ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸು ಮಲ್ಲಿಗೆ’ಯ ಹಾಡುಗಳ ಘಮಲು

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಚಾಮುಂಡೇಶ್ವರಿ ಸ್ಟುಡಿಯೊದ ಪ್ರವೇಶ ದ್ವಾರದಿಂದ ಕಾರ್ಯಕ್ರಮದ ಸಭಾಂಗಣದವರೆಗೂ ಹೃದಯಾಕಾರದ ಕೆಂಪು ಬಲೂನುಗಳಿಂದ ಸಿಂಗಾರಗೊಂಡಿತ್ತು. ಇದೇನು ಸಿನಿಮಾ ಆಡಿಯೊ ಬಿಡುಗಡೆಯ ವೇದಿಕೆಯೊ ಅಥವಾ ‘ಪ್ರೇಮಿಗಳ ದಿನ’ದ ಆಚರಣೆಗೆ ಸಿದ್ದಗೊಂಡ ಸ್ಥಳವೊ ಎಂಬ ಗೊಂದಲ ಸುಳಿಯುತ್ತಿತ್ತು. ಆದರೆ, ವೇದಿಕೆ ಮುಂಭಾಗ ಬಲೂನು ಹಿಡಿದು ಗೆದ್ದ ಉತ್ಸಾಹದಲ್ಲಿ ನಿಂತಿದ್ದ ‘ಮನಸು ಮಲ್ಲಿಗೆ’ ಚಿತ್ರದ ನಿರ್ದೇಶಕ ಎಸ್‌. ನಾರಾಯಣ್‌ ಅವರ ಹಾಜರಿ ಆ ಗೊಂದಲವನ್ನು ನಿವಾರಿಸಿತು.

‘ನಮ್ಮ ಚಿತ್ರ ಪ್ರೇಮಿಗಳ ಕುರಿತಾದ್ದು. ಪ್ರೇಮಿಗಳ ದಿನದಂದೇ ಆ ಚಿತ್ರದ ಆಡಿಯೊ ಬಿಡುಗಡೆ ಮಾಡುತ್ತಿದ್ದೇವೆ ಎಂದ ಮೇಲೆ ಅದಕ್ಕೆ ವಿಶೇಷ ಮೆರುಗು ಬೇಕಲ್ಲವೇ? ಅದಕ್ಕೆ ಈ ವಿಶೇಷ ಅಲಂಕಾರ’ ಎಂದು ನಾರಾಯಣ್ ನಕ್ಕರು. ಆಡಿಯೊ ಬಿಡುಗಡೆ ಸಂಭ್ರಮಕ್ಕೆ ಸಾಕ್ಷಿಯಾಗಲು ರಾಜಕಾರಣಿಗಳು ಸೇರಿದಂತೆ, ನಿರ್ದೇಶಕರು ಹಾಗೂ ನಿರ್ಮಾಪಕರ ಬಳಗದವರು ಇಡೀ ಸಭಾಂಗಣವನ್ನು ಕಿಕ್ಕಿರಿದು ತುಂಬಿದ್ದರು.

‘ಪ್ರೇಮಕಥೆ ಹೇಳಿದರೆ ಜನ ಹಗಲು ರಾತ್ರಿ ಮರೆತು ಕೇಳುತ್ತಾರೆ. ಪ್ರೀತಿಗೆ ಇರುವ ಶಕ್ತಿಯೇ ಅದು. ಎಲ್ಲಾ ಚಿತ್ರರಂಗಗಳಲ್ಲಿ ಗೆದ್ದು ದಾಖಲೆ ಮಾಡಿರುವ ಚಿತ್ರಗಳು ಯಾವುದಾದರೂ ಇದ್ದರೆ, ಅದು ಪ್ರೇಮಕಥೆಯ ಚಿತ್ರಗಳು ಮಾತ್ರ. 2016ರಲ್ಲಿ ಹೊಸ ದಾಖಲೆ ಬರೆದ ಮರಾಠಿ ಚಿತ್ರ ‘ಸೈರಾಟ್‌’ನ ರಿಮೇಕ್‌ ‘ಮನಸು ಮಲ್ಲಿಗೆ’ ಎಂದು ನಾರಾಯಣ್ ಮಾತು ಆರಂಭಿಸಿದರು.

‘ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಈ ಚಿತ್ರ ನಿರ್ಮಿಸುವ ಸಲುವಾಗಿ ಚಿತ್ರದ ಹಕ್ಕು ಖರೀದಿಸಿರುವ ಜೀ ಸಂಸ್ಥೆ ಮತ್ತು ರಾಕ್‌ಲೈನ್ ವೆಂಕಟೇಶ್‌ ಅವರು, ಕನ್ನಡದಲ್ಲಿ ಮೊದಲಿಗೆ ನಿರ್ದೇಶಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಚಿತ್ರದ ಐದು ಹಾಡುಗಳನ್ನು ಒಬ್ಬೊಬ್ಬ ಅತಿಥಿಯಿಂದ ಬಿಡುಗಡೆ ಮಾಡಿಸಿ, ಪ್ರದರ್ಶಿಸಿದ ನಿರ್ದೇಶಕರು, ‘ಈ ಚಿತ್ರದಲ್ಲಿ ಹಳೆ ಬೇರು ಮತ್ತು ಹೊಸ ಚಿಗುರಿನ ಸಂಗಮವಾಗಿದೆ. ಅದಕ್ಕೆ ನನ್ನ ಕ್ಯಾಮೆರಾಮನ್ ಮನೋಹರ್ ಜೋಷಿ ಹಾಗೂ ಸಂಗೀತ ನಿರ್ದೇಶಕರಾದ ಅಜಯ್‌ ಮತ್ತು ಅತುಲ್ ಕಾರಣ. ಹಾಗಾಗಿ, ಹಾಡುಗಳಲ್ಲಿ ನನ್ನ ವಯಸ್ಸಿಗಿಂತ ಅವರ ವಯಸ್ಸು ಎದ್ದು ಕಾಣುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪೊಲೀಸ್ ಸ್ಟೋರಿ’ ಚಿತ್ರದ ಖಳನಟನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಮಹಾರಾಷ್ಟ್ರದ ಸತ್ಯಪ್ರಕಾಶ್ ಅವರ ಮಗ ನಿಶಾಂತ್ ‘ಮನಸು ಮಲ್ಲಿಗೆ’ಯ ನಾಯಕ. ‘ನನ್ನ ಪುತ್ರನೂ ಕನ್ನಡದಲ್ಲೇ ಸಿನಿಮಾ ಬದುಕು ಕಟ್ಟಿಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಸತ್ಯಪ್ರಕಾಶ್ ಸಂಭ್ರಮಿಸಿದರು. ‘ತಂದೆಯ ಇಚ್ಛೆಯಂತೆ ಸಿದ್ಧತೆ ಮಾಡಿಕೊಂಡು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ’ ಎಂದು ನಿಶಾಂತ್ ಬಾಯಿಪಾಠ ಮಾಡಿದ್ದ ಕನ್ನಡದ ಸಾಲುಗಳನ್ನು ಒಪ್ಪಿಸಿದರು.

‘ನಾರಾಯಣ್ ಅವರ ಆ್ಯಕ್ಷನ್‌ ಕಟ್‌ನಲ್ಲಿ ಅತ್ಯುತ್ತಮ ಚಿತ್ರ ನಿರ್ಮಿಸಿದ ತೃಪ್ತಿ ತಮಗಿದೆ’ ಎಂಬ ಭಾವ ರಾಕ್‌ಲೈನ್ ವೆಂಕಟೇಶ್ ಮತ್ತು ಜೀ ಸಂಸ್ಥೆಯ ಆಕಾಶ್ ಚಾವ್ಲಾ ಅವರ ಮುಖದಲ್ಲಿ ಕಂಡುಬಂತು.

ಸಚಿವ ಎಂ.ಬಿ. ಪಾಟೀಲ್, ಶಾಸಕ ಮುನಿರತ್ನ ಸೇರಿದಂತೆ ಕಾರ್ಯಕ್ರಮದಲ್ಲಿದ್ದ ಇತರ ಗಣ್ಯರು ಆಡಿಯೊ ಸಿ.ಡಿ. ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT