ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ನೀರಾಗದ ಸಂಶೋಧನೆ

ವಿಮರ್ಶೆ
Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಕರ್ನಾಟಕದ ವೀರಗಲ್ಲುಗಳು
ಲೇ: ಡಾ.ಆರ್. ಶೇಷಶಾಸ್ತ್ರಿ
ಪ್ರ: ಕಾಮಧೇನು ಪುಸ್ತಕ ಭವನ, ಬೆಂಗಳೂರು–20
 
**
ಯಾವುದೇ ಕಾರಣದಿಂದ ಸಂಶೋಧನೆಗೆ ಕೈಹಾಕಿದರೂ, ಅದು ಒಂದು ಹಂತಕ್ಕೆ ಮುಗಿಯಿತು ಎಂದಾಗ ಅದನ್ನು ಅಲ್ಲಿಗೇ ಕೈಬಿಡುವುದು ಗುರಿ ತಲುಪಿದ ವೀರರ ಮಾದರಿ. ಒಂದು ಗುರಿ ಸಾಧಿತವಾದೊಡನೆ ಬೇರೆ ಗುರಿಯತ್ತ ಗಮನ ಹರಿಸುವುದು ಮತ್ತೊಂದು ವರ್ಗದ ಮಾದರಿ. ಮಾನವಿಕ ಕ್ಷೇತ್ರದ ಸಂಶೋಧನೆಯಲ್ಲಿ ಸತ್ಯದ ಹುಡುಕಾಟ ನಿರಂತರವಾಗಿ ಮುಂದುವರಿಯುತ್ತದೆ.  ಕೆಲವು ಸಂಶೋಧನೆಗಳು ಪದವಿಯ ಘೋಷಣೆಯೊಂದಿಗೆ ಮುಕ್ತಾಯಗೊಳ್ಳುತ್ತವೆ. ಸಂಬಂಧಿಸಿದ ಮಹಾಪ್ರಬಂಧಗಳು ಪ್ರಕಟವಾಗುವುದಿಲ್ಲ. ಸಂಶೋಧಕರೂ ಮೌನವಹಿಸುತ್ತಾರೆ. ಮಹಾಪ್ರಬಂಧಗಳು ಪ್ರಕಟವಾದರೂ, ನಂತರ ಅದನ್ನು ಸಂಶೋಧಕರೇ ಪುನಾ ಗಮನಿಸುವ ಆಸಕ್ತಿಯನ್ನೂ ಉಳಿಸಿಕೊಳ್ಳುವುದಿಲ್ಲ. ಪ್ರಕಟಿತ ಸಂಶೋಧನಾ ಮಹಾಪ್ರಬಂಧಗಳನ್ನು ಕೆಲವು ಆಸಕ್ತ ಸಂಶೋಧಕರು ಮಾತ್ರ ಆಕರಗಳಾಗಿ ಬಳಸಿಕೊಳ್ಳಬಹುದು.
 
ತಮ್ಮದೇ ಸಂಶೋಧನೆಯನ್ನು 25 ವರ್ಷಗಳ ನಂತರವೂ ಒರೆಗಲ್ಲಿಗೆ ಹಚ್ಚಿ ಪರಿಶೀಲಿಸುವ ಮತ್ತು ಸೇರ್ಪಡೆ ಮಾಡುವ ಕೆಲಸವನ್ನು ಡಾ. ಶೇಷಶಾಸ್ತ್ರಿ ಮಾಡಿದ್ದಾರೆ. ಅದಕ್ಕೆ ಅವರ ‘ಕರ್ನಾಟಕ ವೀರಗಲ್ಲುಗಳು’ ಕೃತಿಯ ಪರಿಷ್ಕೃತ ಮೂರನೆಯ ಮುದ್ರಣ (2017) ಉದಾಹರಣೆಯಾಗಿದೆ.
 
ಡಾ. ಚಿದಾನಂದಮೂರ್ತಿ ಅವರ ಸಂಶೋಧನೆಯ ಫಲವಾದ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧವು ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ದಿಕ್ಕು ತೋರಿತು. ಅವರ ಮಾರ್ಗದರ್ಶನದಲ್ಲಿ ಡಾ. ಶೇಷಶಾಸ್ತ್ರಿ ಅವರು ನಡೆಸಿದ ‘ಕರ್ನಾಟಕದ ವೀರಗಲ್ಲುಗಳು’ ಸಂಶೋಧನೆಯ ಫಲಿತವೂ ಆ ಹೊತ್ತಿಗೆ ಸ್ಮಾರಕಗಳ ಆಧ್ಯಯನದಲ್ಲಿ ಹೊಸ ಭರವಸೆ ಮೂಡಿಸಿತು. ಪ್ರೊ. ಷ. ಶೆಟ್ಟರ್ ಅವರು ಧಾರವಾಡದಲ್ಲಿ ನಡೆಸಿದ ಸ್ಮಾರಕಗಳನ್ನು ಕುರಿತ ವಿಚಾರಸಂಕಿರಣವೂ ಸ್ಮಾರಕಗಳನ್ನು ಕುರಿತ ಆಸಕ್ತಿಯನ್ನು ಹೆಚ್ಚಿಸಿತು. ಅದಕ್ಕೂ ಮೊದಲು ಕೆಲವು ವಿದ್ವಾಂಸರು ವೀರಗಲ್ಲುಗಳನ್ನು ಕುರಿತ ಲೇಖನಗಳನ್ನು ಪ್ರಕಟಿಸಿದ್ದರು. ವೀರಗಲ್ಲುಗಳ ಜೊತೆಗೆ ಮಾಸ್ತಿಗಲ್ಲುಗಳು ಮತ್ತು ನಿಸಿಧಿಗಲ್ಲುಗಳೂ ಸ್ಮಾರಕಗಳ ವರ್ಗಕ್ಕೆ ಸೇರುತ್ತವೆಯಾದರೂ, ವೀರಗಲ್ಲುಗಳ ಪಾತ್ರವು ಸಾಂಸ್ಕೃತಿಕ ಅಧ್ಯಯನದ ಹಿನ್ನೆಲೆಯಲ್ಲಿ ವಿಶಿಷ್ಟ. 
 
ಯಾವುದೇ ಒಬ್ಬ ವ್ಯಕ್ತಿಯ ವೀರತನವು ಪ್ರಕಟಗೊಂಡ ಕಾರಣ, ಸನ್ನಿವೇಶ ಮತ್ತು ಪರಿಣಾಮಗಳು ಹಾಗೂ ದಾಖಲೆಯಾಗಿ ಉಳಿದ ಮಾದರಿಯು ಆಯಾ ಸಂದರ್ಭದ ರಾಜಕೀಯ ಎನ್ನುವುದಕ್ಕಿಂತ ಸಾಮಾಜಿಕ ಪರಿಸ್ಥಿತಿ ಮತ್ತು ಬದುಕಿನ ಮೌಲ್ಯಗಳ ಅಭಿವ್ಯಕ್ತಿಯಾದ್ದರಿಂದ ಅವುಗಳ ಅಧ್ಯಯನ ನಿರಂತರ. ಇಂದು ಕಣ್ಣಿಗೆ ಕಾಣದಿದ್ದ ಒಂದು ವೀರಗಲ್ಲು ನಾಳೆ ಕಂಡಾಗ ಮತ್ತು ಮೊದಲು ಕಂಡಿದ್ದ ವೀರಗಲ್ಲಿನ ವಿಚಾರಗಳು ಮತ್ತಷ್ಟು ಸ್ಪಷ್ಟವಾದಾಗ ಇಂತಹ ಅಧ್ಯಯನದ ಸಾರ್ಥಕತೆ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಶೇಷಶಾಸ್ತ್ರಿ ಅವರ ‘ಕರ್ನಾಟಕದ ವೀರಗಲ್ಲುಗಳು’ ಮಹತ್ವ ಪಡೆಯುತ್ತದೆ. 
 
ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಕಾಣುವ ವೀರಗಲ್ಲುಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಅವುಗಳ ಮಹತ್ವವನ್ನು ಶೇಷಶಾಸ್ತ್ರಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಸ್ಮಾರಕಗಳ ವರ್ಗಕ್ಕೆ ಸೇರುವ ವೀರಗಲ್ಲುಗಳನ್ನು ಹಾಕಿಸುತ್ತಿದ್ದ ಉದ್ದೇಶ, ವಿವಿಧ ರೀತಿಯ ಹೋರಾಟಗಳಲ್ಲಿ ಮತ್ತು ಸಂಘರ್ಷಗಳಲ್ಲಿ ಮಡಿದ ವೀರರ ನೆನಪನ್ನು ಶಾಶ್ವತವಾಗಿ ಉಳಿಸಲು ಮಡಿದವರ ಸಂಬಂಧಿಗಳೋ ಆಪ್ತರೋ ಹಾಕಿಸುತ್ತಿದ್ದ ವೀರಗಲ್ಲುಗಳು ಆಯಾ ಸಮಾಜದ ಸಾಂಸ್ಕೃತಿಕ ಅಧ್ಯಯನಕ್ಕೆ ಮಹತ್ವದ ಆಕರಗಳು. ಇಂತಹ ಆಕರಗಳನ್ನು ಕುರಿತ ಅಧ್ಯಯನವು 1982ರಲ್ಲೇ ಮೊದಲ ಬಾರಿಗೆ ಪ್ರಕಟವಾಗಿದೆ. ಆ ನಂತರವೂ ಶೇಷಶಾಸ್ತ್ರಿ ಅವರು ತಮ್ಮ ಅಧ್ಯಯನದ ವಿಷಯದಲ್ಲಿ ಆಸಕ್ತಿಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ, ಶಿಸ್ತಿನಿಂದ ಅಧ್ಯಯನ ಮುಂದುವರಿಸಿರುವುದನ್ನು ಪರಿಷ್ಕೃತ ಪ್ರಕಟಣೆಯಲ್ಲಿ ಕಾಣಬಹುದು. ಮೊದಲಿನ ಪಠ್ಯವನ್ನು ಬಿಡದೆ, ಹಿಂದಿನ ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸುವ ಹೊಸ ದಾಖಲೆಗಳ ನೆರವಿನಿಂದ ಸಂಶೋಧನೆಯು ನಿಂತನೀರಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಮೊದಲಿದ್ದ ಚಿತ್ರಗಳ ಜೊತೆಗೆ ಮತ್ತಷ್ಟು ಚಿತ್ರಗಳ ಸೇರ್ಪಡೆಯಾಗಿದೆ. 
 
ಗೋಗ್ರಹಣ, ಪೆಣ್ಬುಯ್ಯಲ್, ಕಳ್ಳರೊಡನೆ ಹೋರಾಟ, ಬೇಟೆಯ ಸಂಧರ್ಭಗಳಲ್ಲಿನ ವೀರಮರಣ, ವೀರಗಲ್ಲುಗಳ ಶಿಲ್ಪ, ಅವುಗಳ ವೈಶಿಷ್ಟ್ಯ, ವೀರಗಲ್ಲುಗಳನ್ನು ಕೆತ್ತಿರುವ ಶಿಲ್ಪಿಗಳು, ಅವರು ಪಡೆದ ಸಂಭಾವನೆ, ವೀರಗಲ್ಲು ಶಾಸನಗಳಲ್ಲಿನ ಸಾಹಿತ್ಯಿಕ ಮತ್ತು ವೀರಮೌಲ್ಯ ಇತ್ಯಾದಿ ಅನೇಕ ವಿಚಾರಗಳನ್ನು ತಿಳಿಯಲು ಶೇಷಶಾಸ್ತ್ರಿ ಅವರ ಕೃತಿ ಮಹತ್ವದ ಆಕರಗ್ರಂಥವಾಗಿದೆ.
 
ಶೇಷಶಾಸ್ತ್ರಿ ಅವರ ‘ಕರ್ನಾಟಕದ ವೀರಗಲ್ಲುಗಳು’ ಕೃತಿಯು ನಂತರ ಸ್ಮಾರಕಗಳನ್ನು ಕುರಿತು ಅಧ್ಯಯನ ಮಾಡಿರುವ ಹಲವು ವಿದ್ವಾಂಸರ ನೆರವಿಗೆ ಬಂದಿದೆ. ಈಗಿನ ತಮ್ಮ ಕೃತಿಯ ಪರಿಷ್ಕರಣೆಯಲ್ಲಿ ಅವರು, ತಮ್ಮ ಅಧ್ಯಯನದ ನಂತರ ಹೊಸದಾಗಿ ಬೆಳಕಿಗೆ ಬಂದಿರುವ ಅನೇಕ ಹೊಸ ವೀರಗಲ್ಲುಗಳ ನೆರವನ್ನು ಮತ್ತು ಅಧ್ಯಯನಗಳ ನೆರವನ್ನು ಸಾರ್ಥಕವಾಗಿ ಬಳಸಿಕೊಂಡಿರುವುದು ಈ ಪರಿಷ್ಕೃತ ಪ್ರಕಟಣೆಯ ವೈಶಿಷ್ಟ್ಯ. 
 
ಯಾವುದೇ ಅಧ್ಯಯನಕ್ಕೆ ಕೊನೆ ಇಲ್ಲ. ವಿಷಯದಲ್ಲಿ ಆಸಕ್ತಿ ಉಳಿಸಿಕೊಂಡರೆ ಅಧ್ಯಯನ ಮುಂದುವರಿಯುತ್ತದೆ. ಇದರಿಂದ ಆಯಾ ಪ್ರದೇಶಗಳ ಸಂಸ್ಕೃತಿಯ ವಿವಿಧ ಮುಖಗಳ ಪರಿಚಯವಾಗುತ್ತದೆ. ತಮ್ಮ ಕೃತಿಯನ್ನು ಆಧರಿಸಿದ ಅಧ್ಯಯನಗಳನ್ನೂ, ತಮ್ಮ ಕೃತಿಯ ಪರಿಷ್ಕರಣೆಯ ಸಂದರ್ಭದಲ್ಲಿ ಆಕರಗಳಾಗಿ ಬಳಸಿಕೊಳ್ಳುವುದು ಸಂಶೋಧನೆಗೆ ಒಂದು ಹೊಸ ಮಾರ್ಗವನ್ನು ಸೂಚಿಸುತ್ತದೆ. 
 
ಈ ಪರಿಷ್ಕೃತ ಅಧ್ಯಯನದಲ್ಲಿ, ಹಿಂದೆ ಕಾಣದಿದ್ದ ದೇಕಬ್ಬೆಯ ಶಾಸನದ ಹಿಂಬದಿಯ ಶಿಲ್ಪದ ವಿವರಗಳು, ನಂಬಿಹಳ್ಳಿಯ ವೀರಗಲ್ಲು ಶಿಲ್ಪ ಇತ್ಯಾದಿ ಅನೇಕ ಹೊಸ ವಿಚಾರಗಳು ಸೇರ್ಪಡೆಯಾಗಿ ಅಧ್ಯಯನದ ಮುಂದುವರಿಕೆಯ ಸಾರ್ಥಕತೆಯನ್ನು ಮನಗಾಣಿಸಿವೆ. ನಿಂತ ನೀರಾಗದ ಇಂತಹ ಸಂಶೋಧನೆಗಳು ಮತ್ತು ಪ್ರಕಟಣೆಗಳು ಸಾಗತಾರ್ಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT