ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: 4 ರಾಜ್ಯಗಳ ತಗಾದೆ

ತೆರಿಗೆದಾರರ ಹಂಚಿಕೆ: ಮಂಡಳಿ ಸಭೆಯಲ್ಲಿ ತೀವ್ರ ವಿರೋಧ
Last Updated 18 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಉದಯಪುರ: ಸರಕು ಮತ್ತು ಸೇವಾ ತೆರಿಗೆಯಲ್ಲಿ  (ಜಿಎಸ್‌ಟಿ) ತೆರಿಗೆದಾರರ ಹಂಚಿಕೆಗೆ ಸಂಬಂಧಿಸಿದಂತೆ ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳು ಮತ್ತೆ ತಗಾದೆ ತೆಗೆದಿವೆ.

ತೆರಿಗೆದಾರರ ಹಂಚಿಕೆ ಬಗ್ಗೆ ಜನವರಿ 16ರ ಸಭೆಯಲ್ಲಿ  ಕೈಗೊಂಡ ನಿರ್ಧಾರದಲ್ಲಿ ಬದಲಾವಣೆ ತರುವ ಕೇಂದ್ರದ ಆಲೋಚನೆಗೆ ಕರ್ನಾಟಕ ಸೇರಿ ಪ್ರತಿಪಕ್ಷಗಳ ಆಡಳಿತ ಇರುವ ದೆಹಲಿ, ಪಶ್ಚಿಮ ಬಂಗಾಳ ಮತ್ತು  ಕೇರಳ  ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.

ಜಿಎಸ್‌ಟಿ ಜಾರಿಯಾದ ಬಳಿಕ ಶೇ 90 ರಷ್ಟು ತೆರಿಗೆದಾರರು (ವರ್ಷಕ್ಕೆ ₹1.5 ಕೋಟಿಯೊಳಗಿನ ಆದಾಯ ಹೊಂದಿರುವ ವ್ಯಾಪಾರಿಗಳು)  ರಾಜ್ಯಗಳ ವ್ಯಾಪ್ತಿಗೆ ಮತ್ತು ಉಳಿದ ಶೇ 10 ರಷ್ಟು ತೆರಿಗೆದಾರರು ಕೇಂದ್ರದ ವ್ಯಾಪ್ತಿಯಲ್ಲಿ ಇರಬೇಕು. ವರ್ಷಕ್ಕೆ ₹1.5 ಕೋಟಿಗೂ ಹೆಚ್ಚಿನ ಆದಾಯ ಹೊಂದಿರುವ ವ್ಯಾಪಾರಿಗಳನ್ನು 50:50 ರ ಅನುಪಾತದಲ್ಲಿ ಅಂದರೆ ಕೇಂದ್ರಕ್ಕೆ   ಮತ್ತು ರಾಜ್ಯಗಳ ವ್ಯಾಪ್ತಿಗೆ ತರಲು ಸಭೆಯಲ್ಲಿ ಒಪ್ಪಿಗೆ ದೊರೆತಿತ್ತು.

ಆದರೆ, ಶನಿವಾರ ನಡೆದ ಸಭೆಯಲ್ಲಿ, ಕೇಂದ್ರದ ಸಲಹೆ ಪಡೆದು ತೆರಿಗೆ ಪ್ರಮಾಣ ನಿಗದಿ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಕರ್ನಾಟಕ ಸೇರಿ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಹಿಂದಿನ ಸಭೆಯ ಟಿಪ್ಪಣಿಯನ್ನು ತಿರುಚಲಾಗಿದೆ ಎಂದು ರಾಜ್ಯಗಳು ಆರೋಪಿಸಿವೆ.

‘90:10ರ ಅನುಪಾತವನ್ನು 50:50ರ ಅನುಪಾತಕ್ಕೆ ತರುವ ಮೂಲಕ ತೆರಿಗೆದಾರರ ಮೇಲೆ ಕೇಂದ್ರದ ಹಿಡಿತ ಸಾಧಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯಗಳು ಕೇಂದ್ರ ಸರ್ಕಾರದ ಸಲಹೆ ಪಡೆದು ನಿರ್ಧರಿಸುವುದಾದರೆ ಜಿಎಸ್‌ಟಿ ಮಂಡಳಿಯ ಅಗತ್ಯವಾದರೂ ಏನು’ ಎಂದು ಸಚಿವರೊಬ್ಬರು ಅಸಮಾಧಾನ  ಹೊರಹಾಕಿದ್ದಾರೆ.

‘ಜಿಎಸ್‌ಟಿ ಮಂಡಳಿ ಸಭೆ ಆರಂಭವಾದ ದಿನದಿಂದಲೂ ತೆರಿಗೆ ಪಾವತಿದಾರರ ಹೊರೆ ತಗ್ಗಿಸುವುದು ಹೇಗೆ ಎಂದು ಚರ್ಚಿಸುವ ಬದಲಿಗೆ, ತೆರಿಗೆದಾರರನ್ನು ಮತ್ತು ತೆರಿಗೆ ಅಧಿಕಾರಿಗಳನ್ನು ಹೇಗೆ ಹಂಚಿಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಸಲಾಗುತ್ತಿದೆ ಎನ್ನುವುದು ವಿಷಾದನೀಯ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT