ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತಲೆಮಾರಿನ ಸಂಗೀತದ ನಂಟು

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪಂಜಾಬ್‌ನ ಕಪುರ್ತಲಾ ಮಹಾರಾಜನ ಕುದುರೆ ಜೋರಾಗಿ ಸಾಗಿಬರುವಾಗ ದಿಢೀರನೆ ಯುವಕನೊಬ್ಬ ಅಡ್ಡಗಟ್ಟಿದ. ಕುದುರೆ ಲಗಾಮು ಎಳೆದ ಮಹಾರಾಜ ಕೋಪದ ಕಣ್ಣುಗಳನ್ನು ಬೀರುತ್ತಾ ಕೆಳಗೆ ನೆಗೆದರು. ಆ ಯುವಕನ ಕಥೆ ಮುಗಿಯಿತು ಎಂದು ಅಲ್ಲಿದ್ದವರು ಎಣಿಸಿದರು. ಎರಡೂ ಕೈಗಳನ್ನು ಜೋಡಿಸಿದ್ದ ಯುವಕ ತಾನು ಸಂಗೀತ-ನೃತ್ಯ ಕಲಿಯಲು ಧನ ಸಹಾಯ ಮಾಡಿ ಎಂದು ಅಂಗಲಾಚಿದ. ಮಹಾರಾಜನ ಮನಸ್ಸು ಕರಗಿತು.

ಅವರು ಕೊಟ್ಟ ಶುಲ್ಕವನ್ನು ಉತ್ತರಾಖಂಡದ ಆಲ್ಮೋರದಲ್ಲಿರುವ ಉದಯ್ ಶಂಕರ್ ಕಲ್ಚರಲ್ ಅಕಾಡೆಮಿಗೆ ಕಟ್ಟಿದ ಯುವಕ, ಅಲ್ಲಿ ನೃತ್ಯ ಪ್ರೀತಿಯ ಗುಂಗಿಗೆ ಬಿದ್ದ. ಗುರುದತ್ ಅಲ್ಲಿ ಸಹಪಾಠಿ. ಅಂತರ್ಮುಖಿ ಗುರುದತ್‌ಗೆ ಓದುವ ಹವ್ಯಾಸ. ರಾತ್ರಿ ಹತ್ತು ಗಂಟೆಯಲ್ಲಿ ಮೌನ ಬಯಸುತ್ತಿದ್ದ ವ್ಯಕ್ತಿ. ಮಹಾರಾಜನ ಶುಲ್ಕ ಪಡೆದು ಕಲಿಯುತ್ತಿದ್ದ ಯುವಕನಿಗೆ ಸಂಗೀತಕ್ಕೆ ನಡುರಾತ್ರಿಯಲ್ಲೂ ಕುಣಿಯುವ ಹುಕಿ. ಗುರು ಹಾಗೂ ಆ ಯುವಕನ ನಡುವೆ ಒಂದೂವರೆ ತಾಸು ಜಗಳ ವಾಯಿತು. ಉದಯ್ ಶಂಕರ್ ಬಂದು ರಾಜಿ ಮಾಡಿದರು. ಹಾಡು-ಕುಣಿತ-ಸಾಹಿತ್ಯ ಅಣ್ಣ-ತಮ್ಮಂದಿರೆಂದರು.

ಸರ್ದಾರ್ ಮಲಿಕ್ ತಮ್ಮದೇ ಕಥೆಯನ್ನು ಮಗ ಅನು ಮಲಿಕ್‌ಗೆ ಹೇಳಿದರು. ಅನು ಕಣ್ಣಾಲಿಗಳು ತುಂಬಿದ್ದವು. ಈ ಕಥೆಯನ್ನು ಹೇಳುವ ಹೊತ್ತಿಗೆ ಸರ್ದಾರ್ ಮಲಿಕ್ ಸಿನಿಮಾ ಸಂಗೀತ ಸಂಯೋಜಕರಾಗಿ ವಿಫಲರಾಗಿ ದ್ದರು. ನೃತ್ಯಪ್ರೀತಿಯಿಂದ ಸಂಗೀತ ಪ್ರೀತಿಗೆ ಜಿಗಿದು, ಸಿನಿಮಾದ ಚಾಂಚಲ್ಯವನ್ನು ಹತ್ತಿರದಿಂದ ಕಂಡಿದ್ದ ಸರ್ದಾರ್‌ಗೆ ಮಗ ಏನನ್ನಾದರೂ ಸಾಧಿಸಲಿ ಎಂಬ ಹೆಬ್ಬಯಕೆ.  ಅನು ಮಲಿಕ್ ಅದೊಂದು ದಿನ ಅಪ್ಪನಿಗೆ ಆತ್ಮವಿಶ್ವಾಸದಿಂದ ಹೇಳಿದರು: ‘ನಾನು ದೊಡ್ಡ ದೊಡ್ಡ ಬ್ಯಾನರ್‌ನ ಹಿಂದಿ ಚಿತ್ರಗಳಿಗೆ ಸಂಗೀತ ಕೊಡುತ್ತೇನೆ. ನಿಮಗೆ ಸಿಗದೇ ಹೋದದ್ದನ್ನು ನಾನು ತರುತ್ತೇನೆ’.

ಹೀಗೆ ಸುಮ್ಮನೆ ವೀರಾವೇಶ ದಲ್ಲಿ ಅನು ಅಪ್ಪನಿಗೆ ವಾಗ್ದಾನ ಮಾಡಿರಲಿಲ್ಲ. ಏಳನೇ ವಯಸ್ಸಿನಿಂದ ಸಂಗೀತ ಕಲಿಯುತ್ತಿದ್ದ ಅವರು, 17 ತುಂಬುವ ಹೊತ್ತಿಗಾಗಲೇ ಸ್ವರ ಸಂಯೋಜನೆ ಮಾಡಲು ಆರಂಭಿಸಿದರು. ಆರ್. ಡಿ. ಬರ್ಮನ್, ಲಕ್ಷ್ಮೀಕಾಂತ್-ಪ್ಯಾರೆಲಾಲ್, ಕಲ್ಯಾಣ್ ಜೀ- ಆನಂದ್ ಜೀ, ರಾಜೇಶ್ ರೋಶನ್, ಬಪ್ಪಿ ಲಹರಿ ತರಹದವರು ತಮ್ಮದೇ ಮಾರುಕಟ್ಟೆ ರೂಪಿಸಿಕೊಂಡಿದ್ದ ಸಂದರ್ಭ ಅದು. ಮೊಹಮ್ಮದ್ ರಫಿ ಹಾಡಿದ ‘ಮೊಹಬ್ಬತ್ ರಂಗ್ ಲಾತೀ ಹೈ’, ಕಿಶೋರ್ ಕಂಠದ  ‘ತೇರಾ ಚೆಹೆರಾ ಮುಝೆ’ ತರಹದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದು ಅನು ಮಲಿಕ್.

ನಿಧ ನಿಧಾನವಾಗಿ ಸಿನಿಮಾ ಮಾಯಾಂಗನೆಯನ್ನು ಒಲಿಸಿಕೊಂಡ ಅವರು ಅಪ್ಪನ ಈಡೇರದ ಕನವರಿಕೆಗಳನ್ನೂ ನೇವರಿಸಿದರು.
ಬಾಲ್ಯದಲ್ಲಿ ಅವರು ಕಂಡ ಅಪ್ಪನ ಕಡುಕಷ್ಟಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ‘ಸಾರಂಗ’ ಸಿನಿಮಾ ಹಾಡುಗಳಿಗೆ ಸರ್ದಾರ್ ಮಲಿಕ್ ಸ್ವರ ಸಂಯೋಜನೆ ಮಾಡಿದ್ದರು. ಸಿನಿಮಾ ನಿರ್ಮಾಪಕರಿಗೆ 40 ಲಕ್ಷ ರೂಪಾಯಿ ಲಾಭವನ್ನು ಆ ಕಾಲದಲ್ಲಿ ತಂದಿತ್ತು. ಆದರೆ, ಸರ್ದಾರ್ ಬಳಿ ತರಕಾರಿ ತರಲು ಕೂಡ ಹಣವಿರಲಿಲ್ಲ. ಆಗ ಅವರ ಮನೆಗೆ ನೂರಾರು ಪತ್ರಗಳು ಬಂದವು. ಹಾಡುಗಳ ಮೆಚ್ಚಿಕೊಂಡು ಅಭಿಮಾನಿ ಗಳು ಬರೆದಿದ್ದ ಪತ್ರಗಳವು. ಉತ್ತರ ಬರೆಯಲು ಒಂದು ಕಾರ್ಡ್ ತರಲೂ ಆಗ ಸರ್ದಾರ್ ಕೈಲಿ ಕಾಸಿರಲಿಲ್ಲ. ಅಭಿಮಾನಿ ಗಳಲ್ಲಿ ಕೆಲವರು ‘ಈ ಮನುಷ್ಯನಿಗೆ ದುರಹಂಕಾರ’ ಎಂದು ದೂರಿದರು.

ಅಪ್ಪ ತಾನೂ ಹೊದ್ದು ಮಕ್ಕಳ ಮೇಲೂ ಹೊದಿಸಿದ್ದ ಕಷ್ಟಗಳ ಚಾದರವನ್ನು ಕಿತ್ತೊಗೆದ ಅನು ಮಲಿಕ್ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಮೂರು ದಶಕ ಛಾಪು ಮೂಡಿಸಿದರು.

‘ಅಪ್ಪ ಯಾವಾಗಲೂ ತಾನು ಬೇರೆ ತರಹ ಎನ್ನುತ್ತಿದ್ದರು. ಅದು ನಿಜ. ಅವರು ತಮ್ಮ ಕಷ್ಟಗಳ ದರ್ಶನ ಮಾಡಿಸಿ, ನಾವು ಸುಖಿಗಳಾಗಲು ಪ್ರೇರಣೆ ನೀಡಿದರು’ ಎಂದು ಹನಿಗಣ್ಣಾಗುವ ಅನು, ಈಗ ಮಗಳ ಕಂಠಕ್ಕೆ ಮಾರುಕಟ್ಟೆ ಒದಗಿಸುವ ಕನಸು ಕಾಣುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT