ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ನೀರಿಗಾಗಿ ರಕ್ತಪಾತವಾದೀತು

ಮಾಲೂರು 4ನೇ ಸಾಹಿತ್ಯ ಸಮ್ಮೇಳನ: ರಾಷ್ಟ್ರೀಯ ಜಲ ನೀತಿ ರೂಪಿಸಲು ವೇಣುಗೋಪಾಲ್ ವಹ್ನಿ ಆಗ್ರಹ
Last Updated 16 ಫೆಬ್ರುವರಿ 2017, 10:42 IST
ಅಕ್ಷರ ಗಾತ್ರ
ಮಾಲೂರು: ‘ಕನ್ನಡ ಸಾಹಿತ್ಯ ಸಮ್ಮೇಳನ ಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಮಾನ್ಯತೆ ಇಲ್ಲದಿದ್ದರೆ, ಸಮ್ಮೇಳನಗಳು ನಾಡ ಹಬ್ಬಗಳಂತಾಗುತ್ತವೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವೇಣುಗೋಪಾಲ್ ವಹ್ನಿ ತಿಳಿಸಿದರು. 
 
ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ಬುಧವಾರ ಸುಗಟೂರು ನಾಡಪ್ರಭು ತಿಮ್ಮೇಗೌಡರ ಮಹಾದ್ವಾರ, ಹೃದಯ ರಾಮ್ ಸಿಂಗ್ ವೇದಿಕೆಯಲ್ಲಿ ನಡೆದ 4 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳ ನದ ಅಧ್ಯಕ್ಷ ಭಾಷಣದಲ್ಲಿ ಹೀಗೆ ತಿಳಿಸಿದರು.  
 
‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸುವ ನಿರ್ಣಯಗಳು ಸರ್ಕಾರ ಮಟ್ಟದಲ್ಲಿ ಚರ್ಚಿತವಾಗಿ ಅನುಷ್ಠಾನಗೊಳ್ಳದಿದ್ದರೆ, ಸಮ್ಮೇಳನ ನಡೆಸುವುದರ ಪ್ರಯೋಜನವೇನು.  ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಡೆಯುವ ಸಮ್ಮೇಳನಗಳಲ್ಲಿ ನಡೆಯುವ ನಿರ್ಣಯಗಳನ್ನು ತಾಲ್ಲೂಕು ಮತ್ತು ಜಿಲ್ಲಾಡಳಿತ ಮಟ್ಟದಲ್ಲಿ ಚರ್ಚೆಗೆ ಒಳಪಡಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿದರು.   
 
‘ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಮತ್ತು ನೇತ್ರಾವತಿ ತಿರುವು ಎಂದು ಯೋಜನೆಗಳ ಹೆಸರು ಹೇಳಿ ಜನರ ಕಣ್ಣು ಒರೆಸುವ ಕೆಲಸವಾಗುತ್ತಿದೆ. ಮಹದಾಯಿ ಎಂದರೆ ಗೋವಾದವರು, ಕಾವೇರಿ ಎಂದರೆ ತಮಿಳರು ತೂರಿ ಬರುವರು. ನೇತ್ರಾವತಿ ಎಂದರೆ ದಕ್ಷಿಣ ಕನ್ನಡದವರು ದಯೆಯನ್ನೇ ತೋರುವುದಿಲ್ಲ. ಆದ್ದರಿಂದ ರಾಷ್ಟ್ರೀಯ ಜಲ ನೀತಿಯನ್ನು ರೂಪಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ರಕ್ತಪಾತಗಳಾಗುತ್ತವೆ’ ಎಂದರು. 
 
‘ಕನ್ನಡ ಮತ್ತು ಸರ್ಕಾರಿ ಶಾಲೆಗಳ ಎದುರು ಇರುವ ಸವಾಲನ್ನು ಸರ್ಕಾರ ಸೂಕ್ತವಾಗಿ ಎದುರಿಸಬೇಕು. ಶಿಕ್ಷಣದ ಎಲ್ಲ ಹಂತಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಕಡ್ಡಾಯವಾಗಬೇಕು. ಸರ್ಕಾರವೇ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆ ಕಲಿಸಬೇಕು. ಕೌಶಲದ ವಿಷಯಗಳ ಪಠ್ಯ ಅಳವಡಿಸಿದಾಗ ಮಾತ್ರ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಬಹುದು’ ಎಂದರು.
 
ಸಮ್ಮೇಳನ ಉದ್ಘಾಟಿಸಿದ ರಂಗಕರ್ಮಿ ಡಾ.ಕೆ.ವೈ.ನಾರಾಯಣಸ್ವಾಮಿ, ‘ಸಾಹಿತ್ಯ ಸಮ್ಮೇಳನಗಳು ನಾಡ ಹಬ್ಬಗಳಾಗದೆ ಆತ್ಮಾವಲೋಕನ ಸಭೆಗಳಾಗಬೇಕು. ಬದುಕು ಇಲ್ಲದೆ ಸಾಹಿತ್ಯ ಇಲ್ಲ. ನಿಜವಾದ ಸಾಹಿತ್ಯದ ಕೆಲಸ ಜನರ ಬದುಕಿಗೆ ಹತ್ತಿರವಿರಬೇಕು’ ಎಂದರು.
 
‘ಕೋಲಾರ ಜಿಲ್ಲೆ ಜನರು ಮಂದಗಾಮಿಗಳಾಗಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಇಲ್ಲಿನ ಜನರ ಬದುಕು ಎಷ್ಟು  ಕಠಿಣವಾಗುತ್ತದೆ ಎಂಬುವುದನ್ನು ಊಹಿಸಲು ಸಾಧ್ಯವಿಲ್ಲ. ಜನ ಪ್ರತಿನಿಧಿಗಳು ಪ್ರಾಮಾಣಿಕವಾಗಿ ತಮ್ಮ ಕೆಲಸ ನಿರ್ವಹಿಸದೆ ಕಾಲ ದೂಡುತ್ತಿದ್ದಾರೆ.
 
ಇದರಿಂದ ಜಿಲ್ಲೆ ಜನರು ಗುಳೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಭೆಗಳಾಗಬೇಕು’ ಎಂದು ಅಭಿಪ್ರಾಯಪಟ್ಟರು.  ಶಾಸಕ ಕೆ.ಎಸ್.ಮಂಜುನಾಥ್ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
 
ಮೆರವಣಿಗೆ: ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಮ್ಮೇಳನಾಧ್ಯಕ್ಷ ವೇಣುಗೋಪಾಲ್ ವಹ್ನಿ ಅವರನ್ನು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹೃದಯ ರಾಮ್ ಸಿಂಗ್ ವೇದಿಕೆಗೆ ಕರೆತರಲಾಯಿತು. 
 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತ್ರಿವರ್ಣರವಿ, ಉಪಾಧ್ಯಕ್ಷೆ ನಾಗವೇಣಿ, ಪುರಸಭೆ ಅಧ್ಯಕ್ಷ ಎಂ.ರಾಮಮೂರ್ತಿ, ಉಪಾಧ್ಯಕ್ಷೆ ಗೀತಾ ರಮೇಶ್, ಪುರಸಭೆ ಮಾಜಿ ಅಧ್ಯಕ್ಷೆ ಭಾರತಮ್ಮ, ಸದಸ್ಯರಾದ ಸಿ.ಲಕ್ಷ್ಮಿನಾರಾಯಣ್, ಮುರಳೀಧರ್, ಕಸಾಪ. ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್, ಮುಖಂಡರಾದ ಆರ್.ಪ್ರಭಾಕರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಟಿ.ರಾಮಚಂದ್ರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ದಾಮು ವೆಂಕಟೇಶ್, ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿ ಅಶ್ವತ್ಥ ರೆಡ್ಡಿ, ಬಿಇಒ ಸುಬ್ರಮಣಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಪ್ಪ, ಆರ್.ನರಸಿಂಹ, ಎಂ.ವಿ.ತಮ್ಮಯ್ಯ, ಎಸ್.ನಾರಾಯಣಸ್ವಾಮಿ ವೇದಿಕೆಯಲ್ಲಿ ಇದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT