ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೇಕೆ ಹಿಂದೆ?!

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಯಾವುದೇ ಪರೀಕ್ಷೆಯ ಫಲಿತಾಂಶ ನೋಡಿದರೆ ಬಾಲಕಿಯರ ಮೇಲುಗೈ ಪತ್ರಿಕೆಗಳಲ್ಲಿ ಸುದ್ದಿ ಮಾಡುತ್ತದೆ. ಆದರೆ ಉನ್ನತ ಶಿಕ್ಷಣವಿರಲಿ, ರಾಜಕೀಯವಿರಲಿ, ದೊಡ್ಡ ಹುದ್ದೆಗಳಿರಲಿ ಹೆಣ್ಣುಮಕ್ಕಳು ಹಿಂದೆ ಬೀಳುತ್ತಾರೆ.

ಯಶಸ್ಸಿನ ಬಗ್ಗೆ ಗಂಡುಮಕ್ಕಳನ್ನು ಕೇಳಿದರೆ ಬರುವ ಉತ್ತರ ‘ನಾನು ತುಂಬಾ ಕಷ್ಟಪಟ್ಟೆ’. ಅದೇ ಹುಡುಗಿಯರನ್ನು ಕೇಳಿದರೆ ‘ಇಂಥವರು ಸಹಾಯ ಮಾಡಿದರು, ದೇವರ ದಯೆ’ ಇತ್ಯಾದಿ ಇತ್ಯಾದಿ. ತಮ್ಮ ಯಶಸ್ಸಿನ ಬಗ್ಗೆಯೂ ಹೆಣ್ಣುಮಕ್ಕಳಲ್ಲೇ ಆತ್ಮವಿಶ್ವಾಸ ಕಡಿಮೆ. ಇದಕ್ಕೆ ಮೂಲಕಾರಣವನ್ನು ಹುಡುಕಲಾರಂಭಿಸಿದರೆ, ಸಾಮಾಜಿಕ ಕಟ್ಟುಪಾಡುಗಳಿಗಿಂತ ಹೆಣ್ಣುಮಕ್ಕಳಲ್ಲೇ ಅಂತರ್ಗತವಾಗಿರುವ ಕೆಲವು ಭಾವನೆಗಳು ಗೋಚರಿಸಲಾರಂಭಿಸುತ್ತವೆ.

ಹೆಣ್ಣುಮಕ್ಕಳನ್ನು ಬೆಳೆಸುವ ರೀತಿಯ ಬಗ್ಗೆ ಸ್ವಲ್ಪ ಗಮನ ಹರಿಸೋಣ. ನಾವು, ಹೆಣ್ಣುಮಕ್ಕಳು ಚಿಕ್ಕಂದಿನಿಂದ ಕಲಿಯುವುದೇನು? ಅಪಾಯ-ವೈಫಲ್ಯಗಳನ್ನು ಎದುರಿಸದಿರುವ, ಅವುಗಳಿಗೆ ನಮ್ಮನ್ನು ಒಡ್ಡಿಕೊಳ್ಳದಿರುವ ಬಗ್ಗೆ. ನಾವು ಕಲಿಯುವುದು ಸುಂದರವಾಗಿ ನಕ್ಕು, ಸುರಕ್ಷಿತವಾಗಿದ್ದು, ಎಲ್ಲದರಲ್ಲಿಯೂ ಹೆಚ್ಚು ಅಂಕ ಗಳಿಸುವುದರ ಕುರಿತು.

ಅದೇ ಗಂಡುಮಕ್ಕಳು? ಹಾರುವುದು, ಏರುವುದು, ಬೀಳುವುದು ಅಪಾಯದ ಮೇಲೆ ಅಪಾಯ, ವೈಫಲ್ಯದ ಮೇಲೆ ವೈಫಲ್ಯವನ್ನು ಎದುರಿಸುವುದು ಅವರಿಗೆ ಬಾಲ್ಯದಿಂದಲೇ ಒಂದು ಸಾಮಾನ್ಯವಾದ ಸಂಗತಿಯಾಗುತ್ತದೆ. ಹೆಣ್ಣುಮಕ್ಕಳನ್ನು ಪರಿಪೂರ್ಣ – Perfection – ಆಗುವುದರತ್ತ ಮಾತ್ರ ನಾವು ಬೆಳೆಸುತ್ತೇವೆ. ಅದೇ ಗಂಡುಮಕ್ಕಳನ್ನು ಧೈರ್ಯವಂತರಾಗುವುದರತ್ತ ನಾವು ಮುನ್ನಡೆಸುತ್ತೇವೆ!

ಕ್ಯಾರೋಲ್ ಡ್ವೆಕ್ ಎಂಬ ಮನಃಶಾಸ್ತ್ರಜ್ಞೆ 1980ರಷ್ಟು ಹಿಂದೆಯೇ ಐದನೇ ತರಗತಿಯ ಬುದ್ಧಿವಂತ ಮಕ್ಕಳನ್ನು ಅಧ್ಯಯನ ಮಾಡಿದಳು. ಅವರಿಗೆ ಬಿಡಿಸಲು ಕಷ್ಟವಾದ ಸಮಸ್ಯೆಯನ್ನು ಕೊಟ್ಟಾಗ ಬುದ್ಧಿವಂತ ಗಂಡುಮಕ್ಕಳು ನಡೆದುಕೊಳ್ಳುವ ರೀತಿಗೂ, ಬುದ್ಧಿವಂತ ಹೆಣ್ಣುಮಕ್ಕಳು ನಡೆದುಕೊಳ್ಳುವ ರೀತಿಗೂ ವ್ಯತ್ಯಾಸಗಳನ್ನು ಗುರುತಿಸಿದಳು. ಬುದ್ಧಿವಂತ ಹುಡುಗಿಯರು ತಮಗೆ ಗೊತ್ತಿದ್ದ ರೀತಿಯೊಂದನ್ನು ಪ್ರಯತ್ನಿಸಿ, ಬಾರದಿದ್ದರೆ ಪ್ರಯತ್ನವನ್ನೇ ಕೈಬಿಡುತ್ತಿದ್ದರು.

ಅದೇ ಬುದ್ಧಿವಂತ ಗಂಡುಮಕ್ಕಳು ಹಾಗಲ್ಲ! ಕಷ್ಟದ ಸಮಸ್ಯೆ ಅವರಿಗೆ ಮತ್ತಷ್ಟು ಸವಾಲೊಡ್ಡುತ್ತಿತ್ತು. ಅವರ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತಿತ್ತು.
ಇದರರ್ಥ? ಐದನೇ ತರಗತಿಯ ಹಂತದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಪ್ರತಿ ವಿಷಯ-ಗಣಿತ-ವಿಜ್ಞಾನ-ಭಾಷೆ ಎಲ್ಲದರಲ್ಲಿಯೂ ಮುಂದಿರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ, ವೈಜ್ಞಾನಿಕವಾಗಿಯೂ ನಿರೂಪಿಸಲ್ಪಟ್ಟ ಸಂಗತಿಯೇ.

ಅಂದಮೇಲೆ ಈ ನಡವಳಿಕೆ ಸಾಮರ್ಥ್ಯದ, ಬುದ್ಧಿವಂತಿಕೆಯ ಪ್ರಶ್ನೆ ಅಲ್ಲವೇ ಅಲ್ಲ. ಅದು ಹುಡುಗರು-ಹುಡುಗಿಯರು ಒಂದು ಸವಾಲನ್ನು ಎದುರಿಸುವ ರೀತಿಗೆ ಸಂಬಂಧಿಸಿದ್ದು. ಇದು ಐದನೇ ತರಗತಿಗಷ್ಟೇ ಕೊನೆಯಾಗುವುದೂ ಇಲ್ಲ. ಉದ್ಯೋಗಕ್ಕೆ ಅರ್ಜಿ ಹಾಕುವುದನ್ನೇ ಗಮನಿಸಿದರೂ ಇದು ಸುಸ್ಪಷ್ಟ.

ಕೇವಲ ಶೇ. 60ರಷ್ಟು ಮಾತ್ರ ಅರ್ಹತೆಯಿದ್ದರೂ ಗಂಡುಮಕ್ಕಳು ಅರ್ಜಿ ಹಾಕಿದರೆ, ಹೆಚ್ಚಿನ ಹೆಣ್ಣುಮಕ್ಕಳು ಅರ್ಜಿ ಹಾಕುವಾಗ ತಮಗೆ ಶೇ. 100ರಷ್ಟು ಅರ್ಹತೆಯಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ! ಕೇವಲ ಇದರಿಂದ ನಾವು ಅರ್ಥಮಾಡಿಕೊಳ್ಳಬೇಕಾದ್ದು ಹೆಣ್ಣುಮಕ್ಕಳಿಗೆ ಕೊಂಚ ಆತ್ಮವಿಶ್ವಾಸದ ಅವಶ್ಯಕತೆಯಿದೆಯೆಂದಷ್ಟೇ ಅಲ್ಲ, ಬದಲಾಗಿ ಸಮಾಜ ಹೆಣ್ಣುಮಕ್ಕಳನ್ನು ಬೆಳೆಸುವುದೇ ಪರಿಪೂರ್ಣತೆಗಾಗಿ. ಆದ್ದರಿಂದ ಹೆಣ್ಣುಮಕ್ಕಳು ಅತಿ ಎಚ್ಚರವುಳ್ಳ, ತಪ್ಪು ಮಾಡಲು ಹೆದರುವ ವ್ಯಕ್ತಿಗಳಾಗಿರುತ್ತಾರೆ!

ಕೆಲವರು ಹೇಳಬಹುದು. ಹೆಣ್ಣಮಕ್ಕಳು ಗಂಡುಮಕ್ಕಳಿಗಿಂತ ಜೈವಿಕವಾಗಿ ಭಿನ್ನ; ಹೀಗಾಗಿ ಹೆಣ್ಣುಮಕ್ಕಳು ಹೆಣ್ಣುಮಕ್ಕಳಂತೆಯೂ, ಗಂಡುಮಕ್ಕಳು ಗಂಡುಮಕ್ಕಳಂತೆಯೂ ಬೆಳೆಯುವುದರಲ್ಲಿ ತಪ್ಪೇನಿದೆ? ಆದರೆ ದೇಶದ ಆರ್ಥಿಕತೆ-ಸಾಮಾಜಿಕ ಸುರಕ್ಷತೆ ಮೊದಲಾದ ಕ್ಷೇತ್ರಗಳಲ್ಲಿ, ಹೆಣ್ಣುಮಕ್ಕಳ ಸಬಲತೆಯಲ್ಲಿ ಪ್ರಮುಖವಾದ, ದೀರ್ಘಕಾಲಿಕ ಬದಲಾವಣೆಗಳನ್ನು ತರಬೇಕಾದರೆ ಹೆಣ್ಣುಮಕ್ಕಳ ಸಹಜ ಬುದ್ಧಿಮತ್ತೆಯ ಅವಶ್ಯಕತೆಯಿದೆ. ಅವರ ಬುದ್ಧಿವಂತಿಕೆ ಹಲವು ಆಯಾಮಗಳಲ್ಲಿ ವಿಸ್ತರಿಸಬಲ್ಲದು ಎನ್ನುವುದನ್ನು ವಿಜ್ಞಾನವೂ ತೋರಿಸಿದೆ.

ಪರಿಪೂರ್ಣತೆ – ಎಂಬುದಕ್ಕೆ ಹೆಣ್ಣುಮಕ್ಕಳು ಎಷ್ಟು ಮಹತ್ವ ನೀಡುತ್ತಾರೆ ಎಂಬುದು ನಮ್ಮ ಸುತ್ತಮುತ್ತಲಿನ ಸಂದರ್ಭಗಳಿಂದಲೂ ನಾವು ಗಮನಿಸಬಹುದು. ರೂಪಕ್ಕೆ ಸಂಬಂಧಿಸಿದ ಯಾವುದೇ ಇರಲಿ, ಕೂದಲು ಬೆಳ್ಳಗೆ, ಮೈಬಣ್ಣ ಕಪ್ಪು, ಕುಳ್ಳ-ಎತ್ತರ, ಹಲ್ಲುಮುಂದೆ, ಕನ್ನಡಕ ಹಾಕಿಕೊಳ್ಳುವುದು ಇವೆಲ್ಲವೂ ಹೆಣ್ಣುಮಕ್ಕಳ ವಿಷಯದಲ್ಲಿ ಕೀಳರಿಮೆಗೆ ಕಾರಣವಾದಷ್ಟು ಗಂಡುಮಕ್ಕಳಲ್ಲಿ ಆಗುವುದಿಲ್ಲ.

ಗಂಡನಿಗಿಂತ ಹೆಚ್ಚು ಸಂಬಳ ಪಡೆಯುವ ಹೆಣ್ಣು ತನ್ನ ಗಂಡ ತನಗಿಂತ ಕಡಿಮೆ ಸಂಬಳ ಪಡೆಯುತ್ತಾನೆ ಎಂಬ ಕೀಳರಿಮೆಯಿಂದ ನರಳುತ್ತಾಳೆ! ಎತ್ತರವಿರುವ ಹದಿಹರೆಯದ ಹುಡುಗಿ, ನಾನು ಕುರೂಪಿಯಾಗಿರುವುದಷ್ಟೇ ಅಲ್ಲ, ಎಲ್ಲರಿಗೆ ಅದು ಕಾಣುವಂತೆ ಎತ್ತರವಾಗಿಯೂ ಇದ್ದೇನೆ ಎಂದು ಬೇಸರಗೊಳ್ಳುತ್ತಾಳೆ.

(ಅಪ್ಪ-ಅಮ್ಮ ಬುದ್ಧಿವಂತಳಾಗಿದ್ದರೂ ಮಗಳನ್ನು ಹೆಚ್ಚು ಓದಿದರೆ ಗಂಡು ಹುಡುಕುವುದು ಕಷ್ಟ ಎಂದು ಮುಂದೆ ಓದಿಸಲು ಹೆದರುತ್ತಾರೆ.) ಅಂದರೆ ಸಮಾಜ ಹೆಣ್ಣುಮಕ್ಕಳಿಗೆ ತಡೆಗೋಡೆಗಳನ್ನು ಎತ್ತರಕ್ಕೇರಲು ಹಾಕುತ್ತದೆಯೋ ಇಲ್ಲವೋ ಸ್ವತಃ ಹೆಣ್ಣುಮಕ್ಕಳು ತಾವೇ ತಡೆಗೋಡೆಗಳನ್ನು ಮನಸ್ಸಿನಲ್ಲಿಯೇ ನಿರ್ಮಿಸಿಕೊಳ್ಳುತ್ತಾರೆಯೋ?.

ನಮ್ಮ ಅಜ್ಜಿ-ಅಮ್ಮನ ಕಾಲದಿಂದ ನಮ್ಮ ಕಾಲಕ್ಕೆ ಬಂದು ಅದನ್ನು ದಾಟಿ ನಮ್ಮ ಮಕ್ಕಳ ಕಾಲಕ್ಕೆ ಬಂದು ಬಿಟ್ಟಿದ್ದೇವೆ. ಹತ್ತು ವರ್ಷಕ್ಕೆ ಒಂದು ತಲೆಮಾರೋ ಅಥವಾ ಐದು ವರ್ಷಕ್ಕೆ ಒಂದು ತಲೆಮಾರೋ ಎಂಬ ಚರ್ಚೆ ಮೊದಲಾಗಿಬಿಟ್ಟಿದೆ. ಹೀಗಿರುವಾಗ ಹೆಣ್ಣುಮಕ್ಕಳನ್ನು ಬೆಳೆಸುವ ರೀತಿಗೆ ಮಾತ್ರ ನಮ್ಮ ಮೂಲಭೂತ ಧೋರಣೆ, ಶತಮಾನಗಳ ಹಿಂದಿನ ಮನೋಭಾವ ಮಧ್ಯೆ ಮಧ್ಯೆ ಹಣಕುತ್ತಲೇ ಇರುತ್ತದೆ.

ಬಾಲ್ಯದಲ್ಲಿಯೇ ಹೆಣ್ಣುಮಕ್ಕಳಿಗೆ ಧೈರ್ಯವಂತರಾಗುವುದನ್ನು, ಅಪಾಯವನ್ನು ಎದುರಿಸಿ, ನಿಭಾಯಿಸುವುದನ್ನು, ತಪ್ಪು ಮಾಡಿ ಕಲಿಯುವುದನ್ನು ಕಲಿಸಲೇಬೇಕಾಗಿದೆ. ಒಬ್ಬಳೇ ಹೋಗಬೇಡ ಎನ್ನುವುದಕ್ಕಿಂತ, ಅಪಾಯವೇನು ಎದುರಾದೀತು, ಅಪಾಯವಾದರೆ ಎದುರಿಸುವ ದಾರಿ ಹೇಗೆ ಎನ್ನುವುದನ್ನು ಹೆಣ್ಣುಮಕ್ಕಳಿಗೆ ಕಲಿಸುವುದು ಅವಶ್ಯ.

ಪರಿಪೂರ್ಣರಾಗದಿದ್ದರೂ ಪರವಾಗಿಲ್ಲ, ನಮ್ಮ ಅಪರಿಪೂರ್ಣತೆಯನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಸಮಾಜ ಪ್ರಶಂಸಿಸುತ್ತದೆ ಎನ್ನುವಂತಹ ವಾತಾವರಣವನ್ನು ನಾವು ನಿರ್ಮಿಸಬೇಕಾಗಿದೆ. ಇದರ ಲಾಭ ಕೇವಲ ಹೆಣ್ಣುಮಕ್ಕಳಿಗಲ್ಲ.

ಯಾವುದೇ ಕ್ಷೇತ್ರ ತೆಗೆದುಕೊಂಡರೂ ಹೆಣ್ಣುಮಕ್ಕಳು ಉನ್ನತ ಹುದ್ದೆಗಳಲ್ಲಿ ಇರುವುದು, ಕಾರ್ಯನಿರತರಾಗುವುದು (ಕೇವಲ ಮೀಸಲಾತಿಯಿಂದಲ್ಲ, ತಮ್ಮದೇ ಬಲದಿಂದ!) ಪ್ರತಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಲ್ಲದು, ಮತ್ತೊಬ್ಬರ ಭಾವನೆಗಳನ್ನು ಅಳೆಯುವ, ಅರ್ಥಮಾಡಿಕೊಳ್ಳುವ ಹೆಂಗಸರ ಸಹಜಬುದ್ಧಿ ಯಾವುದೇ ಕ್ಷೇತ್ರದಲ್ಲಿಯೂ ಒಂದು ಬಲವೇ.

ಹೆಣ್ಣುಮಕ್ಕಳಿಗೆ ಧೈರ್ಯವೇ ಭೂಷಣ
*ಬಾಲ್ಯದಿಂದಲೇ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ.
*ಹೆಣ್ಣು ಕೇವಲ ಅಡುಗೆಮನೆಗೆ ಮಾತ್ರ ಸೀಮಿತವಲ್ಲ, ಎಲ್ಲ ರಂಗದಲ್ಲೂ  ಸೈ ಎನ್ನಿಸಿಕೊಳ್ಳುವ ಸಾಮರ್ಥ್ಯ ಆಕೆಗಿದೆ ಎಂಬುದನ್ನು ಮನದಟ್ಟು ಮಾಡಿಕೊಡಿ.
*ಬರೀ ಓದು, ಓದು ಎಂದು ಆಕೆಯನ್ನು ಪುಸ್ತಕದ ಹುಳುವಂತೆ ಮಾಡುವುದನ್ನು ನಿಲ್ಲಿಸಿ. ಹೊರಗಡೆ ಪ್ರಪಂಚದ ಆಗುಹೋಗುಗಳ ಬಗ್ಗೆಯೂ ಆಕೆಗೆ ಮನವರಿಕೆಯಾಗುವಂತೆ ಮಾಡಿ.
*ಹೆಣ್ಣುಮಕ್ಕಳನ್ನು ಪರಿಪೂರ್ಣರನ್ನಾಗಿ ಬೆಳೆಸುವುದಕ್ಕಿಂತ ಧೈರ್ಯವಂತರನ್ನಾಗಿ ಬೆಳೆಸಿ.
*ತಪ್ಪು ಮಾಡಿದಾಗ ಹೊಡೆದು, ಗದರಿಸಿ ಆತ್ಮವಿಶ್ವಾಸ ಕುಗ್ಗಿಸುವುದಕ್ಕಿಂತ ತಪ್ಪಿನ ಬಗ್ಗೆ ಆಕೆಗೆ ಅರಿವು ಮೂಡಿಸಿ ಬುದ್ಧಿವಾದ ಹೇಳಿ.
*ಅಪಾಯದ ಪರಿಸ್ಥಿತಿ ಎದುರಾದಾಗ ಒಬ್ಬಳೇ ಆ ಪರಿಸ್ಥಿತಿಯನ್ನು ನಿಭಾಯಿಸುವಂತೆ ಹೆಣ್ಣುಮಕ್ಕಳಲ್ಲಿ ಪೋಷಕರು ಧೈರ್ಯ ತುಂಬಬೇಕು.
*ಸಮಾಜದಲ್ಲಾಗುವ ಸ್ಥಿತಿಗತಿಗಳನ್ನು ಅವಲೋಕಿಸಿ, ಕೆಟ್ಟ ಹಾಗೂ ಒಳ್ಳೆಯದನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೆಣ್ಣಲ್ಲಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT