ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಅಂಬೇಡ್ಕರ್ ಬದುಕು ಧ್ವನಿ, ಬೆಳಕಿನಲ್ಲಿ ಅನಾವರಣ

ಗಮನ ಸೆಳೆದ ‘ಭಾರತ ಭಾಗ್ಯ ವಿಧಾತ–ದೃಶ್ಯ ವೈಭವಗಳ ರೂಪಕ ; ವಿವಿಧ ರಾಜ್ಯಗಳ ಕಲಾವಿದರು ಭಾಗಿ, ಛಾಯಾಚಿತ್ರ ಪ್ರದರ್ಶನ
Last Updated 18 ಫೆಬ್ರುವರಿ 2017, 9:58 IST
ಅಕ್ಷರ ಗಾತ್ರ
ಧಾರವಾಡ: ಕರ್ನಾಟಕ ಕಾಲೇಜು ಮೈದಾನದಲ್ಲಿ ಬೃಹತ್‌ ವೇದಿಕೆ, ಬರೋಬ್ಬರಿ 80ಕ್ಕೂ ಹೆಚ್ಚು ಕಲಾವಿದರ ನೃತ್ಯಾಭಿನಯ, ಅದ್ಭುತವಾದ ರಂಗಸಜ್ಜಿಕೆ, ಬೃಹದಾಕಾರದ ಎಲ್‌ಇಡಿ ಪರದೆ ಮೇಲೆ ಅಪರೂಪದ ದೃಶ್ಯಗಳು, ರಂಗದ ಮೇಲೆ ಪ್ರದರ್ಶನಗೊಂಡ ಮನಮುಟ್ಟುವ ನೃತ್ಯ ರೂಪಕ.
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಪ್ರದರ್ಶನಗೊಂಡ ‘ಭಾರತ ಭಾಗ್ಯ ವಿಧಾತ– ಧ್ವನಿ ಬೆಳಕು; ದೃಶ್ಯ ವೈಭವಗಳ ರೂಪಕ’ದಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಧೀನದಲಿತರ ಶೋಚನೀಯ ಪರಿಸ್ಥಿತಿ, ನಂತರ ಜನಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಜಾರಿಗೆ ತಂದ ಸುಧಾರಣೆ, ಸಂವಿಧಾನ ಇತ್ಯಾದಿ ಎಲ್ಲವೂ 90 ನಿಮಿಷಗಳಲ್ಲಿ ರಂಗದ ಮೇಲೆ ಮೂಡಿ ಬಂದು ಮೈದಾನದಲ್ಲಿ ಸೇರಿದ್ದ ಸಾವಿರಕ್ಕೂ ಅಧಿಕ ಸಂಖ್ಯೆಯ ಜನರ ಮೆಚ್ಚುಗೆ ಗಳಿಸಿತು.
 
ಅಂಬೇಡ್ಕರ್‌ ಅವರ ಬದುಕು, ಅವರ ಬರಹ, ಸಾಧನೆ ಹಾಗೂ ಅವರು ತಂದ ಸುಧಾರಣೆ... ಹೀಗೆ ಅವರ ಪ್ರತಿಯೊಂದು ಸಂಗತಿಗಳು ದಾಖಲೆ, ಪತ್ರ, ಛಾಯಾಚಿತ್ರ, ದೃಶ್ಯಾವಳಿ ಹಾಗೂ ಅಂಬೇಡ್ಕರ್ ಅವರ ಇಡೀ ಬದುಕನ್ನು ಕಲಾವಿದರು ರಂಗದ ಮೇಲೆ ತಂದರು.
 
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಇದರಲ್ಲಿದ್ದರು. ನೃತ್ಯ ರೂಪಕ ಮಾದರಿಯಲ್ಲಿ ಪ್ರದರ್ಶನಗೊಂಡ ಈ ರೂಪಕ ಸಾಹಿತ್ಯ ಹಾಗೂ ನಿರ್ದೇಶನ ಬಿ.ಎಂ.ಗಿರಿರಾಜ್‌ ಮಾಡಿದ್ದರು. ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದು ಡಾ. ಕೆ.ವೈ.ನಾರಾಯಣಸ್ವಾಮಿ ಅವರ ಗೀತ ರಚನೆ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ.
 
ರಂಗ ವಿನ್ಯಾಸವನ್ನು ಶಶಿಧರ ಅಡಪ, ಪದ್ಮಿನಿ ಅಚ್ಚಿ ಅವರ ನೃತ್ಯ ಸಂಯೋಜನೆ, ಬೆಳಕು ಸಂಯೋಜಿಸಿದ ನಂದಕಿಶೋರ್‌, ವಸ್ತಾಲಂಕಾರ ಮಾಡಿದ ಪ್ರಮೋದ ಶಿಗ್ಗಾವ್‌ ಹೀಗೆ ಪ್ರತಿಯೊಬ್ಬರ ಪರಿಶ್ರಮವನ್ನು ಪಾಲ್ಗೊಂಡಿದ್ದ ಗಣ್ಯರು ಮುಕ್ತಕಂಠದಿಂದ ಹೊಗಳಿದರು. ಕಾರ್ಯಕ್ರಮವನ್ನು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿದರು. 
 
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ರಾಜ್ಯ ಸಾಂಬಾರು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಓ ಆರ್.ಸ್ನೇಹಲ್, ಕ.ವಿ.ವಿ.ಕುಲಪತಿ ಪ್ರೊ.ಪ್ರಮೋದ ಗಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ.ಎಸ್.ಎಸ್.ಕಟ್ಟೀಮನಿ, ಆಹಾರ ಇಲಾಖೆ ಉಪನಿರ್ದೇಶಕ ಸದಾಶಿವ ಮರ್ಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಬಸವರಾಜ ಕಂಬಿ, ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ  ಮತ್ತಿತರರು ಇದ್ದರು. 
 
ಕಾರ್ಯಕ್ರಮದ ನಂತರ ಮೈದಾನದಲ್ಲಿ ಚಪ್ಪಾಳೆಗಳು ಮೊಳಗಿದವು. ಅಂಬೇಡ್ಕರ್‌ ಅವರ ಚರಿತೆಯನ್ನು ಮನೋಜ್ಞವಾಗಿ ತೆರೆಯ ಮೇಲೆ ಅಭಿವ್ಯಕ್ತಗೊಳಿಸಿದ ಕಲಾವಿದರ ತಂಡಕ್ಕೆ ವಿನಯ ಕುಲಕರ್ಣಿ ₹ 51 ಸಾವಿರ, ಪ್ರಹ್ಲಾದ ಜೋಶಿ ಹಾಗೂ ಅರವಿಂದ ಬೆಲ್ಲದ ತಲಾ ₹ 25ಸಾವಿರ ಬಹುಮಾನವನ್ನು ಘೋಷಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT