ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿ, ಸಮಿತಿಗಳಿಂದಲೂ ಸಿಗದ ರಕ್ಷಣೆ

‘ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸೋಮಶೇಖರ ಸಿ.ಬಾದಾಮಿ ವಿಷಾದ
Last Updated 14 ಫೆಬ್ರುವರಿ 2017, 7:40 IST
ಅಕ್ಷರ ಗಾತ್ರ
ಶಿವಮೊಗ್ಗ: ‘ಶಾಲೆಗಳಲ್ಲೂ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ಘಟನೆಗಳಿಂದ ಮಕ್ಕಳ ಭವಿಷ್ಯದ  ಮೇಲೆ ದುಷ್ಪರಿಣಾಮ ಉಂಟಾಗುತ್ತದೆ’ ನ್ಯಾಯಾಧೀಶ ಸೋಮಶೇಖರ ಸಿ.ಬಾದಾಮಿ ಕಳವಳ ವ್ಯಕ್ತಪಡಿಸಿದರು.
 
ನಗರದ ಅಂಬೇಡ್ಕರ್‌ ಭವನದಲ್ಲಿ ಧಾರವಾಡ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರ ಆಯೋಜಿಸಿದ್ದ ‘ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಶಾಲೆಗಳಲ್ಲಿ ಅತ್ಯಾಚಾರದ ಪ್ರಕರಣಗಳು ನಡೆದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಾರೆ. ಅಂತಹ ಘಟನೆಗಳು ಯಾವ ಶಾಲೆಗಳಲ್ಲೂ ನಡೆಯದಂತೆ  ಕ್ರಮ ಕೈಗೊಳ್ಳಬೇಕು’ ಎಂದರು. ‘ಜಿಲ್ಲೆಯಲ್ಲಿ  46 ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದು  ಸಮಾಜ ಎಷ್ಟು ಕೀಳು ಮಟ್ಟದಲ್ಲಿದೆ ಎಂಬುದರ ಸೂಚಕ. ಮಕ್ಕಳ ರಕ್ಷಣೆಗಾಗಿ   ಕಾನೂನುಗಳು ಇದ್ದರೂ ಇಂತಹ ಘಟನೆಗಳು ಸಂಭವಿ ಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
 
‘ಮಕ್ಕಳ ರಕ್ಷಣೆಗಾಗಿ ಸಂವಿಧಾನದಲ್ಲಿ ಹಲವು ಕಾಯ್ದೆಗಳಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಅಭಿವೃದ್ಧಿ, ರಕ್ಷಣೆಗಾಗಿಯೇ ಇರುವ ಹಲವು ಇಲಾಖೆಗಳು ಈ ಕುರಿತು ಎಚ್ಚರಿಕೆ ವಹಿಸಬೇಕು. ಪೊಲೀಸರೂ  ಜಾಗೃತ ಗೊಳ್ಳಬೇಕು’ ಎಂದು ಕರೆ ನೀಡಿದರು.
 
‘ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳ ಹಕ್ಕು ಮತ್ತು ಅವರ ಬದುಕು ಕಸಿದುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಲು ಅವಕಾಶ  ನೀಡಬಾರದು. ಇಂತಹ ಕೃತ್ಯಗಳನ್ನು ಬಲವಾಗಿ ವಿರೋಧಿಸಬೇಕು’ ಎಂದರು.‘ಮಕ್ಕಳ ಅಭಿವೃದ್ಧಿಗಾಗಿ ಮಕ್ಕಳ ಅಕಾಡೆಮಿ, ಸಮಿತಿಗಳು ಸ್ಥಾಪನೆ ಯಾಗಿವೆ. ಆದರೆ, ಮಕ್ಕಳಿಗೆ ಸೂಕ್ತ ರಕ್ಷಣೆ  ಇಲ್ಲ. ಮಕ್ಕಳ ಅಕಾಡೆಮಿಗಳು, ಸಮಿತಿಗಳು ಮಕ್ಕಳಿಗೆ  ನೋವಾಗದಂತೆ, ಅವರು ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದರು.
 
‘ಎಲ್ಲಾ ಮಕ್ಕಳೂ ಶಾರೀರಿಕವಾಗಿ, ಬೌದ್ಧಿಕವಾಗಿ ವಿಕಾಸ ಹೊಂದಬೇಕು. ಅವರಿಗೆ ಪೌಷ್ಟಿಕ ಆಹಾರ, ಶಿಕ್ಷಣ ಹಾಗೂ ಎಲ್ಲಾ ಸೌಲಭ್ಯಗಳು ದೊರೆಯಬೇಕು. ಎಲ್ಲಾ ಮಕ್ಕಳು ನಿರ್ಭಯವಾಗಿ ಬದುಕು ವಂತಾಗಬೇಕು’ ಎಂದು ಹೇಳಿದರು. ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಹ.ಕೌಲಗಿ ಮಾತನಾಡಿ, ‘ಸಾಂಪ್ರದಾಯಿಕ ಹಬ್ಬಗಳ ಮಾದರಿಯಲ್ಲಿ ಮಕ್ಕಳ ಹಬ್ಬ ಆಚರಿಸಬೇಕು. ಎಲ್ಲರೂ ಸಂಭ್ರಮಿ ಸುವಂತೆ ಕಾರ್ಯಕ್ರಮ ರೂಪಿಸಬೇಕು. ಮಕ್ಕಳಲ್ಲಿನ ಸುಪ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು’ ಎಂದರು.
 
‘ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅವಕಾಶ ಕಲ್ಪಿಸುವುದು, ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಪುರಸ್ಕಾರ, ಅಂಗವಿಕಲರಿಗೆ ವಿಶೇಷ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವಗಳ ಜತೆಗೆ ಗಡಿಭಾಗದ ಮಕ್ಕಳಲ್ಲಿ ನಾಡಿನ ಕಲೆ, ಸಾಹಿತ್ಯಾಭಿರುಚಿ ಉತ್ತೇಜಿಸಲು ತರಬೇತಿ ಕಾರ್ಯಾಗಾರ ಮತ್ತು ಸಂವಾದ ಆಯೋಜಿಸಲಾಗುತ್ತಿದೆ’ ಎಂದರು.
 
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರ್ವೆ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕೆ.ಎಸ್.ಮಣಿ, ಅಕಾಡೆಮಿ ಸದಸ್ಯೆ ಭಾರತಿ, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಅಧ್ಯಕ್ಷೆ ಗೀತಾ ಶಿವಮೂರ್ತಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸುರೇಶ್ ಸೇರಿದಂತೆ ಇತರರು  ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT