ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ಐದು ಪ್ರತಿಭಟನೆ

ನಗರದ ಜಿಲ್ಲಾಧಿಕಾರಿ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ
Last Updated 31 ಜನವರಿ 2017, 7:01 IST
ಅಕ್ಷರ ಗಾತ್ರ
ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.
 
ಅವ್ಯವಹಾರ–ತನಿಖೆಗೆ ಆಗ್ರಹ: ಜಿಲ್ಲೆಯ ಜೇವರ್ಗಿ ತಾಲ್ಲೂಕು ಆಹಾರ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಅಹಿಂದ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.
 
2016ರ ಜನವರಿ 11ರಂದು 8ಗ್ರಾಮಗಳಿಗೆ ಒಂದೇ ನೋಂದಣಿ ಸಂಖ್ಯೆಯ ವಾಹನದಿಂದ ಸುಮಾರು 760 ಕಿ.ಮೀ ದೂರ ಚಲಿಸಿ, 900 ಕ್ವಿಂಟಲ್ ಆಹಾರ ಧಾನ್ಯ ಸರಬರಾಜು ಮಾಡಲಾಗಿದೆ ಎಂದು ಹೇಳಿದ್ದಾರೆ. ಒಂದು ವಾಹನದಲ್ಲಿ, ಒಂದು ದಿನದಲ್ಲಿ 8ಗ್ರಾಮಗಳಿಗೆ ಸಂಚರಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
 
2014ರಿಂದ 2017ರ ವರೆಗೆ ವಿತರಿಸಲಾಗಿರುವ ಆಹಾರ ಧಾನ್ಯಗಳ ಪ್ರಮಾಣದ ಬಗ್ಗೆ ಮಾಹಿತಿ ನೀಡಬೇಕು. ಆಹಾರ ಧಾನ್ಯ ಸರಬರಾಜು ಟೆಂಡರ್ ಪಡೆಯುವಾಗ ಗ್ಲೋಬಲ್ ಟ್ರಾನ್ಸಪೋರ್ಟ್ ಏಜೆನ್ಸಿ 7ವಾಹನಗಳ ನೋಂದಣಿ ಸಂಖ್ಯೆ ನೀಡಿ ಟೆಂಡರ್ ಪಡೆದಿದ್ದು, ಏಳೂ ವಾಹನಗಳ ಬಗ್ಗೆ ತನಿಖೆ ನಡೆಸಬೇಕು.
 
ವಾಹನಕ್ಕೆ ಜಿಪಿಎಸ್ ಅಳವಡಿಸದೆ ರೂಟ್ ಮ್ಯಾಪ್ ಪ್ರಕಾರ ಆಹಾರ ಧಾನ್ಯ ಸರಬರಾಜು ಮಾಡದಿರುವ ಬಗ್ಗೆ ಕ್ರಮಕೈಗೊಳ್ಳಬೇಕು. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಇದ್ದು, ಅವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
 
ಅಹಿಂದ್ ಸಂಚಾಲಕ ಬಸವರಾಜ ಹರವಾಳ, ಜಿಲ್ಲಾ ಸಂಘಟಕರಾದ ಬಸವರಾಜ ಬೂದಿಹಾಳ, ಮಲ್ಲಣ್ಣಗೌಡ ಮಾಲಿಪಾಟೀಲ, ರೇವಣಸಿದ್ದಪ್ಪ ಬಳ್ಳೂಂಡಗಿ, ಮಲ್ಲಣ್ಣ ಮಡಿವಾಳ, ರೇವಣಸಿದ್ದಪ್ಪ ಹುಗ್ಗಿ ಇದ್ದರು.
 
ಶೈಕ್ಷಣಿಕ ಸಾಲ ವಸೂಲಿ ಬೇಡ: ಶೈಕ್ಷಣಿಕ ಸಾಲದ ಮಾಹಿತಿಯನ್ನು ನೋಡಲ್ ಬ್ಯಾಂಕ್‌ಗಳಿಗೆ ಕಳುಹಿಸಬೇಕು ಮತ್ತು ಬರಗಾಲ ಕಾರಣ ಶೈಕ್ಷಣಿಕ ಸಾಲ ವಸೂಲು ಮಾಡದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಈಶಾನ್ಯ ವಲಯ ಶಿಕ್ಷಕರ ವೇದಿಕೆ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.
 
ಶೈಕ್ಷಣಿಕ ಸಾಲದ ಮಾಹಿತಿಯನ್ನು ನೋಡಲ್ ಬ್ಯಾಂಕ್‌ (ಕೆನರಾ ಬ್ಯಾಂಕ್‌)ಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಂಪೂರ್ಣ ಬರಗಾಲವಿದ್ದು, ಯಾವುದೇ ಸಾಲಗಳನ್ನು ವಸೂಲಿ ಮಾಡಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಘೋಷಿಸಿವೆ. ಆದ್ದರಿಂದ ಶೈಕ್ಷಣಿಕ ಸಾಲ ಪಡೆದ ಪಾಲಕರಿಂದ ಸಾಲದ ಕಂತುಗಳನ್ನು ವಸೂಲಿ ಮಾಡಬಾರದು ಎಂದು ಒತ್ತಾಯಿಸಿದರು.
 
ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
ಮಿನಿ ವಿಧಾನಸೌಧ ನಿರ್ಮಾಣಕ್ಕೆ ಆಗ್ರಹ: ಆಳಂದ ಪಟ್ಟಣದ ಸರ್ವೆ ನಂ.264ರಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಕ್ರಮ­ಕೈಗೊಳ್ಳುವಂತೆ ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ಹಾಗೂ ಪರಿಸರ ವೇದಿಕೆ ಅಧ್ಯಕ್ಷ ಟಿ.ಜೆ. ಅಬ್ರಾಹಂ ಅವರು ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.
ಕರ್ನಾಟಕ ಹೈಕೋರ್ಟ್‌ ಪೀಠವು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಆದೇಶ ನೀಡಿದರೂ ವಿಳಂಬ ನೀತಿ ಅನುಸರಿ­ಸುತ್ತಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 
**
ನೀರಾ ಮಾರಾಟಕ್ಕೆ ಅನುಮತಿ ನೀಡಿ
ಈಚಲು ಮರಗಳಿಂದ ನೀರಾ ಇಳಿಸಿ, ಮಾರಾಟ ಮಾಡಲು ಅನುಮತಿ ನೀಡುವಂತೆ ಆಗ್ರಹಿಸಿ ನೀರಾ ಮೂರ್ತೆದಾರರ ಹೋರಾಟ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.
 
ಈ ಭಾಗದ ಮೂರ್ತೆದಾರರಾದ ನಾವುಗಳು ಈ ಹಿಂದೆ ಈಚಲು ಮರದಿಂದ ನೀರಾ ಇಳಿಸಿ, ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೆವು. ಆದರೆ, ರಾಜ್ಯ ಸರ್ಕಾರ ಈ ಭಾಗದಲ್ಲಿ ಈಚಲು ಮರಗಳು ಇಲ್ಲವೆಂಬ ನೆಪವೊಡ್ಡಿ ನೀರಾ ಇಳಿಸುವುದಕ್ಕೆ ನಿಷೇಧ ಹೇರಿತು. ಇದರಿಂದಾಗಿ ಕಲಬುರ್ಗಿ ಜಿಲ್ಲೆಯ ಸೇಡಂ, ಚಿಂಚೋಳಿ, ಚಿತ್ತಾಪುರ, ಯಾದಗಿರಿ ಜಿಲ್ಲೆಯ ಯಾದಗಿರಿ ಮತ್ತು ಗುರುಮಠಕಲ್, ರಾಯಚೂರು ಜಿಲ್ಲೆಯ ರಾಯಚೂರು ಮತ್ತು ದೇವದುರ್ಗ ತಾಲ್ಲೂಕುಗಳ ಮೂರ್ತೆದಾರರು ಬೀದಿ ಪಾಲಾಗುವಂತಾಯಿತು ಎಂದು ಆರೋಪಿಸಿದರು.
 
ಇದಾದ ಬಳಿಕ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಕಂದಾಯ ಮತ್ತು ಅಬಕಾರಿ ಇಲಾಖೆಯಿಂದ ಈಚಲು ಮರಗಳ ಸಮೀಕ್ಷೆ ನಡೆಸಲಾಯಿತು. ಆದಾಗ್ಯೂ, ಇದುವರೆಗೂ ನೀರಾ ಇಳಿಸಲು ಅನುಮತಿ ನೀಡಿಲ್ಲ. ಈಗಲಾದರೂ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 
ನೀರಾ ಹೋರಾಟ ಸಮಿತಿ ಅಧ್ಯಕ್ಷ ಶರಣಯ್ಯಗೌಡ ದುಗನೂರ, ಪ್ರಧಾನ ಕಾರ್ಯದರ್ಶಿ ಮಹೇಶ ಎಸ್.ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
**
ನಿವೇಶನ ನೀಡಲು ಮನವಿ
ನಿವೇಶನ ರಹಿತರಿಗೆ ವಸತಿ ಸಹಿತ ನಿವೇಶನ ನೀಡುವಂತೆ ಒತ್ತಾಯಿಸಿ ಎಚ್. ಆಂಜನೇಯ ಅಭಿಮಾನಿಗಳ ಸೇವಾ ಸಂಘದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ಮಾಡಿದರು.
 
ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಕಡುಬಡವರು ಮತ್ತು ವಸತಿ ಇಲ್ಲದವರಿಗೆ ಸರ್ಕಾರಿ ಗೈರಾಣಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
 
ಸಂಸ್ಥಾಪಕ ಅಧ್ಯಕ್ಷ ರುಕ್ಕಪ್ಪ ಟಿ.ಕಾಂಬಳೆ, ಸದಸ್ಯ ಶಿವಾಜಿ ಎಸ್.ಪಟ್ಟಣಕರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT