ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಕ್ರೀಟ್‌ ಕಾಣದ ಒಳರಸ್ತೆಗಳು

ಪ್ರತಿಷ್ಠಿತ ಬಡಾವಣೆಗಳಾದ ತರಳಬಾಳು, ವಿದ್ಯಾನಗರದಲ್ಲಿ ಅನಿಯಮಿತ ತ್ಯಾಜ್ಯ ಸಂಗ್ರಹಣೆ
Last Updated 14 ಫೆಬ್ರುವರಿ 2017, 7:22 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ವಾರ್ಡ್‌ ನಂ 38ರ ವ್ಯಾಪ್ತಿಯಲ್ಲಿ ಬರುವ ವಿದ್ಯಾನಗರ, ತರಳಬಾಳು ಬಡಾವಣೆ, ರಂಗನಾಥ ಬಡಾವಣೆ, ಎಲ್ಐಸಿ ಕಾಲೊನಿಗಳು ಹಂದಿ, ತ್ಯಾಜ್ಯದ ರಾಶಿಯಿಂದ ಮುಕ್ತವಾಗಿಲ್ಲ.

ಉಪಮೇಯರ್‌ ಆಗಿರುವ ಬೆಳವನೂರು ನಾಗರಾಜಪ್ಪ ಅವರ ವಾರ್ಡ್‌ನಲ್ಲಿ ದೊಡ್ಡ ದೊಡ್ಡ ಬಂಗಲೆಗಳ ನಡುವೆ ಖಾಲಿ ನಿವೇಶನಗಳಿದ್ದು, ಬಹುತೇಕ ಖಾಲಿ ನಿವೇಶನಗಳು ಹಂದಿ ಗೂಡಾಗಿವೆ. ಜಾಲಿ ಗಿಡಗಳು, ಪೊದೆ ಗಳಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚಿದೆ. ವಿದ್ಯಾನಗರದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗಳು ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಮನೆಗಳೆಲ್ಲ ಕೆಸರುಮಯ. ಬಹುತೇಕ ಕಿರುದಾರಿಗಳು ಕಾಂಕ್ರೀಟ್‌ ಕಾಮಗಾರಿ ಯಿಂದ ದೂರ ಉಳಿದಿವೆ. ಬಳಸು ದಾರಿ ಗಳಲ್ಲಿ ಇರುವ ಖಾಲಿ ನಿವೇಶನಗಳಲ್ಲಿ ತ್ಯಾಜ್ಯದ ರಾಶಿ ಸುರಿಯಲಾಗಿದೆ.

ಎನ್‌.ಎಚ್‌ 4 ಗೆ ಅಂಟಿಕೊಂಡಿರುವ ಅಭಿವೃದ್ಧಿ ಹೊಂದಿದ ಬಡಾವಣೆಯೂ ಹೌದು. ಹೆದ್ದಾರಿ ಪಕ್ಕ ಹಾದು ಹೋಗಿರುವ ಸರ್ವಿಸ್‌ ರಸ್ತೆಯಲ್ಲಿ ತ್ಯಾಜ್ಯದ ತೊಟ್ಟಿಗಳನ್ನು ಇಡಲಾಗಿದೆ. ತೊಟ್ಟಿಗಳಲ್ಲಿ ಹಾಕುವ ಕಸದ ಅಸಮರ್ಪಕ ವಿಲೇವಾರಿಯಿಂದಾಗಿ ಈ ಭಾಗದಲ್ಲಿ ಜನ ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸ್ಥಿತಿ ಇದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗೃಹಿಣಿ ಸವಿತಾ ನಿಜಲಿಂಗಪ್ಪ, ‘ವಿದ್ಯಾನಗರಕ್ಕೆ ಶ್ರೀಮಂತ ಬಡಾವಣೆ ಎಂಬ ಖ್ಯಾತಿ ಇದೆ. ಆದರೆ, ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತದೆ. ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಸಿಬ್ಬಂದಿ ನಿಯಮಿತವಾಗಿ ಬರುವುದಿಲ್ಲ. ಹಾಗಾಗಿ ಜನ ಮನೆಯಲ್ಲಿಟ್ಟುಕೊಂಡ ಕಸವನ್ನು ಖಾಲಿ ನಿವೇಶನಕ್ಕೆ ಎಸೆಯು ತ್ತಾರೆ. ಇದರಿಂದ ಸ್ವಚ್ಛತೆ ಕಾಣದಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ಹಂದಿ ಸಾಕಣೆದಾರರು ತ್ಯಾಜ್ಯ ಹಾಗೂ ಖಾಲಿ ನಿವೇಶನ ಇರುವ ಕಡೆಗಳಲ್ಲಿ ಹಂದಿ ಬಿಟ್ಟು ಹೋಗಿ ಬಿಡುತ್ತಾರೆ. ನಗರಕ್ಕೆ ‘ಸ್ಮಾರ್ಟ್ ಸಿಟಿ’ಯ ಗರಿ ಮೂಡಿದೆ. ಆದರೆ, ಹಂದಿ ಮತ್ತು ತ್ಯಾಜ್ಯದ ರಾಶಿಯಿಂದ ಸಂಪೂರ್ಣ ಮುಕ್ತ ಮಾಡಲು ಪಾಲಿಕೆ ವಿಫಲ ವಾಗಿದೆ’ ಎಂದು ದೂರಿದರು.

ಉದ್ಯಾನಗಳ ಅಸಮರ್ಪಕ ನಿರ್ವಹಣೆ: ವಿದ್ಯಾನಗರ ಬಡಾವಣೆಯ ಆಕರ್ಷಣೆ ಗಳಲ್ಲಿ ರವೀಂದ್ರನಾಥ್‌ ಉದ್ಯಾನವೂ ಒಂದು. ಸಮರ್ಪಕ ನಿರ್ವಹಣೆಯಿಂದಾಗಿ ವಾಯು ವಿಹಾರಿಗಳ ಪಾಲಿಗೆ ನೆಮ್ಮದಿಯ ತಾಣವೂ ಹೌದು. ಆದರೆ, ಇದನ್ನು ಹೊರತುಪಡಿಸಿ ಉಳಿದ ಬಡಾವಣೆ ಗಳಲ್ಲಿರುವ ನಾಲ್ಕು ಉದ್ಯಾನಗಳಿಗೆ ಸೂಕ್ತ ನಿರ್ವಹಣೆಯೇ ಇಲ್ಲ.  ಕೆಲವು ಉದ್ಯಾನಗಳಲ್ಲಿ ಕಲ್ಲಿನ ಬೆಂಚುಗಳು ಮಾತ್ರ ಇವೆ. ಎಂದೋ ನೆಟ್ಟ ಗಿಡಗಳು ಒಣಗಿವೆ. ನಿರ್ವಹಣೆ ಕಾಣದ ಉದ್ಯಾನ ಗಳು ಖಾಲಿ ನಿವೇಶನ ದಂತೆಯೇ ತ್ಯಾಜ್ಯ ಸುರಿಯುವ ಸ್ಥಳಗಳಾಗಿವೆ.

‘ಮನೆಯ ಬಳಿಯೇ ಇರುವ ಚಿಕ್ಕ ಉದ್ಯಾನ ಹಾಳುಬಿದ್ದಿದೆ. ಹಾಗಾಗಿ ನಿತ್ಯ ಬೆಳಿಗ್ಗೆ ವಾಯುವಿಹಾರಕ್ಕಾಗಿ ವಿದ್ಯಾ ನಗರ 2ನೇ ಬಸ್‌ ನಿಲ್ದಾಣದ ಸಮೀಪವಿರುವ ಉದ್ಯಾನಕ್ಕೆ ಹೋಗು ತ್ತೇನೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಉದ್ಯಾನ ನಿರ್ವಹಣೆ ಮಾಡುವಂತೆ ಮನವಿ ಮಾಡಲಾಯಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ತರಳಬಾಳು ಬಡಾವಣೆಯ ನಿವಾಸಿ ರಶ್ಮಿ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು. ‘ಆಯಾ ಬಡಾವಣೆಗಳಲ್ಲಿರುವ ಉದ್ಯಾನಗಳು ಸರಿಯಾಗಿದ್ದರೆ ವಾಯು ವಿಹಾರಕ್ಕೆ ದೂರ ತೆರಳುವ ಅಗತ್ಯ ಇರು ವುದಿಲ್ಲ. ಗೃಹಿಣಿಯರು ಮನೆವಾರ್ತೆಯ ಜತೆಗೆ ವಾಯುವಿಹಾರಕ್ಕೆ ಹೋಗಲೂ ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕುಡುಕರ ತಾಣ: ಆರೋಪ

ವಿದ್ಯಾನಗರ ಬಡಾವಣೆಯಲ್ಲಿ ನೂತನ ಪದವಿ ಕಾಲೇಜು ಸಮೀಪ ಇರುವ ದೊಡ್ಡ ಆಟದ ಮೈದಾನದಲ್ಲಿ ಕಟ್ಟಡ ಕಾಮಗಾರಿ ತ್ಯಾಜ್ಯವನ್ನು ಸುರಿಯ ಲಾಗಿದೆ. ದೊಡ್ಡ ಪ್ರಮಾಣದ ತ್ಯಾಜ್ಯದ ತೊಟ್ಟಿಗಳನ್ನು ಇಡಲಾಗಿದೆ. ಹಾಗಾಗಿ ಆಟದ ಮೈದಾನವೋ ತ್ಯಾಜ್ಯದ ಘಟಕವೋ ಎಂಬ ಅನುಮಾನ ಬರು ವಷ್ಟು ಕಸದ ರಾಶಿ ಕಾಣಬಹುದು. ಜತೆಗೆ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ.

‘ಖಾಲಿ ಸ್ಥಳವಾದ ಈ ದೊಡ್ಡ ಮೈದಾನದಲ್ಲಿ ಒಂಟಿಯಾಗಿ ಬೆಳಗಿನ ಜಾವ ಓಡಾಡಲು ಭಯವಾಗುತ್ತದೆ. ಜನಸಂದಣಿ ಕಡಿಮೆ ಇರುವುದರಿಂದ ಈ ಮೈದಾನ ಕುಡುಕರ
ತಾಣವಾಗಿದೆ’ ಎನ್ನುತ್ತಾರೆ ನಿವಾಸಿ ಸಂಗಮೇಶ.

ಪಾಲಿಕೆ ಸದಸ್ಯರು ಏನಂತಾರೆ?

ಈ ವಾರ್ಡ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಿಸಲು ಏಳು ಮಂದಿ ಪೌರ ಕಾರ್ಮಿಕರು ಇದ್ದಾರೆ. ಇವರಲ್ಲಿ ಒಂದಿಬ್ಬರು ನಿಯಮಿತವಾಗಿ ಬರುತ್ತಿಲ್ಲ ಎಂಬ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಸ್ವಚ್ಛತೆಗೆ ಮೊದಲ ಆದ್ಯತೆ. ಕಾಂಕ್ರೀಟ್‌ ಕಾಮಗಾರಿಗೆ ₹ 2 ಕೋಟಿ ಅನುದಾನ ಬಿಡುಗಡೆಯಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಮುಖ್ಯ ಉದ್ಯಾನದಂತೆ ಇತರೆ ಉದ್ಯಾನಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಎಲ್ಲ ಉದ್ಯಾನಗಳಲ್ಲೂ ವಾಕಿಂಗ್ ಪಾಥ್ ನಿರ್ಮಿಸಲು ಯೋಚಿಸಲಾಗಿದೆ.

* ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಸಿಬ್ಬಂದಿ ನಿಯಮಿತವಾಗಿ ಬರುವುದಿಲ್ಲ. ಹಾಗಾಗಿ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ.
ಲಕ್ಷ್ಮಿಕಾಂತ, ಎಲ್‌ಐಸಿ ಕಾಲೊನಿ ನಿವಾಸಿ

* ಗಿಡಗಳನ್ನು ಆದಷ್ಟು ನೆಡಬೇಕು. ಗಿಡ ಮರಗಳಿಂದ ಕಂಗೊಳಿಸುತ್ತಿದ್ದರೆ ಬಡಾವಣೆ ಇನ್ನಷ್ಟು ಚಂದ ಕಾಣುತ್ತದೆ.
ದೀಪಕ್, ವಿದ್ಯಾನಗರ ನಿವಾಸಿ

* ಈಗೀಗ ನೀರಿನ ಸಮಸ್ಯೆ ಉಂಟಾಗಿದೆ. ವಾರಕ್ಕೊಮ್ಮೆ ನೀರು ಪೂರೈಕೆ ಯಾಗುತ್ತಿದೆ. ಹಂದಿಮುಕ್ತ ನಗರ ಮಾಡಲು ಪಾಲಿಕೆ ಕ್ರಮ ಕೈಗೊಳ್ಳಬೇಕು.
ಭೈರವೇಶ್ವರ, ವಿದ್ಯಾನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT