ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಾರಿಪಾಳ್ಯದ ಹುಲಿವೇಷ, ಪಡ್ಡೆ ಹುಡುಗರ ಕಾಮಣ್ಣನ ಹಬ್ಬ!

Last Updated 8 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೋಲಾರ ಕಠಾರಿಪಾಳ್ಯದ ಗರಡಿ ಹಿಂದೊಮ್ಮೆ ಹಳೆಯ ಮೈಸೂರು ಭಾಗದಲ್ಲಿ ಹೆಸರು ಮಾಡಿದ್ದ ಗರಡಿ. ಹಲವಾರು ಖ್ಯಾತನಾಮರು ಸಾಮು ತೆಗೆದ ಗರಡಿ ಇದು. ಕರಗ ದೇಗುಲಕ್ಕೆ ಆತುಕೊಂಡಿದ್ದ ಕೆಮ್ಮಣ್ಣು ರಾಶಿ ಪಕ್ಕವಿದ್ದ ವಿಶಾಲವಾದ ಮಿದ್ದೆ ಗೂಡು ಕುಸ್ತಿಗೆ ಮಾತ್ರವಲ್ಲ ಕಾಮನ ಹುಣ್ಣಿಮೆಯ ಹುಲಿವೇಷಕ್ಕೂ ಹಿಂದೊಮ್ಮೆ ಬಹುಪ್ರಸಿದ್ಧ.

ಕಾಮನಹಬ್ಬ ನಿಜಕ್ಕೂ ಪಡ್ಡೆಹುಡುಗರ ಸಡಗರ ಸಂಭ್ರಮದ ಹಬ್ಬ. ಮರಮುಟ್ಟು ಕದಿಯುವುದು, ಅಶ್ಲೀಲವಾದ ಹಾಡುಗಳನ್ನು ಹಾಡುತ್ತ ರಂಜಿಸುವುದು 3–4 ದಿನ ನಡೆಯುತ್ತದೆ. ಹದಿಹರೆಯದವರದೇ ಕಾರುಬಾರು. ಯಾರು ಹೆಚ್ಚು ಮರಮುಟ್ಟು ಸುಡುತ್ತಾರೆಂಬ ಪೈಪೋಟಿ ಕೂಡ ಕಾಮನಹಬ್ಬದಲ್ಲಿ ಸಾಮಾನ್ಯ.
ಶತಶೃಂಗದ ತಪ್ಪಲಲ್ಲಿ ಬಿದ್ದುಕೊಂಡ ಕೋಲಾರ ಗಂಗರ ರಾಜಧಾನಿಯಾಗಿದ್ದು, ಈಗಿನ ರಾಜಧಾನಿಗೆ ಹತ್ತಿರದಲ್ಲಿದ್ದರೂ ಮೊದಮೊದಲಿಗೆ ಹೆಚ್ಚಿಗೆ ಬೆಳೆಯಲೂ ಇಲ್ಲ. ಜಿಲ್ಲಾ ಕೇಂದ್ರವಾದರೂ ಹೆಚ್ಚು ಅಭಿವೃದ್ಧಿಯನ್ನೂ ಕಾಣದ ಐದಾರು ದಶಕಗಳ ಹಿಂದೆ ಗರಡಿಗಳಿಗೆ ಖ್ಯಾತವಾಗಿತ್ತು. ಅದೇ ಗರಡಿಯಿಂದ ಹುಲಿವೇಷಗಳು ಹೊರಬರುತ್ತಿದ್ದದ್ದು ಕಾಮನಹಬ್ಬ ಹಾಗೂ ಬಾಬಯ್ಯನ ಹಬ್ಬದ ಸಂದರ್ಭದಲ್ಲಿ.

ಕಠಾರಿಪಾಳ್ಯದ ಗರಡಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹುಲಿವೇಷ ಧರಿಸಿ ಚಾಕಚಕ್ಯತೆಯನ್ನು ಪ್ರದರ್ಶಿಸಿದವರಲ್ಲಿ ಒಬ್ಬರು ಅಂಚೆ ರಾಮಚಂದ್ರಪ್ಪ. ಇವರ ಶಿಷ್ಯರಾದ ಚಿಕ್ಕ ಹನುಮಪ್ಪ, ಅಂಚೆ ಕೃಷ್ಣಪ್ಪ ಹುಲಿವೇಷ ಪರಂಪರೆಯನ್ನು ಮುಂದುವರೆಸಿದವರು.

ಈಗ ಬಣ್ಣ ಎರಚಾಟ, ಹಾಡು ನೃತ್ಯಗಳಿಗೆ ಸೀಮಿತವಾಗಿರುವ ಹೋಳಿಹಬ್ಬ, ಹಿಂದೆ ಇಡೀ ಪಟ್ಟಣದಲ್ಲಿ ಹುಲಿವೇಷದ ರಂಗು ತುಂಬಿಸುತ್ತಿತ್ತು. ಇಬ್ಬರು ಯುವ ಪಟುಗಳು ಮಗದೊಬ್ಬ ಪುಟಾಣಿ ಹುಲಿವೇಷ ಹಾಕುವುದು ಆಗ ಸಾಮಾನ್ಯ. ಕಠಾರಿಪಾಳ್ಯದಲ್ಲಿ ಎರಡು ಕಡೆ ಕಾಮದಹನದ ಏರ್ಪಾಟು! ಒಂದು ಧರ್ಮರಾಯನ ಆಲಯ, ಇನ್ನೊಂದು ವೇಣುಗೋಪಾಲಸ್ವಾಮಿ ಗುಡಿ. ಹುಣ್ಣಿಮೆ ಹಿಂದಿನ ದಿನಗಳಲ್ಲಿ ಹಳೆಯ ವಸ್ತುಗಳು, ಅನುಪಯುಕ್ತ ಪದಾರ್ಥಗಳ ಶೇಖರಣೆ, ಮನೆ ಮಾಲೀಕರಿಗೆ ಗೊತ್ತಾಗದಂತೆ ಮರದ ಸಾಮಾನು ಕಳ್ಳತನ ಮಾಡುವುದು ನಡೆಯುತ್ತಿತ್ತು.

ಸಂಗ್ರಹಿಸಿದ ವಸ್ತುಗಳನ್ನೆಲ್ಲಾ ಪೇರಿಸುವುದಕ್ಕೆ ಮೊದಲು ಕಾಮನ ಮೆರವಣಿಗೆ. ಚಿತ್ರಬಿಡಿಸುವುದರಲ್ಲಿ ನಿಪುಣರಾಗಿದ್ದ ನಾಮ ವೆಂಕಟರಮಣಪ್ಪರ ನಂತರ ಅವರ ಮಗ ಹೊರಪ್ಪಲ್ಲಿ ಗುರುರಾಜ ಪೆನ್ಸಿಲ್‌ನಿಂದಲೂ ಪೆನ್ನಿನಿಂದಲೂ ಬಿಡಿಸಿದ ಕಾಮದೇವರ ಚಿತ್ರವನ್ನು ಕೋಲಿಗೆ ಸಿಕ್ಕಿಸಿ ತಮಟೆಯೊಂದಿಗೆ ಮೆರವಣಿಗೆ ನಡೆಯುತ್ತಿತ್ತು. ಇದರಲ್ಲಿ ಚಿಗುರು ಮೀಸೆಯವರದೇ ಪಾರುಪತ್ಯ.

ಇತ್ತ ಗರಡಿಯಲ್ಲಿ ಉತ್ತಮ ದೇಹಧಾರ್ಡ್ಯವಿರುವವರನ್ನೇ ಹುಲಿವೇಷ ಹಾಕಲು ಆರಿಸಿ ಹುರಿಗಟ್ಟಿದ ದೇಹಕ್ಕೆ ಹುಲಿಪಟ್ಟೆಗಳ ಬಣ್ಣ ಹಚ್ಚಲು ಮುಂಜಾನೆಯಿಂದಲೇ ಚಟುವಟಿಕೆ ಶುರು. ಪೇಟೆ ಹುಡುಗರಿಗೆಲ್ಲ ಕಾಮನಹಬ್ಬದ ಆಕರ್ಷಣೆಗಳೆಂದರೆ ಹುಲಿವೇಷ ಹಾಗೂ ಕಾಮದಹನ. ಎರಡೂ ಸಂಜೆ ಹೊತ್ತಿಗೆ ಆರಂಭ.

ಬಿಗಿಯಾದ ಚೆಡ್ಡಿಬಿಟ್ಟರೆ ಹುಲಿವೇಷಧಾರಿ ಬರಿಮೈಯಲ್ಲೇ ಇರಬೇಕು. ಹುಲಿವೇಷದಲ್ಲಿ ಮೈಗೆ ಹುಲಿ ಚರ್ಮ ಹೋಲುವ ಹಳದಿ–ಕಪ್ಪುಪಟ್ಟೆಗಳನ್ನು ಕಲಾವಿದರೊಬ್ಬರು ಬಳಿಯುತ್ತಾರೆ. ಈ ಬಣ್ಣಗಳೇ ಎಲ್ಲರ ಆಕರ್ಷಣೆಗೆ ಕಾರಣ. ಮುಖಕ್ಕೆ ಹುಲಿ ‘ಕಿವಿಯಾರ’ ಕಟ್ಟಿರುತ್ತಾರೆ. ಕನಿಷ್ಠ ನಾಲ್ಕೈದು ಗಂಟೆ ಕುಣಿಯಬೇಕಾದ ಹುಲಿವೇಷಧಾರಿ ಚೆನ್ನಾಗಿ ಸಾಮು ತೆಗೆದವರೇ ಆಗಬೇಕು. ಬಣ್ಣಗಾರಿಕೆಗೂ 2–3 ಗಂಟೆ ಹಿಡಿಯುತ್ತದೆ. ಹುಲಿವೇಷ ಧರಿಸಿದ್ದವರ ಸೊಂಟಕ್ಕೆ, ಪಟ್ಟಿ ಕಟ್ಟಿ ಅದಕ್ಕೆ ಹಗ್ಗ ಸೇರಿಸಿ ಒಂದೆರಡು ಗಟ್ಟಿಯಾಳುಗಳು ಹಿಡಿದಿರುತ್ತಾರೆ. ಕಠಾರಿಪಾಳ್ಯದ ಹುಲಿವೇಷಗಳು ತಮಟೆ, ಬ್ಯಾಂಡ್‌ ಗತ್ತಿಗೆ ಕುಣಿಯುವುದನ್ನು ನೋಡುವುದೇ ಸೊಗಸು.

ಊರಿನ ಪ್ರಮುಖ ರಸ್ತೆಗಳಲ್ಲಿ ಹೊರಟು ಮುಖ್ಯ ಗರಡಿಗಳಿಗೆ ಭೇಟಿಕೊಟ್ಟು ಹಣ್ಣು ಹಂಪಲು ಸ್ವೀಕರಿಸುವುದು ಹುಲಿವೇಷಧಾರಿಗಳ ಕೆಲಸ. ಚೌಕಗಳಲ್ಲಿ ವೃತ್ತಾಕಾರವಾಗಿ ತಮಟೆ–ಬ್ಯಾಂಡ್‌ ವಾದನಕ್ಕೆ ತಕ್ಕಂತೆ ಜಿಗಿಯುವುದು, ಪಲ್ಟಿ ಹೊಡೆಯುವುದು, ಹುಲಿಯಂತೆ ಹಾರುವುದು ಹೀಗೆ ವೇಷಧಾರಿಗಳು ಚಮತ್ಕಾರ ಪ್ರದರ್ಶನ ಮಾಡುತ್ತಾರೆ. ಇದಕ್ಕೆ ಮೆಚ್ಚುಗೆ ಸೂಚಿಸಲು ಚಪ್ಪಾಳೆ, ಶಿಳ್ಳೆಗಳೂ ಇರುತ್ತವೆ. ಹಾದಿಯಲ್ಲಿ ಒಂದೇ ಗತ್ತಿನಿಂದ ಸಾಗುವ ವೇಷಧಾರಿಗಳು ವಿಶಾಲ ಪ್ರದೇಶಗಳಲ್ಲಿ (ಚೌಕಗಳು) ತಮ್ಮ ಕುಣಿತದ ನೈಪುಣ್ಯದ ಪ್ರದರ್ಶನಕ್ಕೆ ವೇದಿಕೆಯನ್ನು ಬಳಸುವುದುಂಟು. ಹುಲಿವೇಷಧಾರಿ ಕುಪ್ಪಳಿಸುವುದು, ಸುತ್ತ ಕುಣಿಯುವುದು, ಲಾಗ ಹಾಕುವುದು, ಸೊಂಟಕ್ಕೆ ಕಟ್ಟಿದ ಹಬ್ಬದ ನೆರವಿನಿಂದ ಗಿರ್ರನೆ ತಿರುಗುವುದು ಅವರವರ ಅನುಭವದ ಮೇಲೆ ಹೋಗುತ್ತಿತ್ತು.

ಕಾಮನಹಬ್ಬದ ಸಮಯದಲ್ಲಿ ಕಠಾರಿಪಾಳ್ಯ ಗರಡಿಯಾಳುಗಳು ಹುಲಿವೇಷಕ್ಕೆಂದೇ ವಿಶೇಷ ತರಬೇತಿ ಪಡೆಯುತ್ತಿದ್ದರು. ಕನಿಷ್ಟ 3–4 ಗಂಟೆಗಳ ನಿರಂತರ ಕುಣಿತ, ಜಿಗಿತದ ಬಳಿಕ ಗರಡಿಗೆ ವಾಪಸ್ ಬಂದ ಬಳಿಕವೇ ‘ಕಾಮದಹನ’.

ಕಾಮದಹನಕ್ಕೆ ಮೊದಲು ಬಾಯಿ ಬಾಯಿ ಬಡಿದುಕೊಂಡು ಕಾಮಣ್ಣ ಮೃತನಾದನೆಂದು ಅಳುವುದು, ಅವನ ಸಾವಿಗೆ ಕಾರಣರಾದವರನ್ನು ವಾಚಾಯ ಗೋಚರವಾಗಿ ಬೈಯ್ಯುವುದು ಇರುತ್ತಿತ್ತು. ಆಗ ಇಂತಹ ಅಸಭ್ಯ ಕೃತ್ಯಗಳಿಗೆ ಬ್ರೇಕ್‌ ಎಂಬುದೇ ಇರುತ್ತಿರಲಿಲ್ಲ. ಇದೆಲ್ಲಾ ಆದ ಮೇಲೆ ಪೇರಿಸಿಟ್ಟ ಹಳೇಪದಾರ್ಥಗಳ ಕುಪ್ಪೆಗೆ ಬೆಂಕಿ ಹಚ್ಚಿದ ಪೊರಕೆಗಳಿಂದ ಅಗ್ನಿ ಸ್ಪರ್ಶ. ಕಾಮದಹನದ ನಂತರ ಆತನಿಗೆ 11 ದಿನಕ್ಕೂ 12 ದಿನಕ್ಕೂ ಶಾಂತಿ ಮಾಡುವುದು ವಿಶೇಷ. ಆರೆಂಟು ಅಡಿ ಕಾಮಶಿಲ್ಪವನ್ನು ಮಣ್ಣಿನಿಂದ ಮಾಡಿ ನೆಲದ ಮೇಲಿಟ್ಟು ಪೂಜಿಸಲಾಗುತ್ತಿತ್ತು. ಆ ಆಕೃತಿಗೆ ಬಾರಿ ಮೀಸೆ–ಶಿಶ್ನ ಇಡುವ ಸಂಪ್ರದಾಯವಿತ್ತು. ಕಾಲಕ್ರಮೇಣ ಲಂಗೋಟಿಯಲ್ಲಿ ಕಾಮಣ್ಣ ಕಾಣಿಸಿಕೊಂಡ!

ಇವೆಲ್ಲವೂ ಐದಾರು ದಶಕಗಳ ಹಿಂದೆ ಕೋಲಾರ ಕಾಮನ ಹುಣ್ಣಿಮೆ, ಹುಲಿವೇಷದ ಆಚರಣೆಯ ನೆನಪಿನ ಬುತ್ತಿ. ಬರೇ ಪಡ್ಡೆ ಹುಡುಗರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಕಾಮಣ್ಣನ ಹಬ್ಬ. ಈಗ ಬಣ್ಣದ ಎರಚಾಟಕ್ಕೆ ಸೀಮಿತವಾಗಿದೆ. ಗರಡಿಗಳು ಬಣಗುಡುತ್ತಿವೆ. ಕೆಲವು ಮುಚ್ಚಿಹೋಗಿವೆ. ಹುಲಿವೇಷವೂ ಪೂರ್ಣ ಬಂದ್‌.


ಚಿತ್ರ: ಜಿ. ಸೋಮಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT