ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಅಧಿಕಾರಕ್ಕೆ ಬರಲು ಒಗ್ಗಟ್ಟಾಗಿ

ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ, ಅರವಿಂದ ಲಿಂಬಾವಳಿ ಸಲಹೆ
Last Updated 13 ಫೆಬ್ರುವರಿ 2017, 13:12 IST
ಅಕ್ಷರ ಗಾತ್ರ

ತುಮಕೂರು: ಯುವ ಮೋರ್ಚಾ ಕಾರ್ಯಕರ್ತರು ರಚನಾತ್ಮಕ, ಆಂದೋಲನಾತ್ಮಕ ಮತ್ತು ಸಂಘಟನಾತ್ಮಕ ಕಾರ್ಯಕ್ರಮಗಳ ಮೂಲಕ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸಲಹೆ ನೀಡಿದರು.

ನಗರದ ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಪಕ್ಷದ ಸಿದ್ಧಾಂತ, ಸಾಧನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹೊಸಬರನ್ನು ಪಕ್ಷಕ್ಕೆ ಕರೆತರುವ ಜತೆಗೆ ಪಕ್ಷದಲ್ಲಿರುವವರು ಹೊರ ಹೋಗದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ಏಪ್ರಿಲ್ 15ರೊಳಗೆ ಬೂತ್‌ ಮಟ್ಟದಲ್ಲಿ ಸಕ್ರಿಯ ಯುವಕರನ್ನು ಗುರುತಿಸಿ ಕೇಂದ್ರ ಸಮಿತಿಗೆ ಶಿಫಾರಸು ಮಾಡಬೇಕು. ಪಕ್ಷ ಸೇರ್ಪಡೆಗೊಂಡವರಿಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ಯುವ ಕಾರ್ಯಕರ್ತರು ಯಾವುದೇ ವ್ಯಕ್ತಿಗೆ ಬದ್ಧರಾಗದೇ ಪಕ್ಷಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಆಗ ಅಧಿಕಾರ ತನ್ನಿಂತಾನೆ ಹುಡುಕಿಕೊಂಡು ಬರುತ್ತದೆ. ಯಾವುದೇ ವದಂತಿ, ಆಂತರಿಕ ಕಲಹಗಳಿಗೆ ಕಿವಿಗೊಡಬಾರದು ಎಂದು ಸೂಚಿಸಿದರು.

ಇಂದಿನ ಯುವ ಮೋರ್ಚಾವು ನಾಳಿನ ಬಿಜೆಪಿ ಆಗಿರುವ ಕಾರಣ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಆ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನಿಸಬೇಕು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ 150 ಪ್ಲಸ್‌ ಗುರಿಯನ್ನು ಸಾಧಿಸಲು ಸಹಕರಿಸಬೇಕು. ಅದೇ ರೀತಿ 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ 50 ಕ್ಕೂ ಹೆಚ್ಚು ಸೀಟು ಗೆಲ್ಲಿಸಿಕೊಡಬೇಕು ಎಂಬ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಆಣತಿಯನ್ನು ಎಲ್ಲರೂ ಪಾಲಿಸಬೇಕು ಎಂದರು.

ಪ್ರಸಕ್ತ ವರ್ಷ ಪಂಡಿತ್ ದೀನ್‌ ದಯಾಳ್ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ಜಯಂತಿ ಅಂಗವಾಗಿ ‘ಮನೆ ಮನೆಗೆ ಬಿಜೆಪಿ’ ಎಂಬ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದೆ. ಯುವ ಮೋರ್ಚಾ ಸೇರಿದಂತೆ ಪಕ್ಷದ ಎಲ್ಲರೂ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಜನರಲ್ಲಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಸಂಸದ ಪ್ರತಾಪಸಿಂಹ ಅವರು, ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಇದುವರೆಗೆ ನಡೆದಿರುವ ಎಲ್ಲಾ ವಿಚಾರಗಳಲ್ಲಿ ಯುವ ಮೋರ್ಚಾ ಉತ್ಸುಕತೆಯಿಂದ ಭಾಗವಹಿಸಿದೆ. ಕಾರ್ಯಕರ್ತರು ಅರ್ಚಕ ಪ್ರವೃತ್ತಿ ಬಿಟ್ಟು, ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು. ಕಾಂಗ್ರೆಸ್‌ ಮುಕ್ತ ರಾಜ್ಯ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.‘

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್‌, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ, ತುಮಕೂರು ಜಿಲ್ಲಾ ಉಸ್ತುವಾರಿ ಪ್ರೇಮ ಪ್ರಸಾದ್ ಶೆಟ್ಟಿ, ಬಸವರಾಜು, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತರಾಜು, ಮುಖಂಡರಾದ ಡಾ.ಎಂ.ಆರ್. ಹುಲಿನಾಯ್ಕರ್ ಇತರರು ಉಪಸ್ಥಿತರಿದ್ದರು.

ಕಾರ್ಯಕರ್ತರು ತಲೆ  ಕೆಡಿಸಿಕೊಳ್ಳಬೇಡಿ: ಜಿಲ್ಲಾ ಬಿಜೆಪಿಯಲ್ಲಿ ಗೊಂದಲ ಇರುವುದು ಸತ್ಯ. ಆದರೆ, ಯುವ ಮೋರ್ಚಾ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ಪಕ್ಷದಲ್ಲಿರುವ ಹಿರಿಯ ಮುಖಂಡರು ಕುಳಿತು ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ. ದೊಡ್ಡ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಬಿಜೆಪಿ ಹೆಚ್ಚು ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಬೇಕು ಎಂದು ಅರವಿಂದ ಲಿಂಬಾವಳಿ ಅವರು ಕಾರ್ಯಕರ್ತರಿಗೆ ಸೂಚಿಸಿದರು.

ಎಚ್‌ಎಂಟಿ ಕಾರ್ಖಾನೆಯಲ್ಲಿ ಉದ್ದಿಮೆ ಸ್ಥಾಪನೆಗೆ  ಪ್ರಸ್ತಾವ

ಎಚ್‌ಎಂಟಿ ಕಾರ್ಖಾನೆಗೆ ಸೇರಿದ 125 ಎಕರೆ ಜಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದಾದರೂ ಉದ್ದಿಮೆ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಳೆದ 10 ವರ್ಷದಿಂದ ಎಚ್‌ಎಂಟಿ ಜಾಗ ನನೆಗುದಿಗೆ ಬಿದ್ದಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದ್ದ ಎಚ್‌ಎಂಟಿ ಜಾಗವನ್ನು ಪ್ರಯೋಜನಕ್ಕೆ ಬರುವ ರೀತಿಯಲ್ಲಿ ಬಳಸಿಕೊಳ್ಳಲು ಅಗತ್ಯ ಪ್ರಸ್ತಾವಯನ್ನು ಯುವ ಮೋರ್ಚಾ ಸಿದ್ಧಪಡಿಸಬೇಕು. ಆ ಸಮಗ್ರ ಪ್ರಸ್ತಾವವನ್ನು ಕೇಂದ್ರ ಸಚಿವರು ಹಾಗೂ ಪ್ರಧಾನಿಗೆ ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುವ ಉದ್ದಿಮೆ ಸ್ಥಾಪನೆಗೆ ಮನವಿ ಮಾಡುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಸಭೆಯ ನಿರ್ಣಯಗಳು

 - ಕೇಂದ್ರ ಬಜೆಟ್‌ನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು
- ಯುಪಿಎ, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಕುರಿತು ತಿಳಿಸುವುದು
- ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಹೋರಾಟ
- ಶಿರಾ ಘಟನೆ ಖಂಡಿಸಿ ಠಾಣೆ ಮುಂದೆ ಧರಣಿ
- ಎಚ್‌ಎಂಟಿ ಜಾಗ ಸದ್ಬಳಕೆಗೆ ಕೇಂದ್ರಕ್ಕೆ ಪ್ರಸ್ತಾವನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT