ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಳಿವಿಂಡಿನ ಕಲರವ

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಜಗತ್ತು ಕಂಡ ವಿಶಿಷ್ಟ ಪ್ರತಿಭಾವಂತರಲ್ಲಿ ಒಬ್ಬರು ಮಂಜೇಶ್ವರ ಗೋವಿಂದ ಪೈ. ವಿವಿಧ ಭಾಷೆಗಳಲ್ಲಿ ಅವರಿಗಿದ್ದ ಪರಿಣತಿ, ಇತಿಹಾಸ, ಭಾಷಾಶಾಸ್ತ್ರ, ಜಾನಪದ ಹೀಗೆ ಅವರ ಆಸಕ್ತಿಯ ಕ್ಷೇತ್ರಗಳೂ ವಿಶಿಷ್ಟವೇ. ಆಧುನಿಕ ಕನ್ನಡ ಕಾವ್ಯಕ್ಕೆ ಅವರು ಹಾಕಿದ ಅಡಿಪಾಯವಂತೂ ಬಹಳ ಮುಖ್ಯವಾದುದು.

ಅವರ ಪ್ರಮುಖ ಕವಿತಾ ಸಂಕಲನಗಳಲ್ಲಿ ಒಂದು ‘ಗಿಳಿವಿಂಡು’. ಕನ್ನಡ ಕಾವ್ಯದ ಅಭಿವ್ಯಕ್ತಿಯ ಹಲವು ಬಗೆಗಳನ್ನು ಒಂದೊಂದು ಗಿಳಿಯೆಂದು ಭಾವಿಸುವುದಾದರೆ ಇಲ್ಲಿ ಗಿಳಿಗಳ ದೊಡ್ಡದೊಂದು ಹಿಂಡೇ ಇದೆ. ಇದು ಮೊದಲು ಪ್ರಕಟವಾದುದು 1930ರಲ್ಲಿ.

ಮಂಗಳೂರಿನ ಕೊಡಿಯಾಲ್ ಬೈಲ್ ಪ್ರೆಸ್‌ನಲ್ಲಿ ಇದರ ಮುದ್ರಣ ನಡೆಯಿತು. ಬಾಲ ಸಾಹಿತ್ಯ ಮಂಡಲ ಲಿಮಿಟೆಡ್ ಈ ಪುಸ್ತಕವನ್ನು ಪ್ರಕಟಿಸಿತ್ತು. ಅಂದು ಈ ಪುಸ್ತಕದ ಬೆಲೆ ಹತ್ತು ಆಣೆಗಳು. ಇದರಲ್ಲಿ ಪುನಾರಚನೆಗಳು ಎಂದು ಹೇಳಬಹುದಾದ ಕೆಲವು ರಚನೆಗಳಿವೆ. ಇದರಲ್ಲಿ ಬಹಳ ಮುಖ್ಯವಾದುದು ವರ್ಡ್ಸ್‌ವರ್ತ್, ಟ್ಯಾಗೋರ್ ಮತ್ತು ಇಕ್ಬಾಲ್ ಅವರ ಪದ್ಯಗಳನ್ನು ಕನ್ನಡದಲ್ಲಿ ಮರುರಚಿಸಲು ಮಾಡಿದ ಪ್ರಯತ್ನಗಳು.

ಇಕ್ಬಾಲ್ ಅವರ ಸಾರೇ ಜಹಾಂಸೆ ಅಚ್ಛಾ ಗೀತೆಯನ್ನು ಅದೇ ಧ್ವನಿಯಲ್ಲಿ ಕನ್ನಡಕ್ಕೆ ತರುವ ಪ್ರಯತ್ನವೊಂದನ್ನು ಗೋವಿಂದ ಪೈಗಳು ಮಾಡಿದ್ದಾರೆ. ಇದು ಮೂಲ ಕವಿತೆಯ ಶಿಲ್ಪವನ್ನು ಕನ್ನಡಿಸುವ ಕ್ರಿಯೆಯಲ್ಲ. ಇದೊಂದು ಪುನಾರಚನೆ. ಕವಿತೆಯ ಒಟ್ಟು ಅರ್ಥದಲ್ಲಿ ಬದಲಾಗುವುದಿಲ್ಲ. ಆದರೆ ಶಿಲ್ಪ ಇಲ್ಲಿ ಹೊಸತೊಂದು ರೂಪ ಪಡೆಯುತ್ತದೆ. ಕನ್ನಡಕ್ಕೆ ಬೇಕಿರುವ ಒಂದು ರೂಪವನ್ನು ಇದು ತಳೆಯುತ್ತದೆ.

ವರ್ಡ್ಸ್‌ವರ್ತ್ ಕನ್ನಡಕ್ಕೆ ಬರುವಾಗಲು ಇದೇ ಸಂಭವಿಸುತ್ತದೆ. ಬೇಹಾಗ ರಾಗದಲ್ಲಿ ಹಾಡಲು ಅನುವಾಗುವಂತೆ ರಚಿಸಿರುವ ಯೇಸು–ಕೃಷ್ಣ ಎಂಬ ಕವಿತೆ ಕೂಡ ಗಮನಾರ್ಹವಾದುದು. ಇಲ್ಲಿರುವ ಕೆಲವು ಪದ ಮತ್ತು ಅಭಿವ್ಯಕ್ತಿಯನ್ನು ಹೇಗೆ ಅರ್ಥೈಸಬೇಕು ಎಂಬುದಕ್ಕೆ ಅಗತ್ಯವಿರುವ ಅಡಿಟಿಪ್ಪಣಿಯೂ ಇದರ ಜೊತೆಗೆ ಇದೆ.

ಇದರ ಅಗತ್ಯವಿಲ್ಲದೆಯೂ ಪದ್ಯವನ್ನು ಹಾಡಿಕೊಳ್ಳಬಹುದು. ಆದರೆ ಕವಿ ಬಯಸಿರುವ ಅರ್ಥ ದೊರೆಯುವುದಕ್ಕೆ ಈ ಅಡಿ ಟಿಪ್ಪಣಿ ಸಹಾಯ ಮಾಡುತ್ತದೆ. ಬೈಬಲ್ ಮತ್ತು ಗೀತೆಯನ್ನು ಒಟ್ಟಾಗಿಸಿದ ಗೀತೆಯಿದು. ಕೃಷ್ಣ ಮತ್ತು ಯೇಸು ಇಲ್ಲಿ ಒಂದಾಗಿದ್ದಾರೆ.

ಈ ಸಂಕಲನದಲ್ಲಿ ‘ತಾಯೆ ಬಾರ ಮೊಗವ ತೋರ’ ಎಂಬ ಕನ್ನಡನಾಡಿನ ಹಿರಿಮೆಯನ್ನು ತೋರುವ ಗೀತೆಯಿದ್ದಂತೆಯೇ ‘ತೌಳವ ಮಾತೆ’ಯನ್ನು ಸ್ತುತಿಸುವ ಗೀತೆಯೂ ಇದೆ. ಸಂಕಲನದ ಕೊನೆಯಲ್ಲಿ ಉಮರ್ ಖಯ್ಯಾಮನ ರುಬಯ್ಯಾತ್‌ಗಳ ಅನುವಾದದ ಝಲಕ್ ಒಂದನ್ನು ಕಾಣಬಹುದು. ಮುಂದೆ ಇದನ್ನು ಸಂಪೂರ್ಣವಾಗಿ ಕನ್ನಡಕ್ಕೆ ತರುವ ಕೆಲಸವನ್ನು ಡಿವಿಜಿಯವರು ಮಾಡಿದರು.

ಈ ಕೃತಿ ಈಗ ಆರ್ಕೈವ್ ತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಆಸಕ್ತರು ಇಲ್ಲಿರುವ ಕೊಂಡಿಯನ್ನು ಬಳಸಬಹುದು: http://bit.ly/2lGZ6Yx

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT