ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಗಾವಲು ಸಾಧನ ಎಕ್ಸಿಸ್‌ ಕಮ್ಯುನಿಕೇಶನ್ಸ್‌ ಹೆಗ್ಗಳಿಕೆ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ನಮ್ಮ ಸುತ್ತಮುತ್ತ  ನಡೆಯುವ ಸರಗಳ್ಳತನ, ದರೋಡೆ, ಕೊಲೆ, ಸುಲಿಗೆಯಂತಹ ಬಹುತೇಕ ಅಪರಾಧ ಪ್ರಕರಣಗಳು ಸಿಸಿಟಿವಿಯಲ್ಲಿ ಸೆರೆಯಾದರೂ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲವೇಕೆ?’

–ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟವರು ಎಕ್ಸಿಸ್‌ ಕಮ್ಯುನಿಕೇಶನ್ಸ್‌ ದೇಶೀಯ ಮುಖ್ಯಸ್ಥ ಸುಧೀಂದ್ರ ಹೊಳ್ಳ. 

ಮೇಲ್ನೋಟಕ್ಕೆ ಪ್ರಶ್ನೆ  ಸರಳವಾಗಿ ಕಂಡರೂ, ಅದರ ಹಿಂದೆ ಕೋಟ್ಯಂತರ ರೂಪಾಯಿ  ವಹಿವಾಟು ನಡೆಸುವ ಇಡೀ ಸಿಸಿಟಿವಿ ಉದ್ಯಮವೇ ತಳಕು ಹಾಕಿಕೊಂಡಿತ್ತು.

‘ಇದಕ್ಕೆ ಕಾರಣ ಸಿಸಿಟಿವಿಯಲ್ಲಿ ಸೆರೆ ಸಿಕ್ಕ ದೃಶ್ಯಗಳ ಕಳಪೆ ಗುಣಮಟ್ಟ’ ಎಂಬ ಒಂದು ಸಾಲಿನ ಅವರ ಉತ್ತರ  ಅಪರಾಧ ಜಗತ್ತು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ನಾನಾ ಮುಖಗಳನ್ನು ತೆರೆದಿಟ್ಟಿತು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಭದ್ರತೆ ಸೇರಿದಂತೆ ನಾನಾ ಆಯಾಮಗಳೂ ಇದಕ್ಕೆ ಇವೆ.

ಅತ್ಯುತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ,   ಐ.ಪಿ ನೆಟ್‌ವರ್ಕ್‌, ವಿಡಿಯೊ ಕ್ಯಾಮೆರಾ ತಯಾರಿಕೆ ಮತ್ತು ಮಾರಾಟದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ವೀಡನ್‌ ಮೂಲದ ಎಕ್ಸಿಸ್‌ ಕಮ್ಯುನಿಕೇಶನ್ಸ್‌ ಕಂಪೆನಿ ದೇಶೀಯ ಮತ್ತು ಸಾರ್ಕ್‌ ಪ್ರಾದೇಶಿಕ ಮುಖ್ಯಸ್ಥ ಹೊಳ್ಳ ಅವರು ಪುಟ್ಟ ‘ಸಿಸಿಟಿವಿ ಕ್ಯಾಮೆರಾ’ದ ಹಿಂದಿನ  ಬಹುದೊಡ್ಡ ಉದ್ಯಮ ಜಗತ್ತನ್ನೇ ಅನಾವರಣಗೊಳಿಸುತ್ತಾ ಹೋದರು. 

ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿದರೆ ಸರಗಳ್ಳತನ, ಕೊಲೆ, ದರೋಡೆಗಳಂತಹ  ಘಟನೆ ನಡೆದಿರುವುದು ಗೋಚರಿಸುತ್ತದೆಯೇ ಹೊರತು ಅಪರಾಧಿಗಳ ಮುಖ, ಬಳಸಿದ ವಾಹನ, ಅದರ ಬಣ್ಣ, ಸಂಖ್ಯಾಫಲಕ ಸ್ಪಷ್ಟವಾಗಿ ಗೋಚರಿಸುವುದಿಲ್ಲ.  ಪೊಲೀಸರು ಸೋಲುವುದೇ ಇಲ್ಲಿ.

ಕಳಪೆ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಸೆರೆ ಹಿಡಿದ ದೃಶ್ಯಗಳಲ್ಲಿ ಅಪರಾಧಿಗಳ ತೊಟ್ಟ ಬಟ್ಟೆ, ಬಳಸಿದ ವಾಹನಗಳ ಬಣ್ಣವೇ ಬದಲಾಗಿರುತ್ತದೆ. ಸಂತ್ರಸ್ತರು ಹೇಳುವ ವಿವರಣೆಗಳಿಗೂ ಸಿಸಿಟಿವಿದೃಶ್ಯಾವಳಿಗಳಿಗೂ ಬಣ್ಣಗಳಿಗೂ ಒಂದೊಕ್ಕೊಂದು ತಾಳೆಯಾಗುವುದಿಲ್ಲ. ಇದೊಂದೆ ಅಂಶ ಸಾಕು, ನ್ಯಾಯಾಲಯದ ಶಿಕ್ಷೆಯಿಂದ ಅಪರಾಧಿಗಳು ಖುಲಾಸೆಯಾಗಲು.

ಸುರಕ್ಷತೆ ಮತ್ತು ಭದ್ರತೆ ಕುರಿತು ಜನರಲ್ಲಿ ಕಾಳಜಿ ಹೆಚ್ಚುತ್ತಿರುವ ಕಾರಣ ವಾಣಿಜ್ಯ ಮತ್ತು ಗೃಹಬಳಕೆ ವಲಯದಲ್ಲೂ ಸಿಸಿಟಿವಿಗಳಿಗೆ ಭಾರಿ ಬೇಡಿಕೆ  ಹೆಚ್ಚುತ್ತಿದೆ. ಇದರಿಂದಾಗಿ ಮೊಬೈಲ್‌ ನಂತರ ಸಿಸಿಟಿವಿ ಕ್ಯಾಮೆರಾ ಸಾಧನ ಅತಿ ಹೆಚ್ಚು ಮಾರುಕಟ್ಟೆ ಹೊಂದಿದ ಸರಕಾಗಿ ಹೊರಹೊಮ್ಮುತ್ತಿದೆ.

ಸಿಸಿಟಿವಿ ಸುತ್ತ
ಸ್ವೀಡನ್‌ನಲ್ಲಿ 1984ರಲ್ಲಿ ಅಸ್ತಿತ್ವಕ್ಕೆ ಬಂದ ಎಕ್ಸಿಸ್‌ ಕಮ್ಯೂನಿಕೇಷನ್ಸ್‌ ಆರಂಭದಲ್ಲಿ ಪ್ರಿಂಟರ್‌ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿತ್ತು.  ಆದರೆ, 90ರ ದಶಕದಿಂದಾಚೆ ಸಿಸಿಟಿವಿ ತಯಾರಿಕೆಯತ್ತ ಹೊರಳಿತು.

1996ರಲ್ಲಿ ವಿಶ್ವದ ಮೊದಲ ಕೇಂದ್ರೀಕೃತ ಐ.ಪಿ ಕ್ಯಾಮೆರಾ  ‘ಎಕ್ಸಿಸ್‌ ನೆಟ್‌ ಐ 200‘ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೆಗ್ಗಳಿಕೆಯನ್ನು ಎಕ್ಸಿಸ್‌ ಹೊಂದಿದೆ.
ಎಕ್ಸಿಸ್‌ ಕಮ್ಯೂನಿಕೇಷನ್ಸ್‌ ಇದುವರೆಗೂ ವಿಶ್ವದಾದ್ಯಂತ ಸಾವಿರಾರು ಗ್ರಾಹಕರಿಗೆ ಲಕ್ಷಾಂತರ ಸಿಸಿಟಿವಿ ಮತ್ತು ಐ.ಪಿ ನೆಟ್‌ವರ್ಕ್‌ ವಿಡಿಯೊ ಕ್ಯಾಮೆರಾ ವ್ಯವಸ್ಥೆ ಸೇವೆ ನೀಡಿದ ಹೆಗ್ಗಳಿಕೆ ಹೊಂದಿದೆ.

ವಿಶ್ವದ ನಾನಾ ಭಾಗಗಳಲ್ಲಿ ಪ್ರತಿಷ್ಠಿತ ಕಂಪೆನಿಗಳು, ಬ್ಯಾಂಕ್‌, ಸಾರಿಗೆ, ಕೈಗಾರಿಕೆ, ಮಾಲ್‌, ಸರ್ಕಾರ ಮತ್ತು ಸೇನಾ ಭದ್ರತಾ ವ್ಯವಸ್ಥೆಯಲ್ಲಿ ಎಕ್ಸಿಸ್‌ ಹೆಜ್ಜೆ ಗುರುತುಗಳಿವೆ.

ಏನಿದು ಐ.ಪಿ ನೆಟ್‌ವರ್ಕ್‌ ಕ್ಯಾಮೆರಾ?
ಅನಾಲಾಗ್‌ ಸಿಸಿಟಿವಿ ಸಾಧನಗಳು (ಕ್ಲೋಸ್ಡ್‌ ಸರ್ಕೀಟ್‌ ಟೆಲಿವಿಷನ್‌)  ಮೂಲೆ ಸೇರಿವೆ. ಅವುಗಳ ಆಧುನಿಕ ರೂಪವೇ  ಹೈಡೆಫಿನಿಷನ್‌ ಐ.ಪಿ. (ಇಂಟರ್‌ನೆಟ್‌ ಪ್ರೋಟೊಕಾಲ್‌) ನೆಟ್‌ವರ್ಕ್‌ ಸೆಕ್ಯೂರಿಟಿ ಡಿಜಿಟಲ್‌ ಕ್ಯಾಮೆರಾ ಕಣ್ಗಾವಲು ಸಾಧನ. ಸಿಸಿಟಿವಿಗಳಲ್ಲಿಯ ದೃಶ್ಯಗಳಂತೆ ಐ.ಪಿ ನೆಟ್‌ವರ್ಕ್‌ ಕೇಬಲ್‌ ಮೂಲಕ ಕನ್ನ ಹಾಕುವುದು ಸುಲಭವಲ್ಲ.

ಎಕ್ಸಿಸ್‌ ನೆಟ್‌ವರ್ಕ್‌ ವಿಡಿಯೊ ಕ್ಯಾಮೆರಾ ರಾತ್ರಿ ಹೊತ್ತು ಮತ್ತು ಮಂದ ಬೆಳಕಿನಲ್ಲೂ ಕೂಡ ಅತ್ಯಂತ ಕರಾರುವಾಕ್ಕಾಗಿ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯುತ್ತದೆ. ವ್ಯಕ್ತಿಗಳ ಮುಖದ ಮೇಲಿನ ಚರ್ಮದ ಸುಕ್ಕು, ಚುಕ್ಕೆ, ಮೊಡವೆಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ. ಬಣ್ಣಗಳನ್ನೂ ನಿಖರವಾಗಿ ಸೆರೆ ಹಿಡಿಯುವುದು ಎಕ್ಸಿಸ್‌ ಐ.ಪಿ ಕ್ಯಾಮೆರಾಗಳ ಹೆಗ್ಗಳಿಕೆ. ಸಣ್ಣ, ಪುಟ್ಟ ಸಂಗತಿಗಳು ಕೂಡ ಈ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು  ಸಾಧ್ಯವಿಲ್ಲ.  ಅತ್ಯಂತ ಕಡಿಮೆ ಬ್ಯಾಂಡ್‌ವಿಡ್ತ್‌ ತಂತ್ರಜ್ಞಾನ ಹೊಂದಿರುವ ಕಾರಣ ಇನ್ನುಳಿದ ಸಿಸಿಟಿವಿ ಇಲ್ಲವೇ  ಕಣ್ಗಾವಲು   ಕ್ಯಾಮೆರಾಗಳಿಗೆ ಹೋಲಿಸಿದರೆ ಎಕ್ಸಿಸ್‌ ಐ.ಪಿ. ನೆಟ್‌ವರ್ಕ್‌ ಕ್ಯಾಮೆರಾಗಳಲ್ಲಿ ಅತಿ ಹೆಚ್ಚು ಹಳೆಯ ದೃಶ್ಯಾವಳಿ ಸಂಗ್ರಹಿಸಿಡಲು ಸಾಧ್ಯ. 

ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಎಲ್ಲ ವಾತಾವರಣಗಳಲ್ಲೂ  ದೀರ್ಘ ಬಾಳಿಕೆ ಬರುವುದಲ್ಲದೇ ನಿರ್ವಹಣೆ ಮತ್ತು  ದುರಸ್ತಿ ವೆಚ್ಚ ಕೂಡ ತುಂಬಾ ಕಡಿಮೆ.  ಎಕ್ಸಿಸ್‌ ಕ್ಯಾಮೆರಾ ಸಾಧನ ತುಸು ದುಬಾರಿ ಎನಿಸಬಹುದು. ಆದರೆ, ದೀರ್ಘಕಾಲದ ವೆಚ್ಚಗಳನ್ನು ಲೆಕ್ಕಾಚಾರ ಹಾಕಿದಾಗ ಅಗ್ಗವಾಗಲಿದೆ. ಕರ್ನಾಟಕದಲ್ಲೂ ಎಕ್ಸಿಸ್‌ ಮೈಸೂರು ನಗರದ 50ಕ್ಕೂ ಹೆಚ್ಚು ಟ್ರಾಫಿಕ್‌ ಸಿಗ್ನಲ್‌ ಸೇರಿದಂತೆ ಔರಂಗಾಬಾದ್‌, ಗುಜರಾತಿನ ಭಾವನಗರ, ನಾಂದೇಡಗಳಲ್ಲೂ  ಎಕ್ಸಿಸ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಇನ್ನೂ ಈ ಕಂಪೆನಿಯ ಕ್ಯಾಮೆರಾ ಸ್ಥಾನ ಪಡೆದಿಲ್ಲ. ಆದರೆ,  ರಹೇಜಾ ಐ.ಟಿ ಪಾರ್ಕ್,  ಕಾಫಿ ಕಾಫಿಡೇ ಸೇರಿದಂತೆ ನಗರದ ಪ್ರತಿಷ್ಠಿತ ಖಾಸಗಿ ಕಂಪೆನಿ, ಮಾಲ್‌ಗಳಲ್ಲಿ ಅಳವಡಿಸಲಾಗಿದೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಂಪೆನಿಯ ಕ್ಯಾಮೆರಾ ಅಳವಡಿಕೆಗೆ ಮಾತುಕತೆ ನಡೆದಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟ್‌ ಕಚೇರಿ ಹೊಂದಿದೆ. ನೇರವಾಗಿ ಗ್ರಾಹಕರಿಗೆ ನಮ್ಮ ಉತ್ಪನ್ನ ಮಾರಾಟ ಮಾಡುತ್ತಿಲ್ಲ.  ಸದ್ಯ ದೇಶದ 3 ಸಾವಿರ  ಅಧಿಕೃತ ವಿತರಕರ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ.

2006ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.  ಭಾರತದಲ್ಲಿ ತಯರಿಕಾ ಘಟಕವಿಲ್ಲ. ವಿಶ್ವದ ಆರು ರಾಷ್ಟ್ರಗಳಲ್ಲಿರುವ ಘಟಕಗಳಿಂದ ಉತ್ಪನ್ನ ಆಮದು ಮಾಡಿಕೊಳ್ಳಲಾಗುತ್ತಿದೆ.  ‘ಮೇಕ್‌ ಇನ್‌ ಇಂಡಿಯಾ’ಯೋಜನೆ ಅಡಿ ಭಾರತದಲ್ಲೂ ತಯಾರಿಕಾ ಘಟಕ ತೆರೆಯುವ ಯೋಚನೆಯನ್ನು ಎಕ್ಸಿಸ್‌ ಕಮ್ಯೂನಿಕೇಷನ್ಸ್‌ ಹೊಂದಿದೆ.

‘ಸಾರ್ವಜನಿಕ ಸ್ಥಳಗಳಾದ ಬಸ್‌, ರೈಲು ಮತ್ತು ವಿಮಾನ ನಿಲ್ದಾಣ, ಸಾರಿಗೆ , ಟ್ರಾಫಿಕ್‌, ಅಂಗಡಿ, ಮಾಲ್‌, ಶಿಕ್ಷಣ ಸಂಸ್ಥೆ, ಪರೀಕ್ಷಾ ಕೊಠಡಿ, ವಿದ್ಯಾರ್ಥಿ ನಿಲಯ, ಜೈಲು, ಬ್ಯಾಂಕ್‌, ಎಟಿಎಂ, ದೇಶದ ಗಡಿಗಳಲ್ಲಿ ಭದ್ರತಾ ವ್ಯವಸ್ಥೆಗೆ  ನಿಗಾ ವ್ಯವಸ್ಥೆ ಹೆಚ್ಚು ಸೂಕ್ತ’ ಎನ್ನುವುದು ಹೊಳ್ಳ ಅವರ ಅಭಿಪ್ರಾಯ. ಎಲ್ಷ ಕ್ಷೇತ್ರಗಳಲ್ಲೂ ಸೈಬರ್‌ ಸುರಕ್ಷತೆ ಬಗ್ಗೆ ಜಾಗೃತಿ ಮೂಡುತ್ತಿದ್ದು ಕಣ್ಗಾವಲು ಸಾಧನಗಳು ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಏಷ್ಯಾದಲ್ಲಿ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿರುವ ಭಾರತದ ₹2,345 ಕೋಟಿ ಗಾತ್ರದ ಮಾರುಕಟ್ಟೆ 2020ರ ವೇಳೆಗೆ ₹2,720 ಕೋಟಿಗೆ ಹಿಗ್ಗಲಿದೆ.  ಐದು ವರ್ಷದಲ್ಲಿ ದೇಶೀಯ ಮಾರುಕಟ್ಟೆ ವಿಸ್ತರಣೆ ಮತ್ತಷ್ಟು ಹೊಸ ಅವಕಾಶ ಮತ್ತು ಉದ್ಯೋಗ ಸೃಷ್ಟಿಸುವ ಆಶಾವಾದವನ್ನೂ ಐ.ಪಿ ವಿಡಿಯೊ ಕ್ಯಾಮೆರಾ ವಲಯ ಹುಟ್ಟುಹಾಕಿದೆ. 

***

‘ನಮ್ಮ ಉತ್ಪನ್ನಗಳನ್ನು ಆತ್ಮವಿಶ್ವಾಸದಿಂದ ಖರೀದಿಸಿ’ ಎಂಬುದು ನಮ್ಮ ಧ್ಯೇಯ ಘೋಷಣೆ.   ವಿಶ್ವಾರ್ಹತೆ ನಮ್ಮ ವ್ಯಾಪಾರದ ಯಶಸ್ಸಿನ ಸೂತ್ರವೂ ಹೌದು.
- ರೇ ಮೌರಿಸನ್‌ ಜಾಗತಿಕ ಅಧ್ಯಕ್ಷ, ಎಕ್ಸಿಸ್‌ ಕಮ್ಯುನಿಕೇಶನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT