ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪುನರ್‌ವಿಂಗಡಣೆ ನಿರೀಕ್ಷೆಯಲ್ಲಿ ಪಾಲಿಕೆ

ಜನಸಂಖ್ಯೆಯೇ ಪ್ರಮುಖ ಮಾನದಂಡವಾಗಲಿ: ನಗರಾಭಿವೃದ್ಧಿ ಇಲಾಖೆ ಸೂಚನೆ
Last Updated 6 ಫೆಬ್ರುವರಿ 2017, 8:54 IST
ಅಕ್ಷರ ಗಾತ್ರ

ಬಳ್ಳಾರಿ: 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಮಹಾನಗರ ಪಾಲಿಕೆಯು ಕ್ಷೇತ್ರ ಪುನರ್‌ವಿಂಗಡಣೆಯ ನಿರೀಕ್ಷೆಯಲ್ಲಿದೆ.

2013ರಲ್ಲಿ ಪಾಲಿಕೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ, 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಸಮಯಾವಕಾಶ ಇಲ್ಲದೇ ಇದ್ದುದರಿಂದ 2001ರ ಜನಗಣತಿಯನ್ನೇ ಆಧರಿಸಿ ಚುನಾವಣೆಯನ್ನು ನಡೆಸಲಾಗಿತ್ತು. ಇದೀಗ ಮುಂದಿನ ವರ್ಷ ಆಡಳಿತ ಅವಧಿಯು ಪೂರ್ಣಗೊಳ್ಳುತ್ತಿರುವುದರಿಂದ, ಪಾಲಿಕೆಯ ಕ್ಷೇತ್ರಗಳ ಪುನರ್‌ವಿಂಗಡಣೆ ನಡೆಯಲಿದೆ.

ಜನಸಂಖ್ಯೆ ಮಿತಿ: ಕ್ಷೇತ್ರಗಳ ಪುನರ್‌ವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಪ್ರಮುಖ ಮಾನದಂಡವನ್ನಾಗಿರಿಸಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯು ಸೂಚನೆ ನೀಡಿದೆ. ಅದರಂತೆ, ಪ್ರತಿ ಕ್ಷೇತ್ರದಲ್ಲಿ 10 ಸಾವಿರದಿಂದ 13 ಸಾವಿರದವರೆಗಿನ ಜನಸಂಖ್ಯೆ ಇರಬೇಕು. ಅದರಂತೆ ಕನಿಷ್ಠ ಜನಸಂಖ್ಯೆಯ ಮಾನದಂಡವನ್ನು ಗಮನದಲ್ಲಿಟ್ಟುಕೊಂಡರೆ, ಮುಂದಿನ ಚುನಾವಣೆಯ ಹೊತ್ತಿಗೆ 41 ವಾರ್ಡ್‌ಗಳು ಅಸ್ತಿತ್ವದಲ್ಲಿರುತ್ತವೆ.

ಗರಿಷ್ಠ ಜನಸಂಖ್ಯೆಯ ಮಾನದಂಡವನ್ನು ಗಮನದಲ್ಲಿಟ್ಟುಕೊಂಡರೆ ಈ ಸಂಖ್ಯೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. 2011ರ ಬಳಿಕ ಪ್ರತಿ ವರ್ಷ ಹೆಚ್ಚಿರುವ ಜನಸಂಖ್ಯೆಯನ್ನೂ ಪಾಲಿಕೆಪರಿಗಣಿಸಿಯೇ ಪ್ರಕ್ರಿಯೆಯನ್ನು ಆರಂಭಿಸಬೇಕಾಗುತ್ತದೆ.

ದೂರ–ಭಾರ: ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡುವ ಸಂದರ್ಭದಲ್ಲಿ, ಆ ವ್ಯಾಪ್ತಿಯ ಪ್ರದೇಶಗಳು ಕ್ಷೇತ್ರಗಳಿಂದ ಹೆಚ್ಚು ದೂರ ಇರದಂತೆ ಎಚ್ಚರಿಕೆ ವಹಿಸಬೇಕು. ಬಹುತೇಕ ಪ್ರದೇಶಗಳು ಭೌಗೋಳಿಕವಾಗಿ ಕೂಡಿಕೊಂಡಿರಬೇಕು. ಸೌಲಭ್ಯ, ಸಂವಹನ ಮತ್ತು ಸಾರ್ವಜನಿಕರಿಗೆ ಅನುಕೂಲದ ದೃಷ್ಟಿಯಿಂದ ಪೂರಕವಾಗಿರುವಂತೆ ಪುನರ್‌ವಿಂಗಡಣೆ ನಡೆಯಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಕಳೆದ ವರ್ಷ ನವೆಂಬರ್‌ನಲ್ಲಿ ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಯಾವುದೇ ವಾರ್ಡಿಗೆ ಸೇರಿದ ಪ್ರದೇಶವು ಇನ್ನೊಂದು ವಾರ್ಡಿಗೆ ಸೇರಿದ ಪ್ರದೇಶಕ್ಕೂ ವಿಸ್ತರಿಸಿರಬಾರದು ಅಥವಾ ಪ್ರತ್ಯೇಕ ದ್ವೀಪದಂತೆಯೂ ಉಳಿಯಬಾರದು ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ಅದರಂತೆ, ಪುನರ್‌ವಿಂಗಡಣೆ ನಡೆದರೆ, ನಗರದ ಹೊರವಲಯದಲ್ಲಿರುವ ಹಲವು ಪ್ರದೇಶಗಳ ಜನರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಮೂಡಿದೆ.

ದೊಡ್ಡ ವಾರ್ಡ್‌: ನಗರದಲ್ಲಿ ಹೆಚ್ಚು ಭೌಗೋಳಿಕ ವಿಸ್ತೀರ್ಣವಿರುವ ಹಲವು ವಾರ್ಡ್‌ಗಳಿವೆ. ಪುನರ್‌ವಿಂಗಡಣೆಯಿಂದ ಈ ವಾರ್ಡ್‌ಗಳ ವ್ಯಾಪ್ತಿ ಕುಗ್ಗುವ ಸಾಧ್ಯತೆಯೂ ಇದೆ. ಅದೇ ರೀತಿ, ಕಡಿಮೆ ಭೌಗೋಳಿಕ ವಿಸ್ತೀರ್ಣವುಳ್ಳ ವಾರ್ಡ್‌ಗಳ ವ್ಯಾಪ್ತಿ ಹಿಗ್ಗಬಹುದು ಎಂದು ಪಾಲಿಕೆ ಆಯುಕ್ತ ಮಂಜುನಾಥ ನಲ್ವಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪುನರ್‌ ವಿಂಗಡಣೆಗೆ ಪೂರ್ವಭಾವಿಯಾಗಿ ಕಂದಾಯ ವಿಭಾಗ ಮತ್ತು ಎಂಜಿನಿಯರಿಂಗ್‌ ವಿಭಾಗದ ಸಭೆಯನ್ನು ಏರ್ಪಡಿಸಿ ಚರ್ಚಿಸಬೇಕು. ನಂತರ ನಗರದ ಈಗಿನ ನಕ್ಷೆಯನ್ನು ತಯಾರಿಸಬೇಕು ಎಂದು ಪಾಲಿಕೆಯ ಸಹಾಯಕ ಕಾರ್ಯದರ್ಶಿ ಈಶ್ವರಪ್ಪ ತಿಳಿಸಿದ್ದಾರೆ.

*
2011ರ ಬಳಿಕ ನಗರದಲ್ಲಿ ಪ್ರತಿ ವರ್ಷ ಹೆಚ್ಚಿರುವ ಜನಸಂಖ್ಯೆಯನ್ನೂ ಪರಿಗಣಿಸಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಲಾಗುವುದು.
–ಮಂಜುನಾಥ ನಲ್ವಡಿ,
ಪಾಲಿಕೆ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT