ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವೂ ರಾಷ್ಟ್ರಭಾಷೆ

ವಾಚಕರ ವಾಣಿ
Last Updated 16 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ರಾಜ್ಯಪಾಲರ ಹಿಂದಿ ಭಾಷಣಕ್ಕೆ ಆಕ್ಷೇಪ’ ಎಂಬ ಸುದ್ದಿ ಪ್ರಕಟವಾಗಿದೆ (ಪ್ರ.ವಾ., ಫೆ. 14). ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಹಿಂದಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಜನಪ್ರತಿನಿಧಿಗಳು ವ್ಯಕ್ತಪಡಿಸಿರುವ ಅನಿಸಿಕೆಗಳು ಹೀಗಿವೆ:
‘ಹಿಂದಿ ರಾಷ್ಟ್ರಭಾಷೆ ಎಂಬುದೇನೋ ಸರಿ’ (ಬಸವರಾಜ ಹೊರಟ್ಟಿ).
 
‘ಹಿಂದಿ ರಾಷ್ಟ್ರಭಾಷೆ, ಹಿಂದಿಯಲ್ಲಿ ಭಾಷಣ ಮಾಡುವುದನ್ನು ಒಪ್ಪದಿದ್ದರೆ ಹೇಗೆ?’ (ಎಸ್.ವಿ.ಸಂಕನೂರ).
 
‘ರಾಜ್ಯದ ಆಡಳಿತ ಭಾಷೆ ಕನ್ನಡ, ಕನ್ನಡದಲ್ಲಿಯೇ ಮಾತನಾಡಬೇಕಿತ್ತು’ (ಎಚ್.ಎಂ. ರೇವಣ್ಣ).
 
‘ರಾಜ್ಯಪಾಲರು ಬೇರೆ ರಾಜ್ಯಗಳಿಂದ ಬಂದಿರುತ್ತಾರೆ. ಅವರು ಕನ್ನಡ ಕಲಿಯಬೇಕು ನಿಜ. ಆದರೆ ಅನಿವಾರ್ಯವಾದಾಗ ಹಿಂದಿಯಲ್ಲಿ ಭಾಷಣ ಮಾಡುವುದು ಸಹಜ’ (ಈಶ್ವರಪ್ಪ).
 
‘ತ್ರಿಭಾಷಾ ಸೂತ್ರ ಜಾರಿಯಲ್ಲಿರಬಹುದು. ಆದರೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ, ಕನ್ನಡವೇ ಬಳಕೆಯಾಗಬೇಕು’ (ವಿ.ಎಸ್.ಉಗ್ರಪ್ಪ).
 
ಈ ಎಲ್ಲ ಜನಪ್ರತಿನಿಧಿಗಳ ಮಾತಿನ ಒಟ್ಟು ಸಾರಾಂಶ ಹಿಂದಿ ‘ರಾಷ್ಟ್ರಭಾಷೆ’ ಎನ್ನುವುದು. ಆಶ್ಚರ್ಯವೆಂದರೆ, ಇವರಲ್ಲಿ ಯಾರೊಬ್ಬರೂ ‘ಕನ್ನಡವೂ ರಾಷ್ಟ್ರಭಾಷೆ’ ಎಂದು ಹೇಳಲಿಲ್ಲ. ನಮ್ಮ ಶಾಸಕರಿಗೆ ಕನ್ನಡ ಕೂಡ ರಾಷ್ಟ್ರಭಾಷೆ ಎನ್ನುವುದು ತಿಳಿದಿಲ್ಲವೇ? ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಉತ್ತರ ಭಾರತದಲ್ಲಿ ಜಾಸ್ತಿಯಿದೆ. ಸಂಸದರಲ್ಲಿಯೂ ಹಿಂದಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಅವರು ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯೆಂದು ಬಿಂಬಿಸುತ್ತಾ ಬಂದಿದ್ದಾರೆ. ಅವರನ್ನು ಅನುಸರಿಸಿ, ಹಿಂದಿ ಭಾಷೆಯೊಂದೇ ರಾಷ್ಟ್ರಭಾಷೆ ಎನ್ನುವ ಭ್ರಮೆಗೆ ತುಂಬಾ ಜನ ಒಳಗಾಗಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ತಿನ ಸದಸ್ಯರೂ ಅದನ್ನೇ ಒಪ್ಪಿಕೊಂಡು ಮಾತನಾಡುವುದನ್ನು ನೋಡಿದರೆ ನನಗೆ ‘ನಗೆಯು ಬರುತಿದೆ’!
 
ಭಾರತದಲ್ಲಿ ಸಂವಿಧಾನ ಒಪ್ಪಿಕೊಂಡಿರುವ 22 ರಾಷ್ಟ್ರಭಾಷೆಗಳಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಒರಿಯಾ, ಗುಜರಾತಿ, ಕಾಶ್ಮೀರಿ- ಹೀಗೆ ವಿವಿಧ ರಾಜ್ಯಗಳ ರಾಜ್ಯಭಾಷೆಗಳು ರಾಷ್ಟ್ರಭಾಷೆಗಳಾಗಿವೆ. ಹಿಂದಿಯಂತೆ ಕನ್ನಡವೂ ರಾಷ್ಟ್ರಭಾಷೆಯೆನ್ನುವುದನ್ನು ಜನರು, ಶಾಸಕರು ಅರ್ಥಮಾಡಿಕೊಳ್ಳಬೇಕು. ಹಿಂದಿ ಭಾಷೆಗೆ ಸಲ್ಲುವ ಗೌರವ, ಮರ್ಯಾದೆ ಕನ್ನಡ ಭಾಷೆಗೂ ಸಲ್ಲಬೇಕು.
 
ಇನ್ನು ರಾಜ್ಯಪಾಲರು ಹಿಂದಿಯಲ್ಲಿ ಮಾತನಾಡಿದ್ದು ಸರಿಯೇ? ಯಾವುದೇ ರಾಜ್ಯಕ್ಕೆ ಯಾರೇ ರಾಜ್ಯಪಾಲರಾದರೂ ಅವರಿಗೆ ಇಂಗ್ಲಿಷ್ ಭಾಷೆ ಚೆನ್ನಾಗಿಯೇ ಬರುತ್ತದೆ. ನಮ್ಮ ರಾಜ್ಯಪಾಲರೂ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದರೆ ಉಚಿತವಾಗಿರುತ್ತಿತ್ತು. ಹಿಂದಿಗಿಂತಲೂ ಇಂಗ್ಲಿಷ್ ಭಾಷೆ ಕನ್ನಡಿಗರಿಗೆ ಹಾಗೂ ಉಭಯ ಸದನಗಳ ಸದಸ್ಯರಿಗೆ ಅರ್ಥವಾಗುತ್ತದೆ.
 
ಒಂದು ರಾಜ್ಯಕ್ಕೆ ರಾಜ್ಯಪಾಲರಾಗಿ ಬಂದವರು ಸತತ ಐದು ವರ್ಷಗಳ ಕಾಲ ಆ ರಾಜ್ಯದಲ್ಲಿರುತ್ತಾರೆ. ಮೂರು ನಾಲ್ಕು ತಿಂಗಳಲ್ಲಿ ಅಲ್ಲಿನ ರಾಜ್ಯಭಾಷೆಯಲ್ಲಿ ಮಾತನಾಡುವುದನ್ನು ಕಲಿಯಬಹುದು. ರಾಜ್ಯಪಾಲರು ಮನಸ್ಸು ಮಾಡಬೇಕಷ್ಟೆ. ಅವರಿಗೆ ಸಮಯದ ಅಭಾವವೂ ಇರುವುದಿಲ್ಲ. ರಾಜ್ಯಭಾಷೆಯನ್ನು ಕಲಿಯುವುದರಿಂದ ಆ ರಾಜ್ಯದ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಲು ಸುವರ್ಣಾವಕಾಶ ಕಲ್ಪಿತವಾಗುತ್ತದೆ. ಕರ್ನಾಟಕದ ರಾಜ್ಯಪಾಲರು ಕನ್ನಡ ಕಲಿಯುವುದಕ್ಕೆ ತೊಡಗಲಿ. ಕನ್ನಡ ಎಷ್ಟು ಸುಂದರ ಹಾಗೂ ಸೊಗಸಾದ ಭಾಷೆ ಎಂಬುದು ಅನುಭವಕ್ಕೆ ಬರುತ್ತದೆ.
-ಡಾ. ಕಮಲಾ ಹಂಪನಾ, ಬೆಂಗಳೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT