ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಭಾರ್ಗವಿ

ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 9ರಿಂದ ಸಮ್ಮೇಳನ; ಸೃಜನಾತ್ಮಕ ಚಿಂತನೆಗೆ ಅವಕಾಶ
Last Updated 23 ಜನವರಿ 2017, 10:54 IST
ಅಕ್ಷರ ಗಾತ್ರ

ಹಾಸನ: ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಫೆ. 9 ಹಾಗೂ 10 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ  ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಸಮ್ಮೇಳನ ನಡೆಸಲಾಗಿತ್ತು. ಸಮ್ಮೇಳನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ 17 ಜಿಲ್ಲೆಗಳಿಂದ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಅಧ್ಯಕ್ಷೆಯಾಗಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ 10ನೇ ತರಗತಿ ವಿದ್ಯಾರ್ಥಿನಿ ಭಾರ್ಗವಿ, ಸಹ ಸಮ್ಮೇಳನ ಅಧ್ಯಕ್ಷರಾಗಿ ಹಾಸನ ಸರ್ಕಾರಿ ಪ್ರೌಢಶಾಲೆಯ ಎಚ್.ಎಸ್. ವಿವೇಕ್, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗೌರಮ್ಮ, ಬೆಳ್ತಂಗಡಿಯ ಅನನ್ಯ ಹಾಗೂ ತುಮಕೂರಿನ ಸುಬ್ರಹ್ಮಣ್ಯ ರಾಮಣ್ಣ ಆಯ್ಕೆಯಾಗಿದ್ದಾರೆ ಎಂದರು.

ಫೆ. 9 ರಂದು ನಗರದ ಎನ್.ಆರ್. ವೃತ್ತದಿಂದ ಬಿ.ಎಂ. ರಸ್ತೆ, ಶಂಕರಮಠ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು ಎಂದು ಹೇಳಿದರು.

ಸುಮಾರು 10ರಿಂದ 20 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದ್ದು, ಊಟ, ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದ ಎಚ್.ಡಿ. ದೇವೇಗೌಡ, ಶಾಸಕ ಎಚ್.ಎಸ್. ಪ್ರಕಾಶ್‌ ಭಾಗವಹಿಸುವರು ಎಂದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ನಾಗರಾಜ್ ಮಾತನಾಡಿ, ಸರ್ಕಾರದಿಂದ ನಡೆಸಲಾಗುತ್ತಿರುವ ಕನ್ನಡ ಸಮ್ಮೇಳನಗಳು ರಾಜಕೀಯ ದಾಳಕ್ಕೆ ಬಲಿಯಾಗಿ ತಮ್ಮ ಮೂಲ ಉದ್ದೇಶಗಳನ್ನು ಕಳೆದುಕೊಳ್ಳುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮಕ್ಕಳಲ್ಲಿ ಸೃಜನಾತ್ಮಕ ಸಾಹಿತ್ಯ ಕಾಣುವುದು ದುಸ್ತರವಾಗುತ್ತದೆ. ಆದ್ದರಿಂದ ಶ್ರೀ ಮಠದ ನೆರವಿನಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಕಳೆದ ಬಾರಿ ಚನ್ನರಾಯಪಟ್ಟಣದಲ್ಲಿ ನಡೆದ ಸಮ್ಮೇಳನಕ್ಕೆ ಸಾಹಿತಿ ಚಂದ್ರಶೇಖರ್ ಕಂಬಾರ ಚಾಲನೆ ನೀಡಿದ್ದರು. ಮಕ್ಕಳಲ್ಲಿನ ಸುಪ್ತ ಪ್ರತಿಭೆ, ಬರವಣಿಗೆ, ವಾಕ್‌ ಚಾತುರ್ಯ ಅರಿತು ಪ್ರೋತ್ಸಾಹಿಸಲು ಈ ಸಮ್ಮೇಳನ ಸಹಕಾರಿ ಆಗಲಿದೆ ಎಂದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಚ.ನ.ಅಶೋಕ್, ಸುರೇಶ್ ಇತರರು ಪತ್ರಿಕಾಗೋಷ್ಠಿಯಲ್ಲಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT