ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್ಲಮ’ ಚಿತ್ರಕ್ಕೆ ಪ್ರಶಂಸೆ– ಆಕ್ಷೇಪ

ಶನಿವಾರ ಚಿತ್ರಪ್ರದರ್ಶನ, ಭಾನುವಾರ ಸಂವಾದಕ್ಕೆ ಅವಕಾಶ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ಧಾರವಾಡ: ‘ಅಲ್ಲಮ’ ಚಲನಚಿತ್ರದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಚಿತ್ರ ಪರಿಪೂರ್ಣವಾಗಿ ಮೂಡಿಬಂದಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿ, ಪ್ರತಿಭಟಿಸುವುದಾಗಿ ಎಚ್ಚರಿಸಿದ ಪ್ರಕರಣ ಭಾನುವಾರದ ಇಲ್ಲಿ ನಡೆಯಿತು.
 
ಸಾಹಿತ್ಯ ಸಂಭ್ರಮದ ಎರಡನೇ ದಿನವಾದ ಶನಿವಾರ ರಾತ್ರಿ ಚಿತ್ರ ಪ್ರದರ್ಶನವಾಗಿತ್ತು. ಸಂವಾದಕ್ಕೆ ಭಾನುವಾರ ಅವಕಾಶ ಕಲ್ಪಿಸಲಾಗಿತ್ತು. ಚಿತ್ರದ ನಿರ್ದೇಶಕ ಟಿ.ಎಸ್.ನಾಗಾಭರಣ, ನಾಯಕ ಧನಂಜಯ್, ನಾಯಕಿ ಮೇಘನಾ ರಾಜ್, ವಸ್ತ್ರ ವಿನ್ಯಾಸಕಿ ನಾಗಿಣಿ ಭರಣ, ಸಂಭಾಷಣೆ ಮತ್ತು ಕಥೆ ತಂಡದ ಪ್ರತಿಭಾ ನಂದಕುಮಾರ್, ಕಥೆ ಸಿದ್ಧಪಡಿಸುವಲ್ಲಿ ನೆರವಾದ ಎನ್.ಎಸ್. ಶ್ರೀಧರಮೂರ್ತಿ, ಪ್ರೊ. ಚಂದ್ರಶೇಖರ ಉಷಾಲ ವೇದಿಕೆಯಲ್ಲಿದ್ದರು.
 
‘ಬಲ್ಲಿದ ಅನುಭಾವಿ ಅಲ್ಲಮ ಜಂಗಮನ ಸೊಲ್ಲ ಹಿಡಿದಿಟ್ಟ ನಾಗ, ನಾಗಾಭರಣ ಮಲ್ಲನ ನೋಡು ಸಿನಿಮಾದಲ್ಲಿ’ ಎಂದೊಬ್ಬರು ವಚನದ ಧಾಟಿಯಲ್ಲೇ ಮೆಚ್ಚುಗೆ ಸೂಸಿದರು. ಇತರ ಶರಣರಿಗೆ ಪ್ರಾಮುಖ್ಯ ಇಲ್ಲ ಎಂಬ ಅಪಸ್ವರಕ್ಕೆ ಚಂದ್ರಶೇಖರ ಪ್ರತಿಕ್ರಿಯಿಸಿ, ‘ಅಲ್ಲಮನೇ ಪ್ರಮುಖ ಇಲ್ಲಿ. ಅದ್ಭುತ ಚಿತ್ರ’ ಎಂದರು.  ಅನುಭವ ಮಂಟಪವನ್ನು ಮುಕ್ತಮಂಟಪವನ್ನಾಗಿ ಚಿತ್ರಿಸಿರುವ ರೀತಿ ಮತ್ತು ಹಲವು ಸನ್ನಿವೇಶಗಳೇ ರೂಪಕಗಳಾಗಿ ಕಂಡ ಬಗೆ ಉತ್ತಮ ಪ್ರಯತ್ನ’ ಎಂದರು ಇನ್ನೊಬ್ಬರು.
 
ತೀವ್ರ ಆಕ್ಷೇಪ: ‘ಅನುಭವ ಮಂಟಪಕ್ಕೆ ಅಕ್ಕ ಮಹಾದೇವಿ ಬಂದಾಗ ಆಕೆಯ ಜತೆಗಿನ ಸಂಭಾಷಣೆ ಅಲ್ಲಮನದು; ಅದನ್ನು ಬಸವಣ್ಣನವರ ಬಾಯಲ್ಲಿ ಹೆಂಗ ಹೇಳಿಸಿದ್ರಿ ನೀವು ’ ಎಂದು ಬಸನಗೌಡ ಎಂಬುವವರು ಖಡಕ್ ಆಗಿ ಕೇಳಿದರು. ಸಮಜಾಯಿಷಿ ನೀಡಲು ಹೋದ ಪ್ರತಿಭಾ ನಂದಕುಮಾರ್‌ ಮಾತನ್ನು ಒಪ್ಪದ ಅವರು, ‘ವೈದಿಕರು ಕನಿಷ್ಠ ಮಾಡಿದ್ದ ಎಡಗೈಗೆ ಬಸವಣ್ಣ ಮಹತ್ವ ತಂದುಕೊಟ್ಟ. ಎಡಗೈಯನ್ನೇ ಗದ್ದಿಗೆಯನ್ನಾಗಿ ಮಾಡಿ ಲಿಂಗ ಪೂಜೆ ಮಾಡಿಕೊಳ್ಳುವಂತೆ ಹೇಳಿದ್ದ, ನೀವು ನೋಡಿದರೆ ಬಲಗೈಯಾಗ ಲಿಂಗಪೂಜಿ ಮಾಡಿಸೀರಿ’ ಎಂದು ಆಕ್ಷೇಪಿಸಿದರು. 
 
ಧಾರವಾಡದ ಅಕ್ಕಮಹಾದೇವಿ ಆಶ್ರಮದ ಬೇವಿನಗಿಡದ ಎಂಬುವವರು ‘ಐತಿಹಾಸಿಕ ಸತ್ಯಗಳನ್ನೆ ತಿರುಚಿರುವುದು ಸರಿಯಲ್ಲ’ ಎಂದು ಖಂಡಿಸಿದರು. ಅಲ್ಲಮನ ಮಾತನ್ನು ಬೇರೆಯವರ ಬಾಯಲ್ಲಿ ಹೇಳಿಸಿದ್ದು ತಪ್ಪು; ಶರಣರಿಗೆ ಮಾಡಿದ ಅಪಚಾರ ಎಂದವರಿಗೆ ಸಂಘಟಕರು ಸಮಯವಿಲ್ಲ ಎಂದು ತಡೆದರು. ‘ಹಲವು ಅಲ್ಲಮರನ್ನು ಮಾಡೋಣ ಸವಲತ್ತು ದೊರೆತರೆ’ ಎನ್ನುತ್ತ ಚರ್ಚೆ ಮುಗಿಸಿದರು ನಾಗಾಭರಣ.
 
**
ಕಲಬುರ್ಗಿ ಈಗಲೂ ಚರ್ಚಾರ್ಹ....
‘ಚಿತ್ರದ ಪೋಸ್ಟರಿನಲ್ಲಿ ಕೃತಜ್ಞತೆಗಳು ಎಂಬಲ್ಲಿ ಶ್ರೀ. ಪ್ರೊ. ಕಲಬುರ್ಗಿ ಎಂದಿದೆಯಲ್ಲ, ಅದು ಎಂ.ಎಂ. ಕಲಬುರ್ಗಿಯವರೆ?, ಇದು ಹೌದಾದರೆ ಅದನ್ನು ತಿದ್ದಬೇಕು’ ಎಂದರು. ‘ಹೌದು, ಲೋಪವಾಗಿದೆ, ಅವಸರದಲ್ಲಿ ಆದ ತಪ್ಪು ಇದು. ಸರಿಪಡಿಸಲಾಗುವುದು’ ಎಂದು ನಾಗಾಭರಣ ಹೇಳಿದರು. 
 
‘ಈ ಕುರಿತು ಕಲಬುರ್ಗಿ ಅವರ ಜತೆ 11 ಬಾರಿ ಚರ್ಚಿಸಿದ್ದೇನೆ. ನಂತರ ಚಿದಾನಂದ ಮೂರ್ತಿ ಬಳಿಗೆಹೋದರೆ, ಕಲಬುರ್ಗಿಯವರು ಹೇಳಿದ್ದನ್ನೆಲ್ಲ ಸಾರಾಸಗಟಾಗಿ ಹಿಂದು–ಮುಂದು ಮಾಡಿಬಿಡೋರು. ಕಡೆಗೆ ಈ ಹಿಂದು–ಮುಂದುಗಳ ನಡುವಣ ಮಧ್ಯಮ ಮಾರ್ಗವನ್ನು ಆರಿಸಿದ್ದಾಯಿತು’ ಎಂದು ಅವರು ಹೇಳಿದರು.
 
**
ಅಲ್ಲಮನ ಕುರಿತು ಓದು, ನಿರ್ದೇಶಕರ ಕಲ್ಪನೆ ಹಾಗೂ ಹಲವು ನಿರಾಕಾರಿ ಅಲ್ಲಮಗಳ ನಡುವೆ ನನ್ನದೇ ಖಚಿತ ಅಲ್ಲಮನನ್ನು ಪ್ರಸ್ತುತಪಡಿಸಲು ಶ್ರಮಿಸಿದ್ದೇನೆ. 
-ಧನಂಜಯ್, ನಟ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT