ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಬೆಳೆಸಲು ‘ಅಭಿಯಾನ ಸೀಡ್’

Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಒಂದೆಡೆ ಕಾಡಿನ ಜಾಗವನ್ನೆಲ್ಲಾ ನಾಡು ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾಡು ಉಳಿಸಲು ಅಲ್ಲಲ್ಲಿ ಪರಿಸರಪ್ರೇಮಿಗಳು ಹೊಸ ಪ್ರಯೋಗಗಳನ್ನು ಮಾಡುತ್ತಲಿದ್ದಾರೆ. ಅಂಥ ಪ್ರಯೋಗಗಳಲ್ಲಿ ಒಂದು, ಬೀಜದುಂಡೆ (ಸೀಡ್‌ಬಾಲ್). ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ದಂಪತಿಯ ಮಾರ್ಗದರ್ಶನದಲ್ಲಿ  ಬೀಜ ಉಳಿಸುವ ಅಭಿಯಾನ ಆರಂಭವಾಗಿದೆ. 

ಬೆಂಗಳೂರಿನ ಕನಕಪುರ ರಸ್ತೆಯ ಅಗರ ಗ್ರಾಮದ ತಾತಮಣಿಯಲ್ಲಿರುವ ಸ್ವಾನಂದಾಶ್ರಮದಲ್ಲಿ ಬೀಜದುಂಡೆ ತಯಾರಿಸುವ ನೇತೃತ್ವ ವಹಿಸಿರುವ ನೀರಜ್ ಕಾಮತ್ ಹಾಗೂ ವಿಜಯ್ ಅವರಿಂದ ಹೇಮಾವತಿಯವರು ಪರಿಕಲ್ಪನೆ ಪಡೆದುಕೊಂಡರು. ಈಗ ಕನಕಪುರ, ಚಿಂತಾಮಣಿ, ಮುಳಬಾಗಿಲು, ದೊಡ್ಡಬಳ್ಳಾಪುರ, ಶಿಡ್ಲಘಟ್ಟ, ಹೊಸಕೋಟೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಏನಿದು ಬೀಜದುಂಡೆ?
ಬೀಜದುಂಡೆ (ಸೀಡ್‌ಬಾಲ್) ತಯಾರಿ ವಿದೇಶಗಳಲ್ಲಿ ಜನಪ್ರಿಯಗೊಂಡಿದೆ. ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಪ್ರತಿವರ್ಷ ಬೀಜದುಂಡೆ ತಯಾರಿಸಿ ಹೆಲಿಕಾಪ್ಟರ್ ಮೂಲಕ ಕಾಡಿನಲ್ಲಿ ಬಿತ್ತನೆ ಮಾಡಲಾಗುತ್ತದೆ. ಫಿರಂಗಿಗಳ ಮೂಲಕವೂ ಬೀಜದುಂಡೆಗಳನ್ನು ಕಾಡಿಗೆ ಎಸೆಯುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.

ಬೇರೆ ಬೇರೆ ಜಾತಿಯ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿ ನಂತರ ಕಾಡಿನಲ್ಲಿ ಹರಡುವ ಕಾರ್ಯಕ್ರಮವಿದು. ಕೆಂಪು ಮಣ್ಣು, ಕೆರೆಮಣ್ಣು ಅಥವಾ ಆಯಾ ಪ್ರದೇಶಕ್ಕೆ ಅನುಗುಣವಾದ ಮಣ್ಣು, ಸಾವಯವ ಗೊಬ್ಬರ, ಸೆಗಣಿ, ಎರೆಗೊಬ್ಬರ ಅಥವಾ ಗಂಜಲ, ಹೊಂಗೆ, ಹುಣಸೆ, ಮಾವು, ಕಾಡಿನ ಮರದ ಆರೋಗ್ಯಕರ ಬೀಜಗಳಿಂದ ಇದನ್ನು ತಯಾರಿಸಲಾಗುವುದು.

ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ವರ್ಷ ಒಂದು ಲಕ್ಷ ಸೀಡ್‌ಬಾಲ್‌ಗಳನ್ನು ತಯಾರಿಸಿ ಅವುಗಳನ್ನು ಕಾಡಿನಲ್ಲಿ ಹರಡುವ ಗುರಿ ಹೊಂದಲಾಗಿದೆ. ಈಗಾಗಲೇ ಸುಮಾರು 13ಸಾವಿರ ಬೀಜದುಂಡೆಗಳನ್ನು ತಯಾರಿಸಲಾಗಿದೆ. ಬೇರೆ ಬೇರೆ ತಾಲ್ಲೂಕುಗಳಲ್ಲಿ ಅಲ್ಲಿನ ಯೋಜನೆಯ ಫಲಾನುಭವಿಗಳಿಗೆ ಮಾರ್ಗದರ್ಶನ ನೀಡಿ, ಅವರಿಂದಲೇ ಬೀಜದುಂಡೆ ತಯಾರಿಸಿ ಮಳೆಗಾಲದಲ್ಲಿ ಕಾಡಿನಲ್ಲಿ ಹರಡಲಾಗುತ್ತದೆ.

ಬಾಲ್‌ನಲ್ಲಿರುವ ಗೊಬ್ಬರದ ಅಂಶದಿಂದ ಬೀಜ ಮೊಳಕೆಯೊಡೆದು ಗಿಡ ಬಹುಬೇಗ ದೊಡ್ಡದಾಗುತ್ತದೆ. ಬೀಜದುಂಡೆ ಬಳಸುವುದರಿಂದ ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಉದ್ಯೋಗಸ್ಥ ಯುವಕ ಯುವತಿಯರನ್ನು ಭಾಗಿಗಳನ್ನಾಗಿಸುವುದು ಸುಲಭ ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಈ ಮೂಲಕ ಅಳಿವಿನಂಚಿನಲ್ಲಿರುವ ಅಪರೂಪದ ಕಾಡ ಮರಗಳ, ಔಷಧೀಯ ಸಸ್ಯಗಳ ಬೀಜ ಸಂಗ್ರಹಿಸಿ ಬಳಸಬಹುದು.

ಬೀಜ ಬೆಳೆಯಲು ಬೇಕಾದ ಗೊಬ್ಬರದ ಪ್ರಮಾಣ ಉಂಡೆಯಲ್ಲಿರುವುದರಿಂದ ಗಿಡ ಆರೋಗ್ಯಕರವಾಗಿ ಬೆಳೆಯುತ್ತದೆ. ಬೀಜ ಸಿಕ್ಕಿದಾಗ ಉಂಡೆ ತಯಾರಿಸಿ ಜೋಪಾನವಾಗಿಟ್ಟು ಬೇಕಾದಾಗ ಬಳಸಿಕೊಳ್ಳಬಹುದಾಗಿದೆ. ಹೂವಿನ ಬೀಜಗಳು, ತುಳಸಿ ಬೀಜಗಳು, ತರಕಾರಿ ಬೀಜಗಳನ್ನು ಉಂಡೆ ಮೂಲಕ ಬಿತ್ತಬಹುದು. ರಸ್ತೆ ಬದಿಯಲ್ಲಿ ಬೀಜದುಂಡೆಗಳನ್ನು ಬಿತ್ತುವ ಮೂಲಕ ಗಿಡ ಮರಗಳನ್ನು ಬೆಳೆಸಬಹುದು.

ಯಾವುದೇ ಗೊಬ್ಬರ ನೀಡದೆ, ಆರೈಕೆ ಮಾಡದೆ ಕಾಡಿನಲ್ಲಿ ತನ್ನಷ್ಟಕ್ಕೆ ಬೆಳೆಯುವ ಮರದ ಬೀಜಕ್ಕೆ ಗೊಬ್ಬರ ಉಣಿಸಿ ನಾಟಿ ಮಾಡಲು ಇಲ್ಲಿ ಅವಕಾಶವಿದೆ. ಸಾಮಾನ್ಯವಾಗಿ ಕಾಡಿನಲ್ಲಿ ಪ್ರಾಣಿಪಕ್ಷಿಗಳು ತಂದು ಹಾಕುವ ಬೀಜಗಳಿಂದ ಮೊಳಕೆ ಬಂದು ಯಾವುದೇ ಪೋಷಕಾಂಶವಿಲ್ಲದೆ ಗಿಡಗಳು ಬೆಳೆಯುತ್ತವೆ. ಆದರೆ ಇಲ್ಲಿ ಸೂಕ್ತ ಪೋಷಕಾಂಶ ಸಿಗುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

ಕಾಡಿಗೆ ಎಸೆಯುವ ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಭಾಗವಹಿಸುವುದು ಸುಲಭವಾಗುತ್ತದೆ. ಬೇಸಿಗೆ ಕಾಲದಲ್ಲಿ ಬೀಜದುಂಡೆ ತಯಾರಿಸಿಟ್ಟು, ಮಳೆಗಾಲದಲ್ಲಿ ಕಾಡಿಗೆ ಎಸೆಯಬಹುದು. ಆದರೆ ಬೀಜದುಂಡೆಗಳನ್ನು ತೇವಾಂಶ ಇಲ್ಲದ ಶೆಡ್, ಮನೆ ಅಥವಾ ಪಾಲಿಹೌಸ್‌ಗಳಲ್ಲಿ ಸಂಗ್ರಹಿಸಿಡಬೇಕು. ತೇವಾಂಶವಿದ್ದಲ್ಲಿ, ಮಳೆ ನೀರು ಉಂಡೆ ಮೇಲೆ ಬಿದ್ದಲ್ಲಿ ಬೀಜ ಮೊಳಕೆ ಒಡೆದು ಹಾಳಾಗಬಹುದು.

ಸೀಡ್ ಬಾಲ್ ತಯಾರಿ ಯಾಕೆ?: ಸೀಡ್ ಬಾಲ್ ತಯಾರಿಯಿಂದ ನರ್ಸರಿ, ಗಿಡ ಹುಟ್ಟಿ ಬೇಲಿ ಹಾಕುವ, ಗುಂಡಿ ತೆಗೆಯುವ ನೀರೊದಗಿಸುವ ಖರ್ಚುಗಳಿಲ್ಲ. ಬೇಕಾದಲ್ಲಿ ಸೀಡ್ ಬಾಲನ್ನು ಬಿಸಾಡಬಹುದು. ಸೀಡ್ ಬಾಲ್ ತಯಾರಿಸಿದವರೇ ಕಾಡಿಗೆ ಬಿಸಾಡುವ ಕಾರಣ ಸಮಯ ಮತ್ತು ಹಣಕಾಸಿನ ಉಳಿತಾಯವಾಗುತ್ತದೆ.

ತಯಾರಿಕೆ ಹೀಗೆ
ಮೂರು ಭಾಗದಷ್ಟು ಮಣ್ಣಿಗೆ, ಒಂದು ಭಾಗದಷ್ಟು ಸೆಗಣಿ ಗೊಬ್ಬರ ಮಿಶ್ರಣ ಮಾಡಬೇಕು. ಅದರಲ್ಲಿನ ತೇವಾಂಶ ಆಧರಿಸಿ ನೀರನ್ನು ಉಪಯೋಗಿಸಿಕೊಳ್ಳಬಹುದು. ಆರೋಗ್ಯಕರ ಬೀಜಗಳನ್ನು ಆರಿಸಿ ಉಂಡೆಯ ಮಧ್ಯಭಾಗದಲ್ಲಿ ಬರುವ ಹಾಗೆ ಬಿಗಿಯಾಗಿ ಚೆಂಡಿನ ಆಕಾರದಲ್ಲಿ ಉಂಡೆ ತಯಾರಿಸಬೇಕು. ಉಂಡೆ ಗಟ್ಟಿಯಾಗಿ ಅಂಟಿಕೊಳ್ಳಲು ಸ್ವಲ್ಪ ಪ್ರಮಾಣ ಜೇಡಿಮಣ್ಣನ್ನು ಬಳಸಬಹುದು.

ಉಂಡೆಯನ್ನು ಒಂದೆರಡು ದಿನ ಬಿಸಿಲಲ್ಲಿ ಒಣಗಿಸಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಹೀಗೆ ತಯಾರಿಸಿದ ಉಂಡೆಯನ್ನು ನಾಲ್ಕರಿಂದ ಆರು ತಿಂಗಳುಗಳ ಕಾಲ ಜೋಪಾನವಾಗಿ ಇಟ್ಟುಕೊಳ್ಳಬೇಕು. ನಂತರ ಬೇಕಾದಾಗ ಇದನ್ನು ಕಾಡಿಗೆ ಎಸೆಯಬಹುದಾಗಿದೆ. ಬೀಜದುಂಡೆ ತಯಾರಿಸಿ 2 ಗಂಟೆ ಬಿಸಿಲಲ್ಲಿಟ್ಟು ಒಣಗಿಸಿ ನಂತರ ಉಪಯೋಗಿಸಬಹುದು. ಸಂಪರ್ಕಕ್ಕೆ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣಪತಿ ಭಟ್– 9480271077.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT