ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್‌ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

ಕ್ರೀಡಾಪಟುಗಳಿಗೆ 45 ವಾಹನ ವ್ಯವಸ್ಥೆ; 10 ವಾಹನಗಳಲ್ಲಿ ಪೊಲೀಸ್ ಪಡೆ ಗಸ್ತು, ಕ್ರೀಡಾಂಗಣ ಪರಿಶೀಲಿಸಿದ ಜಿಲ್ಲಾಡಳಿತ
Last Updated 3 ಫೆಬ್ರುವರಿ 2017, 6:13 IST
ಅಕ್ಷರ ಗಾತ್ರ

ಧಾರವಾಡ: ‘ರಾಜ್ಯ ಒಲಿಂಪಿಕ್‌ ಕೂಟ ಇದೇ 3ರಿಂದ 10ರವರೆಗೆ ನಡೆಯುತ್ತಿದ್ದು, ಅದಕ್ಕೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ತಿಳಿಸಿದರು.

‘ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿರುವ ಕ್ರೀಡಾಂಗಣಗಳು ಸಂಪೂರ್ಣ ಸಜ್ಜುಗೊಂಡಿವೆ. ಕ್ರೀಡಾಕೂಟಕ್ಕೆ ಬರುತ್ತಿರುವ ಕ್ರೀಡಾಪಟುಗಳು, ವ್ಯವಸ್ಥಾಪಕರು ಹಾಗೂ ತರಬೇತುದಾರರು ಸೇರಿದಂತೆ ಒಟ್ಟು 3935 ಜನರಿಗೆ ವಸತಿ, ಊಟ ಹಾಗೂ ಸಾರಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಅವಳಿ ನಗರದ ವಿವಿಧ ವಿದ್ಯಾರ್ಥಿ ನಿಲಯಗಳನ್ನು ಕ್ರೀಡಾಪಟುಗಳ ವಾಸ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಅಲ್ಲಿದ್ದ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಊಟೋಪಚಾರಕ್ಕೆ ಸೂಕ್ತ ವ್ಯವಸ್ಥೆಯನ್ನೂ ಮಾಡಲಾಗಿದೆ. ಕ್ರೀಡಾಪಟುಗಳನ್ನು ಸಂಬಂಧಪಟ್ಟ ಕ್ರೀಡಾಂಗಣಕ್ಕೆ ಕರೆದೊಯ್ಯಲು 45 ವಾಹನ ವ್ಯವಸ್ಥೆ ಮಾಡಲಾಗಿದ್ದು, ಶಿಕ್ಷಣ ಸಂಸ್ಥೆಗಳು ಕ್ರೀಡಾಕೂಟದ ಯಶಸ್ಸಿಗೆ ಈ ಕೊಡುಗೆ ನೀಡಿದ್ದಾರೆ. ಕ್ರೀಡಾಪಟುಗಳು ಉಳಿದುಕೊಳ್ಳವ ಮಾಹಿತಿ, ಊಟದ ವ್ಯವಸ್ಥೆ, ಕ್ರೀಡಾಂಗಣ ಮತ್ತಿತರ ಮಾಹಿತಿ ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಬಿಡುಗಡೆ ಮಾಡಿರುವ ಮೊಬೈಲ್‌ ಆ್ಯಪ್‌ನಲ್ಲಿ ಲಭ್ಯ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ‘ಉತ್ತರ ವಲಯದಿಂದ 300ಕ್ಕೂ ಹೆಚ್ಚು ಪೊಲೀಸರನ್ನು ಕರೆಯಿಸಲಾಗುತ್ತಿದೆ. ಮೀಸಲು ಪಡೆ ತುಕಡಿ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದರು.

‘ಮಹಿಳಾ ಕ್ರೀಡಾಪಟುಗಳು ಉಳಿದುಕೊಂಡಿರುವ ಸ್ಥಳಗಳಲ್ಲಿ ಮಹಿಳಾ ಪೊಲೀಸರು ಇರುತ್ತಾರೆ. ಕ್ರೀಡಾಂಗಣದ ಬಳಿ, ಊಟದ ಕೇಂದ್ರ, ರಸ್ತೆ ಇತ್ಯಾದಿ ಕಡೆ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಅವಳಿ ನಗರದಲ್ಲಿ 4ರಿಂದ 5 ಕಡೆ ದಿನದ 24 ತಾಸಿನ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಹಗಲಿನಲ್ಲಿ 6 ಹಾಗೂ ರಾತ್ರಿಯಲ್ಲಿ 4 ಎರ್ಟಿಗಾ ವಾಹನದಲ್ಲಿ ಪೊಲೀಸ್‌ ಪಡೆ ಗಸ್ತು ತಿರುಗಲಿದೆ. ಪೊಲೀಸ್‌ ನಿಯಂತ್ರಣ ಕೊಠಡಿ ಸಂಖ್ಯೆ 100ರಲ್ಲಿ ವಿಶೇಷ ಘಟಕ ಸ್ಥಾಪಿಸಲಾಗಿದೆ. ನೆರವಿನ ಅಗತ್ಯವಿರುವವರು ಯಾವುದೇ ದೂರವಾಣಿಯಿಂದ ಈ ಸಂಖ್ಯೆಗೆ ಕರೆ ಮಾಡಬಹುದು’ ಎಂದರು.

ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ ‘ಪಾಲಿಕೆ ಅಧಿಕಾರಿಗಳು ಪೂರ್ಣ ಸೇವೆ ನೀಡಲಿದ್ದಾರೆ. ಸ್ವಚ್ಛತಾ ಸಿಬ್ಬಂದಿ, ಆರೋಗ್ಯ, ನೀರು ಸರಬರಾಜು ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿಗಳು ಕ್ರೀಡಾಕೂಟ ಯಶಸ್ಸಿಗೆ ಕಂಕಣಬದ್ಧರಾಗಿದ್ದಾರೆ. ಪಾಲಿಕೆ ಹಾಗೂ ಸಾರಿಗೆ ಇಲಾಖೆಗಳು ಸಹಾಯವಾಣಿ ಆರಂಭಿಸಿವೆ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಓ ಆರ್‌.ಸ್ನೇಹಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಡಿಸಿಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.

ಒಲಿಂಪಿಕ್‌ ಕೂಟಕ್ಕೆ ಜಾನಪದದ ರಂಗು
ಎಂಟು ದಿನಗಳ ಕಾಲ ನಡೆಯಲಿರುವ ವೈವಿಧ್ಯಮಯ ಕ್ರೀಡೆಗಳ ಹಣಾಹಣಿಗೆ ವಿದ್ಯಾನಗರಿ ಸಜ್ಜುಗೊಂಡಿದ್ದು, ಕ್ರೀಡಾಕೂಟದ ಆರಂಭಕ್ಕೆ ವಿಶಿಷ್ಠ ಜಾನಪದದ ರಂಗು ನೀಡಲು ಕಲಾವಿದರು ಕಾಯುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಕಲಾಪ್ರಕಾರಗಳ ತಂಡಗಳು ಇಡೀ ಕೂಟಕ್ಕೆ ಸಾಂಸ್ಕೃತಿಕ ಆಯಾಮ ನೀಡಲಿವೆ.

ಮೂರು ದಶಕಗಳ ನಂತರ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಯಶಸ್ವಿಗೊಳಿಸಲು ಮತ್ತು ಸ್ಮರಣೀಯಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ಆರ್.ಎನ್‌.ಶೆಟ್ಟಿ ಕ್ರೀಡಾಂಗಣದ ಮಧ್ಯಭಾಗದಲ್ಲಿ ಬೃಹತ್ ವೇದಿಕೆ ಸಿದ್ದಗೊಳಿಸಲಾಗಿದ್ದು, ಉದ್ಘಾಟನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ನಡೆಯಲಿವೆ. 

ಶುಕ್ರವಾರ (ಇಂದು) ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಕ್ರೀಡಾಜ್ಯೋತಿ ಹಸ್ತಾಂತರಿಸಿ, ಕ್ರೀಡಾಧ್ವಜ ಆರೋಹಣಗೊಳಿಸಲಿದ್ದಾರೆ. ಕ್ರೀಡಾಕೂಟದ ಆರಂಭಕ್ಕೆ ಮೊದಲು ಇಲ್ಲಿನ ಕಲಾಭವನದಿಂದ ಆರ್.ಎನ್‌.ಶೆಟ್ಟಿ ಸ್ಟೇಡಿಯಂವರೆಗೆ ವಿವಿಧ ಜಾನಪದ ಕಲಾತಂಡಗಳು, ಕ್ರೀಡಾಪಟುಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಕ್ರೀಡಾ ಜಾಥಾ ನಡೆಯಲಿದೆ.

ಜಾಥಾದಲ್ಲಿ ಡೊಳ್ಳು, ಜಗ್ಗಲಿಗೆ, ಕರಡಿ ಮಜಲು, ಪಟ್ಟದ ಕುಣಿತ, ನಗಾರಿ, ಕಹಳೆ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಅನಾವರಣಗೊಳ್ಳಲಿವೆ. ಕೂಟದ ಆರಂಭಕ್ಕೂ ಮೊದಲು ಮತ್ತು ನಂತರ ಹೊರ ಜಿಲ್ಲೆಗಳ ಕಲಾವಿದರು ಮತ್ತು ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.  ಇದರೊಂದಿಗೆ ಆಕರ್ಷಕ ಸಿಡಿಮದ್ದು ಪ್ರದರ್ಶನ ಕೂಡಾ ಏರ್ಪಡಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ನಗರಕ್ಕೆ ಬರುತ್ತಿದ್ದು, ಹಲವು ಕ್ರೀಡಾಪಟುಗಳು ಈಗಾಗಲೇ ಬಂದಿದ್ದಾರೆ. ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ವಿವಿಧ ಕ್ರೀಡಾಂಗಣಗಳಲ್ಲಿ ತಾಲೀಮು ನಡೆಸುತ್ತಿದ್ದು, ಇದು ಇಲ್ಲಿನ ಕ್ರೀಡಾಪ್ರೇಮಿಗಳ ಆಕರ್ಷಣೆಗೆ ಕಾರಣವಾಗಿದೆ. 
ಅವಳಿನಗರದಲ್ಲಿ ಕ್ರೀಡಾಕೂಟಕ್ಕೆ ಅಗತ್ಯವಿರುವ ಮೈದಾನಗಳನ್ನು ಸಿದ್ಧಗೊಳಿಸಲಾಗಿದ್ದು, ವಿವಿಧ ಕ್ರೀಡಾಂಗಣಗಳ ಸೌಂದರೀಕರಣ ಕೆಲಸ ಕೂಡಾ ಪೂರ್ಣಗೊಂಡಿದೆ. ಅಲ್ಲದೇ ಕ್ರೀಡಾಂಗಣದ ಮುಂಭಾಗದಲ್ಲಿರುವ ರಸ್ತೆಗಳನ್ನು ರಿಪೇರಿ ಮಾಡಲಾಗಿದ್ದು, ಕ್ರೀಡಾಪಟುಗಳ ಊಟ, ವಸತಿ ವ್ಯವಸ್ಥೆಗಳು ಪೂರ್ಣಗೊಂಡಿವೆ. ಕ್ರೀಡಾಕೂಟದ ಸಂದರ್ಭದಲ್ಲಿ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸ್‌ ಇಲಾಖೆ ಹಲವು ಮಾರ್ಗಗಳಲ್ಲಿ ಬದಲಾವಣೆ ಸೂಚಿಸಿದೆ.

ನಗರದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಒಲಿಂಪಿಕ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಜರುಗುವುದರಿಂದ ಪೊಲೀಸ್‌ ಇಲಾಖೆ ಮಾರ್ಗ ಬದಲಾವಣೆ ಈ ಕೆಳಗಿನಂತಿವೆ.

ಆಲೂರು ವೆಂಕಟರಾವ್‌ (ಜ್ಯುಬ್ಲಿ) ವೃತ್ತದಿಂದ ಕೆಸಿಡಿ ಸಪ್ತಾಪೂರ ಭಾವಿ ಹಾಗೂ ಶ್ರೀನಗರ ಕಡೆ ಹೋಗುವ ಪ್ರಯಾಣಿಕರು ತಮ್ಮ ವಾಹನವನ್ನು ಜುಬ್ಲಿ ವೃತ್ತ, ಕೋರ್ಟ್ ವೃತ್ತ, ಮುಖ್ಯ ಅಂಚೆ ಕಚೇರಿ, ಹಿಂದಿ ಪ್ರಚಾರ ಸಭಾ, ಉದಯ ವಿದ್ಯಾರ್ಥಿ ನಿಲಯ, ವಿವೇಕಾನಂದ ವೃತ್ತ ಹಾಗೂ ಅಲ್ಲಿಂದ ಸಪ್ತಾಪುರಕ್ಕೆ ಬಂದು ಕೂಡುವುದು.

ಜುಬ್ಲಿ ವೃತ್ತದಿಂದ ದಾಸನಕೊಪ್ಪ ವೃತ್ತದ ಕಡೆ ಹೋಗುವ ಪ್ರಯಾಣಿಕರು ----ಜುಬ್ಲಿ ವೃತ್ತದಿಂದ ಹಳೇ ಎಸ್‌ಪಿ ವೃತ್ತ, ಐಸ್ ಫ್ಯಾಕ್ಟರಿ, ರಪಾಟಿ ಕಲ್ಯಾಣ ಮಂಟಪ, ಹಳಿಯಾಳ ನಾಕಾ ದಾಸನಕೊಪ್ಪ ವೃತ್ತಕ್ಕೆ ಕೂಡಬಹುದು.

ಕರ್ನಾಟಕ ವಿಶ್ವವಿದ್ಯಾಲಯದಿಂದ ಬರುವಂತಹ ಎಲ್ಲ ವಾಹನ ಸವಾರರು ಶ್ರೀನಗರ ಸಪ್ತಾಪೂರ ಮೂಲಕ ದಾಸನಕೊಪ್ಪ ವೃತ್ತ, ಹಳೇ ಎಸ್‌ಪಿ ಆಫೀಸ್ ವೃತ್ತ, ನಾಯಕ್ ಅಡ್ಡಾ ಮೂಲಕ ಸಿಬಿಟಿಗೆ ಸೇರಬಹುದು.

ಸವದತ್ತಿ ರಸ್ತೆ ಹಾಗೂ ನವಲಗುಂದ ಮಾರ್ಗವಾಗಿ ಸಂಚರಿಸುವ ವಾಹನಗಳು ಶಿವಾಜಿ ವೃತ್ತದಿಂದ ಮರಾಠ ಕಾಲೋನಿ ಮೂಲಕ ಹಳೇ ಎಸ್‌ಪಿ ಸರ್ಕಲ್ ಮೂಲಕ ಹೊಸ ಬಸ್‌ನಿಲ್ದಾಣ ಕಡೆ ಹೋಗುವುದು. ಹುಬ್ಬಳ್ಳಿಗೆ ಹೋಗುವ ವಾಹನ ಸವಾರರು ನಾಯಕ್ ಅಡ್ಡಾ, ಜುಬ್ಲಿ ವೃತ್ತ  ಮೂಲಕ ಹೋಗಬೇಕು.

ಶ್ರೀನಗರ, ಕರ್ನಾಟಕ ವಿವಿ ಸಪ್ತಾಪೂರ ಮಾರ್ಗವಾಗಿ ಸಿಟಿ ಬಸ್ಸುಗಳು ಹಾಗೂ ಎಲ್ಲ ತರಹದ ವಾಹನ ಸವಾರರು ಜುಬ್ಲಿ  ವೃತ್ತ ಮೂಲಕ ರೈಲ್ವೇ ನಿಲ್ದಾಣ, ಮುಖ್ಯ ಅಂಚೆ ಕಚೇರಿ, ಹಿಂದಿ ಪ್ರಚಾರ ಸಭಾ ವೃತ್ತ, ಉದಯ ಹಾಸ್ಟೆಲ್‌, ಸಪ್ತಾಪೂರಭಾವಿ ಮೂಲಕ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT