ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕೊನೆಯ ಹೋರಾಟ; ಶ್ರೀನಿವಾಸಪ್ರಸಾದ್

ನಂಜನಗೂಡು ಉಪಚುನಾವಣೆ; ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಬೆಂಬಲಿಗರಿಂದ ಬಿಜೆಪಿ ಸೇರ್ಪಡೆ
Last Updated 15 ಫೆಬ್ರುವರಿ 2017, 11:57 IST
ಅಕ್ಷರ ಗಾತ್ರ
ನಂಜನಗೂಡು: ಉಪ ಚುನಾವಣೆ ನನ್ನ ರಾಜಕೀಯ ಜೀವನದ ಕೊನೆಯ ಹೋರಾಟ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್ ಹೇಳಿದರು. ತಾಲ್ಲೂಕಿನ ಸಿಂಧೂವಳ್ಳಿ ಸಮೀಪದ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಒಂದು ಹಂತದಲ್ಲಿ ರಾಜಕೀಯ ನಿವೃತ್ತಿ ಬಯಸಿದ್ದ ನನ್ನನ್ನು ರಾಜಕೀಯ ಷಡ್ಯಂತ್ರ ನಡೆಸಿ ಸಂಪುಟದಿಂದ ತೆಗೆದರು. ಸಚಿವ ಸ್ಥಾನದಿಂದ ಅವಮಾನ ಕರ ರೀತಿ ತೆಗೆದಿದ್ದನ್ನು ವಿರೋಧಿಸಿ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದೆ.
ಬಳಿಕ ಕ್ಷೇತ್ರದ ಮತದಾರರ ಅಭಿಪ್ರಾಯ ತಿಳಿಯಲು ಸ್ವಾಭಿಮಾನಿ ಸಮಾವೇಶ ನಡೆಸಿದೆ.

ಚಾಮರಾಜ ನಗರ, ತಿ.ನರಸೀಪುರ ಸೇರಿದಂತೆ ಎಲ್ಲಾ ಕಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಬಿಜೆಪಿಯಿಂದ ಸ್ಪರ್ಧಿಸುವಂತೆ ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷದವರಿಗೆ ತಮ್ಮ ಪಕ್ಷದಲ್ಲಿ ನನ್ನ ವಿರುದ್ಧ ಕಣಕ್ಕಿಳಿಸಲು ಅಭ್ಯರ್ಥಿ ಸಿಗದೆ ಜೆಡಿಎಸ್ ಪಕ್ಷದಿಂದ ಕೇಶವಮೂರ್ತಿ ಅವರನ್ನು ಕರೆತರುತ್ತಿದ್ದಾರೆ ಎಂದು ಟೀಕಿಸಿದರು.
 
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಆತ್ಮಗೌರವ ಇಟ್ಟುಕೊಂಡು ರಾಜಕಾರಣ ಮಾಡಿದವರು ಶ್ರೀನಿವಾಸ ಪ್ರಸಾದ್. ದಲಿತರಿಗೆ ಅನ್ಯಾಯವಾದಾಗ ಪಕ್ಷ ರಾಜಕಾರಣ ಮರೆತು ನ್ಯಾಯ ಒದಗಿಸಿದರು. ರಾಹುಲ್ ಗಾಂಧಿ ಬಂದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಿಗೆ ಗೌರವ ಇಲ್ಲವಾಗಿದೆ. ಇದರಿಂದಾಗಿ ಎಸ್.ಎಂ.ಕೃಷ್ಣ ರಾಜೀನಾಮೆ ನೀಡಿದರು ಎಂದು ಆರೋಪಿಸಿದರು.
 
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಶ್ರೀನಿವಾಸ ಪ್ರಸಾದ್ ಪಕ್ಷ ತ್ಯಜಿಸಿದ ಮೇಲೆ ಕಾಂಗ್ರೆಸ್‌ಗೆ ಶನಿಕಾಟ ಶುರುವಾಗಿದೆ. ಎಸ್.ಎಂ.ಕೃಷ್ಣ ಸಹ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುತ್ತಿದ್ದಾರೆ. ಅಹಿಂದ ವರ್ಗಗಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ನೀಡಿದ ಕೊಡುಗೆ ಏನು? ಹೈಕಮಾಂಡ್‌ಗೆ ಸಾವಿರಾರು ಕೋಟಿ ರೂಪಾಯಿ ನೀಡಿ ಕುರ್ಚಿ ಉಳಿಸಿಕೊಂಡಿದ್ದಾರೆ. ಅವರಿಗೆ ಶ್ರೀನಿವಾಸಪ್ರಸಾದ್ ಅವರಂತಹ ಪ್ರಾಮಾಣಿಕರು ಬೇಕಾಗಿಲ್ಲ. ಭ್ರಷ್ಟ ಸಚಿವರೊಂದಿಗೆ ರಾಜ್ಯದ ಲೂಟಿಯಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಎಂದರು.
 
ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿದರು. ತಾಲ್ಲೂಕಿನ 28 ಗ್ರಾ.ಪಂ ಒಟ್ಟು 420 ಸದಸ್ಯರು, ಸಾವಿರಾರು ಸಂಖ್ಯೆಯ ಬೆಂಬಲಿಗರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಶೋಭಾ ಕರಂದ್ಲಾಜೆ ಪಕ್ಷದ ಬಾವುಟ ನೀಡಿ ಸ್ವಾಗತ ಕೋರಿದರು.
 
ಮಾಜಿ ಸಚಿವ ಎ.ರಾಮದಾಸ್, ಎಸ್.ಮಹದೇವಯ್ಯ, ಕುಂಬರಳ್ಳಿ ಸುಬ್ಬಣ್ಣ, ಬಸವೇಗೌಡ, ಕಾ.ಪು. ಸಿದ್ದಲಿಂಗಸ್ವಾಮಿ, ಜಿ.ಪಂ ಸದಸ್ಯರಾದ ದಯಾನಂದಮೂರ್ತಿ, ಮಂಗಳಾ ಸೋಮಶೇಖರ್, ಸದಾನಂದ, ಮುಖಂಡರಾದ ಜಯದೇವ್, ಹರ್ಷ ವರ್ದನ್, ಡಾ.ಶಿವರಾಂ, ಡಾ.ಶೈಲಾ ಬಾಲರಾಜ್, ಕೆಂಡಗಣ್ಣಪ್ಪ, ಚಿಕ್ಕರಂಗ ನಾಯ್ಕ, ಕೃಷ್ಣಪ್ಪಗೌಡ, ವಿನಯ್ ಕುಮಾರ್, ನಗರಸಭೆ ಉಪಾಧ್ಯಕ್ಷ ಪ್ರದೀಪ್ ಹಾಜರಿದ್ದರು.

* ಸಿದ್ದರಾಮಯ್ಯ ಮಿತ್ರ ದ್ರೋಹಿ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ನನ್ನಿಂದ ನೆರವು ಪಡೆದರು. ಈಗ ನನಗೆ ದ್ರೋಹ ಮಾಡಿದರು
ಶ್ರೀನಿವಾಸಪ್ರಸಾದ್, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT