ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತ ಜೀವನ ಸದುಪಯೋಗಪಡಿಸಿಕೊಳ್ಳಿ

ಸರ್ಕಾರಿ ನಿವೃತ್ತ ನೌಕರರ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಸ್ವಾಮಿರಾವ ಕುಲಕರ್ಣಿ ಸಲಹೆ
Last Updated 13 ಫೆಬ್ರುವರಿ 2017, 10:05 IST
ಅಕ್ಷರ ಗಾತ್ರ

ಸುರಪುರ: ‘ಸೇವೆಯಿಂದ ನಿವೃತ್ತನಾಗಿದ್ದೇನೆ. ಮುಂದೆ ಏನು ಎಂಬ ಅಭದ್ರತೆಯ ಚಿಂತೆ ಬೇಡ. ಸರ್ಕಾರ ನಿವೃತ್ತ ನೌಕರರಿಗೆ ಪಿಂಚಣಿ ನೀಡುತ್ತಿದೆ. ನಮ್ಮ ವಿಶ್ರಾಂತ ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ಅನುಭವಗಳನ್ನು ಯುವಕರಿಗೆ ಧಾರೆ ಎರೆದು ಉತ್ತಮ ಸಮಾಜದ ನಿರ್ಮಾಣಕ್ಕೆ ಯತ್ನಿಸಬೇಕು’ ಎಂದು ಕಲಬುರ್ಗಿ ಎನ್‌.ವಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಸ್ವಾಮಿರಾವ ಕುಲಕರ್ಣಿ ಸಲಹೆ ನೀಡಿದರು.

ನಗರದ ಸರ್ಕಾರಿ ಕನ್ಯಾ ಮಾದರಿಯ ಶಾಲೆಯ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ 13ನೇ ನಿವೃತ್ತ ನೌಕರರ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.

‘ನಿವೃತ್ತನಾಗಿದ್ದೇನೆ ವಯಸ್ಸಾಯಿತು. ನನ್ನಿಂದ ಏನಾಗದು ಎಂಬ ಕೀಳರಿಮೆ ಬೇಡ. ವಯಸ್ಸಾಗಿದೆ ಎಂಬ ಭಾವನೆಯ ಮುಪ್ಪು. ನಿವೃತ್ತಿಯ ನಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮುಪ್ಪು ಎಂಬ ಭ್ರಮೆ ತನ್ನಿಂದ ತಾನೇ ದೂರವಾಗುತ್ತದೆ. ಕಾರಣ ನಿವೃತ್ತರು ಸದಾ ಕ್ರಿಯಾಶೀಲರಾಗಿರಬೇಕು’ ಎಂದು ಸಲಹೆ ನೀಡಿದರು.

‘ನಿವೃತ್ತ ಜೀವನವನ್ನು ವ್ಯರ್ಥವಾಗಿ ಕಳೆಯಬೇಡಿ. ಸೇವಾವಧಿಯಲ್ಲಿ ಕಂಡುಕೊಂಡ ಅನುಭವಗಳನ್ನು ವಿಶ್ರಾಂತ ಜೀವನದಲ್ಲಿ ಇತರರಿಗೆ ಮಾರ್ಗದರ್ಶನ ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಅನುಭವ ಅಂದರೆ ಬೇರೇನು ಅಲ್ಲ. ತಪ್ಪಿನ ಅರಿವನ್ನು ಪುನರಾವಲೋಕನ ಮಾಡಿಕೊಳ್ಳುವುದು’ ಎಂದು ಅಭಿಪ್ರಾಯಪಟ್ಟರು.

‘ನೈಜ ಬದುಕಿನ ಪ್ರತಿಬಿಂಬದಂತಿರುವ ಕುಟ್ಟುವ, ಬೀಸುವ ಪದಗಳು, ಹಂತಿ ಹಾಡುಗಳು, ರೈತ ಗೀತೆಗಳು, ಮೈ ದಣಿವಾರಿಸುವ ಜನಪದ ಗೀತೆಗಳು ಎಲ್ಲೂ ಕೇಳಿ ಬರುತ್ತಿಲ್ಲ. ಸಂಬಂಧಗಳು ಕಳಚಿಹೋಗಿವೆ. ನಿವೃತ್ತರ, ವಯೋವೃದ್ಧರ ಬದುಕು ಹೀನಾಯ ಸ್ಥಿತಿ ತಲುಪಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಬಾಲ್ಯದಲ್ಲಿ ಮಕ್ಕಳಿಗೆ ನಾಡು, ನುಡಿಯ, ನಮ್ಮ ಹಳ್ಳಿ ಸಂಸ್ಕೃತಿ, ಸಂಬಂಧಗಳ ಬಗ್ಗೆ ಅರಿವು ಮೂಡಿಸಿದ್ದರೆ ಇಂದು ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದಕ್ಕೆ ಕಾಲವನ್ನು ಶಪಿಸುವ ಬದಲು, ಇನ್ನೊಬ್ಬರನ್ನು ದೂಷಿಸುವ ಮೊದಲು ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

‘ಮನುಷ್ಯನ ಬದಲಾವಣೆಗೆ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ಪದ್ಧತಿಯಲ್ಲಿ ಬಳಸಲಾಗುತ್ತಿದ್ದ ಸಾಮ, ಬೇಧ, ದಂಡ ಪದ್ಧತಿಯನ್ನು ತೆಗೆದು ಹಾಕಲಾಗಿದೆ. ಆಧುನಿಕ ಶಿಕ್ಷಣ ಪದ್ಧತಿ ದೋಷಪೂರಿತವಾಗಿದೆ. ಬದುಕು ಕಟ್ಟಿಕೊಡುವ ನೀತಿ ಕಥೆಗಳಿಲ್ಲ. ಕರುಳ ಬಳ್ಳಿ ಕೂಡಿಸುವ ಜನಪದ ಕಾವ್ಯಗಳಿಲ್ಲ. ಭಾವ ಬೆಸೆಯುವ ಸಾಹಿತ್ಯವಿಲ್ಲ, ಮೌಲ್ಯಗಳು ಉಳ್ಳ ಪಾಠ ಪ್ರವಚನಗಳಿಲ್ಲ. ಅರೆನಗ್ನ ಸಂಸ್ಕೃತಿ ಮತ್ತು ವಿಕೃತ ಸಾಹಿತ್ಯ ಇವತ್ತು ಸಮಾಜವನ್ನು ತಲ್ಲಣಗೊಳಿಸಿದೆ’ ಎಂದು ಕಳವಳ ವ್ಯಕ್ತ ಪಡಿಸಿದರು.

‘ಉದ್ಯೋಗಕ್ಕಾಗಿ ಶಿಕ್ಷಣವಲ್ಲ. ಬದುಕು ಕಟ್ಟಿಕೊಳ್ಳುವುದಕ್ಕಾಗಿ ಎಂಬ ಕಲ್ಪನೆ ಎಲ್ಲರಲ್ಲೂ ಮೂಡಬೇಕು. ದೀಪದಿಂದ ದೀಪ ಹಚ್ಚಬೇಕು. ಪ್ರೀತಿಯಿಂದ ಕುಟುಂಬ ಕಟ್ಟಬೇಕು. ಕುಟುಂಬಗಳೆ ನಮಗೆ ಆದರ್ಶವಾಗಬೇಕು. ಈ ನಿಟ್ಟಿನಲ್ಲಿ ನಿವೃತ್ತರು ಮನೆಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು’ ಎಂದು ಹೇಳಿದರು.

ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಶಂಭನಗೌಡ ಪಾಟೀಲ ಉದ್ಘಾಟಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜಪ್ಪ ನಿಷ್ಠಿ ದೇಶಮುಖ, ಉಪಾಧ್ಯಕ್ಷ ವೆಂಕೋಬಾಚಾರ್ಯ ಜೋಶಿ. ಕಲಬುರ್ಗಿ ವಲಯ ಅಧ್ಯಕ್ಷ ನಾಗಣ್ಣ ಗಣಜಲಖೇಡ, ಜಿಲ್ಲಾ ಘಟಕದ ಅಧ್ಯಕ್ಷ ಸದಾಶಿವಪ್ಪ ಚಂಡರಕಿ, ಖಜಾನೆ ಅಧಿಕಾರಿ ಮಂಗಲಕುಮಾರ ಗುಡುಗುಂಟಿ ಇದ್ದರು. 

ಹಿರಿಯ ನಿವೃತ್ತರಾದ ತಿರುಮಲರಾವ ಅವಂಟಿ, ಬಸಲಿಂಗಪ್ಪ ಸಜ್ಜನ್, ಗುರುಲಿಂಗಯ್ಯ ಮಠ, ಚನ್ನಪ್ಪ ಬಳಿಗಾರ, ಭೀಮರಾಯ ಮಾಗಿ, ಬಸವಂತ್ರಾಯ ದೇವರಗೋನಾಲ, ವಾಮನರಾವ ಕೆಂಭಾವಿ, ಚಂದ್ರಶೇಖರ ಮಂಗಲಗಿ, ಬಸಪ್ಪ ಗಲಗಿನ ಅವರನ್ನು ಸನ್ಮಾನಿಸಲಾಯಿತು.  ಭೀಮಶೇನರಾವ ರೌಡಕುಂದಿ ಸ್ವಾಗತಿಸಿದರು. ಮಲ್ಲಾರಾವ ಕುಲಕರ್ಣಿ ನಿರೂಪಿಸಿದರು. ರತನಸಿಂಗ್ ಠಾಕೂರ ವಂದಿಸಿದರು.

* ನಂಬಿಕೆ, ವಿಶ್ವಾಸ, ಸಂಬಂಧಗಳ ತಳಹದಿಯ ಮೇಲೆ ಮಕ್ಕಳನ್ನು ಬೆಳೆಸಿದರೆ ಇಳಿವಯಸ್ಸಿನಲ್ಲಿ ಅಭದ್ರತೆಯ ಭಯ ಕಾಡುವುದಿಲ್ಲ.
ಡಾ. ಸ್ವಾಮಿರಾವ ಕುಲಕರ್ಣಿ, ನಿವೃತ್ತ ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT