ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗಳಿದ್ದರೂ ಪ್ರೋತ್ಸಾಹ ಏಕಿಲ್ಲ?

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಶ್ರೀಲಂಕಾದ ಪುಟ್ಟಾಲಮ್‌ ಜಿಲ್ಲೆಯಲ್ಲಿರುವ ಚಿಲಾವ್‌ ನಗರದಲ್ಲಿ 2013ರಲ್ಲಿ ಮಹಿಳಾ ಥ್ರೋಬಾಲ್‌ ತಂಡಗಳ ನಡುವೆ ಚತುಷ್ಕೋನ ಸರಣಿ ನಡೆದಿತ್ತು. ಆಗ ಭಾರತ ತಂಡ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಅದರ ನಂತರದ ವರ್ಷ ಮಲೇಷ್ಯಾದಲ್ಲಿ ಜರುಗಿದ ಏಷ್ಯನ್‌ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳೇ ಚಾಂಪಿಯನ್‌ ಆದವು. 2015ರಲ್ಲಿ ಕ್ವಾಲಾಲಂಪುರದಲ್ಲಿ ಜೂನಿಯರ್‌ ತಂಡಗಳಿಗಾಗಿ ಆಯೋಜನೆಯಾಗಿದ್ದ ಚೊಚ್ಚಲ ಏಷ್ಯನ್ ಚಾಂಪಿಯನ್‌ಷಿಪ್‌ ನಲ್ಲಿ ಭಾರತದ ಬಾಲಕರ ಮತ್ತು ಬಾಲಕಿಯರ ತಂಡಗಳು ಟ್ರೋಫಿ ಎತ್ತಿ ಹಿಡಿದಿದ್ದವು. ಇದೇ ತಿಂಗಳ ಎರಡನೇ ವಾರದಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಥ್ರೋಬಾಲ್‌ ಟೆಸ್ಟ್‌ ಸರಣಿಯಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ.

ಇವೆಲ್ಲಾ ಉದಾಹರಣೆಗಳಷ್ಟೇ. ಕಳೆದ ಹತ್ತು ವರ್ಷಗಳಿಂದ ಭಾರತ ಜೂನಿಯರ್‌ ಮತ್ತು ಸೀನಿಯರ್‌ ತಂಡಗಳು ವಿದೇಶಿ ನೆಲದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿವೆ. ಅದರಲ್ಲಿಯೂ ರಾಷ್ಟ್ರೀಯ ತಂಡದಲ್ಲಿ ಕರ್ನಾಟಕದ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಅಕೀಬ್ ಮಹಮ್ಮದ್‌, ಎರಡು ಬಾರಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದ ಮೂಡುಬಿದಿರೆಯ ಆಳ್ವಾಸ್‌ನ ಪಿ. ಪೂರ್ಣಿಮಾ, ನಂಜನಗೂಡಿನ ಯೋಗಿತಾ, ಮೈಸೂರಿನ ಯಶೋಧಾ, ಉತ್ತರ ಕನ್ನಡದ ಸಂಪೂರ್ಣ ಹೆಗ್ಡೆ, ಕೊಡಗಿನ ವರ್ಷಾ ಶುಭಾಂಕರ್‌, ಸುಮಿತ್ರಾ, ಹಾಸನದ ರೀನಾ ಪ್ರಶಾಂತ್‌, ಚಿಕ್ಕಮಗಳೂರಿನ ಜಿ.ಪಿ. ಕೃಪಾ ಮತ್ತು ಜಿ. ಶ್ರೀಕಾಂತ್‌ ಹೀಗೆ  ಅನೇಕ ಪ್ರತಿಭಾನ್ವಿತ ಸ್ಪರ್ಧಿಗಳು ಭಾರತ ತಂಡದಲ್ಲಿ ಆಡಿದ್ದಾರೆ.

ಸಂಪೂರ್ಣ ಅವರು ಐದು ಟೂರ್ನಿಗಳಿಗೆ ರಾಷ್ಟ್ರೀಯ ತಂಡದ  ನಾಯಕಿಯಾಗಿದ್ದರು. ಇವರ ನಾಯಕತ್ವದಲ್ಲಿ ಭಾರತ 2014ರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು. ವಿವಿಧ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಚಾಂಪಿಯನ್‌ ಆದಾಗ ಎಂಟು ಸಲ ತಂಡದಲ್ಲಿದ್ದರು. ಯಶೋಧ 2009ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡದ ಮುಂದಾಳತ್ವ ವಹಿಸಿದ್ದರು. ವರ್ಷಾ ಮೂರು ಬಾರಿ ಪ್ರಶಸ್ತಿ ಗೆದ್ದ ತಂಡದಲ್ಲಿದ್ದರು. ಅಕಿಬ್‌ 18 ಬಾರಿ ಅಂತರರಾಷ್ಟ್ರೀಯ ಮತ್ತು 23 ಸಲ ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದಾರೆ.

ಜೂನಿಯರ್ ವಿಭಾಗದಲ್ಲಿ ಉಡುಪಿಯ ಶ್ರೀರಾಮ್‌ ಇದೇ ವಿಭಾಗದಲ್ಲಿ ನಾಯಕರಾಗಿದ್ದ ಕಾರ್ತಿಕ್‌, ರಾಹುಲ್‌, ವಿವೇಕ್‌, ವಂಶಿ,   ಗಗನ್‌ ಕುಮಾರ್ ಬಾಲಕಿಯರ ವಿಭಾಗದಲ್ಲಿ ನಾಯಕಿ ಯಾಗಿದ್ದ ಪ್ರಿಯಾಂಕ, ಶ್ರಿಯಾ, ಚಂದನಾ ರವಿ, ರೇಖಾ ಕುಮಾರಿ, ಸೌಂದರ್ಯ, ಸ್ವಾತಿ ಹೀಗೆ ಅನೇಕ ಪ್ರತಿಭಾನ್ವಿತ ಸ್ಪರ್ಧಿಗಳ ದಂಡು ನಮ್ಮಲ್ಲಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ಕೂಡ ನೀಡುತ್ತಿದ್ದಾರೆ. ಆದರೂ ಸರ್ಕಾರದ ಬೆಂಬಲವಿಲ್ಲದ ಕಾರಣ ಭಾರತದ ಥ್ರೋಬಾಲ್‌ ಸ್ಪರ್ಧಿಗಳಿಗೆ ಏಷ್ಯಾ ವಲಯ  ದಾಟಿ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ.

ಏಕೆಂದರೆ ಯಾವುದೇ ಟೂರ್ನಿಯಾದರೂ ಕ್ರೀಡಾ ಪಟುಗಳೇ ಸ್ವಂತ ಹಣದಲ್ಲಿ ತಮ್ಮ ಖರ್ಚು ನೋಡಿಕೊಳ್ಳಬೇಕು. ಇಲ್ಲವಾದರೆ  ಪ್ರಾಯೋಜಕರನ್ನು ಹುಡುಕಿಕೊಳ್ಳಬೇಕು. ಆದ್ದರಿಂದ ಥ್ರೋಬಾಲ್‌ ಖ್ಯಾತಿ ಹೊಂದಿರುವ ಆಸ್ಟ್ರೇಲಿಯಾ, ಅಮೆರಿಕ, ಫ್ರಾನ್ಸ್‌ನಂತಹ ದೂರದ ದೇಶಗಳಿಗೆ ಹೋಗಿ ಅಲ್ಲಿನ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಭಾರತದ ಸ್ಪರ್ಧಿಗಳಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಲೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ ಹೀಗೆ ಏಷ್ಯಾದ ರಾಷ್ಟ್ರಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.

‘ಏಷ್ಯಾ ವಲಯದಿಂದ ಹೊರಹೋಗಿ ಆಡುವಷ್ಟು ಹಣ ನಮ್ಮಲ್ಲಿ ಇಲ್ಲ. ಪ್ರತಿಬಾರಿ  ಪ್ರಾಯೋಜಕರು ಸಿಗುವುದಿಲ್ಲ. ಪದೇ ಪದೇ ಪೋಷಕರನ್ನು ಕೇಳಲು ಆಗುವುದಿಲ್ಲ. ಆದ್ದರಿಂದ ನಮಗೆ ವಿಶ್ವದ ಶ್ರೇಷ್ಠ ತಂಡಗಳ ಜೊತೆ ಆಡಲು ಅವಕಾಶ ಲಭಿಸುತ್ತಿಲ್ಲ. ಪ್ರಾಯೋಜಕರ ಮತ್ತು ಸರ್ಕಾರದ ಬೆಂಬಲ ಅಗತ್ಯವಿದೆ’ ಎಂದು ಸಂಪೂರ್ಣ ಹೆಗ್ಡೆ ಹೇಳುತ್ತಾರೆ.

ಫಿಟ್‌ನೆಸ್‌ ಮಾನದಂಡ
ಥ್ರೋಬಾಲ್‌ ಆಡಲು ವಯಸ್ಸಿಗಿಂತ ಹೆಚ್ಚಾಗಿ ಫಿಟ್‌ನೆಸ್‌ ಮಾನದಂಡವಾಗುತ್ತದೆ. ಏಕೆಂದರೆ ಯಾವುದೇ ವಯಸ್ಸಿನ ಕ್ರೀಡಾಪಟು ವೇಗವಾಗಿ ಓಡುವ ಸಾಮರ್ಥ್ಯ, ಚೆಂಡನ್ನು ಎದುರಾಳಿ ಅಂಕಣಕ್ಕೆ ಕಳುಹಿಸುವ ಚುರುಕುತನ, ಎರಡೂ ಕೈಗಳಿಂದ ಪಾಸ್‌ ಮಾಡುವ ಕೌಶಲ ಹೊಂದಿದ್ದರೆ ಸಾಕು. ಜೂನಿಯರ್ ಆಟಗಾರನಾಗಿದ್ದರೂ ಸೀನಿಯರ್ ತಂಡದಲ್ಲಿ ಸ್ಥಾನ ಲಭಿಸುತ್ತದೆ. ಇದರಿಂದ ಉತ್ತಮ ಪ್ರತಿಭೆಗಳು ಹೊರಬರುತ್ತಿವೆ.

ಭಾರತದಲ್ಲಿ ರಾಷ್ಟ್ರೀಯ ಟೂರ್ನಿ ನಡೆದರೆ 30 ರಾಜ್ಯಗಳ ತಂಡಗಳು ಪಾಲ್ಗೊಳ್ಳುತ್ತವೆ.  26 ದೇಶಗಳು ಅಂತರರಾಷ್ಟ್ರೀಯ ಥ್ರೋಬಾಲ್‌ ಫೆಡರೇಷನ್‌ನ ಮಾನ್ಯತೆ ಹೊಂದಿವೆ.

ಈ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಲುವಾಗಿ ಹಲವಾರು ಪ್ರಯತ್ನಗಳು  ನಡೆಯುತ್ತಿವೆ. ಹೋದ ವರ್ಷ ಥಾಯ್ಲೆಂಡ್‌ನಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ನಡೆದ ವಿಚಾರ ಸಂಕಿರಣದಲ್ಲಿ  30 ರಾಷ್ಟ್ರಗಳು ಪಾಲ್ಗೊಂಡಿದ್ದವು. ಆಗ ಅಲ್ಲಿ ಥ್ರೋಬಾಲ್‌ ಮಹತ್ವದ ಬಗ್ಗೆ ಭಾರತ ಪ್ರಾತ್ಯಕ್ಷಿತೆ ನೀಡಿತ್ತು. ಇದರಿಂದ ಈ ಕ್ರೀಡೆಯತ್ತ ಬೇರೆ ದೇಶಗಳೂ ಒಲವು ತೋರಿಸುತ್ತಿವೆ.

ನಿಯಮದ ಗೊಂದಲದಿಂದ ಹಿನ್ನಡೆ
ಎಷ್ಟು ಜನರ ತಂಡ ಥ್ರೋಬಾಲ್‌ ಆಡಬೇಕೆನ್ನುವ ವಿಷಯದ ಬಗ್ಗೆ ಭಾರತದಲ್ಲಿಯೇ ಗೊಂದಲ ಇರುವುದು ಈ ಕ್ರೀಡೆಯ ಬೆಳವಣಿಗೆಗೆ ಹಿನ್ನಡೆ ಉಂಟು ಮಾಡಿದೆ.

1996ಕ್ಕೂ ಮೊದಲು ಒಂದು ತಂಡದಲ್ಲಿ ಒಂಬತ್ತು ಸ್ಪರ್ಧಿಗಳು ಇರುತ್ತಿದ್ದರು. ಅದೇ ವರ್ಷ ಈ ಕ್ರೀಡೆಯ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಲಾಯಿತು. ಆಡುವ ಅಂತಿಮ ತಂಡದಲ್ಲಿ ಏಳು ಮತ್ತು ಐವರು ಮೀಸಲು ಆಟಗಾರರು ಇರುವ ನಿಯಮವನ್ನು ಜಾರಿಗೆ ತರಲಾಯಿತು. ಆದರೆ ಆಟಗಾರರ ಸಂಖ್ಯೆಯಲ್ಲಿ ಕಡಿಮೆ ಮಾಡಿದ್ದರ ಬಗ್ಗೆ ಈಗಲೂ ಉತ್ತರ ಭಾರತದವರಿಗೆ ಅಸಮಾಧಾನವಿದೆ. ಇದು ಕ್ರೀಡೆಯ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ.

‘ಈಗಿನ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಏಳು ಸದಸ್ಯರ ತಂಡವನ್ನು ಆಡಿಸಲಾಗುತ್ತದೆ. ಒಂಬತ್ತು ಸದಸ್ಯರನ್ನು ಆಡಿಸುವುದು ಹಳೆಯ ನಿಯಮ. ಇದರ ಬಗ್ಗೆ ಯಾವುದೇ ಗೊಂದಲಗಳು ಇಲ್ಲದಿದ್ದರೂ ಕೆಲವರು ಇದನ್ನು ಒಪ್ಪುತ್ತಿಲ್ಲ. ವಿನಾಕಾರಣ ವಿವಾದ ಹುಟ್ಟು ಹಾಕಿರುವ ಕಾರಣ ಥ್ರೋಬಾಲ್‌ ಬೆಳವಣಿಗೆ ಅತ್ಯಂತ ನಿಧಾನವಾಗುತ್ತಿದೆ’ ಎಂದು ಭಾರತ ಥ್ರೋಬಾಲ್‌ ಫೆಡರೇಷನ್‌ನ ಕಾರ್ಯದರ್ಶಿ ಟಿ. ರಾಮಣ್ಣ ಬೇಸರ ವ್ಯಕ್ತಪಡಿಸುತ್ತಾರೆ.

ರಾಚಪ್ಪರ ಥ್ರೋಬಾಲ್‌ ಪ್ರೀತಿ
ಏಷ್ಯಾ ವಲಯದಲ್ಲಿ ಭಾರತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. 1940ರಲ್ಲಿ ಭಾರತ ಮಹಿಳಾ ತಂಡ ಚೆನ್ನೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿತ್ತು. ಇದಕ್ಕೂ ಮೊದಲೇ ಅಂದರೆ 1930ರಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಕೆಲ ಟೂರ್ನಿಗಳಲ್ಲಿ ಆಡಿದ್ದವು. ಈ ಕ್ರೀಡೆಗೆ ಸಂಬಂಧಪಟ್ಟ ನಿರ್ದಿಷ್ಟ ನಿಯಮಗಳನ್ನು 1955ರಲ್ಲಿ ತಯಾರು ಮಾಡಲಾಯಿತು.

1950ರ ದಶಕದಲ್ಲಿ ವೈಎಂಸಿಎ ಮೂಲಕ ಬೆಂಗಳೂರಿನಲ್ಲಿ  ಥ್ರೋಬಾಲ್‌ ಕ್ರೀಡೆ ತನ್ನ ಹೆಜ್ಜೆಗುರುತು ಮೂಡಿಸಿತು. 1980ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆದಿತ್ತು. ಇದಕ್ಕೂ ಹತ್ತು ವರ್ಷಗಳ ಮೊದಲು ಉದ್ಯಾನನಗರಿಯಲ್ಲಿ ಈ ಕ್ರೀಡೆಯ ಪ್ರೀತಿ ನಿಧಾನವಾಗಿ ಹರಡಲು ಶುರುವಾಗಿತ್ತು.

ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಬಿ.ಎಂ. ರಾಚಪ್ಪ ಅವರು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿದ್ದರು. ಇವರು ವಾಲಿಬಾಲ್‌, ಕೊಕ್ಕೊ ಮತ್ತು ಕಬಡ್ಡಿ ಸಂಸ್ಥೆಗಳಿಗೂ ಕಾರ್ಯದರ್ಶಿಯಾಗಿದ್ದರು. ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯದ ಸಣ್ಣ ಸಣ್ಣ ಕ್ರೀಡೆಗಳ ಬೆಳವಣಿಗೆಗೆ ಶ್ರಮಿಸಿದ್ದಾರೆ. ಆಗ ಥ್ರೋಬಾಲ್‌ ಪ್ರಗತಿಗೂ ಪ್ರಯತ್ನಿಸಿದ್ದರು.

ಪ್ರಮಾಣ ಪತ್ರಕ್ಕಾಗಿ ಆಟ!
ವಾಲಿಬಾಲ್‌, ಟೇಬಲ್‌ ಟೆನಿಸ್‌,  ಥ್ರೋಬಾಲ್‌, ಬ್ಯಾಸ್ಕೆಟ್‌ಬಾಲ್‌ ಹೀಗೆ ಅನೇಕ ಸಣ್ಣ ಸಣ್ಣ ಕ್ರೀಡೆಗಳನ್ನು ಪ್ರಮಾಣ ಪತ್ರಕ್ಕಾಗಿ ಆಡುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ.

‘ಕೆಲ ಟೂರ್ನಿಗಳಲ್ಲಿ ಆಡಿದರೆ ಪ್ರಮಾಣ ಪತ್ರ ಸಿಗುತ್ತದೆ. ಇದರಿಂದ ಕ್ರೀಡಾಕೋಟದ ಅಡಿ ಉನ್ನತ ಶಿಕ್ಷಣಕ್ಕೆ ಸೀಟು ಪಡೆಯುವುದು ಸುಲಭವಾಗುತ್ತದೆ. ನಂತರ ಕ್ರೀಡೆಯಲ್ಲಿ ಮುಂದುವರಿಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಹೈಸ್ಕೂಲು ಮತ್ತು ಪದವಿಪೂರ್ವಿ ಕಾಲೇಜು ಮುಗಿಯುವ ತನಕ ಸಕ್ರಿಯವಾಗಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದವರು ನಂತರ ಎಲ್ಲಿ ಹೋಗುತ್ತಾರೆಂಬುದೇ ಗೊತ್ತಾಗುವುದಿಲ್ಲ. ಇದು ಥ್ರೋಬಾಲ್‌ಗೆ ಮಾತ್ರ ಎದುರಾಗಿರುವ ಪರಿಸ್ಥಿತಿಯಲ್ಲ. ಎಲ್ಲಾ ಸಣ್ಣ ಸಣ್ಣ ಕ್ರೀಡೆಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ’ ಎನ್ನುತ್ತಾರೆ ರಾಮಣ್ಣ.

‘ಥ್ರೋಬಾಲ್‌ ಅನ್ನು 1999ರಲ್ಲಿ ಭಾರತ ಶಾಲಾ ಕ್ರೀಡಾ ಒಕ್ಕೂಟಕ್ಕೆ (ಎಸ್‌ಜಿಎಫ್‌ಐ) ಸೇರ್ಪಡೆ ಮಾಡಲಾಯಿತು. ನಂತರ ಕರ್ನಾಟಕದ ಬಹುತೇಕ ಶಾಲೆಗಳಲ್ಲಿ ಈ ಕ್ರೀಡೆಯನ್ನು ಆಡಿಸಲಾಗುತ್ತಿದೆ. ಇದರಿಂದ ಜೂನಿಯರ್ ಮಟ್ಟದಲ್ಲಿ  ಪ್ರತಿಭಾವಂತ ಕ್ರೀಡಾಪಟುಗಳು ಹೊರಬರುತ್ತಾರೆ. ಆದರೆ ಕಾಲೇಜು ಸೇರಿದ ಬಳಿಕ ಆಟದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ.  ಸೆಮಿಸ್ಟರ್‌ ಪದ್ಧತಿ  ಇರುವುದರಿಂದ ಪೋಷಕರು   ಪ್ರೋತ್ಸಾಹಿಸುವುದು ಕಡಿಮೆ’ ಎಂದೂ ರಾಮಣ್ಣ ಹೇಳುತ್ತಾರೆ.

ಥ್ರೋಬಾಲ್‌ನಲ್ಲಿಯೂ ಹೊಸ ಲೀಗ್ ಯೋಜನೆ
ಬ್ಯಾಡ್ಮಿಂಟನ್‌, ಕುಸ್ತಿ, ಹಾಕಿಯಲ್ಲಿ ಇರುವ ಹಾಗೆ ಈ ಕ್ರೀಡೆಯಲ್ಲಿಯೂ ಲೀಗ್ ಆರಂಭಿಸುವ ಬಗ್ಗೆ ಭಾರತ ಥ್ರೋಬಾಲ್‌ ಫೆಡರೇಷನ್‌ ಯೋಜನೆ ರೂಪಿಸುತ್ತಿದೆ.  ಕ್ರೀಡೆಯ ನಿಯಮದಲ್ಲಿ ಕೆಲ ಮಾರ್ಪಾಡು ಮಾಡಿದರೆ ಜನಪ್ರಿಯತೆ ಹೆಚ್ಚಾಗು ತ್ತದೆ. ಇದರಿಂದ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಗುರುತಿಸಲು ಸಾಧ್ಯವಾಗು ತ್ತದೆ ಎಂಬುದು ಫೆಡರೇಷನ್‌ ಲೆಕ್ಕಾಚಾರ. ಜೊತೆಗೆ ಎಡಗೈಯಿಂದ ಆಡುವ ಸ್ಪರ್ಧಿಗಳಿಗೇ ಪ್ರತ್ಯೇಕ ಲೀಗ್ ನಡೆಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

‘ಎಡಗೈ ಸ್ಪರ್ಧಿಗಳೇ ತಂಡದ ಶಕ್ತಿ’
ಶಾಲಾ ಮಟ್ಟದಿಂದಲೇ ಥ್ರೋಬಾಲ್‌ ಆಡುತ್ತಿದ್ದ ಕಾರಣ ಮುಂದೆಯೂ ಇದೇ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಬೇಕೆನ್ನುವ ಕನಸು ಕಂಡಿದ್ದೆ. ಜೊತೆಗೆ ಎಡಗೈ ಆಟಗಾರ್ತಿಯಾದ ಕಾರಣ ಬೇಗನೆ ಹೆಚ್ಚು ಪಂದ್ಯಗಳಲ್ಲಿ ಆಡಲು ಅವಕಾಶ ಲಭಿಸಿತು.

ಈ ಕ್ರೀಡೆಯಲ್ಲಿ ಎಡಗೈ ಸ್ಪರ್ಧಿಗಳಿಗೆ ಸಾಕಷ್ಟು ಲಾಭಗಳಿವೆ. ಎದುರಾಳಿ ಅಂಕಣದಿಂದ ಬಂದ ಚೆಂಡನ್ನು ಸ್ಪರ್ಧಿ ಯಾವ ಕೈಯಿಂದ ಹಿಡಿಯುತ್ತಾರೋ ಅದೇ ಕೈಯಿಂದ ಮತ್ತೆ ಎದುರಾಳಿ ಅಂಕಣಕ್ಕೆ ಎಸೆಯಬೇಕಾಗುತ್ತದೆ. ವಾಲಿಬಾಲ್‌ನಲ್ಲಿ ಇರುವ ಹಾಗೆ ಈ ಕ್ರೀಡೆಯಲ್ಲಿ ತಮ್ಮದೇ ತಂಡದ ಆಟಗಾರರಿಗೆ ಚೆಂಡನ್ನು ಪಾಸ್‌ ಮಾಡುವಂತಿಲ್ಲ.

ಎಡಗೈಯಿಂದ ಆಡುವವರು ಎದುರಾಳಿ ಅಂಕಣದಲ್ಲಿ ಎಡಭಾಗಕ್ಕೆ ಚೆಂಡನ್ನು ಎಸೆದು ಪಾಯಿಂಟ್ಸ್‌ ಗಳಿಸುತ್ತಾರೆ. ಆದ್ದರಿಂದ ಹೆಚ್ಚು ಎಡಗೈ ಸ್ಪರ್ಧಿಗಳು ಇದ್ದರೆ ಪಂದ್ಯ ಗೆಲ್ಲುವುದು ಸುಲಭವಾಗುತ್ತದೆ.

ನಮ್ಮ ಹಿಡಿತದಲ್ಲಿ ಬಂದ ಚೆಂಡನ್ನು ಮೂರು ಸೆಕೆಂಡುಗಳ ಒಳಗಾಗಿ ಪಾಸ್‌ ಮಾಡಬೇಕಾಗುತ್ತದೆ. ಚೆಂಡನ್ನು ಹಿಡಿತಕ್ಕೆ ಪಡೆಯಲು ನಮ್ಮ ಅಂಕಣದಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು. ಆದರೆ ಚೆಂಡನ್ನು ಹಿಡಿತಕ್ಕೆ ಪಡೆದ ಬಳಿಕ  ನಿಂತಲ್ಲೇ ಚೆಂಡನ್ನು ಪಾಸ್‌ ಮಾಡಬೇಕು. ಚೆಂಡು ಸುಮಾರು 450 ಗ್ರಾಮ್‌ ತೂಕವಿರುತ್ತದೆ.

ಥ್ರೋಬಾಲ್‌ ಅಂಕಣ ಕೂಡ ವಾಲಿಬಾಲ್‌ ಅಂಕಣದಷ್ಟೇ ವಿಸ್ತೀರ್ಣ ಹೊಂದಿರುತ್ತದೆ. ಒಂದು ಸೆಟ್‌ 25 ಪಾಯಿಂಟ್ಸ್‌ನದ್ದಾಗಿರುತ್ತದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಐದು ಸೆಟ್‌ಗಳ ಪಂದ್ಯವನ್ನು ಆಡಿಸಲಾಗುತ್ತದೆ. ವಿಶೇಷವೆಂದರೆ ಈ ಕ್ರೀಡೆಯನ್ನು ಹೊರಾಂಗಣ ಮತ್ತು ಒಳಾಂಗಣ ಎರಡೂ ಅಂಕಣದಲ್ಲಿ ಆಡಬಹುದು.

ನಾವು ಪ್ರತಿ ಟೂರ್ನಿಗೂ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡುತ್ತೇವೆ. ಎಲ್ಲರಿಗೂ ಅವಕಾಶ ಸಿಗಬೇಕು. ಸಾಮರ್ಥ್ಯ ತೋರಿಸಲು ವೇದಿಕೆ ಲಭಿಸಬೇಕು ಎನ್ನುವ ಕಾರಣಕ್ಕಾಗಿ ಈ ಬದಲಾವಣೆ. ಇದರಿಂದ ತುಂಬಾ ಅನುಕೂಲವಾಗಿದೆ.

ಏಷ್ಯಾದಲ್ಲಿ ಈ ಕ್ರೀಡೆಯ  ಖ್ಯಾತಿ ಹೆಚ್ಚಾಗುತ್ತಿದೆ. ಅಷ್ಟೇ ಸ್ಪರ್ಧೆ ಕೂಡ ಇದೆ. ಶ್ರೀಲಂಕಾ, ಬಾಂಗ್ಲಾದೇಶ ಕಠಿಣ ಸವಾಲು ಒಡ್ಡುತ್ತಿವೆ.  ಥಾಯ್ಲೆಂಡ್‌ ಸ್ಪರ್ಧಿಗಳು ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುವ ಕಾರಣ ಆಟದ ಕೌಶಲಗಳನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.

ತಂಡದ ಒಟ್ಟು ಏಳು ಸದಸ್ಯರಲ್ಲಿ ಮೊದಲ ಲೈನ್‌ನಲ್ಲಿ ಇಬ್ಬರು, ಸೆಂಟ್ರಲ್‌ ಲೈನ್‌ನಲ್ಲಿ ಮೂವರು ಮತ್ತು ಬ್ಯಾಕ್‌ ಲೈನ್‌ನಲ್ಲಿ ಇಬ್ಬರು ಸದಸ್ಯರು ಇರುತ್ತಾರೆ. ಹಿಂದಿನ 15 ವರ್ಷಗಳಿಂದ ಭಾರತದಲ್ಲಿ ಥ್ರೋಬಾಲ್‌ ವೇಗವಾಗಿ ಪ್ರಗತಿ ಕಾಣುತ್ತಿದೆ. ನರಸಿಂಹ ರೆಡ್ಡಿ, ಗೋವಿಂದರಾಜ್‌, ಸತ್ಯನಾರಾಯಣ, ಶ್ರೀಕಾಂತ್‌, ಸಂತೋಷ್‌, ಶ್ರೀನಿವಾಸ್‌ ಹೀಗೆ ಅನೇಕ ಹಿರಿಯರು ಕ್ರೀಡೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಸಂಪೂರ್ಣ ಹೆಗ್ಡೆ
–ಭಾರತ ತಂಡದ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT