ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ: ನೈತಿಕ ಮಾರ್ಗದರ್ಶಿ ಸೂತ್ರ ಅಪ್ರಸ್ತುತ

Last Updated 9 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಿಖ್ ಸಮುದಾಯವನ್ನು ಲೇವಡಿ ಮಾಡುವ ಜೋಕ್ಸ್‌ಗಳಿಗೆ ನಿಷೇಧ ಹೇರಲು ಸಾಧ್ಯವಿಲ್ಲ, ಇದಕ್ಕೆ ಸಂಬಂಧಿಸಿದಂತೆ ‘ನೈತಿಕ ಮಾರ್ಗದರ್ಶಿ ಸೂತ್ರ’ಗಳನ್ನು ನೀಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನುಡಿಗಳಲ್ಲಿ ಹೇಳಿದೆ. ಇಂತಹದೊಂದು ಸೂತ್ರ ನೈತಿಕ ಪೊಲೀಸ್‌ಗಿರಿಯಾಗಿ ಪರಿಣಮಿಸಿಬಿಡಬಹುದಾದ ಅಪಾಯವನ್ನು ಕೋರ್ಟ್ ಎತ್ತಿ ಹೇಳಿರುವುದು ಸರಿಯಾದುದು.

ಲೇಖಕ ಖುಷ್ವಂತ್‌ ಸಿಂಗ್‌ ಅವರೇ ಸ್ವತಃ ಸರ್ದಾರ್ಜಿ ಜೋಕ್‌ಗಳನ್ನು ಜನಪ್ರಿಯಗೊಳಿಸಿದ ವಿಚಾರವನ್ನೂ ನ್ಯಾಯಾಲಯ ಪ್ರಸ್ತಾಪಿಸಿದೆ. ಅತ್ಯಂತ  ಗೌರವಾನ್ವಿತ ಸ್ಥಾನ ಗಳಿಸಿರುವ ಸಿಖ್ ಸಮುದಾಯ, ಜೋಕ್‌ಗಳ ನಿಷೇಧಕ್ಕಾಗಿ ಕಾನೂನು ಹೋರಾಟ ಮಾಡುವುದು ಸಲ್ಲದು. ನಿಜಕ್ಕೂ ಯಾರಾದರೂ ನಿರ್ದಿಷ್ಟ ವ್ಯಕ್ತಿಗೆ ಇಂತಹ ವಿಚಾರದಿಂದ ತೊಂದರೆಯಾಗಿದ್ದಲ್ಲಿ ಕಾನೂನು ಹೋರಾಟ ಮಾಡಬಹುದು. ಆದರೆ ಒಟ್ಟು  ಸಮುದಾಯಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗದು ಎಂದು ಕೋರ್ಟ್ ಸರಿಯಾಗಿಯೇ ಹೇಳಿದೆ.

ಅದೂ ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಆಹಾರ, ಉಡುಪು, ಪುಸ್ತಕ, ಕಲಾಕೃತಿ ಇತ್ಯಾದಿಗಳೆಲ್ಲಾ  ನಿಷೇಧದ ಪಟ್ಟಿಯಲ್ಲಿ ಸೇರುತ್ತಿರುವ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ಈ ನಿರ್ದೇಶನ ಪ್ರಸ್ತುತ. ಅಷ್ಟೇ ಅಲ್ಲ, ಜೋಕ್‌ಗಳಿಗೆ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆ ರೀತಿ ಸ್ಪಂದಿಸುತ್ತಾರೆ.

ಇಂತಹ ಸಂದರ್ಭದಲ್ಲಿ ಯಾವುದಕ್ಕೆಂದು ನಿಷೇಧ ಹೇರುವುದು? ಇಂತಹ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವವರಾದರೂ ಯಾರು ಎಂಬ ಕೋರ್ಟ್ ಪ್ರಶ್ನೆ ವಾಸ್ತವಿಕವಾದ ಸವಾಲುಗಳಿಗೆ ದಿಕ್ಸೂಚಿ. ಹೀಗಾಗಿ ಸರ್ದಾರ್ಜಿ ಜೋಕ್‌ಗಳ ಕುರಿತಾದ ವಿವಾದಕ್ಕೆ ದಿಢೀರ್ ತಡೆ ಒಡ್ಡಿದಂತಾಗಿದೆ.

ಸಿಖ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಲೇವಡಿ ಮಾಡುವ ಜೋಕ್‌ಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸುಪ್ರೀಂ ಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮಾನ್ಯತೆ ನೀಡಿದ್ದರು. ಈ ಸಂಬಂಧದಲ್ಲಿ ಕಳೆದ ಎರಡು ವರ್ಷಗಳಿಂದ ಅನೇಕ ವಿಚಾರಣೆಗಳೂ ನಡೆದಿದ್ದವು.

ಸಮಾಜವನ್ನು ಸಂವೇದನಾಶೀಲವಾಗಿಸಬೇಕಾದ ಅಗತ್ಯ ಕುರಿತು ಕೋರ್ಟ್ ಆಗ ಎತ್ತಿ ಹೇಳಿತ್ತು.  ಒಂದು ಹಂತದಲ್ಲಿ, ಜೋಕ್‌ಗಳ ನಿಷೇಧದ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂಬುದಕ್ಕೂ ಸೂಚನೆಗಳು ಲಭ್ಯವಾಗಿದ್ದವು ಎಂಬುದನ್ನು ನೆನಪಿಸಿಕೊಳ್ಳಬಹುದು.

ಜೋಕ್‌ಗಳು ಜನಾಂಗೀಯ ದ್ವೇಷಕ್ಕೆ ಎಡೆ ಮಾಡುವಂತಿರದಿದ್ದಲ್ಲಿ ಹಾಸ್ಯವಾಗಿಯೇ ಸ್ವೀಕರಿಸುವ ಮನಸ್ಥಿತಿ ನಿಜಕ್ಕೂ ಆರೋಗ್ಯಕರ. ಆದರೆ ವಾಣಿಜ್ಯ ಉದ್ದೇಶಗಳಿಗೆ ಇಂತಹ ಜೋಕ್‌ಗಳು ದುರ್ಬಳಕೆ ಆಗಬಾರದು ಎಂಬ ಎಚ್ಚರವೂ ಇರಬೇಕಾಗುತ್ತದೆ.

ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶಾಖ ಮಾರ್ಗದರ್ಶಿ ಸೂತ್ರಗಳನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿತ್ತು, ಅದೇ ಮಾದರಿಯಲ್ಲೇ ಸರ್ದಾರ್ಜಿ ಜೋಕ್‌ಗಳಿಗೂ ನಿರ್ದೇಶನ ನೀಡಬೇಕೆಂಬುದು  ಅರ್ಜಿದಾರರ ಮನವಿಯಾಗಿತ್ತು. ಆದರೆ, ಮಹಿಳಾ ಸಮುದಾಯದ ಘನತೆಗೆ ಕುಂದು ತರುವಂತಹ ಕಿರುಕುಳಗಳನ್ನು ನಿರ್ಬಂಧಿಸುವುದು ವಿಶಾಖ ಪ್ರಕರಣದಲ್ಲಿ ಮುಖ್ಯವಾಗಿತ್ತು.

ಈ ಸಂಬಂಧದಲ್ಲಿ ಅನೇಕ ಅಂತರ ರಾಷ್ಟ್ರೀಯ ನಿರ್ಣಯಗಳಿಗೆ ಬದ್ಧವಾಗಿದ್ದ ಭಾರತಕ್ಕೆ ಅದು ಬಾಧ್ಯಸ್ಥಿಕೆಯೂ ಆಗಿತ್ತು ಎಂಬುದು ಇಲ್ಲಿ ಮುಖ್ಯ.  ಆದರೆ ಸರ್ದಾರ್ಜಿ ಜೋಕ್‌ಗಳ ಕುರಿತಾದ ಪ್ರಕರಣದಲ್ಲಿ ಇರುವ ಪ್ರಶ್ನೆಯೇ ಬೇರೆ. 

ಈ ವಿಚಾರದಲ್ಲಿ ಯಾವುದೇ ನಿರ್ದಿಷ್ಟ ಕಾನೂನು ಅಸ್ತಿತ್ವದಲ್ಲಿ ಇಲ್ಲದೆ, ಒಂದು ಸಮುದಾಯಕ್ಕೆ ಸಂಬಂಧಿಸಿದ ಜೋಕ್‌ಗಳನ್ನು ನ್ಯಾಯಾಂಗ ವ್ಯವಸ್ಥೆ ನಿಷೇಧಿಸಲಾಗದು, ಇದು ಶಾಸಕಾಂಗದ ಪರಿಗಣನೆಗೆ ಒಳಪಡಬೇಕು ಎಂದು ಕೋರ್ಟ್ ವ್ಯಾಖ್ಯಾನಿಸಿದೆ.

ಜೊತೆಗೆ ಜನಾಂಗೀಯ ದ್ವೇಷಕ್ಕೆ ಎಡೆ ಮಾಡಿಕೊಡುವಂತಹ ಕೀಳು ಹಾಸ್ಯವನ್ನು ನಿರ್ವಹಿಸಲು ಭಾರತೀಯ ದಂಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿಯೇ ಸಾಕಷ್ಟು ಅವಕಾಶಗಳಿವೆ. ಹೀಗಾಗಿಯೇ ಪ್ರತ್ಯೇಕ ಮಾರ್ಗದರ್ಶಿ ಸೂತ್ರ ಅಪ್ರಸ್ತುತವಾದದ್ದು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹೆಸರಲ್ಲಿ ಅನೇಕ ಕ್ಷುಲ್ಲಕ ಸಂಗತಿಗಳೂ ಕೋರ್ಟ್ ಮುಂದೆ ಬರುತ್ತಿವೆ ಎಂಬ ಇಂಗಿತವೂ ಇದೇ ಸಂದರ್ಭದಲ್ಲಿ ವ್ಯಕ್ತವಾಗಿದೆ. ಈಗಾಗಲೇ ಅಪಾರ ಸಂಖ್ಯೆಯ ಮೊಕದ್ದಮೆಗಳು ಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ ಎಂಬಂಥ ಸ್ಥಿತಿಯಲ್ಲಿ, ಇಂತಹ ವಿಚಾರದ ಬಗೆಗೂ ಗಂಭೀರ ಪರಾಮರ್ಶೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT