ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಕುಸಿತದಲ್ಲಿ ಹಾಸನ ಜಿಲ್ಲೆ ದೇವಿಹಳ್ಳಿಯ ಯೋಧ ಸಂದೀಪ್‌ ಶೆಟ್ಟಿ ಹುತಾತ್ಮ

ಹಸೆಮಣೆ ಏರಬೇಕಿದ್ದ ವರ ಇನ್ನಿಲ್ಲ
Last Updated 27 ಜನವರಿ 2017, 11:00 IST
ಅಕ್ಷರ ಗಾತ್ರ

ಹಾಸನ: ಜಮ್ಮು ಮತ್ತು ಕಾಶ್ಮೀರದ ಸೇನಾ ಕ್ಯಾಂಪ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಕಾಣೆಯಾಗಿದ್ದ ನಾಲ್ವರು ಯೋಧರ ಮೃತ ದೇಹಗಳು ಶುಕ್ರವಾರ ಪತ್ತೆಯಾಗಿದ್ದು, ರಾಜ್ಯದ ಹಾಸನ ಜಿಲ್ಲೆಯ ದೇವಿಹಳ್ಳಿಯ ಯೋಧ ಸಂದೀಪ್‌ ಶೆಟ್ಟಿ(24) ಹುತಾತ್ಮರಾಗಿದ್ದಾರೆ.

ಸಂದೀಪ್‌ ಶೆಟ್ಟಿ ಅವರು ಗುರೆಜ್‌ ವಲಯದ ಹಿಮಕುಸಿತದಲ್ಲಿ ಹುತಾತ್ಮರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಮಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಸಂದೀಪ್‌ ಅವರ ಸೋದರ ಮಾವ ತಿಮ್ಮಶೆಟ್ಟಿ ಮಾಹಿತಿ ನೀಡಿದ್ದಾರೆ.

ಏಳು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್‌ ಅವರು, ಮಂಗಳೂರಿನಲ್ಲಿ ನಡೆದ ನೇನಾ ಆಯ್ಕೆ ಶಿಬಿರದಲ್ಲಿ ಆಯ್ಕೆಯಾಗಿ ಸೇನೆಯಲ್ಲಿ ಸೇವೆ ಆರಂಭಿಸಿದ್ದರು. ನಾಲ್ಕುವರ್ಷ ಗುಜರಾತ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರು, ಬಳಿಕ ಜಮ್ಮು ಕಾಶ್ಮೀರದಲ್ಲಿ ಸೇವೆ ಮುಂದುವರಿಸಿದ್ದರು.

ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿ ಸಂದೀಪ್‌ ಅವರ ಹುಟ್ಟೂರು. ತಂದೆ ಪುಟ್ಟರಾಜು, ತಾಯಿ ಗಂಗಮ್ಮ. ಒಬ್ಬ ಸಹೋದರಿ ಇದ್ದು, ವಿವಾಹ ಮಾಡಿಕೊಡಲಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕುಟುಂಬಕ್ಕೆ ಸಂದೀಪ್‌ ಆಸರೆಯಾಗಿದ್ದರು.

ನಿಶ್ಚಿತಾರ್ಥ: ಸಂದೀಪ್‌ ಅವರಿಗೆ ಮದುವೆ ನಿಶ್ಚಯ ಮಾಡಿ 2016ರ ನವೆಂಬರ್‌ 20ರಂದು ನಿಶ್ಚಿತಾರ್ಥ ಮಾಡಲಾಗಿತ್ತು. ಏಪ್ರಿಲ್‌ 22ರಂದು ಮದುವೆಯ ದಿನಾಂಕವನ್ನು ನಿಗದಿಮಾಡಿ, ಹಾಸನದಲ್ಲಿ ಕಲ್ಯಾಣ ಮಂಟವನ್ನೂ ಮುಂಗಡವಾಗಿ ಕಾಯ್ದಿರಿಸಲಾಗಿತ್ತು. 22ರಂದು ಹಸೆಮಣೆ ಏರಬೇಕಿದ್ದ ಯೋಧ ಹಿಮಪಾತದಡಿ ಸಿಲುಕಿ ಕೊನೆಯುಸಿರೆಳೆದಿರುವುದು ಗ್ರಾಮದಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.

ಸಾವಿನ ಸುದ್ದಿ ತಿಳಿಸಿಲ್ಲ: ಸಂದೀಪ್‌ ಅವರ ತಾಯಿ ಗಂಗಮ್ಮ ಅವರನ್ನು ಅನಾರೋಗ್ಯ ನಿಮಿತ್ತ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಂದೆಯೂ ಅಲ್ಲೇ ಇದ್ದಾರೆ. ಗ್ರಾಮದಲ್ಲಿ ಮನೆಗೆ ಬೀಗ ಹಾಕಲಾಗಿದೆ. ತಂದೆ–ತಾಯಿಗೆ ಮನಗ ಸಾವಿನ ಸುದ್ದಿಯನ್ನು ಇನ್ನೂ ತಿಳಿಸಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT