ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ವಿಭಾಗೀಯ ಕಚೇರಿ: ಭರವಸೆ

ದಾವಣಗೆರೆ ಕೆಎಸ್‌ಆರ್‌ಟಿಸಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ
Last Updated 12 ಫೆಬ್ರುವರಿ 2017, 10:10 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನನ್ನ ಅಧಿಕಾರಾವಧಿಯಲ್ಲೇ ಚಿತ್ರದುರ್ಗಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಮಂಜೂರು ಮಾಡಿಸುತ್ತೇನೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ನಗರದ ನೂತನ ಕೆಎಸ್ಆರ್‌ಟಿಸಿ ಡಿಪೊದಲ್ಲಿ ಶನಿವಾರ ದಾವಣಗೆರೆ ವಿಭಾಗದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವಿಭಾಗೀಯ ಕಚೇರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಈ ನಿಗಮವನ್ನು ಪುನರ್ ರಚಿಸಿ, ಐದು  ಡಿಪೊಗಳಿಗೆ ಒಂದು ವಿಭಾಗೀಯ ಕಚೇರಿ ಸ್ಥಾಪಿಸುವ ಆಲೋಚನೆ ಇದೆ. ಈ ವೇಳೆ ಚಿತ್ರದುರ್ಗಕ್ಕೂ ಹೊಸ ವಿಭಾಗೀಯ ಕಚೇರಿ ನೀಡಲಾಗುವುದು’ ಎಂದರು.

‘ಚಿತ್ರದುರ್ಗದ ಹಳೇ ಡಿಪೊದ 10 ಎಕರೆ ಜಾಗದಲ್ಲಿ ₹ 40 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ, ಹೊಳಲ್ಕೆರೆಯಲ್ಲಿ ₹ 15 ಕೋಟಿ ವೆಚ್ಚದಲ್ಲಿ ಚಾಲಕರ ಮತ್ತು ತಾಂತ್ರಿಕ ತರಬೇತಿ ಶಾಲೆ, ಹೊಸ ಬಸ್ ನಿಲ್ದಾಣ ಸ್ಥಾಪಿಸಲಾಗುತ್ತಿದೆ. ಹೊಸದುರ್ಗದಲ್ಲಿ ಡಿಪೊ ಆರಂಭವಾಗಿದೆ. ನಿಲ್ದಾಣ ನಿರ್ಮಾಣ ಹಂತದಲ್ಲಿದೆ. ಚಳ್ಳಕೆರೆಯಲ್ಲಿ ಶೀಘ್ರ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿವೆ’ ಎಂದರು.ಚಿತ್ರದುರ್ಗದ ನೂತನ ಡಿಪೊ 10 ದಿನಗಳೊಳಗೆ ಕಾರ್ಯಾರಂಭ ಮಾಡಲಿದೆ’ ಎಂದು ಮಾಹಿತಿ ನೀಡಿದರು.

‘ಜೆ–ನರ್ಮ್‌ ಯೋಜನೆಯಡಿ ರಾಜ್ಯಕ್ಕೆ 60 ನಗರಸಾರಿಗೆ ಬಸ್‌ಗಳನ್ನು ನೀಡಲಾಗಿತ್ತು. ಇದರಲ್ಲಿ ಚಿತ್ರದುರ್ಗಕ್ಕೆ 10 ಬಸ್‌ಗಳನ್ನು ಕೊಡಲಾಗಿದೆ. ಮಾರ್ಚ್ ಒಳಗೆ ಎರಡನೇ ಹಂತದಲ್ಲಿ 14 ನಗರ ಸಾರಿಗೆ ಮಿನಿ ಬಸ್‌ಗಳನ್ನು ಚಿತ್ರದುರ್ಗಕ್ಕೆ ನೀಡಲಾಗುತ್ತಿದೆ.  ಎಲ್ಲಾ ಕಡೆ ಬಸ್‌ ಸೌಲಭ್ಯ ಜನರಿಗೆ ಸಿಗಲಿದೆ. ಇದನ್ನು ನಗರವಲ್ಲದೆ ಅಕ್ಕಪಕ್ಕದ ಗ್ರಾಮಗಳಿಗೂ ವಿಸ್ತರಿಸಲಾಗುತ್ತದೆ’ ಎಂದರು.

ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಬರುವ ಮಾರ್ಚ್ ನಂತರ ಬಿಎಸ್–3 ವಾಹನ ನೋಂದಣಿ ಇರುವುದಿಲ್ಲ. ಏನಿದ್ದರೂ ಬಿಎಸ್–4  ಮಾದರಿಯನ್ನು ಮಾತ್ರ ಖರೀದಿ ಮಾಡಲಾಗುತ್ತದೆ. 2020ರ ವೇಳೆಗೆ ಬಿಎಸ್–6 ಮಾದರಿ ವಾಹನಗಳು ರಸ್ತೆಗೆ ಇಳಿಯಲಿವೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಈ ವಿಧಾನ ಅಳವಡಿಸಲಾಗುತ್ತಿದೆ’ ಎಂದರು.

‘2017–18ನೇ ಸಾಲಿನಲ್ಲಿ ಕೆಎಸ್‌ಆರ್‌ಟಿಸಿಯಿಂದ 1,300 ನೂತನ ಬಸ್‌ಗಳನ್ನು ಖರೀದಿಸಲಾಗುತ್ತದೆ. ಅಂತರರಾಜ್ಯ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ಕೇರಳದ ಕಾಸರಗೋಡಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸಲಾಗುತ್ತದೆ. ಆದರೆ, ಅಂತರರಾಜ್ಯ ಮಾರ್ಗದಲ್ಲಿ ಪರವಾನಗಿ ಪಡೆಯಲು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮಾತ್ರ ಸಮಸ್ಯೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ಹೇಳಿದರು.

ದಾವಣಗೆರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಿವಾಸ್, ಎಂಜಿನಿಯರ್ ದಿವಾಕರ್, ವಿಭಾಗೀಯ ಕಚೇರಿ ಸಂಚಾರ ಅಧಿಕಾರಿ ಅರುಣ್, ತಾಂತ್ರಿಕ ಅಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರದುರ್ಗದಿಂದ ಹೊಸ ಸೇವೆಗಳು

‘ಚಿತ್ರದುರ್ಗದಿಂದ ಕರ್ನಾಟಕ ಸಾರಿಗೆ ಬಸ್‌ಗಳ ಜತೆ ರಾಜಹಂಸ, ವೈಭವ್ ಬಸ್‌ಗಳ ಸೇವೆ ಪ್ರಾರಂಭಿಸಲಾಗುತ್ತದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ‘ಈ ಮಾರ್ಗದಿಂದ ನಿಗಮಕ್ಕೆ ನಷ್ಟವುಂಟಾಗುವಂತಿದ್ದರೆ ಮುಂದುವರಿಸಲು ಕಷ್ಟಕರವಾಗುತ್ತದೆ’ ಎಂದು ಅವರು ಹೇಳಿದರು.

‘ಊಹಾಪೋಹದ ಹೇಳಿಕೆ ಸರಿಯಲ್ಲ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಅವರು ಮಾಡಿರುವ ಆರೋಪ ಅಸಂಬದ್ಧವಾಗಿದ್ದು, ಇಂಥ ಊಹಾಪೋಹದ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು.

‘ಹೈಕಮಾಂಡ್‌ಗೆ ಕಪ್ಪ ಕೊಟ್ಟು ಸಿದ್ದರಾಮಯ್ಯ ಸಿ.ಎಂ ಸ್ಥಾನ ಉಳಿಸಿಕೊಂಡಿದ್ದಾರೆ’ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹೀಗೆ ಹೇಳುವಂತೆ ಬಿಜೆಪಿಯ ಕೇಂದ್ರ ನಾಯಕರು ಹೇಳಿಕೊಟ್ಟಿರಬಹುದು’ ಎಂದು ಟೀಕಿಸಿದರು.

‘ಕಾಂಗ್ರೆಸ್ ಮುಖಂಡರ ಮನೆಗಳ ಮೇಲಿನ ಐಟಿ ದಾಳಿಯಲ್ಲಿ ಏನು ವಿಶೇಷವಿದೆ’ ಎಂದು ಪ್ರಶ್ನಿಸಿದ ಅವರು, ‘ದಾಳಿಗೊಳಗಾದವರು ಉದ್ಯಮಿಗಳು. ಅವರಲ್ಲಿ ಸೂಕ್ತ ದಾಖಲೆ ಇರುತ್ತವೆ. ಹಣ ಇದ್ದ ಕೂಡಲೇ ಹೇಗೆ ಭ್ರಷ್ಟರಾಗುತ್ತಾರೆ’ ಎಂದರು.

ಉತ್ತರ ಭಾಗದಲ್ಲಿ ಚುನಾವಣೆ ನಡೆಯುತ್ತಿರುವ ವೇಳೆ ಕಾಂಗ್ರೆಸ್ಸಿಗರನ್ನು ಹೀಗೆ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT