ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲಾಧಿಕಾರಿ ಗಣಿ ಮಾಲೀಕರ ಏಜೆಂಟ್‌’

ಪ್ರತಿಭಟನಾಕಾರರ ವಿರುದ್ಧ ಪ್ರಕರಣ ಹಿಂಪಡೆದು ಕ್ಷಮೆಯಾಚನೆಗೆ ಆಗ್ರಹ: ಸಿಪಿಎಂ ಗಂಭೀರ ಆರೋಪ
Last Updated 8 ಫೆಬ್ರುವರಿ 2017, 9:52 IST
ಅಕ್ಷರ ಗಾತ್ರ

ಹೊಸಪೇಟೆ: ‘ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರು ಗಣಿ ಮಾಲೀಕರ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದು, ಜನಪರ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಎಂ) ಜಿಲ್ಲಾ ಕಾರ್ಯದರ್ಶಿ ಆರ್‌.ಎಸ್‌. ಬಸವರಾಜ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣಿ ಲಾರಿಗಳ ಓಡಾಟದಿಂದ ಸಂಡೂರು, ಭುಜಂಗ ನಗರ ಸುತ್ತಮುತ್ತಲಿನ ಜನ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಅವುಗಳ ಓಡಾಟದ ಮೇಲೆ ಕಡಿವಾಣ ಹೇರಬೇಕೆಂದು ಆಗ್ರಹಿಸಿ ಜನ ಸಂಗ್ರಾಮ ಪರಿಷತ್ತಿನ ನೇತೃತ್ವದಲ್ಲಿ ಇತ್ತೀಚೆಗೆ ರಸ್ತೆ ತಡೆ ನಡೆಸಲಾಗಿತ್ತು. ಪೊಲೀಸ್‌ ಇಲಾಖೆಯಿಂದ ಪೂರ್ವಾನುಮತಿ ಪಡೆದು ಪ್ರತಿಭಟನೆ ಮಾಡಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಗಣಿ ಮಾಲೀಕರ ಪ್ರಭಾವಕ್ಕೆ ಒಳಗಾಗಿ 13 ಜನರ ವಿರುದ್ಧ ಪ್ರಕರಣ ದಾಖಲಿಸುವಂತೆ ನೋಡಿಕೊಂಡಿದ್ದಾರೆ ಎಂದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಅಧಿಕಾರ ಇದೆ. ಅದರ ಪ್ರಕಾರ, ಪ್ರತಿಭಟನಾಕಾರರು ಶಾಂತಿಯುತವಾಗಿ ರಸ್ತೆತಡೆ ನಡೆಸಿದ್ದಾರೆ. ಆದರೆ, ಅವರ ವಿರುದ್ಧ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅನವಶ್ಯಕವಾಗಿ ಪ್ರಕರಣ ದಾಖಲಿಸಲಾಗಿದೆ. 13 ಜನರ ವಿರುದ್ಧದ ಹಾಕಿರುವ ಎಲ್ಲ ಪ್ರಕರಣಗಳನ್ನು ಕೂಡಲೇ ವಾಪಸ್‌ ಪಡೆಯಬೇಕು.

ಪ್ರತಿಭಟನಾಕಾರರ ಬಗ್ಗೆ ಹಗುರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮಾರ್ಚ್‌ 11,12ರಂದು ನಡೆಯಲಿರುವ ಉದ್ದಿಮೆದಾರರ ಸಮಾವೇಶದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಕರಣ ಹಿಂಪಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಸಂಬಂಧಿಸಿದವರಿಗೆ ಸೂಚನೆ ಕೊಡಬೇಕು. ಇಲ್ಲವಾದಲ್ಲಿ ಅವರಿಗೆ ಘೇರಾವ್‌ ಹಾಕಲಾಗುವುದು ಎಂದು ತಿಳಿಸಿದರು.

ಪೊಲೀಸರು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಗಣಿ ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಹೋರಾಟಗಾರರು ಒಂದು ತಾಲ್ಲೂಕಿನಿಂದ ಇನ್ನೊಂದು ತಾಲ್ಲೂಕಿಗೆ ಹೋಗಿ ಪ್ರತಿಭಟನೆ ನಡೆಸಲು ಜಿಲ್ಲಾಧಿಕಾರಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಹಾಗಿದ್ದಲ್ಲಿ ಜಿಲ್ಲಾಧಿಕಾರಿ ಚೆನ್ನೈನಿಂದ ಬಳ್ಳಾರಿಗೇಕೆ ಬಂದು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಅಧಿಕಾರ ಸ್ಥಾನದಲ್ಲಿ ಇರುವವರು ಜನಪರವಾಗಿ ಇರಬೇಕು. ಅವರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜನ ದಂಗೆ ಏಳಬಹುದು ಎಂದು ಎಚ್ಚರಿಸಿದರು.

ಸರ್ಕಾರ ಈ ವಿಷಯದಲ್ಲಿ ಕೂಡಲೇ ಮಧ್ಯ ಪ್ರವೇಶಿಸಿ ಜಿಲ್ಲಾಧಿಕಾರಿಗೆ ಸೂಕ್ತ ನಿರ್ದೇಶನ ಕೊಡಬೇಕು. ರಸ್ತೆ, ಬಸ್‌ ನಿಲ್ದಾಣ ಸೇರಿದಂತೆ ಇತರ ಕೆಲಸಗಳಿಗೆ ಕಂಪೆನಿಗಳ ಬಳಿ ಹಣ ಕೇಳುವುದನ್ನು ನಿಲ್ಲಿಸಬೇಕು. ಆಗ ಕಂಪೆನಿಗಳ ಮುಲಾಜಿಗೆ ಒಳಗಾಗುವುದು ತಪ್ಪುತ್ತದೆ ಎಂದರು. ಸಿಪಿಎಂ ಮುಖಂಡರಾದ ಜಂಬಯ್ಯ ನಾಯಕ, ಭಾಸ್ಕರ್‌ ರೆಡ್ಡಿ, ಎನ್‌. ಯಲ್ಲಾಲಿಂಗ ಉಪಸ್ಥಿತರಿದ್ದರು.

*
ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಜಿಲ್ಲಾಧಿಕಾರಿ ಕೆಲಸ ನಿರ್ವಹಿಸಬೇಕು. ಆದರೆ, ಅವರು ಗಣಿ ಮಾಲೀಕರ ಪ್ರಭಾವಕ್ಕೆ ಒಳಗಾಗಿ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.
-ಆರ್‌.ಎಸ್‌. ಬಸವರಾಜ,
ಜಿಲ್ಲಾ ಕಾರ್ಯದರ್ಶಿ, ಸಿಪಿಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT