ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನ ಹಾಲು ಕೆಡದಂತೆ ತಡೆಯಲು ತಂತ್ರಜ್ಞಾನ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ವಿಜ್ಞಾನಿಗಳ ಆವಿಷ್ಕಾರ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ಕಬ್ಬಿನ ಹಾಲನ್ನು ಮೂರರಿಂದ ಐದು ತಿಂಗಳು ಕೆಡದಂತೆ ಇರಿಸುವ ತಂತ್ರಜ್ಞಾನವೊಂದನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ರೂಪಿಸಿದೆ.

ಕಬ್ಬಿನ ರಸವನ್ನು ವಾಣಿಜ್ಯ ಉದ್ದೇಶಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದರಿಂದಾಗಿ ತೆರೆದುಕೊಂಡಂತಾಗಿದೆ.
ಕಬ್ಬಿನ ಹಾಲಿನಲ್ಲಿ ವಿವಿಧ ರೀತಿಯ ಸಕ್ಕರೆಯ ಅಂಶಗಳಿವೆ. ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಹೆಚ್ಚಿಸುವ ಗ್ಲೈಸಿಮಿಕ್‌ ಎಂಬ ಅಂಶ ಇದರಲ್ಲಿ ಕಡಿಮೆ. ಹಾಗಾಗಿ ಇದನ್ನು ಮಧುಮೇಹ ಇರುವವರೂ ಸೇವಿಸಬಹುದು.

ಆದರೆ ರಸ್ತೆ ಬದಿಯಲ್ಲಿ ಕಬ್ಬಿನಹಾಲು ಮಾರುವುದು ಬಿಟ್ಟರೆ ಇದನ್ನು ಸಮಗ್ರವಾಗಿ ವಾಣಿಜ್ಯ ಉದ್ದೇಶಕ್ಕೆ ಈವರೆಗೆ ಬಳಸಿಕೊಳ್ಳಲಾಗಿಲ್ಲ. ಹಾಗೆಯೇ ನಿರ್ದಿಷ್ಟ ಋತುಗಳಲ್ಲಿ ಮಾತ್ರ ಕಬ್ಬಿನ ಹಾಲಿನ ಬಳಕೆ ಇದೆ ಎಂದು ಸಿಎಸ್‌ಐಆರ್‌ ವಿಜ್ಞಾನಿಗಳು ಹೇಳಿದ್ದಾರೆ.

ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕಬ್ಬಿನ ಹಾಲು ಬೇಗ ಹಾಳಾಗುತ್ತದೆ. ಹಾಗಾಗಿ ಬೃಹತ್‌ ಪ್ರಮಾಣದಲ್ಲಿ ಬೆಳೆದಿರುವ ಪಾನೀಯ ಮಾರುಕಟ್ಟೆಯ ಪ್ರಯೋಜನ ಪಡೆದುಕೊಳ್ಳುವುದು ಕಬ್ಬಿನ ಹಾಲಿಗೆ ಸಾಧ್ಯವಾಗಿಲ್ಲ ಎಂದು ಸಿಎಸ್‌ಐಆರ್‌ ನಿರ್ದೇಶಕ ಅಲೋಕ್‌ ಧವನ್‌ ಹೇಳಿದ್ದಾರೆ.

ಹೊಸ ತಂತ್ರಜ್ಞಾನ ಏನು?:  ಕಬ್ಬಿನ ಹಾಲು ಬೇಗ ಕೆಡುವುದಕ್ಕೆ ಮುಖ್ಯ ಕಾರಣ ಅದರಲ್ಲಿರುವ ಬ್ಯಾಕ್ಟೀರಿಯಾ. ಬ್ಯಾಕ್ಟೀರಿಯಾ ನಾಶ ಮಾಡುವುದಕ್ಕಾಗಿ ಕಬ್ಬಿನ ಹಾಲಿಗೆ ಅತ್ಯಂತ ಲಘು ಪ್ರಮಾಣದಲ್ಲಿ ವಿದ್ಯುತ್‌ ಹಾಯಿಸಲಾಗುತ್ತದೆ. ಮುಂದೆ ಸೌರ ವಿದ್ಯುತ್ತನ್ನು ಇದಕ್ಕೆ ಬಳಸುವ ವ್ಯವಸ್ಥೆ ಮಾಡಲಾಗುವುದು. ಹಾಗೆ ಮಾಡಿದರೆ ವೆಚ್ಚ ಕಡಿಮೆಯಾಗುತ್ತದೆ.

ಕಬ್ಬಿನ ಹಾಲು ತಯಾರಿಸಿದ ದಿನದಿಂದ 3–5 ತಿಂಗಳು ವರೆಗೆ ಕುಡಿಯಬಹುದು ಎಂದಾದರೆ ಅದು ದೊಡ್ಡ ಉದ್ಯಮವಾಗಿ ಬೆಳೆಯುತ್ತದೆ. ಇದರಿಂದ ನೇರವಾಗಿ ರೈತರಿಗೆ ಲಾಭ.
ಅಲೋಕ್‌ ಧವನ್‌
ಸಿಎಸ್‌ಐಆರ್‌ ನಿರ್ದೇಶಕ

ಕಬ್ಬಿನ ಹಾಲಿನ ವೈಶಿಷ್ಟ್ಯ

* ಇತರ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನ ಹಾಲಿನಲ್ಲಿ ಶರ್ಕರ ಪಿಷ್ಟ (ಕಾರ್ಬೊಹೈಡ್ರೇಟ್‌) ಮತ್ತು ಪ್ರೊಟೀನ್‌ಗಳು ಯಥೇಚ್ಚವಾಗಿವೆ

* ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಪೊಟಾಶಿಯಂ, ವಿಟಮಿನ್‌ ಎ, ಬಿ ಮತ್ತು ಸಿ ಕೂಡ ಧಾರಾಳವಾಗಿದೆ
* ಪಿತ್ತಜನಕಾಂಗವನ್ನು (ಲಿವರ್‌) ಬಲಪಡಿಸುತ್ತದೆ. ಕಾಮಾಲೆ ಸಂದರ್ಭದಲ್ಲಿ ಇದನ್ನು ಕುಡಿಯುವುದು ಲಿವರ್‌ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
* ಬೇರೆ ಸಿಹಿ ಪಾನೀಯ ಕುಡಿದರೆ ಹಲ್ಲಿಗೆ ಹಾನಿಯಾಗುತ್ತದೆ. ಆದರೆ ಸಾಕಷ್ಟು ಖನಿಜಾಂಶಗಳು ಇರುವುದರಿಂದ ಕಬ್ಬಿನ ಹಾಲಿನಿಂದ ಹಲ್ಲು ಹಾನಿಯಾಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT