ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

Last Updated 15 ಫೆಬ್ರುವರಿ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬುಧವಾರ ಹಮ್ಮಿಕೊಂಡಿದ್ದ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು 14 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿದರು.

ಎಂ.ಎ ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿ ಭರತ್ ಐತಾಳ್   ಮಾತನಾಡಿ, ‘ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ‘ಸೂರ್ಯ ಸಿದ್ಧಾಂತ’ ಕುರಿತು ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದೇನೆ. ಪ್ರಾಚೀನ ಗಣಿತದ ಅಧ್ಯಯನ ನಡೆಸಿ ಅದರಲ್ಲಿರುವ ಮಹತ್ವ ಹಾಗೂ ಪ್ರಸ್ತುತತೆ ಬಗ್ಗೆ ಜನರಿಗೆ ತಿಳಿಸುವ ಆಶಯವಿದೆ’ ಎಂದು ಹೇಳಿದರು.

ಚಿನ್ನದ ಪದಕ ಪಡೆದ ಶ್ರೀಮನ್ಮಹಾರಾಜ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ವ್ಯಾಸನಾರಾಯಣ ದಾಸ್ ಮಾತನಾಡಿ, ‘ನನಗೆ ಸಂಸ್ಕೃತ ಕಲಿಯುವ ಆಸಕ್ತಿ ನಮ್ಮ ಪೂರ್ವಿಕರಿಂದ ಬಂದಿದೆ. ಸಂಸ್ಕೃತದಲ್ಲಿ ಉನ್ನತ ಅಧ್ಯಯನಕ್ಕಾಗಿ ಒಡಿಶಾದಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿ ಸ್ವರ ಉಚ್ಛಾರಣೆ ಅತ್ಯಂತ ಸ್ಪಷ್ಟವಾಗಿರುತ್ತದೆ. ಸದ್ಯ ಮಾಣಿಕ್ಯಪ್ರಭು ವೇದ ವಿದ್ಯಾಪಾಠಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ’ ಎಂದರು.
ಘಟಿಕೋತ್ಸವ ಭಾಷಣ ಮಾಡಿದ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಾಧಿಪತಿ ಎನ್‌. ಗೋಪಾಲಸ್ವಾಮಿ ಅವರು, ‘ವೇದ–ಉಪನಿಷತ್ತುಗಳಲ್ಲಿ ಕೃಷಿ, ಆಯುರ್ವೇದ, ಔಷಧಿ ಸಸ್ಯಗಳಿಗೆ ಸಂಬಂಧಿಸಿದ ಮಾಹಿತಿ ಅಗಾಧವಾಗಿದೆ. ಆ ಕುರಿತ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯಬೇಕು’ ಎಂದು ತಿಳಿಸಿದರು.

‘ನಮ್ಮಲ್ಲಿ ಸಂಸ್ಕೃತ, ಸಾಹಿತ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಕಷ್ಟು ಮಂದಿ ವಿದ್ವಾಂಸರಿದ್ದು, ಇವರಲ್ಲಿ ಅಪಾರ ಪಾಂಡಿತ್ಯ ಅಡಗಿದೆ. ಆದರೆ, ನಮ್ಮ ಶಿಕ್ಷಣ ಸಂಸ್ಥೆಗಳು ಅವರ ಪಾಂಡಿತ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರ ಲಾಭವನ್ನು ಫ್ರಾನ್ಸ್‌, ಅಮೆರಿಕದಂತಹ ರಾಷ್ಟ್ರಗಳು ಪಡೆಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಹಿರಿಯ ವಿದ್ವಾಂಸ ಪ್ರೊ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿ ನೀಡಲಾಯಿತು.

ವೇದ, ಪುರಾಣ ಸಾರ ತಿಳಿಯುವೆ

‘ಶಕ್ತಿ ವಿಶಿಷ್ಟಾದ್ವೈತ ವೇದಾಂತ’ ವಿಷಯದಲ್ಲಿ ಉತ್ತಮ ಸಾಧನೆ ಮಾಡಿ ಇನ್ಫೋಸಿಸ್ ಫೌಂಡೇಷನ್‌ನ  ನಗದು ಬಹುಮಾನ ಪಡೆದ ಶಿವಮೊಗ್ಗದ ಶ್ರೀ ಗುರುಬಸವೇಶ್ವರ ಸಂಸ್ಕೃತ ಕಾಲೇಜು ವಿದ್ಯಾರ್ಥಿನಿ ಕಾವ್ಯಶ್ರೀ, ‘ನನ್ನ ಜ್ಞಾನ ವಿಸ್ತರಿಸಿಕೊಳ್ಳುವ ಸಲುವಾಗಿ ಸಂಸ್ಕೃತ ಅಧ್ಯಯನದಲ್ಲಿ ತೊಡಗಿಸಿಕೊಂಡೆ. ವೇದ, ಪುರಾಣ, ಉಪನಿಷತ್ತು ಸೇರಿ ಪ್ರಾಚೀನ ಗ್ರಂಥ ಸಾರಗಳನ್ನು ತಿಳಿದುಕೊಳ್ಳುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT