧ ಡಿಸಿಐಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಠಾಣೆಗೆ ಒಪ್ಪಿಸಿದ್ದ ಮೂವರು ಆರೋಪಿಗಳನ್ನು ಸ್ಥಳೀಯ ಠಾಣೆ ಪೊಲೀಸರು ಬಿಟ್ಟುಕಳುಹಿಸಿರುವುದು ಖಚಿತಪಟ್ಟಿದೆ. ಇದು ಸ್ಥಳೀಯ ಪೊಲೀಸರ ನಿರ್ಲಕ್ಷ್ಯ. ಸಿಪಿಐ ಮತ್ತು ಪಿಎಸ್‌ಐ ಕಚೇರಿಯ 7 ಮಂದಿ ಸಿಬ್ಬಂದಿ ಆರೋಪಿಗಳ ಪರಾರಿಗೆ ಸಹಕರಿಸಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ವಿಚಾರಣೆ ನಡೆಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ವಿಚಾರಣಾ ವರದಿ ಬಂದ ತಕ್ಷಣ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ವಿಚಾರಣೆ ಪೂರ್ಣವಾಗುವವರೆಗೂ ಸಿಬ್ಬಂದಿ ಹೆಸರು ಬಹಿರಂಗಪಡಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT