ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲ ಮನ್ನಾಕ್ಕೆ ಆಗ್ರಹ

ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರಿಂದ ರಸ್ತೆ ತಡೆ
Last Updated 18 ಫೆಬ್ರುವರಿ 2017, 6:06 IST
ಅಕ್ಷರ ಗಾತ್ರ
ರಾಯಚೂರು: ರೈತರ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಎಲ್ಲ ಸಾಲ ಮನ್ನಾ ಮಾಡಬೇಕು. ಶೀಘ್ರ ಬರಗಾಲ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿ  ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ರಸ್ತೆ ತಡೆ ನಡೆಸಿದರು.
 
ಬಸವೇಶ್ವರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ತೀವ್ರ ಬರಗಾಲದಿಂದ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಬೆಳೆ ನಷ್ಟವಾಗಿದೆ. ಸಾಲಬಾಧೆಗೆ ತುತ್ತಾಗಿರುವ ರೈತ ಕುಟುಂಬಗಳು ಆತ್ಮಹತ್ಯೆ ಹಾದಿ ಹಿಡಿದಿವೆ. ಕೃಷಿ ಕೂಲಿಕಾರರು, ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
 
ರೈತರ, ಕೂಲಿಕಾರರ, ಸ್ತ್ರೀ ಶಕ್ತಿ ಗುಂಪುಗಳ ಎಲ್ಲಾ ರೀತಿಯ ಬ್ಯಾಂಕ್ ಸಾಲ ಮನ್ನಾ ಮಾಡಬೇಕು, ಬೆಳೆ ಪರಿಹಾರವಾಗಿ ಪ್ರತಿ ಎಕರೆಗೆ ಕನಿಷ್ಠ ₹ 50 ಸಾವಿರ ಪರಿಹಾರ ವಿತರಣೆ ಮಾಡಬೇಕು. ನರೇಗಾ ಅಡಿ ವರ್ಷಕ್ಕೆ 200 ದಿನಗಳ ಕಾಲ ಉದ್ಯೋಗ ನೀಡಬೇಕು ವಿಸ್ತರಿಸಬೇಕು. ನರೇಗಾ ಕಾಮಗಾರಯನ್ನು ಪಟ್ಟಣ, ನಗರ ಪ್ರದೇಶಗಳಿಗೂ ವಿಸ್ತರಿಸಬೇಕು, ಕೂಲಿಯನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
 
ಜಿಲ್ಲೆಯಲ್ಲಿ ಬರಗಾಲ ಆವರಿಸಿದ ಕಾರಣ ಎಲ್ಲಾ ಬಡವರಿಗೆ ಉಚಿತವಾಗಿ ಪಡಿತರ ಆಹಾರಧಾನ್ಯ ವಿತರಣೆ ಮಾಡಬೇಕು. ನಗದು ವರ್ಗಾವಣೆ ಅಥವಾ ಕೂಪನ್ ಪದ್ಧತಿ ಕೈ ಬಿಡಬೇಕು ಎಂದು ಮನವಿ ಮಾಡಿದರು.
 
ಆಧಾರ್ ಸಂಖ್ಯೆ ಜೋಡಣೆ  ಕೈಬಿಡಬೇಕು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮೇವಿನ ಬ್ಯಾಂಕ್ ತೆರೆಯಬೇಕು. ಮುಂದಿನ ಬೆಳೆಗೆ ಅಗತ್ಯವಾದ ಬೀಜ, ಗೊಬ್ಬರ, ಕ್ರಿಮಿನಾಶಕಗಳನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ಜಿ.ವೀರೇಶ, ರಂಗನಗೌಡ ಕೊತ್ತದೊಡ್ಡಿ, ಕರಿಯಪ್ಪ ಅಚ್ಚೊಳ್ಳಿ, ವರಲಕ್ಷ್ಮೀ, ಡಿ.ಎಸ್. ಶರಣಬಸವ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT