ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕರ ಹುಡುಕಾಟದ ಪ್ರಯತ್ನ...

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪ್ರತಿ ಸಿನಿಮಾದ ಹಿಂದೆ ಎರಡು ಕಥೆ ಇರುತ್ತದೆ. ಒಂದು ತೆರೆಯ ಮೇಲೆ ಕಾಣುವ ಕಥೆಯಾದರೆ, ಮತ್ತೊಂದು ತೆರೆಯ ಹಿಂದೆ ಸಿನಿಮಾ ತಯಾರಿಗೆ ತಂಡ ಪಡುವ ಪಡಿಪಾಟಲು. ಎರಡರ ಸಾಮೀಪ್ಯವನ್ನು ತೆರೆಯ ಮೇಲೆ  ತರುವ ವಿಭಿನ್ನ ಪ್ರಯತ್ನ ಮಾಡಿರುವುದು ‘ಗೋಲ್ಡನ್‌ ಏಜ್ ಫಿಲ್ಮ್‌ಹೌಸ್‌’. 

‘ವಿಶಾಲ ಹೃದಯದ ಕನ್ನಡಿಗರು’ ಕಿರುಚಿತ್ರ ನಿರ್ಮಿಸಿ, ಆ ಮೂಲಕ ಚಲನಚಿತ್ರ ಮಾಡಬೇಕು ಎಂದು ಹಂಬಲಿಸುತ್ತಿರುವ ಹೊಸಬರ ತಂಡವೊಂದು ನಿರ್ಮಾಪಕರಿಗಾಗಿ ನಡೆಸುತ್ತಿರುವ ಹುಡುಕಾಟವನ್ನು ಮತ್ತು ಚಿತ್ರರಂಗದಲ್ಲಿ ಹೊಸಬರ ಸ್ಥಿತಿಯನ್ನು ಕಿರುಚಿತ್ರದ ಮೂಲಕ ತೋರಿಸಿದ್ದಾರೆ.
ವಿಹಾನ್‌ ನಿರ್ದೇಶನದ ಈ ಕಿರುಚಿತ್ರ 20 ನಿಮಿಷವಿದೆ. ಇವರ ಏಳನೇ ಕಿರುಚಿತ್ರವಿದು. ತಂಡದ ಸದಸ್ಯರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು.

ಹುಡುಗಿಯನ್ನು ನೋಡಲು ಹೋಗುವ ಸನ್ನಿವೇಶದೊಂದಿಗೆ ಕಿರುಚಿತ್ರ ಆರಂಭವಾಗುತ್ತದೆ. ಸಿನಿಮಾ ನಿರ್ದೇಶನದ ಕನಸು ಕಟ್ಟಿಕೊಂಡಿರುವ  ಹುಡುಗ ತನ್ನ ಹಂಬಲದ ಜೊತೆಗೆ ತಾನು ಪಟ್ಟ ಕಷ್ಟಗಳನ್ನು ಹುಡುಗಿಯ ಬಳಿ ಹೇಳಿಕೊಳ್ಳುತ್ತಾನೆ. ಈ ಕಥೆಯಲ್ಲಿ ಆರು ಮಂದಿ ನಿರ್ಮಾಪಕರು ಬಂದು ಹೋಗುತ್ತಾರೆ.

ಏಳನೇ ನಿರ್ಮಾಪಕರ ಹುಡುಕಾಟದಲ್ಲಿರುವ ಚಿತ್ರದ ಹುಡುಗನ ಮೂಲಕ ನಿರ್ದೇಶಕರು ತಮ್ಮ  ನಿಜ ಜೀವನದ ಹುಡುಕಾಟವನ್ನು ಹೇಳ ಹೊರಟಿದ್ದಾರೆ.
ಸಮಸ್ಯೆಗಳನ್ನು ಹಾಸ್ಯದ ಒಡನಾಟದೊಂದಿಗೆ ಕಟ್ಟಿರುವ ಪ್ರಯತ್ನ ಮೆಚ್ಚುಗೆಯಾಗುತ್ತದೆ.

‘ಈ ಕಿರುಚಿತ್ರ ಮಾಡಿರುವ ಮುಖ್ಯ ಉದ್ದೇಶವೆಂದರೆ ನಮ್ಮ ನಿರ್ದೇಶನದ ಕೌಶಲ, ಪ್ರೊಡಕ್ಷನ್‌ ನಿಭಾಯಿಸುವ ಜಾಣ್ಮೆಯನ್ನು ಪರಿಚಯಿಸುವುದು. ಒಂದೊಂದು ಶಾಟ್‌ನಲ್ಲಿಯೂ ದೃಶ್ಯದ ಹೊರತಾಗಿ ಬೇರೆಯದೇ ವಿಷಯವನ್ನು ತಿಳಿಸಲು ಪ್ರಯತ್ನಿಸಿದ್ದೇವೆ. ನಿರ್ಮಾಪಕರು ಹಾಕಿಕೊಂಡಿರುವ ಟೀಶರ್ಟ್‌, ಅವರ ಹಿಂದೆ ಇಟ್ಟ ವಸ್ತುಗಳ ಹಿಂದೆ ಆ ಸಂದೇಶವನ್ನು ತಲುಪಿಸುವ ಉದ್ದೇಶವಿದೆ’ ಎನ್ನುತ್ತಾರೆ ವಿಹಾನ್‌.

ಇಪ್ಪತ್ತು ನಿಮಿಷದ ಈ ಕಿರುಚಿತ್ರದ ಚಿತ್ರೀಕರಣಕ್ಕೆ ತಂಡ ತೆಗೆದುಕೊಂಡಿದ್ದು, ಮೂರು ದಿನ. ಪ್ರತಿದಿನ ಎಂಟು ಗಂಟೆ ಚಿತ್ರೀಕರಣಕ್ಕೆ ಮೀಸಲಿಟ್ಟಿತ್ತು. ಕೊನೆಯ ದಿನ ಮಾತ್ರವೇ ಹನ್ನೆರಡು ಗಂಟೆ ಇದಕ್ಕಾಗಿ ವ್ಯಯಿಸಿದೆ.

‘ಶೂಟಿಂಗ್‌ ಪ್ರಾರಂಭಿಸುವ ಮೊದಲೇ ಯೋಜನಾಬದ್ಧವಾಗಿ ತಯಾರಿ ನಡೆಸಿರುವುದರಿಂದ ಚಿತ್ರೀಕರಣಕ್ಕೆ ಹೆಚ್ಚೇನು ಕಷ್ಟಪಡುವ ಅಗತ್ಯ ಎದುರಾಗಿಲ್ಲ’ ಎನ್ನುತ್ತದೆ ತಂಡ.

ಹಣಕಾಸಿನ ಕೊರತೆಯ ನಡುವೆಯೂ ಡಬ್ಬಿಂಗ್‌, ಕ್ಯಾಮೆರಾ ವರ್ಕ್‌, ವಿಡಿಯೊ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಿರುವುದು ತಂಡದ ಪ್ಲಸ್‌ ಪಾಯಿಂಟ್‌. ಕೆನಾನ್‌ 1dx ಕ್ಯಾಮೆರಾವನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ.

ನಿರ್ಮಾಪಕರು ಸಿಗದ ಕಾರಣಕ್ಕೆ ಬಜೆಟ್‌ನಲ್ಲಿ ಮಿತವ್ಯಯ ಸಾಧಿಸುವುದು ತಂಡಕ್ಕೆ ಅನಿವಾರ್ಯವಾಗಿತ್ತು. ಈ ಬಗ್ಗೆ ವಿಹಾನ್‌ ವಿವರಿಸುವುದು ಹೀಗೆ...
‘ಎಲ್ಲೆಲ್ಲಿ ದುಡ್ಡು ಉಳಿಸಬಹುದು ಎಂಬುದನ್ನು ಆಲೋಚಿಸಿ, ಖರ್ಚು ಮಾಡಿದ್ದೇವೆ. ಸ್ನೇಹಿತರು, ಕುಟುಂಬದವರ ಬಳಿ ಸಿಗುವ ಪ್ರಾಪರ್ಟಿಗಳನ್ನು ಬಳಸಿಕೊಂಡು ಚಿತ್ರೀಕರಣ ಮಾಡಿದ್ದೇವೆ.

ಚಿತ್ರದಲ್ಲಿ ತೋರಿಸಿರುವ ಸೂಟ್‌ಕೇಸ್‌ಗೆ ನಾಲ್ಕರಿಂದ ಆರು ಸಾವಿರ ಕೊಡಬೇಕು. ಅದಕ್ಕೆ ಸಾವಿರ ರೂಪಾಯಿ ಕೊಟ್ಟು ಬಾಡಿಗೆಗೆ ತಂದು ಶೂಟಿಂಗ್‌ ಮಾಡಿದೆವು. ನಿರ್ಮಾಪಕರು ಬಳಸುವ ಟೀಶರ್ಟ್‌ ಅದರ ಮೇಲಿರುವ ಅಕ್ಷರಗಳನ್ನು ನಾವೇ ವಿನ್ಯಾಸ ಮಾಡಿರುವುದರಿಂದ ಕಡಿಮೆ ಹಣ ಖರ್ಚಾಯಿತು.

ಪಬ್‌ನಲ್ಲಿ ಶೂಟಿಂಗ್‌ ಮಾಡುವುದು ಅನಿವಾರ್ಯವಾಗಿತ್ತು. ವಿಚಾರಿಸಿದಾಗ 50 ಸಾವಿರ ರೂಪಾಯಿ ಬಾಡಿಗೆ ಆಗುತ್ತದೆ ಎಂದರು. ಅಷ್ಟೊಂದು ದುಡ್ಡು ಕೊಡುವುದು ಸಾಧ್ಯವಿರಲಿಲ್ಲ. ಈ ಕಾರಣಕ್ಕೆ ಹುಡುಗಿಯನ್ನು ನೋಡಲು ಹೋಗುವ ದೃಶ್ಯವಿರುವ ಮನೆಯಲ್ಲಿಯೇ ಪಬ್‌ ದೃಶ್ಯವನ್ನು ಚಿತ್ರೀಕರಿಸಿದೆವು.

ಆದರೆ ಅದು ಮನೆ ಎಂಬುದು ತಿಳಿಯುವುದೇ ಇಲ್ಲ.  ಸೌಂಡ್‌ ಡಿಸೈನ್‌, ಮ್ಯೂಸಿಕ್‌ಗೆ ಸ್ವಲ್ಪ ಹಣ ಖರ್ಚಾಗಿದೆ. ಇನ್ನೂ ಚೆನ್ನಾಗಿ ಮಾಡಬಹುದಿತ್ತು ಆದರೆ ಬಜೆಟ್‌ ಮೀರಿ ಹೋಗಬಾರದು ಎಂಬ ಕಾರಣಕ್ಕೆ ರಾಜಿ ಮಾಡಿಕೊಂಡಿದ್ದೇವೆ.

ಮನೆಯಲ್ಲಿಯೇ ಡಬ್ಬಿಂಗ್‌
ಸ್ಟುಡಿಯೊದಲ್ಲಿ ಡಬ್ಬಿಂಗ್ ಮಾಡುವಷ್ಟು ಹಣ ಇಲ್ಲದ ಕಾರಣಕ್ಕೆ ಬೂಮ್‌ ಮೈಕ್‌ ಬಳಸಿ ಮನೆ ಮತ್ತು ಕಚೇರಿಯಲ್ಲಿಯೇ ಡಬ್ಬಿಂಗ್‌ ಮಾಡಲಾಗಿದೆ.
ಮದುವೆಗೆ ನೋಡಬರುವ ಹುಡುಗಿಯ ಪಾತ್ರದಲ್ಲಿ ಸುಕೃತಾ ನಟಿಸಿದ್ದಾರೆ. ಅವರು ಬಿಗ್‌ಬಾಸ್‌ಗೆ ಹೋಗುವ ಅನಿವಾರ್ಯ ಇದ್ದ ಕಾರಣಕ್ಕೆ ಉಡುಪಿಗೆ ಹೋಗಿ ವಿಹಾನ್‌ ಅವರೇ ಬೂಮ್‌ ಮೈಕ್‌ ಬಳಸಿ ಡಬ್ಬಿಂಗ್‌ ಮಾಡಲಾಗಿದೆ.

ಈ ಕಿರುಚಿತ್ರದ ಹಿಂದೆ ಹನ್ನೆರಡು ಮಂದಿಯ ಪರಿಶ್ರಮ ಇದೆ. ಪಾತ್ರಗಳ ಹುಡುಕಾಟಕ್ಕಾಗಿ ತಂಡ  ಎರಡು ಮೂರು ದಿನ ಆಡಿಷನ್‌ ಮಾಡಿದೆ. ಪಾತ್ರಗಳ ಬದ್ಧತೆಯಲ್ಲಿಯೇ ಅವರು ಪಟ್ಟಿರುವ ಶ್ರಮ ವ್ಯಕ್ತವಾಗುತ್ತದೆ.  

ವಿಡಿಯೊ ನೋಡಲು ಲಿಂಕ್‌:  http://bit.ly/2jhITYe

*

ಕಿರುಚಿತ್ರ: ‘ವಿಶಾಲ ಹೃದಯದ ಕನ್ನಡಿಗರು’
ಅವಧಿ: 20 ನಿಮಿಷ
ನಿರ್ದೇಶನ: ವಿಹಾನ್‌
ಛಾಯಾಗ್ರಹಣ: ವಿಶ್ವಜಿತ್‌ ರಾವ್‌
ಪಾತ್ರಧಾರಿಗಳು: ವಿಹಾನ್‌, ಸುಕೃತಾ ವಾಗ್ಳೆ
ಆಶಯ: ಕಿರುಚಿತ್ರದ ಮೂಲಕ ನಿರ್ಮಾಪಕರ ಹುಡುಕಾಟ
ಯೂಟ್ಯೂಬ್‌ ವೀಕ್ಷಣೆ: 15,848
ಸಂಪರ್ಕ ಸಂಖ್ಯೆ: 8095862930ಇ–ಮೇಲ್: goldenagefilmhouse@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT