ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 3,4ರಂದು

ಈ ಬಾರಿ ಮಾಗಡಿ ಆತಿಥ್ಯ: ಸಮ್ಮೇಳನಾಧ್ಯಕ್ಷರಾಗಿ ರಂಗನಾಥ್‌ರಾವ್‌ ಆಯ್ಕೆ
Last Updated 31 ಜನವರಿ 2017, 9:16 IST
ಅಕ್ಷರ ಗಾತ್ರ
ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರುವರಿ 3 ಮತ್ತು 4ರಂದು ಮಾಗಡಿಯ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ನಡೆಯಲಿದೆ.
 
‘ಮಾಗಡಿಯವರೇ ಆದ ಸಾಹಿತಿ, ಸಲಾಕೆ ಗೊಂಬೆಯಾಟ ಕಲಾವಿದ ಎಂ.ಆರ್‌. ರಂಗನಾಥ್‌ರಾವ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನೆ, ಕವಿಗೋಷ್ಠಿಯ ಜೊತೆಗೆ ಪ್ರಚಲಿತ ವಿದ್ಯಮಾನಗಳಿಗೆ ಅನುಗುಣವಾಗಿ ವಿಚಾರ ಗೋಷ್ಠಿ ಆಯೋಜಿಸಲಾಗಿದೆ. ಇದರೊಟ್ಟಿಗೆ ಎರಡೂ ದಿನಗಳಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
‘ಜಿಲ್ಲೆಯಲ್ಲಿ ಈ ಮೊದಲು ಕ್ರಮವಾಗಿ ಕನಪುರ, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಮೊದಲ ಮೂರು ಜಿಲ್ಲಾ ಸಮ್ಮೇಳನಗಳು ನಡೆದಿವೆ. ಹೀಗಾಗಿ ಈ ಬಾರಿ ಮಾಗಡಿಗೆ ಆತಿಥ್ಯ ಲಭಿಸಿದೆ. 3ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಮ್ಮೇಳನ  ಆರಂಭಗೊಳ್ಳಲಿದೆ. ಬೆಳಿಗ್ಗೆ 11ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮ್ಮೇಳನದ ಅಧ್ಯಕ್ಷ ರಂಗನಾಥರಾವ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಅವರು ವಿವರಿಸಿದರು.
 
ಗೋಷ್ಠಿಗಳು: ಒಟ್ಟು ಮೂರು ವಿಚಾರ ಗೋಷ್ಠಿಗಳು ನಡೆಯಲಿವೆ. 3ರಂದು ಮಧ್ಯಾಹ್ನ 2.30ರಿಂದ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ‘ನೀರಾವರಿ ಹೋರಾಟಗಳು ರೈತರು ಮತ್ತು ಸರ್ಕಾರ’ ವಿಷಯದ ಕುರಿತು ಚರ್ಚೆ ನಡೆಯಲಿದೆ. ಕೃಷಿ ವಿಜ್ಞಾನಿ ಎಂ. ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 
 
 ಸಣ್ಣ ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್‌ ರಾಜಾರಾವ್‌, ರೈತ ಸಂಘದ ಉಪಾಧ್ಯಕ್ಷ  ಕೋಣಸಾಲೆ ನರಸರಾಜು ಹಾಗೂ ಪಿ. ಅನಸೂಯಮ್ಮ ವಿಚಾರ ಹಂಚಿಕೊಳ್ಳಲಿದ್ದಾರೆ. 4ರಂದು ಬೆಳಿಗ್ಗೆ 9.30ರಿಂದ ಎರಡನೇ ಗೋಷ್ಠಿ ನಡೆಯಲಿದೆ. ‘ಮಹಿಳೆ ಮತ್ತು ವರ್ತಮಾನದ ತಲ್ಲಣಗಳು’ ಕುರಿತು ವಿಚಾರ ಮಂಡನೆಯಾಗಲಿದೆ. ಲೇಖಕಿ ಹೇಮಲತಾ ಮಹಿಷಿ ಅಧ್ಯಕ್ಷತೆ ವಹಿಸಲಿದ್ದಾರೆ, ಲೇಖಕಿಯರಾದ ಎನ್‌. ಗಾಯತ್ರಿ, ಶೈಲಾ ಶ್ರೀನಿವಾಸ್‌ ಹಾಗೂ ರಾಣಿ ಸತೀಶ್‌ ವಿಚಾರ ಮಂಡಿಸಲಿದ್ದಾರೆ. 
 
ನಂತರದಲ್ಲಿ ‘ಭವಿಷ್ಯದಲ್ಲಿ ಕನ್ನಡ ಶಾಲೆಗಳು’ ಎಂಬ ವಿಚಾರದ ಕುರಿತು ಮತ್ತೊಂದು ಗೋಷ್ಠಿ ಆಯೋಜಿ ಸಲಾಗಿದೆ. ಶಿಕ್ಷಣ ತಜ್ಞ ಎನ್‌. ಶಿವರಾಮರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ, ನಾಗರತ್ನಾ ಬಂಜಗೆರೆ, ಎಚ್‌,ವಿ. ವಾಸು, ಕೆ. ರಾಜಕುಮಾರ್ ಹಾಗೂ ಗಂ. ದಯಾನಂದ ಮಾತನಾಡಲಿದ್ದಾರೆ’ ಎಂದು ಅವರು ವಿವರಿಸಿದರು.
 
ಕವಿಗೋಷ್ಠಿ: ಮೊದಲ ದಿನ ಸಂಜೆ 4.30ಕ್ಕೆ ಕವಿಗೋಷ್ಠಿಯು ನಿಗದಿಯಾಗಿದೆ. ವಿ.ಎಚ್‌. ರಾಜಶೇಖರ್‌ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ–ಕಿರಿಯ ಕವಿಗಳು ಕವನ ವಾಚಿಸಲಿದ್ದಾರೆ. ಎರಡನೇ ದಿನ ಮಧ್ಯಾಹ್ನ 2.30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ನಂತರ ಬಹಿರಂಗ ಅಧಿವೇಶನ, ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಮಾರೋಪ ಕಾರ್ಯಕ್ರಮ ನೆರವೇರಲಿದೆ’ ಎಂದು ಅವರು ವಿವರಿಸಿದರು.
 
ಸಾಂಸ್ಕೃತಿಕ ಕಾರ್ಯಕ್ರಮ: ಮೊದಲ ದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೆಂಗಳೂರಿನ  ರಂಗಪುತ್ಥಳಿ ತಂಡದ ಕಲಾವಿದರು ‘ಶ್ರೀಕೃಷ್ಣ ಪಾರಿಜಾತ’ ಬೊಂಬೆ ನಾಟಕ ಪ್ರದರ್ಶಿಸಲಿದ್ದಾರೆ. 
 
ಕಡಬಗೆರೆ ಮುನಿರಾಜು ನೇತೃತ್ವದಲ್ಲಿ ಸ್ನೇಹಸಾಗರ ಸುಗಮ ಸಂಗೀತ ತಂಡದ ಕಲಾವಿದರು ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎರಡನೇ ದಿನ ಸಂಜೆ 6.30ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಮಾಗಡಿಯ ಎಸ್‌. ಅಮರನಾಥ್‌ ಹಾಗೂ ತಂಡದವರು ಮ್ಯಾಂಡೋಲಿನ್‌ ವಾದನ ಪ್ರಸ್ತುತಪಡಿಸಲಿದ್ದಾರೆ ಎಂದರು.
 
ಮೇಳದಲ್ಲಿ ಪುಸ್ತಕಗಳ ಪ್ರದರ್ಶನ ಇರಲಿದೆ. ಸ್ಥಳೀಯ ಶಾಸಕ ಎಚ್‌.ಸಿ. ಬಾಲಕೃಷ್ಣ ನೇತೃತ್ವದಲ್ಲಿ ಸ್ವಾಗತ ಸಮಿತಿಯು ಸಿದ್ಧತೆಗಳನ್ನು ಕೈಗೊಂಡಿದೆ ಎಂದರು. 
ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಎಚ್.ಎಸ್. ರೂಪೇಶ್‌ಕುಮಾರ್‌, ವಿಜಯ ರಾಂಪುರ, ಗೌರವ ಕೋಶಾಧ್ಯಕ್ಷ ಎಚ್‌.ಪಿ. ನಂಜೇಗೌಡ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ಶಿವಣ್ಣ  ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. 
 
**
ಕನ್ನಡ  ಜಾಗೃತಿ ಅಭಿಯಾನ
‘ಪರಿಷತ್ತಿನ ವತಿಯಿಂದ ಜಿಲ್ಲೆಯಲ್ಲಿ ದತ್ತಿ ಕಾರ್ಯಕ್ರಮಗಳ ಜೊತೆಗೆ ವಿವಿಧ ಕನ್ನಡ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ನಾಗರಾಜು ತಿಳಿಸಿದರು. 
 
‘ವ್ಯಾಪಾರ ಮಳಿಗೆಗಳ ಮುಂದೆ ಕನ್ನಡದಲ್ಲಿಯೇ ಬೋರ್ಡು ಬರೆಸಲು ಆಗ್ರಹಿಸಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ರಾತ್ರಿ ತರಗತಿಗಳ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ಅಂಕಿ ಕಲಿಸುವ ಅಭಿಯಾನ ಆಯೋಜಿಸಲು ಯೋಜಿಸಲಾಗಿದೆ’ ಎಂದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT