ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳಿಗೆ ಆರ್ಥಿಕ ಬಲ ಅಗತ್ಯ

ಶತಮಾನೋತ್ಸವ ಸಮಾರಂಭ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ
Last Updated 23 ಜನವರಿ 2017, 11:27 IST
ಅಕ್ಷರ ಗಾತ್ರ

ಮೈಸೂರು:  ನಮ್ಮಲ್ಲಿ ಹಣವಿದ್ದಾಗ ಮಾತ್ರ ಬದುಕುವ ಧೈರ್ಯ, ವಿಶ್ವಾಸ ಇರುತ್ತದೆ. ಹಾಗಾಗಿ, ಹಿಂದುಳಿದ ವರ್ಗಗಳು ಆರ್ಥಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಇದಕ್ಕೆ ಸಹಕಾರ ಸಂಘಗಳು ಮನಸ್ಸು ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಲಹೆ ನೀಡಿದರು.

ಇಲ್ಲಿನ ವಿಜಯನಗರದ ವಿಠ್ಠಲ ರುಕ್ಮಿಣಿ ಕನ್ವೆನ್ಷನ್‌ ಸಭಾಂಗಣದಲ್ಲಿ ಭಾನುವಾರ ನಡೆದ ದಿ ಭಾವಸಾರ ಕ್ಷತ್ರಿಯ ಕೋ–ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾವಸಾರ ಕ್ಷತ್ರಿಯ ಸಮಾಜ ಕೂಡ ಹಿಂದುಳಿದ ವರ್ಗಕ್ಕೆ ಸೇರಿದೆ. ಆದರೆ, ತುಂಬ ಆರೋಗ್ಯವಂತ ಹಾಗೂ ವಿನಯಶೀಲ ಸಮಾಜವಿದು. ಈ ಸಮುದಾಯಕ್ಕೆ ಸೇರಿದವರು ಅಪರಾಧ ಕೃತ್ಯದಲ್ಲಿ ತೊಡಗಿದ ಉದಾಹರಣೆ ಕಡಿಮೆ ಎಂದರು.

ಶ್ರಮದ ಮೇಲೆ ಮಾತ್ರ ನಂಬಿಕೆ ಇಟ್ಟುಕೊಂಡ ಇವರ ಜೀವನಶೈಲಿ ಮಾದರಿಯಾದದ್ದು ಎಂದರು. ಸಮಾನತೆ ಹಾಗೂ ಸಮಾನ ಅವಕಾಶವನ್ನು ಒಪ್ಪದವರು, ಸಮಬಾಳು– ಸಮಪಾಲು ತತ್ವವನ್ನು ಅರ್ಥಮಾಡಿಕೊಳ್ಳದವರು ಹಿಂದುಳಿದ ವರ್ಗಗಳನ್ನು ತುಳಿಯುತ್ತಲೇ ಬಂದಿದ್ದಾರೆ. ಇವರಿಂದಾಗಿಯೇ ಸಂವಿಧಾನದ ಆಶಯಗಳು ಪೂರ್ಣವಾಗಿ ಈಡೇರಿಲ್ಲ. ದೇವರಾಜ ಅರಸು ಅವರು ಮೀಸಲಾತಿ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದರಿಂದ ತುಸು ಬದಲಾವಣೆ ಸಾಧ್ಯವಾಯಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಲೋಚನೆಗಳೂ ತುಳಿತಕ್ಕೊಳಗಾದ ಸಮಾಜವನ್ನು ಮೇಲೆತ್ತಲು ಸಹಕಾರಿಯಾಗಿವೆ ಎಂದು ಸಚಿವರು ಹೇಳಿದರು.

ನೂರು ವರ್ಷಗಳ ಹಿಂದೆಯೇ ಸಹಕಾರ ಸಂಘ ಹುಟ್ಟುಹಾಕಿ, ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬಿದ್ದು ದೊಡ್ಡ ಪ್ರಯತ್ನ. ಶತಮಾನೋತ್ಸವ ಆಚರಿಸಿಕೊಳ್ಳು ತ್ತಿರುವ ಮೈಸೂರಿನ ಮೊದಲ ಸಹಕಾರ ಸಂಘವಿದು. ಸಂಘದ ಮೂಲಕ ಏಳು ಪ್ರಮುಖ ಬೇಡಿಕೆಗಳನ್ನು ಸಮಾಜದ ಮುಖಂಡರು ಇಟ್ಟಿದ್ದಾರೆ. ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್‌, ಮೇಯರ್‌ ರವಿಕುಮಾರ್‌, ‘ಮುಡಾ’ ಅಧ್ಯಕ್ಷ ಡಿ.ಧ್ರುವಕುಮಾರ್‌ ಮಾತನಾಡಿದರು. ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಂಟಿ ನಿಬಂಧಕ ಜೋಷಿ, ಎಬಿಬಿಕೆ ಅಧ್ಯಕ್ಷ ಸುಧೀರ್‌ ಎಸ್‌. ನವಲೆ, ಹಿರಿಯ ಉಪಾಧ್ಯಕ್ಷ ರಮೇಶ್‌ ತಾಪ್ಸೆ, ಭಾವಸಾರ ಕ್ಷತ್ರಿಯ ಮಂಡಳಿ ಅಧ್ಯಕ್ಷ ಜಯರಾಮ ರಾವ್‌ ಲಾಳಿಗೆ, ಉಪಾಧ್ಯಕ್ಷ ಟಿ.ಎಚ್‌.ನಾರಾಯಣರಾವ್‌ ತೇಲ್ಕರ್‌, ಮಾಜಿ ಅಧ್ಯಕ್ಷ ಶ್ರೀನಿವಾಸರಾವ್‌ ಸುತ್ರಾವೆ, ಭಾವಸಾರ ಕ್ಷತ್ರಿಯ ಪದವೀಧರರ ಸಂಘದ ಮಾಜಿ ಅಧ್ಯಕ್ಷ ಎಸ್‌.ಶಂಕರರಾವ್‌ ಅಂಚಳ್ಕರ್‌ ಹಾಗೂ ಸಂಸ್ಥೆ ಪದಾಧಿಕಾರಿಗಳು, ಇತರರು ಇದ್ದರು. ಸೊಸೈಟಿ ಅಧ್ಯಕ್ಷ ಆರ್‌.ವಿ.ಶಿವಾಜಿ ರಾವ್‌ ರಾಂಪೂರ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ನಿರ್ದೇಶಕರನ್ನು ಕಾರ್ಯಕ್ರಮದಲ್ಲಿ ಸನ್ಕಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT