ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ರಸ್ತೆ ಗುಂಡಿ ಮುಚ್ಚುವುದಕ್ಕೂ ಅಡ್ಡಿ

ಟೆಂಡರ್‌ ರದ್ದತಿ ವಿರುದ್ಧ ಜಿವಿಆರ್‌ ಕಂಪೆನಿಯಿಂದ ರಿಟ್‌ ಅರ್ಜಿ
Last Updated 8 ಫೆಬ್ರುವರಿ 2017, 6:46 IST
ಅಕ್ಷರ ಗಾತ್ರ

ಮಂಗಳೂರು: ಶಿರಾಡಿ ಘಾಟಿ ರಸ್ತೆ ಎರಡನೇ ಹಂತದ ಕಾಮಗಾರಿ ವಿವಾದ ದಿನದಿಂದ ಕಗ್ಗಂಟಾಗುತ್ತಿದೆ. ಚೆನ್ನೈ ಮೂಲದ ಕಂಪೆನಿಗೆ ನೀಡಿದ್ದ ಟೆಂಡರ್‌ ರದ್ದುಪಡಿಸಿ ಅಲ್ಪಾವಧಿ ಟೆಂಡರ್‌ ಕರೆದು ಮಳೆಗಾಲದ ಮೊದಲೇ ರಸ್ತೆಯನ್ನು ಸಜ್ಜುಗೊಳಿಸುವ ಯೋಚನೆಯಲ್ಲಿದ್ದ ಲೋಕೋಪಯೋಗಿ ಇಲಾಖೆ ಈಗ ಗುಂಡಿ ಮುಚ್ಚುವ ಕೆಲಸವನ್ನೂ ಮಾಡಲಾಗದಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ.

ತನಗೆ ನೀಡಿದ್ದ ಗುತ್ತಿಗೆಯನ್ನು ರದ್ದು ಮಾಡಿರುವ ಲೋಕೋಪಯೋಗಿ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಚೆನ್ನೈನ ಜಿವಿಆರ್‌ ಇನ್‌ಫ್ರಾ ಪ್ರಾಜೆಕ್ಟ್‌ ಪ್ರೈವೇಟ್‌ ಕಂಪೆನಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದೆ. ಪರಿಣಾಮವಾಗಿ ಹೊಸ ಟೆಂಡರ್‌ ಪ್ರಕ್ರಿಯೆ ಆರಂಭಕ್ಕೆ, ಮಳೆ ಗಾಲಕ್ಕೂ ಮೊದಲು ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಲೋ ಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ತೇಪೆ ಕಾಮಗಾರಿಗಾಗಿ ಸಿದ್ಧತೆ ನಡೆಸಿದೆ. ಅದನ್ನೂ ನ್ಯಾಯಾಲಯದ ಅನುಮತಿ ಇಲ್ಲದೇ ಆರಂಭಿಸಲಾಗದ ಬಿಕ್ಕಟ್ಟಿಗೆ ಇಲಾಖೆ ಸಿಲುಕಿದೆ.

ಶಿರಾಡಿ ಘಾಟಿಯಲ್ಲಿ 13 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ಮತ್ತು 23 ಕಿ.ಮೀ. ಉದ್ದದ ಡಾಂಬರು ರಸ್ತೆ ನಿರ್ಮಾಣದ ಕಾಮಗಾರಿಯನ್ನು  ಜಿವಿಆರ್‌ ಕಂಪೆನಿಗೆ ನೀಡಲಾಗಿತ್ತು. ₹ 118 ಕೋಟಿ ವೆಚ್ಚದ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಮುಗಿಸಿ 2015ರ ಡಿಸೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು.

13 ತಿಂಗಳ ಬಳಿಕವೂ ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ವಿಫಲವಾದ ಕಾರಣದಿಂದ ಟೆಂಡರ್‌ ರದ್ದುಪಡಿಸುವ ನಿರ್ಧಾರವನ್ನು ಜನವರಿ ಎರಡನೇ ವಾರ ಕೈಗೊಳ್ಳಲಾಗಿತ್ತು. ಈಗ ಗುತ್ತಿಗೆ ಮುಂದುವರಿಸಲು ಅವಕಾಶ ನೀಡುವಂತೆ ಪಟ್ಟುಹಿಡಿದಿರುವ ಜಿವಿ ಆರ್‌ ಕಂಪೆನಿ, ಹೊಸ ಟೆಂಡರ್‌ ಪ್ರಕ್ರಿಯೆ ನಡೆಸದಂತೆ ತಡೆಯಾಜ್ಞೆ ಕೋರಿದೆ.

ಒಂದು ವರ್ಷ ವಿಳಂಬ: ಗುತ್ತಿಗೆದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವು ದರಿಂದ ಉಂಟಾಗಿರುವ ತೊಡಕಿನ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ವಲಯದ ಅಧೀಕ್ಷಕ ಎಂಜಿನಿಯರ್‌ ರಾಘವನ್‌, ‘ಅಲ್ಪಾವಧಿ ಟೆಂಡರ್‌ ಪ್ರಕ್ರಿಯೆ ನಡೆಸಿ ಎರಡನೇ ಹಂತದ 34 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ ಯನ್ನು ಜೂನ್‌ ತಿಂಗಳಿಗೂ ಮೊದಲು ಪೂರ್ಣಗೊಳಿಸುವ ಯೋಚನೆ ಇತ್ತು. ಆದರೆ, ಈ ಹಿಂದೆ ಗುತ್ತಿಗೆ ಪಡೆದಿದ್ದ  ಜಿವಿಆರ್‌ ಕಂಪೆನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದರಿಂದ ಪ್ರಕರಣ ಇತ್ಯರ್ಥವಾಗುವವರೆಗೂ ಹೊಸ ಟೆಂಡರ್‌ ಪ್ರಕ್ರಿಯೆ ನಡೆಸುವುದು ಸಾಧ್ಯವಿಲ್ಲ’ ಎಂದರು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮುಗಿದ ಬಳಿಕ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಒಪ್ಪಿಗೆ ಪಡೆದು ಟೆಂಡರ್‌ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಮಳೆಗಾಲದ ಅವಧಿಯಲ್ಲಿ ಈ ರಸ್ತೆಯಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊ ಳ್ಳಲು ಆಗುವುದಿಲ್ಲ. ಆ ಬಳಿಕ ಟೆಂಡರ್‌ ಪ್ರಕ್ರಿಯೆ ನಡೆಸಿ, ಗುತ್ತಿಗೆದಾರರನ್ನು ಆಯ್ಕೆ ಮಾಡಿ ಕಾಮಗಾರಿ ಪ್ರಾರಂಭಿಸಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಹೇಳಿದರು.

ಗುಂಡಿ ಮುಚ್ಚಲು ಅರ್ಜಿ: ಮರು ಟೆಂಡರ್‌ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯನ್ನು ಗಮನದಲ್ಲಿ ಇರಿಸಿಕೊಂಡು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ತಾತ್ಕಾಲಿಕ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ಕಾಮಗಾರಿಗೆ ಅನುದಾನ ಕೋರಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಒಪ್ಪಿಗೆ ದೊರೆಯುತ್ತಿದ್ದಂತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಆದರೆ, ಜಿವಿಆರ್‌ ಕಂಪೆನಿಯು ತಾತ್ಕಾಲಿಕ ದುರಸ್ತಿ ಕಾಮ ಗಾರಿಯನ್ನೂ ನಡೆಸದಂತೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.

‘ಈ ಪ್ರಕರಣ ಫೆಬ್ರುವರಿ 16ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಮಳೆಗಾಲದ ಅವಧಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ತುರ್ತು ದುರಸ್ತಿ ಕಾಮಗಾರಿಗೆ ಒಪ್ಪಿಗೆ ನೀಡುವಂತೆ ಲೋಕೋಪ ಯೋಗಿ ಇಲಾಖೆಯಿಂದ ಮಧ್ಯಂತರ ಅರ್ಜಿ ಸಲ್ಲಿಸಲಾಗುವುದು.

ಕಾರ್ಯಾದೇಶ ನೀಡಿ 14 ತಿಂಗಳ ಬಳಿಕವೂ ಕಾಮಗಾರಿ ಆರಂಭಿಸಲು ಅರ್ಜಿದಾರರು ವಿಫಲವಾಗಿರುವ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗುವುದು. ಈವರೆಗಿನ ಎಲ್ಲಾ ಬೆಳವಣಿಗೆಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT