ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಸಿದ್ದಲಿಂಗ ನಗರ

ಮೂಲ ಸೌಕರ್ಯ ಒದಗಿಸುವಲ್ಲಿ ಕಾರಟಗಿ ಪುರಸಭೆ ನಿರ್ಲಕ್ಷ್ಯ
Last Updated 31 ಜನವರಿ 2017, 7:29 IST
ಅಕ್ಷರ ಗಾತ್ರ
ಕಾರಟಗಿ: ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲ, ಕುಡಿಯುವ ನೀರಿನ ತೊಟ್ಟಿ ಇಲ್ಲ, ಸಿ.ಸಿ. ರಸ್ತೆಯ ದರ್ಶನವೇ ಆಗಿಲ್ಲ, ಸಾರ್ವಜನಿಕ ಶೌಚಾಲಯ ಬೇಡಿಕೆ ಇನ್ನೂ ಈಡೇರಿಲ್ಲ, ಇಲ್ಲಿನ ನಾಲೆಗೆ ನೀರು ಬಿಡದಿದ್ದರೆ ನಿವಾಸಿಗಳ ಅಲೆದಾಟ ವಿವರಿಸಲು ಸಾಧ್ಯವಿಲ್ಲ.....! 
 
ಹೀಗೆ ಎಲ್ಲವೂ 'ಇಲ್ಲ’ಗಳ ಮಧ್ಯೆ ಸಮೀಪದ ಸಿದ್ದಲಿಂಗನಗರ ಜನರು ಬದುಕು ಸಾಗಿಸುತ್ತಿದ್ದಾರೆ. ಕಾರಟಗಿ ಪುರಸಭೆ ವ್ಯಾಪ್ತಿಗೆ ಬರುವ ಈ ಬಡಾವಣೆಯಲ್ಲಿ ಒಂದೂವರೆ ಸಾವಿರ ಜನಸಂಖ್ಯೆ ಇದೆ.
 
ಗ್ರಾಮದಲ್ಲಿ ಚರಂಡಿಗಳು ಇಲ್ಲದೇ ಇರುವುದರಿಂದ ಕಲುಷಿತ ನೀರು ಎಲ್ಲೆಂದರಲ್ಲಿ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ. ಇದರಿಂದ ಜನರು ಆರೋಗ್ಯ ಕೆಡುವ ಆತಂಕದಲ್ಲಿದ್ದಾರೆ. ಸಿ.ಸಿ. ರಸ್ತೆಯ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿರದೇ, ನಾಲೆಯ ನೀರನ್ನೇ ಆಶ್ರಯಿಸಿರುವ ಜನರು ನಾಲೆಗೆ ನೀರಿರದ ಸಮಯದಲ್ಲಿ ಪಕ್ಕದ ಕಾಲೇಜಿನ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ. ಕುಡಿಯುವ ನೀರಿನ ಯೋಜನೆಗೆ ಹಣ ವ್ಯಯ ಮಾಡಲಾಗಿದ್ದರೂ, ಇನ್ನೂ ನೀರಿನ ಬವಣೆ ತಪ್ಪಿಲ್ಲ.   
 
ನಗರದಲ್ಲಿ ಹಾದು ಹೋಗಿರುವ ನಾಲೆಯ ಎಡ, ಬಲ ಭಾಗದಲ್ಲಿ ಮುಳ್ಳಿನ ಗಿಡಗಳು ರಸ್ತೆಯತ್ತ  ಚಾಚಿಕೊಂಡಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ರಾತ್ರಿ ಜನರು ಮೈಮರೆತು, ಸರಾಗವಾಗಿ ಮನೆ ಸೇರುವಂತಿಲ್ಲ. ವಿದ್ಯುತ್ ಕಂಬಗಳು ಅಲ್ಲಲ್ಲಿ ಬಾಗಿವೆ, ಕೈಗೆಟುಕುವಂತಿರುವ ವಿದ್ಯುತ್‌ ತಂತಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆತಂಕದಲ್ಲೆ ಜನರು ದಿನದೂಡುತ್ತಿದ್ದರೂ ಜೆಸ್ಕಾಂ ಮಾತ್ರ ಕಣ್ಣೆತ್ತಿ ನೋಡುತ್ತಿಲ್ಲ ಎಂದು ನಗರದ ಶ್ರೀನಿವಾಸ ಹೇಳುತ್ತಾರೆ.
 
ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ನಗರದಲ್ಲಿ ಬಡ ಕೃಷಿ ಕಾರ್ಮಿಕರು, ಆಂಧ್ರ ವಲಸಿಗರು ಅಧಿಕವಾಗಿದ್ದಾರೆ. ಬಸ್ ಶೆಲ್ಟರ್‌ ಇದೆಯಾದರೂ ನಿರುಪಯುಕ್ತವಾಗಿದೆ. ಇದನ್ನೂ ಬಾಡಿಗೆ ನೀಡುವುದರೊಂದಿಗೆ ಸ್ಥಳೀಯಾಡಳಿತ ಸೇವಾ ಭಾವನೆಗೆ ತಿಲಾಂಜಲಿ ಇಟ್ಟಿದೆ. ಬಸ್‌ ನಿಲುಗಡೆಗೆ ಆಗಾಗ ಆಗ್ರಹಿಸಿ, ಮನವಿ ಸಲ್ಲಿಸಲಾಗಿದೆಯಾದರೂ ಎಲ್ಲಾ ಬಸ್‌ಗಳು ನಿಲ್ಲುತ್ತಿಲ್ಲ ಎನ್ನುತ್ತಾರೆ ಹೋರಾಟಗಾರ ಜೆ. ರಾಮರಾವ್.
 
ಸುತ್ತಲೂ ಜಮೀನುಗಳಿವೆ, ವಿಷಕಾರಿ ಜಂತುಗಳು ಹಾವಳಿ ಇದೆ. ಬೀದಿಯಲ್ಲಿಯ ವಿದ್ಯುತ್ ಕಂಬಗಳು ದೀಪ ಕಂಡಿಲ್ಲ ಎನ್ನುತ್ತಾರೆ ಶಂಕ್ರಪ್ಪ.
 
ಸಿ.ಸಿ.ರಸ್ತೆ, ಸಾರ್ವಜನಿಕ ಶೌಚಾಲಯದ ಜೊತೆಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು. ಬಸ್ ನಿಲುಗಡೆ ವ್ಯವಸ್ಥೆ, ಕಂದಾಯ ಗ್ರಾಮ ಎಂದು ಘೋಷಣೆ ಮಾಡಬೇಕು ಎಂದು ರೈತ ಪ್ರಜಾ ಸಂಘದ ಸಂಚಾಲಕ ಜೆ. ರಾಮರಾವ್ ಒತ್ತಾಯಿಸುತ್ತಾರೆ. ಜನರ ಬೇಡಿಕೆ ಈಡೇರದಿದ್ದರೆ ಗ್ರಾಮಸ್ಥರೊಂದಿಗೆ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎನ್ನುತ್ತಾರೆ ಪುರಸಭೆ ಸದಸ್ಯೆ ವೆಂಕಟರಮಣಮ್ಮ ಜೆ. ರಾಮರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT