ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಆಂದೋಲನ

ವಾಚಕರ ವಾಣಿ
Last Updated 13 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ನಮ್ಮಲ್ಲಿನ ನಾಗರಿಕತೆಯನ್ನು ಪ್ರಶ್ನಿಸುವ ಸನ್ನಿವೇಶಗಳು ಇತ್ತೀಚೆಗೆ ಹೆಚ್ಚು ಘಟಿಸುತ್ತಿರುವುದು ಶೋಚನೀಯ. ರಸ್ತೆ ಅಪಘಾತಗಳು ಸಂಭವಿಸಿದಾಗ, ರಕ್ತಸಿಕ್ತ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ಆಸ್ಪತ್ರೆಗೆ ಸಾಗಿಸುವ ಬದಲು ಅವರನ್ನು ಕೌತುಕದಿಂದ ನೋಡುತ್ತ, ನರಳಾಟ ಚಿತ್ರೀಕರಿಸಿಕೊಳ್ಳುವ ಮಟ್ಟಿಗೆ ನಮ್ಮ ನಾಗರಿಕತೆ ಕುಸಿದಿದೆ.
 
ಜೀವನದಲ್ಲಿ ಸಾವಿರಾರು ಕನಸುಗಳನ್ನು ಹೊತ್ತ ಯಾವುದೋ ಕುಟುಂಬದ ಮಕ್ಕಳು ದೀನರಾಗಿ ‘ನನ್ನನ್ನು ಬದುಕಿಸಿ’ ಎಂದು ಗೋಗರೆದರೂ ಯಾವುದೋ ಅಗೋಚರ ಭಯದಿಂದಲೋ ಅಥವಾ ‘ಈ ಉಸಾಬರಿ ನಮಗೇಕೆ’ ಎಂಬ ಹೊಣೆರಹಿತ ಧೋರಣೆಯಿಂದಲೋ ಅವರಿಗೆ ನೆರವು ನೀಡಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ. ನಮ್ಮ ಒಂದು ನಿಟ್ಟುಸಿರಿನಲ್ಲಿ ಇಡೀ ಪ್ರಕರಣ ಕರಗಿಹೋಗುತ್ತಿದೆ. 
 
ಸುಪ್ರೀಂ ಕೋರ್ಟ್ ಈ ನಿಟ್ಟಿನಲ್ಲಿ ಸೂಕ್ತ ತೀರ್ಪು ನೀಡಿದ್ದು, ಅಪಘಾತದ ಸಂದರ್ಭದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಯಾವುದೇ ವ್ಯಕ್ತಿಯ  ವಿವರ, ವಿಳಾಸ ಕೇಳುವಂತಿಲ್ಲವೆಂದು ಹೇಳಿದೆ. ಸಹಾಯ ಮಾಡಿದ ವ್ಯಕ್ತಿಗೆ ವಿಚಾರಣೆಯ ನೆಪದಲ್ಲಿ ತೊಂದರೆ ನೀಡಬಾರದೆಂದು ತೀರ್ಪಿತ್ತಿದೆ.
 
ಈಗ ಗಾಯಾಳುಗಳ ₹ 25 ಸಾವಿರದವರೆಗಿನ ತಕ್ಷಣದ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೂ, ಜನರಲ್ಲಿನ ಹಳೆಯ ಅವ್ಯಕ್ತ ಭಯ ಇನ್ನೂ ದೂರವಾಗಿಲ್ಲ. ಆದ್ದರಿಂದ, ಇಂತಹ ಸನ್ನಿವೇಶ ತಪ್ಪಿಸಲು ಇರುವ ಸೂಕ್ತ, ಶಾಶ್ವತ ಕ್ರಮವೆಂದರೆ ಜನರಲ್ಲಿ ಜಾಗೃತಿ ಮೂಡಿಸುವುದು.
 
ಈ ಉದ್ದೇಶಕ್ಕೆ ಎಲ್ಲಾ ಮಠಾಧೀಶರು, ರಾಜಕೀಯ ವ್ಯಕ್ತಿಗಳು, ಶಾಲಾ-ಕಾಲೇಜುಗಳು, ಮಾಧ್ಯಮಗಳು, ಪೊಲೀಸ್, ಸ್ವಯಂ-ಸೇವಾ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕು. ಇದು ಅರಿವಿನ ಆಂದೋಲನವಾಗಿ ಬೆಳೆಯಬೇಕು. ಮನುಷ್ಯರು ಮಾತ್ರವಲ್ಲದೆ, ಪ್ರಾಣಿಪಕ್ಷಿಗಳ ರಕ್ಷಣೆಯೆಡೆಗೂ ಸಂವೇದನಾಶೀಲರಾದಾಗ ಮಾತ್ರ ನಾಗರಿಕ ಸಮಾಜ ಎಂಬ ಪದಕ್ಕೆ ಅರ್ಥ ಬರುತ್ತದೆ.
–ಆನಂದ ಎನ್.ಎಲ್., ಚಿಕ್ಕಬಳ್ಳಾಪುರ        
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT