ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ತಂಡಕ್ಕೆ ಸತತ ಮೂರನೇ ಡ್ರಾ

ಐ ಲೀಗ್: ಐಜ್ವಾಲ್‌ ಎದುರು ಚೆಟ್ರಿ ದಾಖಲೆಯ ಗೋಲು
Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಐಜ್ವಾಲ್‌ :  ಗೋಲು ಗಳಿಸುವ ಮಹತ್ವದ ಅವಕಾಶಗಳನ್ನು ಕೈಚೆಲ್ಲಿದ ಹಾಲಿ ಚಾಂಪಿಯನ್‌ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡದವರು ಐ ಲೀಗ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಐಜ್ವಾಲ್‌ ಎದುರು ಮತ್ತೆ ಡ್ರಾ ಪಂದ್ಯಕ್ಕೆ ಸಮಾಧಾನ ಪಟ್ಟುಕೊಂಡರು.

ಸುನಿಲ್‌ ಚೆಟ್ರಿ ನಾಯಕತ್ವದ ಬೆಂಗಳೂರಿನ ತಂಡಕ್ಕೆ ಈ ಬಾರಿಯ ಟೂರ್ನಿಯಲ್ಲಿ ಎದುರಾದ ಸತತ ಮೂರನೇ ಡ್ರಾ ಪಂದ್ಯ ಇದಾಗಿದೆ. ಹಿಂದಿನ ಪಂದ್ಯಗಳಲ್ಲಿ ಮಿನರ್ವ ಮತ್ತು ಡಿಎಸ್‌ಕೆ ಶಿವಾಜಿಯನ್ಸ್‌ ವಿರುದ್ಧ ಡ್ರಾ ಆಗಿತ್ತು.

ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಮೊದಲರ್ಧದಲ್ಲಿಯೇ ಗೋಲು ಗಳಿಸಿದವು. ಐಜ್ವಾಲ್ ತಂಡದ ಬ್ರಂಡನ್‌  ವಾನ್ಲಾರೆಡಿಕಾ 40ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಈ ಗೋಲು ಬಂದ ನಂತರದ ಐದು ನಿಮಿಷಗಳಲ್ಲಿ ಸುನಿಲ್ ಚೆಟ್ರಿ (45ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣರಾದರು.

ಗೋಲುಪೆಟ್ಟಿಗೆಯಿಂದ 30 ಯಾರ್ಡ್‌ ದೂರದಲ್ಲಿದ್ದ ಚೆಂಡನ್ನು ಸೊಗಸಾಗಿ ನಿಯಂತ್ರಣಕ್ಕೆ ಪಡೆದು ಚೆಟ್ರಿ ಗುರಿ ಸೇರಿಸಿದರು.

ಪಂದ್ಯದ ಮೊದಲರ್ಧದಲ್ಲಿ ಐಜ್ವಾಲ್‌ ತಂಡ ಕೂಡ ಉತ್ತಮ ಹೋರಾಟ ತೋರಿತು. ಈ ತಂಡದ ನಾಯಕ ಅಮ್ರಿಂದರ್ ಸಿಂಗ್ ರಕ್ಷಣಾ ವಿಭಾಗದಲ್ಲಿ ಚುರುಕಿನ ಸಾಮರ್ಥ್ಯ ನೀಡಿ ಬೆಂಗಳೂರು ತಂಡ ಗೋಲಿನ ಅವಕಾಶ ತಡೆದರು. ಇದರಿಂದ ಬಿಎಫ್‌ಸಿಗೆ 32ನೇ ನಿಮಿಷದಲ್ಲಿ ಗೋಲುಗಳನ್ನು ಗಳಿಸುವ ಅವಕಾಶ ತಪ್ಪಿತು.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣ ದಲ್ಲಿ ಎರಡನೇ ಅವಧಿಯ ಆಟ ಭಾರಿ ಹೋರಾಟಕ್ಕೆ ಸಾಕ್ಷಿಯಾಯಿತು. 55ನೇ ನಿಮಿಷದಲ್ಲಿ ಚೆಟ್ರಿ ಗೋಲು ಗಳಿಸುವ ಅವಕಾಶವನ್ನು ಎದುರಾಳಿ ತಂಡದ ಗೋಲ್‌ ಕೀಪರ್‌ ಅಲ್ಬಿನೊ ಗೋಮ್ಸ್‌ ತಡೆದರು.

ಪಂದ್ಯ ಮುಗಿಯಲು ಒಂದು  ನಿಮಿಷ ಬಾಕಿಯಿದ್ದಾಗ ಜೊಮಿಂಗ್ಲಿನಾ ರಾಲ್ಟೆಗೆ ಲಭಿಸಿದ್ದ ಫ್ರೀ ಕಿಕ್‌ ಅವಕಾಶದಲ್ಲಿ ಗೋಲು ಗಳಿಸಲು ವಿಫಲರಾದರು.
ಅಜೇಯ ದಾಖಲೆ: ಐಜ್ವಾಲ್‌ ತವರಿನಲ್ಲಿ ಅಜೇಯ ದಾಖಲೆ ಮುಂದುವರಿಸಿತು.

ಒಂಬತ್ತು ಪಂದ್ಯಗಳನ್ನಾಡಿರುವ ಈ ತಂಡ ಐದರಲ್ಲಿ ಗೆಲುವು ಪಡೆದಿದ್ದು, ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಆದರೆ ತವರಿನಲ್ಲಿ ಒಂದೂ ಪಂದ್ಯ ಸೋತಿಲ್ಲ. ತಂಡದ ಖಾತೆಯಲ್ಲಿ 17 ಪಾಯಿಂಟ್ಸ್‌ ಇದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.

ಬಿಎಫ್‌ಸಿ ಎಂಟು ಪಂದ್ಯಗಳ ನ್ನಾಡಿದ್ದು ಮೂರು ಪಂದ್ಯಗಳಲ್ಲಿ ಗೆಲುವು ಮತ್ತು ಇಷ್ಟೇ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ತಂಡದ ಖಾತೆಯಲ್ಲಿ 12 ಪಾಯಿಂಟ್ಸ್‌ ಇದ್ದು ಐದನೇ ಸ್ಥಾನದಲ್ಲಿದೆ.

‘ಪೂರ್ಣ ಮೂರು ಪಾಯಿಂಟ್ಸ್‌ ಪಡೆಯುವ ಲೆಕ್ಕಾಚಾರದೊಂದಿಗೆ ಆಡಿದೆವು. ಆದರೆ ನಮ್ಮ ಆಸೆ ಕೈಗೂಡಲಿಲ್ಲ’ ಎಂದು ಐಜ್ವಾಲ್ ತಂಡದ ಮುಖ್ಯ ಕೋಚ್‌ ಖಾಲೀದ್‌ ಜಮಿಲ್‌ ಹೇಳಿದರು.

ಭುಟಿಯಾ ದಾಖಲೆ ಮುರಿದ ಚೆಟ್ರಿ

ಐಜ್ವಾಲ್‌ ಎದುರು ಗೋಲು ಗಳಿಸುವ ಮೂಲಕ ಚೆಟ್ರಿ  ನ್ಯಾಷನಲ್‌ ಫುಟ್‌ಬಾಲ್‌ ಲೀಗ್ ಮತ್ತು ಐ ಲೀಗ್‌ ಟೂರ್ನಿಗಳಲ್ಲಿ ಒಟ್ಟು ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.

ಬೆಂಗಳೂರಿನಲ್ಲಿ ನಡೆದ ಮಿನರ್ವ ಪಂಜಾಬ್‌ ಎದುರಿನ ಪಂದ್ಯದಲ್ಲಿ 25 ಯಾರ್ಡ್‌ ದೂರದಿಂದ ಗೋಲು ಹೊಡೆದು ಭೈಚುಂಗ್ ಭುಟಿಯಾ (89 ಗೋಲುಗಳು)  ದಾಖಲೆ ಸರಿಗಟ್ಟಿದ್ದರು.  ಐಜ್ವಾಲ್‌ ವಿರುದ್ಧ ಗೋಲು ಗಳಿಸಿ ಭುಟಿಯಾ ದಾಖಲೆಯನ್ನು ಚೆಟ್ರಿ ಅಳಿಸಿ ಹಾಕಿದರು.

18ರಂದು ಮುಂದಿನ ಪಂದ್ಯ ಫೆ. 18ರಂದು ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ಮತ್ತು ಮುಂಬೈ ಎಫ್‌.ಸಿ. ತಂಡಗಳು ಪೈ ಪೈಪೋಟಿ ನಡೆಸಲಿವೆ.

***

ಪೆನಾಲ್ಟಿ ಅವಕಾಶಗಳನ್ನು ಬಳಸಿಕೊಳ್ಳಬೇಕಿತ್ತು. ಆದರೆ ಮೂರು ಪಾಯಿಂಟ್ಸ್‌ ಮಾತ್ರ ಪಡೆಯಲು ಸಾಧ್ಯವಾಯಿತು. ಪ್ರಶಸ್ತಿ ಉಳಿಸಿಕೊಳ್ಳಲು ಇನ್ನು ಅವಕಾಶವಿದೆ.
- ಅಲ್ಬರ್ಟ್‌ ರೋಕಾ, ಬಿಎಫ್‌ಸಿ ಮುಖ್ಯ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT